ಐಸಿಐಸಿಐ ಲೈಫ್ ಇನ್ಶೂರೆನ್ಸ್‌ನ ಹೊಸ ಎಂಡಿ ಮತ್ತು ಸಿಇಒ ಆಗಿ ಸಿದ್ಧಾರ್ಥ ಮಿಶ್ರಾ ಆಯ್ಕೆ; ಹಾಲಿ ಸಿಇಒ ಅನೂಪ್ ಬಾಗ್ಚಿ ಎಚ್‌ಡಿಎಫ್‌ಸಿ ಪಾಲು
ಐಸಿಐಸಿಐ ಲೈಫ್ ಇನ್ಶೂರೆನ್ಸ್‌ನ ಹೊಸ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಸಿದ್ಧಾರ್ಥ ಮಿಶ್ರಾ ಅವರನ್ನು 5 ವರ್ಷಗಳ ಅವಧಿಗೆ ನೇಮಕ ಮಾಡಲಾಗಿದೆ. ಪ್ರಸಕ್ತ ಸಿಇಒ ಅನೂಪ್ ಬಾಗ್ಚಿ ಹುದ್ದೆಯಿಂದ ನಿರ್ಗಮಿಸುತ್ತಿದ್ದು, ಐಸಿಐಸಿಐ ಲೈಫ್ನಲ್ಲಿ ಹೊಸ ನಾಯಕತ್ವ ಬದಲಾವಣೆ ಇದೆ. ಸಿದ್ಧಾರ್ಥ್ ಅವರು ಐಸಿಐಸಿಐ ಬ್ಯಾಂಕ್ನ ಬೇರೆ ಬೇರೆ ವಿಭಾಗಗಳಲ್ಲಿ ಕಳೆದ 26 ವರ್ಷಗಳಿಂದ ಕೆಲಸ ಮಾಡಿರುವ ಅನುಭವಿ ಎನಿಸಿದ್ದಾರೆ.

ನವದೆಹಲಿ, ಅಕ್ಟೋಬರ್ 2: ಖಾಸಗಿ ಕ್ಷೇತ್ರದ ಪ್ರಮುಖ ವಿಮಾ ಸಂಸ್ಥೆಯಾದ ಐಸಿಐಸಿಐ ಲೈಫ್ ಇನ್ಶೂರೆನ್ಸ್ (ICICI Life Insurance Limited) ತಮ್ಮ ಕಂಪನಿಯ ನೂತನ ವ್ಯವಸ್ಥಾಪಕ ನಿರ್ದೇಶಕ (MD) ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ (CEO) ಸಿದ್ಧಾರ್ಥ ಮಿಶ್ರಾ (Sidharatha Mishra) ಅವರನ್ನು ನೇಮಕ ಮಾಡಿದೆ. ಪ್ರಸ್ತುತ ಎಂಡಿ ಮತ್ತು ಸಿಇಒ ಆಗಿರುವ ಅನೂಪ್ ಬಾಗ್ಚಿ (Anup Bagchi) ಅವರು ಎಚ್‌ಡಿಎಫ್‌ಸಿ ಬ್ಯಾಂಕ್‌ಗೆ (HDFC Bank) ಸೇರ್ಪಡೆಯಾಗುವ ಹಿನ್ನೆಲೆಯಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದು, ಮಿಶ್ರಾ ಅವರಿಗೆ ನಾಯಕತ್ವ ವರ್ಗಾವಣೆಯಾಗಲಿದೆ.
ಸಿದ್ಧಾರ್ಥ ಮಿಶ್ರಾ ಅವರು ಅಕ್ಟೋಬರ್ 6 ರಿಂದ ಜಾರಿಗೆ ಬರುವಂತೆ ಕಂಪನಿಯ ಸಿಒಒ (COO- Chief Operating Officer) ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ತದನಂತರ, ಅಕ್ಟೋಬರ್ 14 ರಿಂದ ಅಥವಾ ವಿಮಾ ನಿಯಂತ್ರಣ ಪ್ರಾಧಿಕಾರದ (IRDAI) ಅಂತಿಮ ಅನುಮೋದನೆ ಸಿಕ್ಕ ದಿನಾಂಕದಿಂದ ಮುಂದಿನ 5 ವರ್ಷಗಳ ಅವಧಿಗೆ ಎಂಡಿ ಮತ್ತು ಸಿಇಒ ಆಗಿ ಕಾರ್ಯನಿರ್ವಹಿಸಲಿದ್ದಾರೆ.
ಅನೂಪ್ ಬಾಗ್ಚಿ ರಾಜೀನಾಮೆ, ಎಚ್ಡಿಎಫ್ಸಿಯಲ್ಲಿ ಮುಂದಿನ ಜವಾಬ್ದಾರಿ
ಪ್ರಸ್ತುತ ಎಂಡಿ ಮತ್ತು ಸಿಇಒ ಆಗಿರುವ ಅನೂಪ್ ಬಾಗ್ಚಿ ಅವರು 2026ರ ಅಕ್ಟೋಬರ್ 13 ರಂದು ತಮ್ಮ ಅಧಿಕಾರಾವಧಿಯನ್ನು ಪೂರ್ಣಗೊಳಿಸಿ ನಿರ್ಗಮಿಸಲಿದ್ದಾರೆ. ಐಸಿಐಸಿಐ ಗ್ರೂಪ್‌ನಲ್ಲಿ ಸುಮಾರು 3 ದಶಕಗಳ ಕಾಲ ಸೇವೆ ಸಲ್ಲಿಸಿರುವ ಬಾಗ್ಚಿ ಅವರ ಕೊಡುಗೆಯನ್ನು ಆಡಳಿತ ಮಂಡಳಿಯು ಶ್ಲಾಘಿಸಿದೆ.
ಇದನ್ನೂ ಓದಿ: ಎನ್ಪಿಎಸ್ ಮಾಮೂಲಿಯ ಪೆನ್ಷನ್ ಸ್ಕೀಮ್ ಆಗಿ ಉಳಿದಿಲ್ಲ; ಪಿಂಚಣಿ ಮತ್ತು ಹೂಡಿಕೆ ಮೇಳೈಸಿದ ಈ ಯೋಜನೆಯಲ್ಲಿ ಆಗಿದೆ ಹೊಸ ಬದಲಾವಣೆ
ಮೂರು ದಶಕಗಳ ಅನುಭವಿ ಸಿದ್ಧಾರ್ಥ ಮಿಶ್ರಾ
ಸಿದ್ಧಾರ್ಥ ಮಿಶ್ರಾ ಅವರು ಐಸಿಐಸಿಐ ಬ್ಯಾಂಕ್‌ನಲ್ಲಿ ರಿಟೇಲ್ ಬ್ಯಾಂಕಿಂಗ್, ಡಿಜಿಟಲ್ ಚಾನೆಲ್‌ಗಳು, ಪಾಲುದಾರಿಕೆಗಳು, ವಾಹನ ಸಾಲ ಹಾಗೂ ಗ್ರಾಹಕ ಸೇವಾ ವಿಭಾಗಗಳ ಮುಖ್ಯಸ್ಥರಾಗಿ 26 ವರ್ಷಗಳ ಸುದೀರ್ಘ ಅನುಭವ ಹೊಂದಿದ್ದಾರೆ. ಅವರ ಅನುಭವವು ವಿಮಾ ಕಂಪನಿಯ ಮುಂದಿನ ಹಂತದ ಬೆಳವಣಿಗೆಗೆ ಪೂರಕವಾಗಲಿದೆ ಎಂದು ಮಂಡಳಿ ವಿಶ್ವಾಸ ವ್ಯಕ್ತಪಡಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




