ಹುಬ್ಬಳ್ಳಿ ನೇಹಾ ಹಿರೇಮಠ ಹತ್ಯೆ ಪ್ರಕರಣ: ವಿಚಾರಣೆಗೆ ಕೊನೆಗೂ ಕೂಡಿ ಬಂತು ಕಾಲ!
ಕಾಲೇಜು ಕ್ಯಾಂಪಸ್ ನಲ್ಲಿ ನಡೆದಿದ್ದ ನೇಹಾ ಹಿರೇಮಠ ಹತ್ಯೆ ಪ್ರಕರಣ ಇಡೀ ದೇಶಾದ್ಯಂತ ದೊಡ್ಡ ಸುದ್ದಿಯಾಗಿತ್ತು. ಆದ್ರೆ ಘಟನೆ ನಡೆದು ಬರೋಬ್ಬರಿ ವರ್ಷದ ನಂತರ ನೇಹಾ ಹಿರೇಮಠ ಕೊಲೆ ಪ್ರಕರಣ ಟ್ರಯಲ್ ಗೆ ಕಾಲ ಕೂಡಿ ಬಂದಿದೆ. ನಾಳೆಯಿಂದ (ಏಪ್ರಿಲ್ 28) ಹುಬ್ಬಳ್ಳಿ ನ್ಯಾಯಾಲಯದಲ್ಲಿ ನೇಹಾ ಹಿರೇಮಠ ಹತ್ಯೆ ಟ್ರಯಲ್ ಆರಂಭವಾಗಲಿದೆ. ಬಹುದಿನದಿಂದ ನೆನೆಗುದಿಗೆ ಬಿದ್ದಿದ್ದ ಪ್ರಕರಣದ ವಿಚಾರಣೆ ಆರಂಭವಾಗಲಿದ್ದು ಆರೋಪಿ ಪರ ಯಾರು ವಕಾಲತ್ತು ವಹಿಸಲಿದ್ದಾರೆ ಎನ್ನುವುದು ಕಾದುನೋಡಬೇಕಿದೆ.

ಹುಬ್ಬಳ್ಳಿ, (ಏಪ್ರಿಲ್ 28): ಹುಬ್ಬಳ್ಳಿಯ (Hubballi) ಬಿವ್ಹಿಬಿ ಕಾಲೇಜಿನಲ್ಲಿ 2024 ಎಪ್ರಿಲ್ 18 ರಂದು ನಡೆದಿದ್ದ ನೇಹಾ ಹಿರೇಮಠ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ (Neha Hiremath murder case) ಟ್ರಯಲ್ ಗೆ ಈಗ ಕಾಲ ಕೂಡಿ ಬಂದಿದೆ. ಸಿಐಡಿಯಿಂದ (CID) ನೇಮಕವಾದ ವಕೀಲರಿಂದ ನೇಹಾ ಹಿರೇಮಠ ಪರವಾಗಿ ವಾದ ಮಂಡನೆ ಮಾಡಲಿದ್ದು, ಆರೋಪಿ ಫೈಯಾಜ್ ಪರವಾಗಿ ಹುಬ್ಬಳ್ಳಿಯ ಯಾವುದೇ ವಕೀಲರು ಕೇಸ್ ತೆಗೆದುಕೊಳ್ಳದ ಹಿನ್ನಲೆಯಲ್ಲಿ ಹುಬ್ಬಳ್ಳಿ ತಾಲ್ಲೂಕು ಕಾನೂನು ಸೇವಾ ಸಮಿತಿಯಿಂದ ವಕೀಲರ ನೇಮಕ ಮಾಡಲಾಗಿದೆ. ಆರೋಪಿ ಫೈಯಾಜ್ ಸೂಚಿಸುವ ವಕೀಲರನ್ನು ನೇಮಕ ಮಾಡಲಿದೆ. ಇನ್ನೊಂದಡೆ ಬೆಂಗಳೂರು ಮೂಲದ ವಕೀಲರೊಬ್ಬರು ವಕಾಲತ್ತು ವಹಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ನೇಹಾ ಹಿರೇಮಠ ಹತ್ಯೆ ಪ್ರಕರಣವನ್ನು ಬೆಳಗಾವಿ ಕೋರ್ಟ್ಗೆ ವರ್ಗಾವಣೆ ಮಾಡುವಂತೆ ಮನವಿ ಸಂಬಂಧ ಆರೋಪಿ ಫೈಯಾಜ್ ಗೆ ಆರಂಭಿಕ ಹಿನ್ನಡೆಯಾಗಿದೆ.
ಪ್ರಕರಣವನ್ನು ಬೆಳಗಾವಿ ಜಿಲ್ಲಾ ನ್ಯಾಯಾಲಯಕ್ಕೆ ವರ್ಗಾವಣೆ ಮಾಡುವಂತೆ ಆರೋಪಿ ಫಯಾಜ್ ಮನವಿ ಮಾಡಿದ್ದ. ಧಾರವಾಡ ಹೈಕೋರ್ಟ್ ನಲ್ಲಿ ಇಂದು ನಡೆದ ಪ್ರಕರಣ ವರ್ಗಾವಣೆ ವಿಚಾರಣೆಯಲ್ಲಿ ವಕೀಲರಾದ ಝೆಡ್.ಆರ್.ಮುಲ್ಲಾ, ಹತ್ಯೆಯ ಆರೋಪಿ ಪರವಾಗಿ ವಾದ ಮಂಡನೆ ಮಾಡಿದ್ದರು. ಎರಡು ಕಡೆ ವಾದ ಆಲಿಸಿ ಹುಬ್ಬಳ್ಳಿಯ ಒಂದನೇ ಅಧೀನ ಜಿಲ್ಲಾ ನ್ಯಾಯಾಲಯದಲ್ಲಿಯೇ ವಿಚಾರಣೆ ಆರಂಭಿಸುವಂತೆ ಹೈಕೋರ್ಟ್ ತೀರ್ಪು ನೀಡಿದೆ.
ಇದನ್ನೂ ಓದಿ: ನೇಹಾ ಕೊಲೆಯಾದ ದಿನದಿಂದ ಇವತ್ತಿನವರೆಗೆ ನನ್ನ ಹೇಳಿಕೆ ಮತ್ತು ನಿಲುವಿನಲ್ಲಿ ಬದಲಾವಣೆ ಇಲ್ಲ: ನಿರಂಜನ್ ಹಿರೇಮಠ
ಇನ್ನೂ ಬೆಳಗಾವಿ ಜಿಲ್ಲಾ ನ್ಯಾಯಾಲಯಕ್ಕೆ ಹತ್ಯೆ ಪ್ರಕರಣ ವಿಚಾರಣೆಯನ್ನು ವರ್ಗಾವಣೆ ಮಾಡಬೇಕೆಂದು ಆರೋಪಿ ಪರ ವಕೀಲರು ವಾದ ಮಂಡನೆ ಮಾಡಿದ್ದರು. ಆದ್ರೆ ಇದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು. ಹತ್ಯೆಯನ್ನು ನೋಡಿರುವ ಪ್ರಮುಖ 99 ಸಾಕ್ಷಿಗಳು ಹುಬ್ಬಳ್ಳಿಯಲ್ಲಿವೆ ಹೀಗಾಗಿ ಇಲ್ಲಿಯೇ ವಿಚಾರಣೆ ಆರಂಭ ಮಾಡಬೇಕೆಂದು ನೇಹಾ ಕುಟುಂಬಸ್ಥರ ಪರವಾಗಿ ರಾಘವೇಂದ್ರ ಎಸ್, ಎಂ.ಬಿ. ಹಿರೇಮಠ ,ಪ್ರಕಾಶ್ ಅಂದಾನಿಮಠ ವಕೀಲರ ತಂಡ ಪ್ರತಿವಾದ ಮಾಡಿದ್ದು, ವಾದ ಪ್ರತಿವಾದ ಆಲಿಸಿದ ಹೈಕೋರ್ಟ್ ನ್ಯಾಯಮೂರ್ತಿ ವೇದವ್ಯಾಸ ಅವರು ಆದೇಶ ನೀಡಿದ್ದಾರೆ. ಇನ್ನು ಕೆಲ ದಿನಗಳ ಹಿಂದಷ್ಟೇ ನೇಹಾ ಹಿರೇಮಠ ತಂದೆ, ವಿಚಾರಣೆ ಆರಂಭವಾಗದೇ ಇರೋದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದರು. ಸರ್ಕಾರ ಪಾಸ್ಟ್ ಟ್ರ್ಯಾಕ್ ಕೋರ್ಟ್ ಆರಂಭ ಮಾಡಿ ತ್ವರಿತಗತಿಯಲ್ಲಿ ಪ್ರಕರಣದ ವಿಚಾರಣೆ ನಡೆಸಬೇಕು ಅಂತ ಆಗ್ರಹಿಸಿದ್ದರು.
ಒಟ್ಟಿನಲ್ಲಿ ನೇಹಾ ಹಿರೇಮಠ ಕೊಲೆ ಪ್ರಕರಣದ ಟ್ರಯಲ್ ಆರಂಭಗೊಂಡಿದ್ದು, ಈಗ ಮುಂದಿನ ವಿಚಾರಣೆಯನ್ನು ಹುಬ್ಬಳ್ಳಿಯಲ್ಲಿ ನಡೆಸುವಂತೆ ಹೈ ಕೋರ್ಟ್ ಆದೇಶಿಸಿದೆ. ಕೂಡಲೇ ಪ್ರಕರಣ ಇತ್ಯರ್ಥಗೊಂಡು ಕೊಲೆಯ ಆರೋಪಿಗೆ ಶಿಕ್ಷೆಯಾಗಬೇಕು ಎಂಬುವುದು ನೇಹಾ ಕುಟುಂಬಸ್ಥರ ಆಗ್ರಹವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:57 pm, Mon, 28 April 25







