ಪಹಲ್ಗಾಮ್ ಭಯೋತ್ಪಾದನಾ ದಾಳಿಯಲ್ಲಿ ಪಾಕಿಸ್ತಾನದ ಜೊತೆ ಕೈ ಜೋಡಿಸಿತಾ ಚೀನಾ?
ಭಾರತ ಮತ್ತು ಪಾಕಿಸ್ತಾನ ಎರಡೂ ದೇಶಗಳಿಗೆ ನೆರೆಯ ದೇಶದವರಾಗಿ ಸಂಯಮವನ್ನು ತೋರಿಸಬೇಕು ಎಂದು ಚೀನಾ ಮನವಿ ಮಾಡಿದೆ. ಭಾರತದ ಕಾಶ್ಮೀರದ ಪಹಲ್ಗಾಮ್‌ನಲ್ಲಿ ಇತ್ತೀಚೆಗೆ 26 ಜನರನ್ನು ಬಲಿ ತೆಗೆದುಕೊಂಡ ಭಯೋತ್ಪಾದಕ ದಾಳಿಯ ಕುರಿತಾದ ಪ್ರಶ್ನೆಗೆ ಚೀನಾ ಈ ಪ್ರತಿಕ್ರಿಯೆ ನೀಡಿದೆ. ಪಹಲ್ಗಾಮ್ ದಾಳಿಯ ಬಗ್ಗೆ ಪಾಕಿಸ್ತಾನದ ನಿಲುವನ್ನು ಚೀನಾ ಅನುಮೋದಿಸಿದೆ. ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರ ಹೇಳಿಕೆಯ ನಂತರ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಗ್ಗೆ ತಟಸ್ಥ, ಪಾರದರ್ಶಕ ತನಿಖೆ ನಡೆಸುವ ಪಾಕಿಸ್ತಾನದ ಹೇಳಿಕೆಯನ್ನು ಚೀನಾ ಬೆಂಬಲಿಸಿದೆ.

ನವದೆಹಲಿ, ಏಪ್ರಿಲ್ 28: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ (Pahalgam Terror Attack) ಪ್ರವಾಸಿಗರ ಮೇಲೆ ನಡೆದ ಉಗ್ರರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಐಎ ತಂಡ ತನಿಖೆ ನಡೆಸುತ್ತಿದೆ. ಈ ತನಿಖೆಯಿಂದ ಪಾಕ್ ಉಗ್ರರ ಕುರಿತಾದ 4 ಪ್ರಮುಖ ಅಂಶಗಳು ಪತ್ತೆಯಾಗಿವೆ. ಭಯೋತ್ಪಾದನಾ ದಾಳಿಗೂ 5 ದಿನಗಳ ಮೊದಲು ಚೀನಾದ ಡ್ರೋನ್ಗಳ ಬಳಕೆಯಾಗಿತ್ತು ಎಂಬ ವಿಷಯ ಬೆಳಕಿಗೆ ಬಂದಿದೆ. ಬೈಸರನ್ ಕಣಿವೆಯಲ್ಲಿ ಚೀನಾ ನಿರ್ಮಿತ DJI ಡ್ರೋನ್ ಹಾರಾಟ ನಡೆಸಿತ್ತು. ಡ್ರೋನ್ ಮೂಲಕ ಜನಸಂದಣಿಯ ಮಾಹಿತಿ ಸಂಗ್ರಹಿಸಿರುವ ಶಂಕೆ ವ್ಯಕ್ತವಾಗಿದೆ. ಡ್ರೋನ್ ಮೂಲಕ ಶಸ್ತ್ರಾಸ್ತ್ರ, ಸರಕುಗಳನ್ನು ಕಾಶ್ಮೀರ ಕಣಿವೆಗೆ ರವಾನೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಡ್ರೋನ್ ಬಳಸಿರುವ ಕುರಿತು ರೆಡಿಯೋ ಸಿಗ್ನಲ್ಗಳು ಪತ್ತೆಯಾಗಿದೆ. ಪಹಲ್ಗಾಮ್‌ನಲ್ಲಿ ರೇಡಿಯೋ ಸಿಗ್ನಲ್ ಬಳಸಿರುವುದು ಪತ್ತೆಯಾಗಿದೆ. ರೇಡಿಯೋ ಸಿಗ್ನಲ್ ಸಂಚಾರ ಪತ್ತೆಗೆ ಇಸ್ರೋ ಮೂಲಕ ತನಿಖೆ ನಡೆಸಲಾಗುತ್ತಿದೆ. ಸ್ಥಳೀಯರನ್ನು ಬಳಸಿಕೊಂಡು ಉಗ್ರರು ದಾಳಿ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಉಗ್ರರ ದಾಳಿಗೂ ಮುನ್ನ ಬೈಸರನ್ ಪ್ರದೇಶ ಪರಿಶೀಲಿಸಿರುವ ಉಗ್ರರು ಪರಿಶೀಲನೆಗಾಗಿ ಕುದುರೆ ಸವಾರರಿಗೆ ಹಣ ಪಾವತಿಸಿರುವ ಶಂಕೆ ವ್ಯಕ್ತವಾಗಿದೆ. ಪ್ರವಾಸಿಗರೊಂದಿಗೆ ಬೆರೆಯಲು ಸ್ಥಳೀಯ ವೇಷಭೂಷಣ ಮತ್ತು ಗುರುತಿನ ಚೀಟಿಗಳನ್ನು ಉಗ್ರರು ಬಳಸಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.
ಇದನ್ನೂ ಓದಿ: ಪಾಕಿಸ್ತಾನಕ್ಕೆ ಕಳಿಸುವ ಬದಲು ಭಾರತದಲ್ಲೇ ಗುಂಡಿಕ್ಕಿ ಸಾಯಿಸಿಬಿಡಿ: ಭಾರತದಲ್ಲಿರುವ ಪಾಕಿಸ್ತಾನೀ ಹಿಂದೂಗಳು
ಪ್ರವಾಸಿಗರ ಮೇಲೆ ದಾಳಿ ನಡೆಸಿ ಬೈಸರನ್ನಿಂದ ನಾಗ್ಬಾಲ್ ಅರಣ್ಯ ಪ್ರದೇಶದ ಕಡೆ ಪರಾರಿಯಾಗಿರುವ ಉಗ್ರರು ದಾಳಿ ಬಳಿಕ ನಾಗ್ಬಾಲ್, ಖಿರಾಮ್, ಶ್ರೀಶೈಲಂ, ಪುಲ್ವಾಮಾ ಅಥವಾ ಅನಂತನಾಗ್ಗೆ ತೆರಳುವ ಚಾರಣ ಮಾರ್ಗದ ಮೂಲಕ ಪರಾರಿಯಾಗಿರುವ ಅನುಮಾನ ವ್ಯಕ್ತವಾಗಿದೆ.
ಈ ನಡುವೆ, ಬೇರೆ ದೇಶಗಳು ಪಹಲ್ಗಾಮ್ ದಾಳಿಯ ಬಗ್ಗೆ ಪ್ರತಿಕ್ರಿಯಿಸಿದ್ದರೂ ಚೀನಾ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನ ಸಂಯಮದಿಂದ ವರ್ತಿಸುವಂತೆ ಚೀನಾ ಮನವಿ ಮಾಡಿತ್ತು.
ಇದನ್ನೂ ಓದಿ: ಪಹಲ್ಗಾಮ್ ದಾಳಿ ಕುರಿತು ಅಪಹಾಸ್ಯ, ಭಾರತದಲ್ಲಿ ನೂರಾರು ಪಾಕಿಸ್ತಾನಿ ಯೂಟ್ಯೂಬ್ ಚಾನೆಲ್ಗಳಿಗೆ ನಿಷೇಧ
ಪಹಲ್ಗಾಮ್ ಭಯೋತ್ಪಾದಕ ದಾಳಿ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ವಹಿಸಿಕೊಂಡಿದ್ದು, ದಾಳಿ ನಡೆದ ದಿನ ಅದೇ ಪ್ರದೇಶದಲ್ಲಿ ಹುವಾವೇ ಉಪಗ್ರಹ ಫೋನ್‌ನ ಚಲನೆಯನ್ನು ತನಿಖೆ ಮಾಡುತ್ತಿದೆ. ಚೀನಾದ ಕಂಪನಿಯಾದ ಹುವಾವೇ ಭಾರತದಲ್ಲಿ ನಿಷೇಧಿಸಲ್ಪಟ್ಟಿದೆ ಮತ್ತು ಅಧಿಕಾರಿಗಳು ಉಪಗ್ರಹ ಫೋನ್‌ಗಳನ್ನು ಪಾಕಿಸ್ತಾನದಿಂದ ದೇಶಕ್ಕೆ ಕಳ್ಳಸಾಗಣೆ ಮಾಡಲಾಗಿದೆ ಎಂದು ಶಂಕಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:38 pm, Mon, 28 April 25