ನವದೆಹಲಿ: ದೇಶದಲ್ಲಿ ಅತಿಹೆಚ್ಚು ಮಹಿಳೆಯರಿಗೆ ಉದ್ಯೋಗ ನೀಡುವ ಪ್ರಮುಖ 10 ಕಂಪನಿಗಳ ಪಟ್ಟಿಯನ್ನು ಆ್ಯಕ್ಸಿಸ್ ಬ್ಯಾಂಕ್ನ (Axis Bank) ಬರ್ಗಂಡಿ ಪ್ರೈವೇಟ್ (Burgundy Private) ಮತ್ತು ಹರುನ್ ಇಂಡಿಯಾ ಸಂಸ್ಥೆ (Hurun India) ಬಿಡುಗಡೆ ಮಾಡಿದ್ದು, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಅಥವಾ ಟಿಸಿಎಸ್ (Tata Consultancy Services) ಮೊದಲ ಸ್ಥಾನ ಪಡೆದಿದೆ. ಟಿಸಿಎಸ್ ಸುಮಾರು 2.1 ಲಕ್ಷ ಮಂದಿಗೆ ಉದ್ಯೋಗ ನೀಡಿದ್ದು, ಈ ಪೈಕಿ ಶೇಕಡಾ 35ರಷ್ಟು ಮಂದಿ ಮಹಿಳೆಯರಾಗಿದ್ದಾರೆ. ನಂತರದ ಸ್ಥಾನಗಳಲ್ಲಿ ಇನ್ಫೋಸಿಸ್ (Infosys), ವಿಪ್ರೋ (Wipro), ಎಚ್ಸಿಎಲ್ ಟೆಕ್ನಾಲಜೀಸ್ (HCL Technologies) ಹಾಗೂ ರಿಲಯನ್ಸ್ ಇಂಡಸ್ಟ್ರೀಸ್ (Reliance Industries) ಇವೆ.
ಕೊನೆಯ ಐದು ಸ್ಥಾನಗಳಲ್ಲಿ ಮದರ್ಸನ್ ಸುಮಿ ಸಿಸ್ಟಂಸ್, ಟೆಕ್ ಮಹೀಂದ್ರಾ, ಐಸಿಐಸಿಐ ಬ್ಯಾಂಕ್, ಎಚ್ಡಿಎಫ್ಸಿ ಬ್ಯಾಂಕ್ ಹಾಗೂ ಪೇಜ್ ಇಂಡಸ್ಟ್ರೀಸ್ ಇವೆ.
ಆ್ಯಕ್ಸಿಸ್ ಬ್ಯಾಂಕ್ನ ಖಾಸಗಿ ಬ್ಯಾಂಕಿಂಗ್ ಉದ್ದಿಮೆ ಬರ್ಗಂಡಿ ಪ್ರೈವೇಟ್ ಮತ್ತು ಹರುನ್ ಇಂಡಿಯಾ ಭಾರತದ 500 ಹೆಚ್ಚು ಮೌಲ್ಯ ಉಳ್ಳ ಕಂಪನಿಗಳ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಇದೀಗ ಎರಡನೇ ಪಟ್ಟಿ ಬಿಡುಗಡೆ ಮಾಡಿದೆ.
ಬರ್ಗಂಡಿ ಪ್ರೈವೇಟ್ ಮತ್ತು ಹರುನ್ ಇಂಡಿಯಾ ಬಿಡುಗಡೆ ಮಾಡಿರುವ 500 ಕಂಪನಿಗಳ ಪಟ್ಟಿಯಲ್ಲಿ ಕಂಪನಿಗಳ ನಿರ್ದೇಶಕರ ಮಂಡಳಿಯಲ್ಲಿ ಶೇಕಡಾ 16ರಷ್ಟು ಮಹಿಳೆಯರು ಸ್ಥಾನ ಪಡೆದಿದ್ದಾರೆ. ಭಾರತದ ಆರ್ಥಿಕತೆ ಚೇತರಿಕೆಯಾಗುತ್ತಿದ್ದು, ಈ ಪಟ್ಟಿ ಬೆಳೆಯದಲಿದೆ. ಅದೇ ರೀತಿ ಕಂಪನಿಗಳ ನಿರ್ದೇಶಕರ ಮಂಡಳಿಗಳಲ್ಲಿ ಮಹಿಳೆಯರ ಸಂಖ್ಯೆಯೂ ಹೆಚ್ಚುವ ನಿರೀಕ್ಷೆ ಇದೆ. ಸದ್ಯ ಅತಿಹೆಚ್ಚು ಮಹಿಳೆಯರಿಗೆ ಉದ್ಯೋಗ ನೀಡುವ ಕಂಪನಿಯಾಗಿ ಟಿಸಿಎಸ್ ಗುರುತಿಸಿಕೊಂಡಿದೆ ಎಂದು ಹರುನ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ, ಮುಖ್ಯ ಸಂಶೋಧಕ ಅನಸ್ ರಹಮಾನ್ ಜುನೈದ್ ಹೇಳಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:34 pm, Thu, 1 December 22