Budget 2021 | ಸಾರ್ವಜನಿಕ ವಲಯದ ಬ್ಯಾಂಕ್ಗಳಿಗೆ ಆಗಬೇಕಿದೆ ಮೇಜರ್ ಸರ್ಜರಿ
ಪ್ರಸಕ್ತ ವಿದ್ಯಮಾನಗಳಲ್ಲಿ, ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಲ್ಲಿನ ಪಾಲುದಾರಿಕೆಯನ್ನು ಸೆಕೆಂಡರಿ ಮಾರ್ಕೆಟ್ ಮೂಲಕ ಕಡಿಮೆ ಮಾಡುವುದು ಉತ್ತಮ ನಡೆಯಾಗಲಾರದು ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಈ ಬ್ಯಾಂಕ್ಗಳ ಸ್ಟಾಕ್ಗಳು ರಿಯಾಯಿತಿ ದರದಲ್ಲಿ ಮಾರಾಟವಾಗುತ್ತಿರುವುದರಿಂದ ಅವುಗಳಿಗೆ ಸೂಕ್ತ ಮೌಲ್ಯ ಸಿಗಲಾರದೆಂದು ಹೇಳಲಾಗುತ್ತಿದೆ.
ಕೊವಿಡ್-19 ಪಿಡುಗು ಬ್ಯಾಕಿಂಗ್ ವಲಯದ ಮೇಲೂ ಗುರುತರವಾದ ಪರಿಣಾಮ ಬೀರಿರುವುದು ನರೇಂದ್ರ ಮೋದಿ ಸರ್ಕಾರಕ್ಕೆ ಉಳಿದವರಿಗಿಂತ ಚೆನ್ನಾಗಿ ಗೊತ್ತಿದೆ. ದೇಶದ ಬ್ಯಾಕಿಂಗ್ ವಲಯದ ದೃಷ್ಟಿ ನಿಸ್ಸಂದೇಹವಾಗಿ ಸೋಮವಾರದಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಲಿರುವ ಬಜೆಟ್ 2021ರ ಮೇಲಿರಲಿದೆ.
ಸಾರ್ವಜನಿಕ ವಲಯದ 13 ಬ್ಯಾಂಕ್ಗಳನ್ನು 5 ಬ್ಯಾಂಕ್ಗಳೊಂದಿಗೆ ಮತ್ತು ಸ್ಟೇಟ್ ಬ್ಯಾಂಕ್ ಅಫ್ ಇಂಡಿಯಾದ ಎಲ್ಲ ಸಹಯೋಗಿ ಬ್ಯಾಂಕ್ಗಳನ್ನು ಅವುಗಳ ಮಾತೃ ಬ್ಯಾಂಕ್ನೊಂದಿಗೆ ವಿಲೀನಗೊಳಸಿದ ನಂತರ ಸರ್ಕಾರೀ ಒಡೆತನದ ಕೆಲ ಬ್ಯಾಂಕ್ಗಳನ್ನು ಖಾಸಗೀಕರಣಗೊಳಿಸುವುದು ನರೇಂದ್ರ ಮೋದಿ ಸರ್ಕಾರದ ಮೊದಲ ಆದ್ಯತೆಯಾಗಬಹುದು. ಈ ನಿಟ್ಟಿನಲ್ಲಿ ಸರ್ಕಾರ ಮುಂದುವರಿದರೆ, ಸುದೀರ್ಘ ಕಾಲದಿಂದ ಸುಧಾರಣೆಗಾಗಿ ಕಾಯುತ್ತಿರುವ ಈ ವಲಯಕ್ಕೆ ಚಾಲನೆ ನೀಡಿದಂತಾಗುತ್ತದೆ.
ಹಿಂದಿನ ಸರ್ಕಾರಗಳು ಸಹ ಸರ್ಕಾರೀ ಸ್ವಾಮ್ಯದ ಸಾರ್ವಜನಿಕ ವಲಯದ ಬ್ಯಾಂಕ್ಗಳನ್ನು ಖಾಸಗೀಕರಣಗೊಳಿಸುವುದು ಅಜೆಂಡವಾಗಿಟ್ಟುಕೊಂಡಿದ್ದವಾದರೂ, ಅದು ಸಾಧ್ಯವಾಗದೆ ಹೋಯಿತು. ಐಡಿಬಿಐ ಬ್ಯಾಂಕನ್ನು ಸಂಪೂರ್ಣವಾಗಿ ಕೇಂದ್ರ ಸರ್ಕಾರದ ಒಡೆತನದಲ್ಲಿರುವ ಜೀವನ ಬೀಮಾ ನಿಗಮ (ಎಲ್ಐಸಿ) ಖರೀದಿಸಿರುವುದರಿಂದ ಅದು ಈ ಪಟ್ಟಿಗೆ ಸೇರುವುದಿಲ್ಲ.
ಇದನ್ನೂ ಓದಿ: ಆರ್ಥಿಕತೆ V-ಆಕಾರದಲ್ಲಿ ಚೇತರಿಸಿಕೊಳ್ಳುತ್ತಿದೆ ಎಂದು ಆರ್ಥಿಕ ಸಮೀಕ್ಷೆ ಹೇಳಿದೆ, ಅದರರ್ಥವೇನು?
ಹಣಕಾಸು ಸಚಿವಾಲಯದ ಮೂಲವೊಂದರ ಪ್ರಕಾರ ಸರ್ಕಾರೀ ಸ್ವಾಮ್ಯದಲ್ಲಿರುವ ಎಲ್ಲ ಬ್ಯಾಂಕುಗಳ ಸಂಖ್ಯೆಯನ್ನು ನಾಲ್ಕಕ್ಕೆ ಇಳಿಸಲು ಕೇಂದ್ರ ಸರ್ಕಾರ ಆಲೋಚಿಸುತ್ತಿದೆ. ಅಂದರೆ ಸಣ್ಣ ಗಾತ್ರ ಬ್ಯಾಂಕ್ಗಳನ್ನು ನಾಲ್ಕು ದೊಡ್ಡ ಗಾತ್ರದ ಬ್ಯಾಂಕ್ಗಳೊಂದಿಗೆ ವಿಲೀನಗೊಳಿಸುವುದು ಮತ್ತು ಚಿಕ್ಕ ಹಣಕಾಸು ಸಂಸ್ಥೆಗಳನ್ನು ಖಾಸಗೀಕರಣಗೊಳಿಸುವುದು. ಈ ಮೊದಲು ನಡೆದ ವಿಲೀನ ಪ್ರಕ್ರಿಯೆಯ ನಂತರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡ ಮತ್ತು ಕೆನರಾ ಬ್ಯಾಂಕ್ ನಾಲ್ಕು ಅತಿದೊಡ್ಡ ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳೆನಿಸಿಕೊಂಡಿದ್ದು ಅವು ತಮ್ಮ ಸ್ವಂತಿಕೆಯನ್ನು ಉಳಿಸಿಕೊಳ್ಳುವ ನಿರೀಕ್ಷೆಯಿದೆ.
ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ಖಾಸಗೀಕರಣಗೊಳಿಸುವ ಬಗ್ಗೆ ಚರ್ಚೆ ನಡೆಯುತ್ತಲೇ ಇದೆ. ವಿಲೀನಕ್ಕೆ ಮೊದಲು ಸರ್ಕಾರಿ ಸ್ವಾಮ್ಯದ 19 ಬ್ಯಾಂಕುಗಳ ಪೈಕಿ 6 ಬ್ಯಾಂಕುಗಳ ಕಾರ್ಯಕ್ಷಮತೆ ಸರಿಯಾಗಿಲ್ಲ. ಹಾಗಾಗಿಯೇ ಅವುಗಳನ್ನು ಈ ಪ್ರಕ್ರಿಯೆಯಿಂದ ಹೊರಗಿಡಲಾಗಿತ್ತು. ಈ ಹಿನ್ನೆಲೆಯಲ್ಲೇ ಅವುಗಳನ್ನು ಖಾಸಗಿಯವರಿಗೆ ಒಪ್ಪಿಸುವ ಬಗ್ಗೆ ಸರ್ಕಾರ ಯೋಚಿಸುತ್ತಿದೆ, ಎಂದು ಅಶ್ವಿನ್ ಪಾರೇಖ್ ಸಲಹಾ ಸೇವೆಗಳ ಸಂಸ್ಥೆಯ ವ್ಯವಸ್ಥಾಪಕ ಪಾಲುದಾರ ಅಶ್ವಿನ್ ಪಾರೇಖ್ ಹೇಳುತ್ತಾರೆ.
2020 ರಲ್ಲಿ 10 ಸಾರ್ವಜನಿಕ ವಲಯದ ಬ್ಯಾಂಕುಗಳ ವಿಲೀನದ ನಂತರ ಈಗ ಭಾರತದಲ್ಲಿ 12 ಸಾರ್ವಜನಿಕ ವಲಯದ ಬ್ಯಾಂಕುಗಳಿವೆ. ಬ್ಯಾಂಕ್ ಆಫ್ ಇಂಡಿಯಾ, ಯುಕೊ ಬ್ಯಾಂಕ್, ಬ್ಯಾಂಕ್ ಆಫ್ ಮಹಾರಾಷ್ಟ್ರ, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಇಂಡಿಯನ್ ಓವರ್ಸೀಸ್ ಬ್ಯಾಂಕ್ ಹಾಗೂ ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ಗಳನ್ನು ವಿಲೀನ ಪ್ರಕ್ರಿಯೆಯಿಂದ ಹೊರಗಿಡಲಾಗಿತ್ತು.
ಉಳಿದ 12 ಬ್ಯಾಂಕುಗಳ ಪೈಕಿ ಕೆಲವನ್ನು ಖಾಸಗಿ ವಲಯಕ್ಕೆ ಒಪ್ಪಿಸಿಬಿಡಬಹುದು, ಒಂದರೆಡನ್ನು ನಾಲ್ಕು ದೊಡ್ಡ ಬ್ಯಾಂಕುಗಳೊಂದಿಗೆ ಸೇರಿಸಬಹುದು ಮತ್ತು ಉಳಿದ ಬ್ಯಾಂಕುಗಳಲ್ಲಿ ಸರ್ಕಾರ ತನ್ನ ಪಾಲುದಾರಿಕೆಯನ್ನು ಕ್ರಮೇಣವಾಗಿ ತಗ್ಗಿಸುತ್ತಾ ಅಂತಿಮವಾಗಿ ಸೆಕೆಂಡರಿ ಮಾರ್ಕೆಟ್ನಲ್ಲಿ ಅವುಗಳನ್ನು ಮಾರಬಹುದು ಎಂದು, ಹಣಕಾಸು ಸಚಿವಾಲಯದ ಮೂಲವೊಂದು ತಿಳಿಸಿದೆ.
ಆದರೆ, ಪ್ರಸಕ್ತ ವಿದ್ಯಮಾನಗಳಲ್ಲಿ, ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಲ್ಲಿನ ಪಾಲುದಾರಿಕೆಯನ್ನು ಸೆಕೆಂಡರಿ ಮಾರ್ಕೆಟ್ ಮೂಲಕ ಕಡಿಮೆ ಮಾಡುವುದು ಉತ್ತಮ ನಡೆಯಾಗಲಾರದು ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಈ ಬ್ಯಾಂಕ್ಗಳ ಸ್ಟಾಕ್ಗಳು ರಿಯಾಯಿತಿ ದರದಲ್ಲಿ ಮಾರಾಟವಾಗುತ್ತಿರುವುದರಿಂದ ಅವುಗಳಿಗೆ ಸೂಕ್ತ ಮೌಲ್ಯ ಸಿಗಲಾರದೆಂದು ಹೇಳಲಾಗುತ್ತಿದೆ.
ಮಾರ್ಸಿಲ್ಲಸ್ ಇನ್ವೆಸ್ಟ್ಮೆಂಟ್ ಮ್ಯಾನೇಜರ್ಸ್ ಸಂಸ್ಥೆಯ ಮುಖ್ಯ ಹೂಡಿಕೆ ಅಧಿಕಾರಿ ಸೌರಭ್ ಮುಖರ್ಜಿ ಹೇಳುವಂತೆ ಪ್ರಸಕ್ತ ವರ್ಷದಲ್ಲಿ ಹಣಕಾಸಿನ ಅನಿವಾರ್ಯತೆಗಳು ಆಧಿಕವಾಗಿರುವುದುರಿಂದ ಕಾರ್ಮಿಕ ಕಾನೂನು, ಆಸ್ತಿಗಳ ಗುಣಮಟ್ಟ ಮತ್ತು ಮೌಲ್ಯ ಮೊದಲಾದ ಸವಾಲುಗಳ ಹೊರತಾಗಿಯೂ ಸರ್ಕಾರ ಖಾಸಗಿರಣದತ್ತ ಹೆಚ್ಚು ಒಲವು ತೋರಬಹುದು ಎನ್ನುತ್ತಾರೆ.
ದೇಶದಲ್ಲಿರುವ ಕಾರ್ಮಿಕ ಕಾನೂನುಗಳು ಸವಾಲಿನ ಭಾಗವಾಗಿರುವಂತೆಯೇ, ಬ್ಯಾಂಕುಗಳು ಹೊಂದಿರುವ ಆಸ್ತಿಗಳ ಗುಣಮಟ್ಟ ಮತ್ತು ಅವುಗಳ ಮೌಲ್ಯ ಸಹ ಸರ್ಕಾರದ ಎದುರಿರುವ ಸವಾಲುಗಳಾಗಿವೆ. ಸರ್ಕಾರವೇನಾದರೂ ಈ ಅಡಚನಣೆಗಳನ್ನು ನಿವಾರಿಸಿಕೊಂಡರೆ, ನಿಸ್ಸಂದೇಹವಾಗಿ ಹೊಸ ಖಾಸಗೀಕರಣದ ಡ್ರೈವ್ ಬಗ್ಗೆ ಒಂದು ಆಶಾಕಿರಣ ಸೃಷ್ಟಿಯಾಗುತ್ತದೆ,’ ಎಂದು ಮುಖರ್ಜಿ ಹೇಳುತ್ತಾರೆ.
‘ಪ್ರತಿಬಾರಿ ಬಜೆಟ್ ಮಂಡನೆಯಾಗುವಾಗ ಖಾಸಗೀಕರಣದ ನಿರೀಕ್ಷೆಗಳು ಹುಟ್ಟಿಕೊಳ್ಳುವಂತೆ ಈ ಬಾರಿಯೂ ಇವೆ. ಆದರೆ ಕಳೆದ ದಶಕಕ್ಕೆ ಹೋಲಿಸಿದರೆ, ಈ ವರ್ಷ ಹಣಕಾಸಿನ ಅನಿವಾರ್ಯತೆಗಳು ದೊಡ್ಡವು. ಈ ಸರ್ಕಾರ ಪ್ರತಿವರ್ಷ ಎದುರಾಗುತ್ತಿದ್ದ ಸಾಂಪ್ರದಾಯಿಕ ಅಡೆತಡೆಗಳನ್ನು ಹಿಂದಿಕ್ಕಿ ಮುಂದುವರಿದರೆ ಬಹುದಿನಗಳ ನಿರೀಕ್ಷೆ ಈಡೇರಿದಂತಾಗುತ್ತದೆ.’ ಎಂದು ಮುಖರ್ಜಿ ಹೇಳುತ್ತಾರೆ.
ಬ್ಯಾಂಕಿಂಗ್ ವಲಯದ ಸುಧಾರಣೆಗೆ ಹಿಂದೆಯೂ ಪ್ರಯತ್ನಗಳು ನಡೆದಿದ್ದವು. ಆ ಕಾರಣಕ್ಕಾಗಿಯೇ 2014ರಲ್ಲಿ ಬ್ಯಾಂಕ್ಸ್ ಬೋರ್ಡ್ ಬ್ಯುರೊ ಸ್ಥಾಪಿಸಿ, ಬ್ಯಾಂಕುಗಳ ಚೇರ್ಮನ್ ಮತ್ತು ವ್ಯವಸ್ಥಾಪಕ ನಿರ್ದೇಶಕ ಹುದ್ದೆಗಳನ್ನು ಎಂಡಿ-ಸಿಈಒ ಮತ್ತು ನಾನ್-ಎಕ್ಸಿಕ್ಯುಟಿವ್ ಚೇರ್ಮನ್ ಹುದ್ದ್ದೆಗಳಾಗಿ ವಿಂಗಡಿಸಲಾಗಿತ್ತು. ಆದರೆ ಅದನ್ನು ಬಿಟ್ಟರೆ ಬೇರೆ ಯಾವುದೇ ಪ್ರಗತಿ ಸಾಧ್ಯವಾಗಿರಲಿಲ್ಲ.
ಈ ನಿಟ್ಟಿನಲ್ಲಿ ಸರ್ಕಾರ ರೂಪಿಸಿದ್ದ ಪಿ.ಜೆ.ನಾಯಕ್ ನೇತೃತ್ವದ ಸಮಿತಿಯು ಕೇಂದ್ರ ಸರ್ಕಾರ, ಸಾರ್ವಜನಿಕ ವಲಯದ ಬ್ಯಾಂಕುಗಳಿಂದ ಅಂತರ ಕಾಯ್ದುಕೊಳ್ಳವುದೇ ಒಳಿತು ಅಂತ ಶಿಫಾರಸ್ಸು ಮಾಡಿತ್ತು.
ಬ್ಯಾಂಕಿಂಗ್ ಉದ್ಯಮದ ಪರಿಣಿತರ ಪ್ರಕಾರ ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ಆಡಳಿತಾತ್ಮಕ ಸುಧಾರಣೆ ತರುವುದು ಅತ್ಯಂತ ಅವಶ್ಯಕವಾಗಿದೆ. ಕಳೆದ 5 ವರ್ಷಗಳಲ್ಲಿ ಅಂದರೆ 2015ರಿಂದ 2020ರವರೆಗಿನ ಅವಧಿಯಲ್ಲಿ ಈ ಬ್ಯಾಂಕುಗಳು ಅತ್ಯಂತ ಶೀಘ್ರಗತಿಯಲ್ಲಿ ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿವೆ ಮತ್ತು ತಮ್ಮ ಮಾರ್ಕೆಟ್ ಪಾಲುದಾರಿಕೆಯನ್ನು ಖಾಸಗಿ ಬ್ಯಾಂಕುಗಳಿಗೆ ಬಿಟ್ಟುಕೊಟ್ಟಿವೆ. ಸದರಿ 5 ವರ್ಷಗಳ ಅವಧಿಯಲ್ಲಿ ಸಾರ್ವಜನಿಕ ವಲಯ ಬ್ಯಾಂಕುಗಳ ಮಾರ್ಕೆಟ್ ಪಾಲುದಾರಿಕೆ ಶೇಕಡಾ 74.28ರಿಂದ ಶೇಕಡಾ 59.8 ಗೆ ಕುಸಿದಿದ್ದರೆ ಠೇವಣಿಗಳು ಶೇಕಡಾ 76.26ರಿಂದ ಶೇಕಡಾ 64.75ಕ್ಕೆ ಕುಸಿದಿವೆ.
ಸಾರ್ವಜನಿಕ ವಲಯ ಬ್ಯಾಂಕುಗಳ ಪರಿಸ್ಥಿತಿ ಹೀಗಿದೆ. ಅವುಗಳ ಸುಧಾರಣೆಗೆ ನರೇಂದ್ರ ಮೋದಿ ಸರ್ಕಾರ ಯಾವ ಕ್ರಮ ತೆಗೆದುಕೊಳ್ಳಲಿದೆ ಎನ್ನುವುದು ಸೋಮವಾರ ಗೊತ್ತಾಗಲಿದೆ.
Budget 2021 ವ್ಯಕ್ತಿ ವ್ಯಕ್ತಿತ್ವ | ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನಡೆದು ಬಂದ ದಾರಿ