ಐಡಿಬಿಐ ಬ್ಯಾಂಕ್ ಷೇರುಗಳು ಗುರುವಾರದಂದು ಶೇ 14ರಷ್ಟು ಏರಿಕೆ ದಾಖಲಿಸಿವೆ. ಸ್ಟ್ರಾಟೆಜಿಕ್ ಬಂಡವಾಳ ಹಿಂತೆಗೆತ ಮತ್ತು ಆಡಳಿತದ ಹತೋಟಿ ವರ್ಗಾವಣೆಗೆ ಕೇಂದ್ರ ಸಂಪುಟದಿಂದ ತಾತ್ವಿಕ ಒಪ್ಪಿಗೆ ಸಿಕ್ಕ ನಂತರ ಷೇರಿನ ಬೆಲೆ ಮೇಲೇರಿದೆ. ನರೇಂದ್ರ ಮೋದಿ ಅಧ್ಯಕ್ಷತೆಯ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು ಐಡಿಬಿಐ ಬ್ಯಾಂಕ್ ಸ್ಟ್ರಾಟೆಜಿಕ್ ಮಾರಾಟಕ್ಕೆ ಒಪ್ಪಿಗೆ ನೀಡಿದೆ ಎಂದು ಬುಧವಾರ ಅಧಿಕೃತ ಹೇಳಿಕೆ ನೀಡಲಾಯಿತು. ಕೇಂದ್ರ ಸರ್ಕಾರ ಮತ್ತು ಜೀವ ವಿಮಾ ನಿಗಮವು (ಎಲ್ಐಸಿ) ಎರಡೂ ಸೇರಿ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಜತೆಗೆ ಚರ್ಚೆ ನಡೆಸಿದ ನಂತರ, ಎಷ್ಟು ಪ್ರಮಾಣದಲ್ಲಿ ಬಂಡವಾಳ ಹಿಂತೆಗೆದುಕೊಳ್ಳುತ್ತವೆ ನಿರ್ಧರಿಸುತ್ತವೆ ಎನ್ನಲಾಗಿದೆ.
ಕೇಂದ್ರ ಸರ್ಕಾರ ಮತ್ತು ಎಲ್ಐಸಿ ಎರಡೂ ಸೇರಿಕೊಂಡು ಐಡಿಬಿಐ ಬ್ಯಾಂಕ್ನಲ್ಲಿ ಶೇ 94ಕ್ಕಿಂತ ಹೆಚ್ಚಿನ ಪ್ರಮಾಣದ ಈಕ್ವಿಟಿ ಪಾಲು ಹೊಂದಿವೆ. ಎಲ್ಐಸಿ ಸದ್ಯಕ್ಕೆ ಐಡಿಬಿಐ ಬ್ಯಾಂಕ್ ಪ್ರಮೋಟರ್ ಆಗಿದೆ. ಜತೆಗೆ ಆಡಳಿತ ನಿರ್ವಹಣೆ ಹೊಂದಿದ್ದು, ಶೇ 49.21ರಷ್ಟು ಷೇರಿನ ಪಾಲು ಹೊಂದಿದೆ. 2021-22 ಕೇಂದ್ರ ಬಜೆಟ್ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ಗಳ ಖಾಸಗೀಕರಣದ ಬಗ್ಗೆ ಘೋಷಿಸಿದ್ದರು. ಒಟ್ಟಾರೆಯಾಗಿ 1.75 ಲಕ್ಷ ಕೋಟಿ ರೂಪಾಯಿ ಬಂಡವಾಳ ಹಿಂತೆಗೆತದ ಭಾಗವಾಗಿ ಈ ಘೋಷಣೆ ಮಾಡಿದ್ದರು.
ಐಡಿಬಿಐ ಬ್ಯಾಂಕ್ ಹೊರತುಪಡಿಸಿ ಇತರ ಎರಡು ಸಾರ್ವಜನಿಕ ಬ್ಯಾಂಕ್ಗಳು ಹಾಗೂ ಒಂದು ಜನರಲ್ ಇನ್ಷೂರೆನ್ಸ್ ಕಂಪೆನಿಯ ಬಂಡವಾಳದ ಹಿಂತೆಗೆತದ ಗುರಿಯನ್ನು 2021-22ಕ್ಕೆ ಇರಿಸಿಕೊಳ್ಳಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದರು. ಬೆಳಗ್ಗೆ 10.25ಕ್ಕೆ ಐಡಿಬಿಐ ಬ್ಯಾಂಕ್ ಶೇ 6.85 ಏರಿಕೆಯಾಗಿ ತಲಾ ಷೇರಿಗೆ ಬಿಎಸ್ಇಯಲ್ಲಿ ರೂ. 40.55ರಲ್ಲಿ ವಹಿವಾಟು ನಡೆಸಿತ್ತು. ಈ ಸುದ್ದಿಯನ್ನು ಪಬ್ಲಿಷ್ ಮಾಡುವ ಹೊತ್ತಿಗೆ ಶೇ 7.25 ಏರಿಕೆಯಾಗಿ ರೂ. 40.70 ಇತ್ತು.
ಇದನ್ನೂ ಓದಿ: Budget 2021 | ಸಾರ್ವಜನಿಕ ವಲಯದ ಬ್ಯಾಂಕ್ಗಳಿಗೆ ಆಗಬೇಕಿದೆ ಮೇಜರ್ ಸರ್ಜರಿ
(IDBI Bank share price increased by 14% on Thursday, after in principle approval for disinvestment by central government)