ಉದ್ಯೋಗಿ- ಉದ್ಯೋಗದಾತರ ಕೊಡುಗೆ ಮತ್ತು ಗಳಿಸಿದ ಬಡ್ಡಿಯೂ ಸೇರಿದಂತೆ ವಾರ್ಷಿಕವಾಗಿ ರೂ. 2.50 ಲಕ್ಷಕ್ಕಿಂತ ಹೆಚ್ಚಿನ ಪ್ರಾವಿಡೆಂಟ್ ಫಂಡ್ (PF) ಕೊಡುಗೆಗಳಿಗೆ ಸರ್ಕಾರವು ತೆರಿಗೆ ವಿಧಿಸುತ್ತದೆ. ಅಂದಹಾಗೆ ಸರ್ಕಾರಿ ನೌಕರರಿಗೆ ಗರಿಷ್ಠ ರೂ. 5 ಲಕ್ಷ ಮಿತಿ ನಿಗದಿಪಡಿಸಲಾಗಿದೆ. ವರ್ಷದಲ್ಲಿ ಗಳಿಸಿದ ಆದಾಯದ ಮೇಲಿನ ತೆರಿಗೆ ಪಾವತಿಸುವುದನ್ನು ತಪ್ಪಿಸಲು ತಮ್ಮ ಪಿಎಫ್ ಖಾತೆಗಳಿಗೆ ದೊಡ್ಡ ಪ್ರಮಾಣದ ಹಣವನ್ನು ಠೇವಣಿ ಮಾಡಿದ ಶ್ರೀಮಂತ ಮತ್ತು ಹೆಚ್ಚಿನ ನಿವ್ವಳ ಮೌಲ್ಯದ (High Net Worth) ವ್ಯಕ್ತಿಗಳಿಂದ ದುರ್ಬಳಕೆಯ ಹಲವು ಪ್ರಕರಣಗಳನ್ನು ಉಲ್ಲೇಖಿಸಿ ಕೇಂದ್ರವು ತೆರಿಗೆ ವಿಧಿಸುವುದನ್ನು ಘೋಷಣೆ ಮಾಡಿದೆ. ಅಂದ ಹಾಗೆ, ಎಂಪ್ಲಾಯೀಸ್ ಪ್ರಾವಿಡೆಂಟ್ ಫಂಡ್ ಆರ್ಗನೈಸೇಶನ್ (EPFO) ಪ್ರಸಕ್ತ ಹಣಕಾಸು ವರ್ಷ 2021-22ಕ್ಕೆ (FY 22) ಪಿಎಫ್ ಮೇಲಿನ ಬಡ್ಡಿ ದರವನ್ನು 40 ವರ್ಷಗಳಲ್ಲೇ ಅತ್ಯಂತ ಕಡಿಮೆ ಮಟ್ಟಕ್ಕೆ, ಅಂದರೆ ಶೇ 8.1ಕ್ಕೆ ಇಳಿಸಿದೆ. ಇಂಥ ಸನ್ನಿವೇಶದಲ್ಲಿ ಈ ನಿರ್ಧಾರ ಜಾರಿ ಆಗುತ್ತಿದೆ.
ಇತ್ತೀಚಿನ ಪಿಎಫ್ ಮೇಲಿನ ತೆರಿಗೆ ಅರ್ಥವೇನು?
ಹೊಸ ಆದಾಯ ತೆರಿಗೆ (IT) ನಿಯಮಗಳ ಅಡಿಯಲ್ಲಿ ಪಿಎಫ್ ಖಾತೆಗಳನ್ನು ಏಪ್ರಿಲ್ 1, 2022ರಿಂದ ತೆರಿಗೆಗೆ ಒಳಪಡುವ ಮತ್ತು ತೆರಿಗೆಗೆ ಒಳಪಡದ ಕೊಡುಗೆ ಖಾತೆಗಳಾಗಿ ವಿಂಗಡಿಸುವ ಸಾಧ್ಯತೆಯಿದೆ. ಹೊಸ ನಿಯಮಗಳೊಂದಿಗೆ, ಹೆಚ್ಚಿನ ಆದಾಯವನ್ನು ಗಳಿಸುವ ಜನರು ಸರ್ಕಾರದ ಕಲ್ಯಾಣ ಯೋಜನೆಗಳ ಲಾಭ ಪಡೆಯುವುದನ್ನು ತಡೆಯುವ ಗುರಿಯನ್ನು ಕೇಂದ್ರವು ಹೊಂದಿದೆ.
ಉದ್ಯೋಗಿ, ಉದ್ಯೋಗದಾತರ ಕೊಡುಗೆಗಳು, ಸ್ವಯಂಪ್ರೇರಿತ (ವಾಲಂಟರಿ), ವೈಯಕ್ತಿಕ ಮತ್ತು ಗಳಿಸಿದ ಬಡ್ಡಿ ಸೇರಿದಂತೆ ಪಿಎಫ್ ಖಾತೆಗಳಿಗೆ ರೂ. 2.5 ಲಕ್ಷಕ್ಕಿಂತ ಹೆಚ್ಚಿನ ಯಾವುದೇ ಕೊಡುಗೆಗಳನ್ನು ತೆರಿಗೆಯ ಆದಾಯ ಎಂದು ಪರಿಗಣಿಸಲಾಗುತ್ತದೆ. “ರೂ. 2.5 ಲಕ್ಷಕ್ಕಿಂತ ಹೆಚ್ಚಿನ ಪಿಎಫ್ ಕೊಡುಗೆಗಳ ಮೇಲಿನ ತೆರಿಗೆಯು ನೀವು ಬರುವ ಆದಾಯ ತೆರಿಗೆ ಸ್ಲ್ಯಾಬ್ ಅನ್ನು ಆಧರಿಸಿರುತ್ತದೆ ಮತ್ತು ಅದಕ್ಕೆ ಅನುಗುಣವಾಗಿ ತೆರಿಗೆ ವಿಧಿಸಲಾಗುತ್ತದೆ,” ಎಂದು ಸ್ವತಂತ್ರ ತೆರಿಗೆ ಸಲಹೆಗಾರರೊಬ್ಬರು ಮಾಹಿತಿ ಹೇಳಿದ್ದಾರೆ.
ಇದನ್ನೂ ಓದಿ: EPF: ಇಪಿಎಫ್ಒನಿಂದ ಉದ್ಯೋಗದಾತರ ಇಪಿಎಫ್ ಟ್ರಸ್ಟ್‌ಗೆ ಇಪಿಎಫ್ ಖಾತೆ ವರ್ಗಾವಣೆ ಹೇಗೆ? ಇಲ್ಲಿದೆ ಎಲ್ಲ ಮಾಹಿತಿ