ನೌಕಾಪಡೆಗೆ ಬರಲಿವೆ 64,000 ಕೋಟಿ ರೂ ಮೊತ್ತದ 26 ರಫೇಲ್ ಯುದ್ಧವಿಮಾನಗಳು; ಭಾರತ-ಫ್ರಾನ್ಸ್ ಒಪ್ಪಂದ
Indian navy procuring 26 Rafale jets of Rs 64,000 value: ಫ್ರಾನ್ಸ್ ಕಂಪನಿಗಳು ತಯಾರಿಸುವ ರಫೇಲ್ ಯುದ್ಧವಿಮಾನಗಳು ಭಾರತದ ನೌಕಾಪಡೆಗೆ ಬರಲಿವೆ. 64,000 ಕೋಟಿ ರೂ ಮೌಲ್ಯದ 26 ರಫೇಲ್ ಜೆಟ್ಗಳನ್ನು ಖರೀದಿಸಲು ಫ್ರಾನ್ಸ್ ಜೊತೆ ಭಾರತ ಸರ್ಕಾರ ಒಪ್ಪಂದ ಮಾಡಿದೆ. ಈ ಹಿಂದೆ 36 ರಫೇಲ್ ಜೆಟ್ಗಳು ಭಾರತದ ವಾಯುಪಡೆಗೆ ಸರಬರಾಜಾಗಿದ್ದುವು. ಈಗ ನೌಕಾಪಡೆಗೂ ಇವುಗಳೇ ಪ್ರಬಲ ಶಸ್ತ್ರಗಳಾಗಲಿವೆ.

ನವದೆಹಲಿ, ಏಪ್ರಿಲ್ 28: ಫ್ರಾನ್ಸ್ ನಿರ್ಮಿತ ರಫೇಲ್ ಯುದ್ಧ ವಿಮಾನಗಳು ಮತ್ತಷ್ಟು ಸಂಖ್ಯೆಯಲ್ಲಿ ಭಾರತದ ಮಿಲಿಟರಿ (Indian Army) ಬತ್ತಳಿಕೆಗೆ ಸೇರಲಿವೆ. ಭಾರತೀಯ ನೌಕಾಪಡೆಗೆ 26 ರಫೇಲ್ ಜೆಟ್ಗಳನ್ನು (Rafale Fighter Jets) ಪಡೆಯಲು ಭಾರತ ಮತ್ತು ಫ್ರಾನ್ಸ್ ಸರ್ಕಾರಗಳ ಮಧ್ಯೆ ಒಪ್ಪಂದ ಆಗಿದೆ. ಆನ್ಲೈನ್ನಲ್ಲಿ ಈ 64,000 ಕೋಟಿ ರೂ ಮೌಲ್ಯದ ಒಪ್ಪಂದಕ್ಕೆ ಸರ್ಕಾರಗಳು ಅಂಕಿತ ಹಾಕಿದವು. ಭಾರತದ ವತಿಯಿಂದ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉಪಸ್ಥಿತರಿದ್ದರು. ಏಪ್ರಿಲ್ ಮೊದಲ ವಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸಂಪುಟ ಭದ್ರತಾ ಸಮಿತಿ (ಸಿಸಿಎಸ್) ಈ ಒಪ್ಪಂದಕ್ಕೆ ಹಸಿರು ನಿಶಾನೆ ಕೊಟ್ಟಿತ್ತು.
ಭಾರತದ ನೌಕಾಪಡೆಗೆ ಅಗತ್ಯ ಇರುವ ಫೈಟರ್ ಜೆಟ್ಗಳಿಗೆ ರಫೇಲ್ ಅಲ್ಲದೆ ಬೇರೆ ಬೇರೆ ಆಯ್ಕೆಗಳನ್ನು ಅವಲೋಕಿಸಲಾಗಿತ್ತು. ಅಮೆರಿಕದ ಬೋಯಿಂಗ್ ಸಂಸ್ಥೆಯ ಎಫ್/ಎ18 ಸೂಪರ್ ಹಾರ್ನೆಟ್ ಯುದ್ಧವಿಮಾನವೂ ಬಿಡ್ನಲ್ಲಿತ್ತು. ಆದರೆ, ಭಾರತದ ನೌಕಾಪಡೆಗೆ ರಫೇಲ್ ವಿಮಾನ ಹೆಚ್ಚು ಸೂಕ್ತವೆಂದು ಕಂಡು ಬಂದಿದ್ದರಿಂದ ಅಂತಿಮವಾಗಿ ಅದನ್ನು ಆಯ್ಕೆ ಮಾಡಲಾಗಿದೆ.
ಇದನ್ನೂ ಓದಿ: ಪಹಲ್ಗಾಮ್ ದಾಳಿ ಕುರಿತು ಅಪಹಾಸ್ಯ, ಭಾರತದಲ್ಲಿ ನೂರಾರು ಪಾಕಿಸ್ತಾನಿ ಯೂಟ್ಯೂಬ್ ಚಾನೆಲ್ಗಳಿಗೆ ನಿಷೇಧ
ಭಾರತದ ವಾಯುಪಡೆ ಈಗಾಗಲೇ 36 ರಫೇಲ್ ಫೈಟರ್ ಜೆಟ್ಗಳನ್ನು ಹೊಂದಿದೆ. ಈಗ ನೌಕಾಪಡೆಯೂ ಕೂಡ ಇದೇ ಜೆಟ್ಗಳನ್ನು ಪಡೆಯಲಿರುವುದರಿಂದ ಒಂದು ರೀತಿಯಲ್ಲಿ ಅನುಕೂಲಕ ಸ್ಥಿತಿ ಸಿಕ್ಕಂತಾಗುತ್ತದೆ.
ರಫೇಲ್ ಜೆಟ್ಗಳು ಸದ್ಯ ವಿಶ್ವದ ಅತ್ಯಂತ ಪ್ರಬಲ ಫೈಟರ್ ಜೆಟ್ಗಲ್ಲೊಂದೆಂದು ಪರಿಗಣಿಸಲಾಗಿದೆ. ದೂರ ಶ್ರೇಣಿಯ ಕ್ಷಿಪಣಿ, ಆ್ಯಂಟಿ ಶಿಪ್ ಅಸ್ತ್ರ, ಎಲೆಕ್ಟ್ರಾನಿಕ್ ಸಮರ ಇತ್ಯಾದಿ ಹೊಸ ಶಸ್ತ್ರಾಸ್ತ್ರಗಳು ಈ ಫೈಟರ್ ಜೆಟ್ನಲ್ಲಿ ಇರಲಿವೆ.
ಫ್ರಾನ್ಸ್ ದೇಶದ ಡಸ್ಸೋ, ಥೇಲ್ಸ್, ಎಂಬಿಡಿಎ ಸಂಸ್ಥೆಗಳು ರಫೇಲ್ ಯುದ್ಧ ವಿಮಾನಗಳ ತಯಾರಿಕೆಯಲ್ಲಿ ತೊಡಗಲಿವೆ. ಭಾರತದಲ್ಲಿ ಇವುಗಳ ತಯಾರಿಕೆ ಅಗುವುದಿಲ್ಲ. ಎಲ್ಲವೂ ಫ್ರಾನ್ಸ್ನಲ್ಲೇ ಅಸೆಂಬಲ್ ಆಗುತ್ತವೆ. ಆದರೆ, ಈ ವಿಮಾನ ತಯಾರಿಕೆಯಲ್ಲಿರುವ ಫ್ರಾನ್ಸ್ ಕಂಪನಿಗಳು ತಮಗೆ ಅಗತ್ಯವಿರುವ ವಿವಿಧ ಬಿಡಿಭಾಗಗಳಿಗೆ ಭಾರತೀಯ ಕಂಪನಿಗಳಿಗೆ ಆರ್ಡರ್ ಕೊಡಬಹುದು. ಇದರಿಂದ ರಫೇಲ್ ಜೆಟ್ ನಿರ್ಮಾಣದಲ್ಲಿ ಭಾರತದ ಪರೋಕ್ಷ ಪಾತ್ರ ಇರುತ್ತದೆ.
ಇದನ್ನೂ ಓದಿ: ವಾಯುಪ್ರದೇಶ ನಿರ್ಬಂಧ: ಪಾಕಿಸ್ತಾನಕ್ಕೆ ಆದಾಯ ನಷ್ಟ; ಭಾರತೀಯರಿಗೆ ವಿಮಾನ ಪ್ರಯಾಣ ದರ ಏರಿಕೆ
ಭಾರತಕ್ಕೆ ಈಗ ರಫೇಲ್ ಜೆಟ್ಗಳ ಅವಶ್ಯಕತೆ ಹೆಚ್ಚು
ಭಾರತದ ನೌಕಾಪಡೆಯಲ್ಲಿರುವ ಸಮರನೌಕೆಗಳಾದ ಐಎನ್ಎಸ್ ವಿಕ್ರಮಾದಿತ್ಯ ಮತ್ತು ಐಎನ್ಎಸ್ ವಿಕ್ರಾಂತ್ ಬಳಿ ಸದ್ಯ ಮಿಗ್ 29ಕೆ ಫೈಟರ್ ಜೆಟ್ಗಳಿವೆ. ಆದರೆ, ಇವುಗಳು ಮೊದಲಿನಂತೆ ಕ್ಷಮತೆ ಹೊಂದಿಲ್ಲ. ಮೈಂಟೆನೆನ್ಸ್ ಸಮಸ್ಯೆ ಈ ಮಿಗ್ ವಿಮಾನಗಳಲ್ಲಿವೆ. ಹೀಗಾಗಿ, ಹೊಸ ತಲೆಮಾರಿನ ಫೈಟರ್ ಜೆಟ್ ಅವಶ್ಯಕತೆ ಇತ್ತು. ಈಗ ರಫೇಲ್ ಎಂ ಏರ್ಕ್ರಾಫ್ಟ್ಗಳು ಮಿಗ್ 29ಕೆ ಸ್ಥಾನ ತುಂಬಲಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 3:58 pm, Mon, 28 April 25








