TCS Profit: 2022-23ರ ಮೊದಲ ತ್ರೈಮಾಸಿಕದಲ್ಲಿ ಟಿಸಿಎಸ್ ಲಾಭ ಶೇ 5ರಷ್ಟು ಏರಿಕೆಯಾಗಿ 9478 ಕೋಟಿಗೆ, ಕೆಲಸ ಬಿಡುವವರ ಪ್ರಮಾಣ ಶೇ 19.7
ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ನಿಂದ 2022ರ ಏಪ್ರಿಲ್ನಿಂದ ಜೂನ್ ತ್ರೈಮಾಸಿಕದ ಹಣಕಾಸು ಫಲಿತಾಂಶ ಪ್ರಕಟವಾಗಿದ್ದು, ಪ್ರತಿ ಷೇರಿಗೆ 8 ರೂಪಾಯಿ ಡಿವಿಡೆಂಡ್ ಘೋಷಣೆ ಮಾಡಲಾಗಿದೆ.
ಮಾಹಿತಿ ತಂತ್ರಜ್ಞಾನ ಸೇವೆಗಳ ಪ್ರಮುಖ ಕಂಪೆನಿಯಾದ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (TCS) ಜುಲೈ 8ರಂದು 2022-23ನೇ ಹಣಕಾಸು ವರ್ಷದ ಮೊದಲ ತ್ರೈಮಾಸಿಕ ಫಲಿತಾಂಶ ನೀಡಿದೆ. ಜೂನ್ 2022ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಅದರ ಏಕೀಕೃತ ನಿವ್ವಳ ಲಾಭವು ಕಳೆದ ವರ್ಷದ ಇದೇ ತ್ರೈಮಾಸಿಕದಲ್ಲಿ ಬಂದಿದ್ದ 9,008 ಕೋಟಿ ರೂಪಾಯಿಗಳಿಗೆ ಹೋಲಿಸಿದರೆ ಶೇ 5.21ರಷ್ಟು ಏರಿಕೆಯಾಗಿ 9,478 ಕೋಟಿ ರೂಪಾಯಿಗಳಿಗೆ ತಲುಪಿದೆ. ಅನುಕ್ರಮವಾಗಿ ಲಾಭವು ಶೇಕಡಾ 4.51ರಷ್ಟು ಕುಸಿದಿದೆ. ತ್ರೈಮಾಸಿಕದಲ್ಲಿ ಕಾರ್ಯಾಚರಣೆಗಳಿಂದ ಆದಾಯವು 52,758 ಕೋಟಿ ರೂಪಾಯಿ ಬಂದಿದ್ದು, ಇದು ಹಿಂದಿನ ವರ್ಷದ ಇದೇ ತ್ರೈಮಾಸಿಕಕ್ಕಿಂತ ಶೇ 16.17ರಷ್ಟು ಹೆಚ್ಚಾಗಿದ್ದು, ಹಿಂದಿನ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇಕಡಾ 4.28ರಷ್ಟು ಜಾಸ್ತಿ ಆಗಿದೆ.
ಸ್ಥಿರ ಕರೆನ್ಸಿ (ಸಿಸಿ) ಆದಾಯದ ಬೆಳವಣಿಗೆಯು ವರ್ಷದಿಂದ ವರ್ಷಕ್ಕೆ (YoY) ಶೇ 15.5ರಷ್ಟಿದೆ ಎಂದು ಕಂಪೆನಿಯು ಹೇಳಿದೆ. ಆಪರೇಟಿಂಗ್ ಮಾರ್ಜಿನ್ ಶೇ 23.1 ವರ್ಷದಿಂದ ವರ್ಷಕ್ಕೆ ಶೇ 2.4ರಷ್ಟು ಕಡಿಮೆ ಆಗಿದೆ. ಟಿಸಿಎಸ್ ಪ್ರತಿ ಷೇರಿಗೆ 8 ರೂಪಾಯಿಗಳ ಡಿವಿಡೆಂಡ್ ಅನ್ನು ಘೋಷಿಸಿದ್ದು, ಇದು ಆಗಸ್ಟ್ 3, 2022 ರೊಳಗೆ ಷೇರುದಾರರಿಗೆ ತಲುಪುತ್ತದೆ. ಇದಕ್ಕಾಗಿ ಜುಲೈ 16, 2022 ರೆಕಾರ್ಡ್ ದಿನಾಂಕವಾಗಿದೆ.
ಐಟಿ ಸೇವೆಗಳ ಕ್ಷೇತ್ರದಲ್ಲಿ ಉದ್ಯೋಗ ತೊರೆಯುತ್ತಿರುವವರ ಪ್ರಮಾಣ ಏರುತ್ತಲೇ ಇತ್ತು ಮತ್ತು ಕಳೆದ ಹನ್ನೆರಡು ತಿಂಗಳ ಆಧಾರದ ಮೇಲೆ ಶೇ 19.7ರಷ್ಟಿದೆ ಎಂದು ಕಂಪೆನಿಯು ವಿನಿಮಯ ಕೇಂದ್ರದ ಫೈಲಿಂಗ್ನಲ್ಲಿ ತಿಳಿಸಿದೆ. ಮಾರ್ಚ್ ತ್ರೈಮಾಸಿಕದಲ್ಲಿ ಇದು ಶೇ 17.4 ರಷ್ಟಿತ್ತು. ನಿವ್ವಳ ಉದ್ಯೋಗಿಗಳ ಸೇರ್ಪಡೆ – ಭವಿಷ್ಯದ ಬೇಡಿಕೆಯ ಪ್ರಮುಖ ಸೂಚಕ ಎಂದು ಹಲವರು ನಂಬುತ್ತಾರೆ – ಈ ಅವಧಿಯಲ್ಲಿ 14,136 ಇದ್ದು, ಹಿಂದಿನ ತ್ರೈಮಾಸಿಕದಲ್ಲಿ ಇದ್ದ 35,209 ಉದ್ಯೋಗಿಗಳಿಗಿಂತ ಕಡಿಮೆ ಆಗಿದೆ. ಕಂಪೆನಿಯು ಮೊದಲ ತ್ರೈಮಾಸಿಕದಲ್ಲಿ ಕಚೇರಿಗೆ ಉದ್ಯೋಗಿಗಳು ಹಿಂತಿರುಗುವ ಕಾರ್ಯಕ್ಕೆ ಕ್ರಮೇಣ ವೇಗ ನೀಡಿತು, ಸುಮಾರು ಶೇ 20ರಷ್ಟು ಉದ್ಯೋಗಿಗಳು ಈಗ ಕಚೇರಿಯಿಂದ ಕೆಲಸ ಮಾಡುತ್ತಿದ್ದಾರೆ.
ಜೂನ್ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ ರೀಟೇಲ್ ಮತ್ತು CPG (ಶೇ 25.1), ಸಂವಹನ ಮತ್ತು ಮಾಧ್ಯಮ (ಶೇ 19.6), ಉತ್ಪಾದನಾ ವರ್ಟಿಕಲ್ (ಶೇ 16.4) ಮತ್ತು ತಂತ್ರಜ್ಞಾನ ಹಾಗೂ ಸೇವೆಗಳು (16.4 ಶೇಕಡಾ) ಬೆಳವಣಿಗೆಯನ್ನು ಮುನ್ನಡೆಸಿದೆ ಎಂದು TCS ಹೇಳಿದೆ. BFSI ಶೇಕಡಾ 13.9, ಲೈಫ್ ಸೈನ್ಸಸ್ ಮತ್ತು ಹೆಲ್ತ್‌ಕೇರ್ ಶೇಕಡಾ 11.9ರಷ್ಟು ಬೆಳೆದಿದೆ.
ಪ್ರದೇಶವಾರು ನೋಡುವುದಾದರೆ, ಉತ್ತರ ಅಮೆರಿಕಾ ಶೇ 19.1ರ ಬೆಳವಣಿಗೆಯೊಂದಿಗೆ ಮುನ್ನಡೆ ಸಾಧಿಸಿದರೆ, ಯುರೋಪ್ ಶೇ 12.1 ಮತ್ತು ಯು.ಕೆ. ಶೇ 12.6 ಬೆಳವಣಿಗೆಯನ್ನು ಹೊಂದಿದೆ. ಉದಯೋನ್ಮುಖ ಮಾರುಕಟ್ಟೆಗಳಲ್ಲಿ, ಭಾರತವು ಶೇ 20.8 ಶೇಕಡಾ, ಏಷ್ಯಾ ಪೆಸಿಫಿಕ್ ಶೇಕಡಾ 6.2, ಲ್ಯಾಟಿನ್ ಅಮೆರಿಕಾ ಶೇ 21.6 ಹಾಗೂ ಮಧ್ಯಪ್ರಾಚ್ಯ ಮತ್ತು ಆಫ್ರಿಕಾ ಶೇ 3.2ರಷ್ಟು ಬೆಳೆದಿದೆ ಎಂದು ಸಂಸ್ಥೆ ತಿಳಿಸಿದೆ.