Bigger Salary: ಟ್ಯಾಕ್ಸ್ ರಿಬೇಟ್, ಹೊಸ ಸ್ಲ್ಯಾಬ್ ದರಗಳಿಂದ ನಿಮ್ಮ ಮಾಸಿಕ ಸಂಬಳ ಎಷ್ಟು ಹೆಚ್ಚುತ್ತೆ ಗೊತ್ತಾ?
Possible increase in salary due to new tax regime rates: ಸರ್ಕಾರ ಪರಿಷ್ಕರಿಸಿರುವ ಟ್ಯಾಕ್ಸ್ ಸ್ಲ್ಯಾಬ್ ದರಗಳು ಏಪ್ರಿಲ್ 1ರಿಂದ ಅನ್ವಯ ಆಗುತ್ತವೆ. ಮುಂಬರುವ ಸಂಬಳದಲ್ಲಿ ನಿಮಗೆ ಕೈಗೆ ಸಿಗುವ ಸಂಬಳದ ಹಣ ಏರಿಕೆ ಆಗಬಹುದು. ಹೊಸ ಟ್ಯಾಕ್ಸ್ ಸ್ಲ್ಯಾಬ್ ದರಗಳಿಂದಾಗಿ ಕಂಪನಿಗಳು ಉದ್ಯೋಗಿಗಳ ಸಂಬಳದಿಂದ ಟಿಡಿಎಸ್ ಕಡಿತವನ್ನು ಕಡಿಮೆ ಮಾಡಬಹುದು.

ಫೆಬ್ರುವರಿ 1ರಂದು ಮಂಡಿಸಲಾದ ಕೇಂದ್ರ ಬಜೆಟ್ (Union Budget 2025) ನಿಮಗೆ ನೆನಪಿರಬಹುದು. ಅದರಲ್ಲಿ ಟ್ಯಾಕ್ಸ್ ರಿಬೇಟ್ ಮಿತಿ ಹೆಚ್ಚಿಸಿ ಸಂಬಳದಾರರಿಗೆ ಭರ್ಜರಿ ಗಿಫ್ಟ್ ಕೊಟ್ಟಿತು ಸರ್ಕಾರ. 12 ಲಕ್ಷ ರೂವರೆಗಿನ ಆದಾಯಕ್ಕೆ ತೆರಿಗೆಯೇ (Income tax) ಇಲ್ಲದಂತೆ ಕ್ರಮ ತೆಗೆದುಕೊಳ್ಳಲಾಗಿದೆ. ಹಾಗೆಯೇ, ಟ್ಯಾಕ್ಸ್ ಸ್ಲ್ಯಾಬ್ ದರಗಳನ್ನೂ ಪರಿಷ್ಕರಿಸಿದೆ. 2025ರ ಏಪ್ರಿಲ್ 1ರಿಂದ ಇದು ಜಾರಿಗೆ ಬಂದಿದೆ. ಈಗ ಬರಲಿರುವ ಸಂಬಳದಲ್ಲಿ, ಅಂದರೆ, ಮೇ ತಿಂಗಳಲ್ಲಿ ಸಿಗುವ ಏಪ್ರಿಲ್ನ ಸಂಬಳದಲ್ಲಿ ನಿಮಗೆ ಕೈಗೆ ಸಿಗುವ ಹಣ ಹೆಚ್ಚಾಗಬಹುದು. ಇದಕ್ಕೆ ಕಾರಣ, ನೀವು ಕೆಲಸ ಮಾಡುತ್ತಿರುವ ಕಂಪನಿಯವರು ನಿಮ್ಮ ಸಂಬಳದಿಂದ ಕಡಿಮೆ ಟಿಡಿಎಸ್ ಕಡಿತಗೊಳಿಸುವುದರಿಂದ ಕೈಗೆ ಸಿಗುವ ಸಂಬಳ ಏರಿಕೆ ಆಗುವ ಸಾಧ್ಯತೆ ಇರುತ್ತದೆ.
2025-26 ವರ್ಷಕ್ಕೆ ಪರಿಷ್ಕೃತ ಇನ್ಕಮ್ ಟ್ಯಾಕ್ಸ್ ದರ (ಹೊಸ ಟ್ಯಾಕ್ಸ್ ರಿಜೈಮ್)
- 4 ಲಕ್ಷ ರೂವರೆಗೆ: ತೆರಿಗೆ ಇಲ್ಲ
- 4-8 ಲಕ್ಷ ರೂ: ಶೇ. 5 ತೆರಿಗೆ
- 12-16 ಲಕ್ಷ ರೂ: ಶೇ. 15
- 16-20 ಲಕ್ಷ ರೂ: ಶೇ. 20
- 20-24 ಲಕ್ಷ ರೂ: ಶೇ. 25
- 24 ಲಕ್ಷ ರೂಗಿಂತ ಹೆಚ್ಚು: ಶೇ. 30 ತೆರಿಗೆ
ಇದನ್ನೂ ಓದಿ: ಇಪಿಎಫ್ ಟ್ರಾನ್ಸ್ಫರ್ ಈಗ ತ್ವರಿತ, ಸರಳ; ಫಾರ್ಮ್ 13ರಲ್ಲಿ ತುಸು ಬದಲಾವಣೆ
ಇಲ್ಲಿ 12 ಲಕ್ಷ ರೂವರೆಗಿನ ಆದಾಯಕ್ಕೆ ಟ್ಯಾಕ್ಸ್ ರಿಬೇಟ್ ಸಿಗುತ್ತದೆ. ಅಂದರೆ, ಅಷ್ಟು ಆದಾಯಕ್ಕೆ ತೆರಿಗೆ ಇರುವುದಿಲ್ಲ. ಇದರ ಜೊತೆಗೆ, ಸಂಬಳದಾರರಿಗೆ 75,000 ರೂ ಸ್ಟ್ಯಾಂಡರ್ಡ್ ಡಿಡಕ್ಷನ್ ಇರುತ್ತದೆ. ಅಂದರೆ, ನಿಮ್ಮ ವಾರ್ಷಿಕ ಸಂಬಳ 12,75,000 ರೂ ಇದ್ದರೆ ತೆರಿಗೆ ಬಾಧ್ಯತೆ ಇರುವುದಿಲ್ಲ.
ನಿಮ್ಮ ವಾರ್ಷಿಕ ಸಂಬಳ 12 ಲಕ್ಷ ರೂ ಇದ್ದಲ್ಲಿ, ಹಿಂದಿನ ಟ್ಯಾಕ್ಸ್ ರಿಜೈಮ್ ದರಕ್ಕೆ ಹೋಲಿಸಿದರೆ ಪರಿಷ್ಕೃತ ಸಿಸ್ಟಂನಲ್ಲಿ 80,000 ರೂನಷ್ಟು ಟ್ಯಾಕ್ಸ್ ಉಳಿಸಬಹುದು. ಅಂದರೆ, ನಿಮ್ಮ ತಿಂಗಳ ಸಂಬಳದಲ್ಲಿ 6,650 ರೂ ಉಳಿಯುತ್ತದೆ.
ಇದಕ್ಕಿಂತ ಹೆಚ್ಚಿನ ಸಂಬಳಕ್ಕೆ ಟ್ಯಾಕ್ಸ್ ಸ್ಲ್ಯಾಬ್ ದರಗಳು ಅನ್ವಯ ಆಗುತ್ತವೆ. ಆದರೆ, ಈ ದರವೂ ಕೂಡ ಹಿಂದಿನದಕ್ಕಿಂತ ಕಡಿಮೆ ಹೊರೆಯದ್ದಾಗಿರುತ್ತದೆ.
ಇದನ್ನೂ ಓದಿ: ಐಟಿಆರ್ನಲ್ಲಿ ತಪ್ಪು ಮಾಹಿತಿ ಕೊಟ್ರೆ ಸಿಕ್ಕಿಬೀಳ್ತೀರಿ; ಐಟಿ ಇಲಾಖೆ ಬಳಿ ಇವೆ ಹೊಸ ಎಐ ಟೂಲ್ಸ್
ನಿಮ್ಮ ವಾರ್ಷಿಕ ಸಂಬಳ 20 ಲಕ್ಷ ರೂ ಇದ್ದಲ್ಲಿ ವರ್ಷಕ್ಕೆ ಉಳಿಸುವ ತೆರಿಗೆ 90,000 ರೂ ಅಗುತ್ತದೆ. ಮಾಸಿಕ ಸಂಬಳದಲ್ಲಿ 7,500 ರೂ ಉಳಿಯುತ್ತದೆ.
ಇನ್ನು, 25 ಲಕ್ಷ ರೂ ಸಂಬಳ ಇದ್ದಲ್ಲಿ ವರ್ಷಕ್ಕೆ ಉಳಿಸುವ ತೆರಿಗೆ 1.10 ಲಕ್ಷ ರೂ ಅಗುತ್ತದೆ. ಮಾಸಿಕವಾಗಿ ಉಳಿಯುವುದು 9,150 ರೂ. ಇದಕ್ಕಿಂತ ಮೇಲ್ಪಟ್ಟ ಸಂಬಳ ಇದ್ದರೆ ನಿಮ್ಮ ಟ್ಯಾಕ್ಸ್ ಸೇವಿಂಗ್ಸ್ನಲ್ಲಿ ಇದಕ್ಕಿಂತ ಹೆಚ್ಚಿರದು.
ಒಟ್ಟಾರೆ, ಹೊಸ ಪರಿಷ್ಕೃತ ಟ್ಯಾಕ್ಸ್ ರೇಟ್ ಪ್ರಕಾರ ನೀವು ವರ್ಷಕ್ಕೆ 1,10,000 ರೂವರೆಗೆ ತೆರಿಗೆ ಉಳಿತಾಯ ಮಾಡಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ








