ಐಬಿಎಂ ಮಹಾಪತನ; ಆರು ದಶಕದಲ್ಲೇ ಹೀನಾಯ ಪ್ರದರ್ಶನ; 6.7 ಲಕ್ಷ ಕೋಟಿ ರೂ ಮೌಲ್ಯನಷ್ಟ; ಈ ಕುಸಿತಕ್ಕೆ ಏನು ಕಾರಣ?

IBM stocks crash over 25pc: ಅಮೆರಿಕದ ಟೆಕ್ ದೈತ್ಯ ಐಬಿಎಂ ಕಂಪನಿಯ ಷೇರುಬೆಲೆ ಒಂದೇ ದಿನ ಶೇ. 25ರಷ್ಟು ಕುಸಿತ ಕಂಡಿದೆ. 1967ರ ನಂತರ ಐಬಿಎಂ ಕಂಡಿರುವ ಅತಿದೊಡ್ಡ ಒಂದು ದಿನದ ಕುಸಿತ ಇದು ಎಂದು ಹೇಳಲಾಗುತ್ತಿದೆ. ಐಬಿಎಂಗೆ ಮೈನ್​ಫ್ರೇಮ್ ಕಂಪ್ಯೂಟರ್​ಗಳು, ಸಾಫ್ಟ್​ವೇರ್​ಗಳು, ಐಟಿ ಇನ್​ಫ್ರಾಸ್ಟ್ರಕ್ಚರ್ ವ್ಯವಹಾರಗಳಿವೆ.

ಐಬಿಎಂ ಮಹಾಪತನ; ಆರು ದಶಕದಲ್ಲೇ ಹೀನಾಯ ಪ್ರದರ್ಶನ; 6.7 ಲಕ್ಷ ಕೋಟಿ ರೂ ಮೌಲ್ಯನಷ್ಟ; ಈ ಕುಸಿತಕ್ಕೆ ಏನು ಕಾರಣ?
ಐಬಿಎಂ
Image Credit source: Michael Nguyen/NurPhoto via Getty Images)

Updated on: Jul 15, 2026 | 6:49 PM

ವಾಷಿಂಗ್ಟನ್, ಜುಲೈ 15: ಜಾಗತಿಕ ತಂತ್ರಜ್ಞಾನ ದೈತ್ಯ IBM (ಇಂಟರ್ನ್ಯಾಷನಲ್ ಬಿಸಿನೆಸ್ ಮಷೀನ್ಸ್) ಕಂಪನಿಯ ಷೇರುಗಳು ಒಂದೇ ದಿನದಲ್ಲಿ ಬರೋಬ್ಬರಿ ಶೇ. 25.2 ರಷ್ಟು ಕುಸಿದಿವೆ. ಇದು ಕಂಪನಿಯ ಇತಿಹಾಸದಲ್ಲೇ ಅತ್ಯಂತ ದೊಡ್ಡ ಏಕದಿನ ಪತನವಾಗಿದ್ದು, 1987ರ ಪ್ರಸಿದ್ಧ “ಬ್ಲ್ಯಾಕ್ ಮಂಡೇ” ಮಾರುಕಟ್ಟೆ ಕುಸಿತದ ಸಂದರ್ಭದಲ್ಲೂ ಐಬಿಎಂ ಇಷ್ಟು ದೊಡ್ಡ ಹೊಡೆತ ತಿಂದಿರಲಿಲ್ಲ. ಈ ಒಂದೇ ದಿನದ ಪತನದಿಂದಾಗಿ ಕಂಪನಿಯ ಸುಮಾರು 70 ಬಿಲಿಯನ್ ಡಾಲರ್ (ಅಂದಾಜು 6.7 ಲಕ್ಷ ಕೋಟಿ ರೂ) ಮಾರುಕಟ್ಟೆ ಮೌಲ್ಯ ಧೂಳೀಪಟವಾಗಿದೆ.

ಕಂಪನಿಯ ಸಿಇಒ ಅರವಿಂದ್ ಕೃಷ್ಣ ಅವರು ನಿಗದಿಗಿಂತ ಮೊದಲೇ ಹೂಡಿಕೆದಾರರಿಗೆ ಪತ್ರ ಬರೆದು, ಎರಡನೇ ತ್ರೈಮಾಸಿಕದ (Q2) ಆದಾಯ ನಿರೀಕ್ಷೆಗಿಂತ ಕಡಿಮೆಯಾಗಲಿದೆ ಎಂದು ಒಪ್ಪಿಕೊಂಡ ಬೆನ್ನಲ್ಲೇ ಈ ಸೆಲ್ ಆಫ್ (Sell-off) ನಡೆದಿದೆ. ಈ ಐತಿಹಾಸಿಕ ಐಬಿಎಂ ಷೇರು ಪತನಕ್ಕೆ ಕಾರಣವಾದ ಪ್ರಮುಖ ಅಂಶಗಳು ಈ ಕೆಳಕಂಡಂತಿವೆ:

ಇದನ್ನೂ ಓದಿ: ಇವಿ ಬ್ಯಾಟರಿ ಸ್ಫೋಟಗೊಳ್ಳುವುದು ಯಾಕೆ? ಸುರಕ್ಷಿತವಾಗಿ ಚಾರ್ಜಿಂಗ್ ಮಾಡುವುದು ಹೇಗೆ?

AI ಹಾರ್ಡ್‌ವೇರ್‌ನತ್ತ ಹೋಯ್ತು ಹೆಚ್ಚಿನ ಹಣ

ಪ್ರಸ್ತುತ ಜಗತ್ತಿನಲ್ಲಿ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಅಲೆ ಜೋರಾಗಿದೆ. ಜೂನ್ ತಿಂಗಳ ಕೊನೆಯ ವಾರಗಳಲ್ಲಿ ಜಾಗತಿಕ ಕಾರ್ಪೊರೇಟ್ ಕಂಪನಿಗಳು ತಮಗೆ ಬೇಕಾದ AI ಸರ್ವರ್‌ಗಳು, ಸ್ಟೋರೇಜ್ ಮತ್ತು ಮೆಮೊರಿ ಚಿಪ್‌ಗಳ ಬೆಲೆ ಹೆಚ್ಚಾಗಬಹುದು ಎಂಬ ಭೀತಿಯಿಂದ ಅವುಗಳನ್ನು ಮುಂಚಿತವಾಗಿಯೇ ಖರೀದಿಸಲು ಮುಗಿಬಿದ್ದವು. ಇದರಿಂದಾಗಿ, ಕಂಪನಿಗಳು ತಮ್ಮ ಐಟಿ (IT) ಬಜೆಟ್‌ನ ಬಹುಪಾಲು ಹಣವನ್ನು ಹಾರ್ಡ್‌ವೇರ್‌ಗೆ ಮೀಸಲಿಟ್ಟವು. ಇದರ ನೇರ ಪರಿಣಾಮವಾಗಿದ್ದು ಐಬಿಎಂನ ಸಾಫ್ಟ್‌ವೇರ್ ಮತ್ತು ಮೇನ್‌ಫ್ರೇಮ್ ಬಿಸಿನೆಸ್ ಮೇಲೆ. ಗ್ರಾಹಕರು ಸಾಫ್ಟ್‌ವೇರ್ ಖರೀದಿಯನ್ನು ಮುಂದೂಡಿದ್ದರಿಂದ ಐಬಿಎಂ ಆದಾಯಕ್ಕೆ ಭಾರಿ ಹೊಡೆತ ಬಿತ್ತು.

ಕಂಪನಿಯ ಪ್ರಮುಖ ‘ಮೇನ್‌ಫ್ರೇಮ್’ ಮತ್ತು ಸಾಫ್ಟ್‌ವೇರ್ ವ್ಯವಹಾರ ಕುಸಿತ

ಬ್ಯಾಂಕುಗಳು ಮತ್ತು ವಿಮಾನಯಾನ ಸಂಸ್ಥೆಗಳಂತಹ ದೊಡ್ಡ ಉದ್ಯಮಗಳ ಕೋಟ್ಯಂತರ ವಹಿವಾಟುಗಳನ್ನು ನಿರ್ವಹಿಸುವ ಐಬಿಎಂನ ಪ್ರಮುಖ ‘z17 ಮೇನ್‌ಫ್ರೇಮ್ ಕಂಪ್ಯೂಟರ್’ ಪ್ರೋಗ್ರಾಂ ಮತ್ತು ಅದಕ್ಕೆ ಸಂಬಂಧಿಸಿದ ಸಾಫ್ಟ್‌ವೇರ್ ವ್ಯವಹಾರಗಳು ಈ ತ್ರೈಮಾಸಿಕದಲ್ಲಿ ತೀವ್ರ ಹಿನ್ನಡೆ ಅನುಭವಿಸಿವೆ. ಕಂಪನಿಯ ಮೂಲಸೌಕರ್ಯ (Infrastructure) ವಿಭಾಗದ ಆದಾಯವು ಶೇ. 7 ರಷ್ಟು ಕುಸಿದಿದೆ. ತಂತ್ರಜ್ಞಾನದ ಬದಲಾವಣೆಗೆ ತಕ್ಕಂತೆ ವೇಗವಾಗಿ ಹೊಂದಿಕೊಳ್ಳಲು ನಾವು ವಿಫಲವಾಗಿದ್ದೇವೆ ಎಂದು ಸಿಇಒ ಅರವಿಂದ್ ಕೃಷ್ಣ ಮುಕ್ತವಾಗಿ ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ: ವಿವಿಧ ರೀತಿಯ ಹೈಬ್ರಿಡ್ ಕಾರುಗಳು ಯಾವುವು?, ಅವು ಹೇಗೆ ಕಾರ್ಯನಿರ್ವಹಿಸುತ್ತವೆ?

ಸೈಬರ್ ಭದ್ರತೆಗೆ ಹೆಚ್ಚಿದ ಆದ್ಯತೆ

ಇತ್ತೀಚಿನ ದಿನಗಳಲ್ಲಿ AI ಆಧಾರಿತ ಹ್ಯಾಕಿಂಗ್ ತಂತ್ರಜ್ಞಾನಗಳು ಹೆಚ್ಚುತ್ತಿರುವುದರಿಂದ, ಜಗತ್ತಿನಾದ್ಯಂತ ಉದ್ಯಮಗಳು ತಮ್ಮ ಸಾಫ್ಟ್‌ವೇರ್ ನವೀಕರಣಗಳನ್ನು ಬದಿಗಿಟ್ಟು, ಸೈಬರ್ ಭದ್ರತೆಗೆ (Cybersecurity) ಹೆಚ್ಚಿನ ಹಣ ವ್ಯಯಿಸುತ್ತಿವೆ. ಆಂಥ್ರೋಪಿಕ್​‌ನಂತಹ ಸುಧಾರಿತ AI ಮಾಡಲ್​ಗಳು ಕಂಪ್ಯೂಟರ್ ನೆಟ್‌ವರ್ಕ್‌ಗಳ ಲೋಪದೋಷಗಳನ್ನು ಪತ್ತೆಹಚ್ಚಲು ಶುರುಮಾಡಿದ ನಂತರ ಕಂಪನಿಗಳು ಡಿಫೆನ್ಸ್ ಮೋಡ್‌ಗೆ ಜಾರಿವೆ. ಈ ಕಾರಣದಿಂದಾಗಿ ಐಬಿಎಂ ಒಪ್ಪಂದ ಮಾಡಿಕೊಳ್ಳಬೇಕಾಗಿದ್ದ ನೂರಾರು ದೊಡ್ಡ ಸಾಫ್ಟ್‌ವೇರ್ ಡೀಲ್‌ಗಳು ಅಂತಿಮ ಕ್ಷಣದಲ್ಲಿ ರದ್ದಾಗಿವೆ ಅಥವಾ ಮುಂದೂಡಲ್ಪಟ್ಟಿವೆ.

ಐಬಿಎಂ ಅನುಭವಿಸಿದ ಈ ದಿಢೀರ್ ಪತನದ ಬಿಸಿ ಜಾಗತಿಕ ಸಾಫ್ಟ್‌ವೇರ್ ವಲಯಕ್ಕೂ ತಟ್ಟಿದೆ. ಅಮೆರಿಕದ ಮೈಕ್ರೋಸಾಫ್ಟ್, ಸೇಲ್ಸ್‌ಫೋರ್ಸ್ ಷೇರುಗಳು ಕುಸಿದಿರುವುದರ ಜೊತೆಗೆ ಭಾರತೀಯ ಐಟಿ ಕಂಪನಿಗಳಾದ TCS, ಇನ್ಫೋಸಿಸ್ ಮತ್ತು ವಿಪ್ರೋ ಷೇರುಗಳೂ ಸಹ ಇಳಿಕೆ ಕಂಡಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us