ನವದೆಹಲಿ, ಅಕ್ಟೋಬರ್ 30: ಎಲ್ಸಿಡ್ ಇನ್ವೆಸ್ಟ್ಮೆಂಟ್ಸ್ ನಿನ್ನೆ ಷೇರು ಮಾರುಕಟ್ಟೆಯಲ್ಲಿ ಹೊಸ ದಾಖಲೆ ಬರೆದಿದೆ. 3.53 ರೂ ಇದ್ದ ಇದರ ಷೇರುಬೆಲೆ 2,36,250 ರೂಗೆ ಏರಿದೆ. ಬರೋಬ್ಬರಿ 66,92,535 ಪ್ರತಿಶತದಷ್ಟು ಬೆಲೆ ಏರಿಕೆ ಕಂಡಿದೆ. ಈ ಮೂಲಕ ಭಾರತದ ಅತಿದುಬಾರಿ ಸ್ಟಾಕ್ ಎನಿಸಿದ್ದ ಎಂಆರ್ಎಫ್ನ ದಾಖಲೆಯನ್ನು ಎಲ್ಸಿಡ್ ಇನ್ವೆಸ್ಟ್ಮೆಂಟ್ ಅಳಿಸಿಹಾಕಿದೆ. ಭಾರತದ ಷೇರು ಮಾರುಕಟ್ಟೆ ಇತಿಹಾಸದಲ್ಲೇ ಈ ಪರಿ ರಾಕೆಟ್ ವೇಗದ ಬೆಲೆ ಹೆಚ್ಚಳ ಕಂಡಿದ್ದಿಲ್ಲ.
ಎಲ್ಸಿಡ್ ಇನ್ವೆಸ್ಟ್ಮೆಂಟ್ ಸಂಸ್ಥೆ 2011ರಿಂದಲೂ ಕೇವಲ 3 ರೂ ಆಸುಪಾಸಿನ ಷೇರುಬೆಲೆ ಹೊಂದಿತ್ತು. ಹದಿಮೂರು ವರ್ಷಗಳಿಂದಲೂ ಇದರ ಷೇರುಗಳ ಟ್ರೇಡಿಂಗ್ ಬಹುತೇಕ ನಡೆದೇ ಇಲ್ಲ. ಅಚ್ಚರಿ ಎನಿಸಬಹುದಾದರೂ ಇದಕ್ಕೆ ಕಾರಣವಾಗಿದ್ದು ಎಲ್ಸಿಡ್ನ ಅಪಾರ ಪ್ರಮಾಣದ ಬುಕ್ ವ್ಯಾಲ್ಯು. ಎಲ್ಸಿಡ್ ಸಂಸ್ಥೆಯ ಬುಕ್ ವ್ಯಾಲ್ಯೂ ಬರೋಬ್ಬರಿ 5,85,225 ರೂ ಇದೆ. ಈ ಕಾರಣಕ್ಕೆ ಯಾವ ಷೇರುದಾರರೂ ತಮ್ಮ ಷೇರನ್ನು ಮಾರಲು ಮುಂದಾಗಿರಲಿಲ್ಲ. ಯಾವತ್ತಾದರೂ ಒಂದು ದಿನ ಷೇರು ಬೆಲೆ ಊಹೆಗೂ ನಿಲುಕದ ರೀತಿಯಲ್ಲಿ ಹೆಚ್ಚಾಗುತ್ತದೆ ಎನ್ನುವ ನಂಬಿಕೆ ಷೇರುದಾರರದ್ದಾಗಿತ್ತು.
ಇದನ್ನೂ ಓದಿ: World Savings Day 2024: ಭಾರತದಲ್ಲಿ ವಿಶ್ವ ಉಳಿತಾಯ ದಿನವನ್ನು ಆಚರಿಸುವುದು ಏಕೆ? ಇಲ್ಲಿದೆ ಮಾಹಿತಿ
ಒಂದು ಕಂಪನಿ ಹೊಂದಿರುವ ಸಾಲ ಮತ್ತಿತರ ಬಾಧ್ಯತೆಗಳನ್ನು ಕಳೆದು ಉಳಿಯುವ ಆಸ್ತಿ ಎಷ್ಟು ಎಂಬುದನ್ನು ಬುಕ್ ವ್ಯಾಲ್ಯೂ ತೋರಿಸುತ್ತದೆ. ಎಲ್ಸಿಡ್ ಕಂಪನಿಯ ಬುಕ್ ವ್ಯಾಲ್ಯೂ ಪ್ರತೀ ಷೇರಿಗೆ 5,85,225 ರೂ ಇತ್ತು. ಈ ಷೇರು ಎಷ್ಟು ಅಂಡರ್ವ್ಯಾಲ್ಯೂ ಆಗಿದೆ ಎನ್ನುವುದು ಬಹಳ ಸ್ಪಷ್ಟವಾಗಿತ್ತು. ಹೀಗಾಗಿ, ಯಾವ ಷೇರುದಾರರೂ ಕೂಡ ತಮ್ಮ ಷೇರುಗಳನ್ನು ಮಾರಲು ಮುಂದಾಗಲಿಲ್ಲ.
ಒಂದು ಷೇರಿನ ವಹಿವಾಟು ನಿಯಮಿತವಾಗಿ ನಡೆಯದೇ ಹೋದರೆ ಅದರ ನೈಜ ಮಾರುಕಟ್ಟೆ ಮೌಲ್ಯ ಹೊರಬರುವುದಿಲ್ಲ. ಈ ಕಾರಣಕ್ಕೆ ಕೆಲ ಷೇರುಗಳು ಮಿತಿಮೀರಿದ ಮೌಲ್ಯ ಹೊಂದಿರುತ್ತವೆ. ಕೆಲ ಷೇರುಗಳು ಅಂಡರ್ವ್ಯಾಲ್ಯೂಡ್ ಆಗಿರುತ್ತವೆ. ನಿಯಮಿತವಾಗಿ ಟ್ರೇಡಿಂಗ್ ಆಗದ ಇನ್ವೆಸ್ಟ್ಮೆಂಟ್ ಕಂಪನಿಗಳು ಮತ್ತು ಇನ್ವೆಸ್ಟ್ಮೆಂಟ್ ಹೋಲ್ಡಿಂಗ್ ಕಂಪನಿಗಳ ಷೇರುಗಳ ನೈಜ ಬೆಲೆ ಕಂಡುಕೊಳ್ಳಲು (Price discovery) ಸಹಾಯವಾಗುವಂತ ಸೆಬಿ ವಿಶೇಷ ಹರಾಜು ನಡೆಸಲು ತೀರ್ಮಾನಿಸಿತು.
ಇದನ್ನೂ ಓದಿ: ಜಿಯೋಭಾರತ್ ಫೋನ್ಗೆ ಭರ್ಜರಿ ಡಿಸ್ಕೌಂಟ್; ಕೇವಲ 699 ರೂ; ದೀಪಾವಳಿ ಆಫರ್
ಎಲ್ಸಿಡ್ ಇನ್ವೆಸ್ಟ್ಮೆಂಟ್ಸ್, ನಾಲ್ವಾ ಸನ್ಸ್, ಟಿವಿಎಸ್ ಹೋಲ್ಡಿಂಗ್ಸ್, ಜಿಎಫ್ಎಲ್ ಸೇರಿದಂತೆ ಕೆಲ ಆಯ್ದ ಕಂಪನಿಗಳ ಷೇರುಗಳ ಕಾಲ್ ಆಕ್ಷನ್ ಅನ್ನು ಕೈಗೊಳ್ಳಲಾಗಿದೆ. ಈ ವಿಶೇಷ ಹರಾಜಿನಲ್ಲಿ ಒಂದು ಷೇರಿಗೆ ಎಷ್ಟು ಬೇಡಿಕೆ ಇದೆ ಎಂಬುದು ಗೊತ್ತಾಗುತ್ತದೆ. ಹೆಚ್ಚೂಕಡಿಮೆ 6 ಲಕ್ಷ ರೂನಷ್ಟು ಬುಕ್ ವ್ಯಾಲ್ಯೂ ಹೊಂದಿರುವ ಎಲ್ಸಿಡ್ ಹೋಲ್ಡಿಂಗ್ಸ್ ಸಂಸ್ಥೆಯ ಷೇರು ಬೆಲೆ 2 ಲಕ್ಷ ರೂಗಿಂತಲೂ ಹೆಚ್ಚಾಗಿದ್ದು ಅಸಹಜವೆನಿಸುವುದಿಲ್ಲ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ