ನೇಹಾ, ಅಂಜಲಿ ಕೊಲೆ: ಹುಬ್ಬಳ್ಳಿಯ ಕಾಲೇಜು, ಮನೆಗಳಲ್ಲಾದ ಬದಲಾವಣೆ ಕುರಿತು ಪ್ರಾಂಶುಪಾಲರ, ಪೋಷಕರ ಮಾತು ಟಿವಿ9 ಸಂದರ್ಶನದಲ್ಲಿ

ನೇಹಾ ಹಿರೇಮಠ ಮತ್ತು ಅಂಜಲಿ ಅಂಬಿಗೇರ್​ ಕೊಲೆ ನಂತರ ಮನೆಯಲ್ಲಿ ಹಾಗೂ ಕಾಲೇಜಿನಲ್ಲಿ ಆದ ಬದಲಾವಣೆಗಳೇನು? ಈ ಕುರಿತು ಹುಬ್ಬಳ್ಳಿಯ ಪ್ರತಿಷ್ಠಿತ ಕಾಲೇಜಿನ ಪ್ರಾಂಶುಪಾಲರ ಜೊತೆ ಮತ್ತು ಓರ್ವ ವಿದ್ಯಾರ್ಥಿನಿಯ ತಾಯಿಯ ಜೊತೆ ಟಿವಿ9 ನಡೆಸಿದ ವಿಶೇಷ ಸಂದರ್ಶನ ಇಲ್ಲಿದೆ.

ನೇಹಾ, ಅಂಜಲಿ ಕೊಲೆ: ಹುಬ್ಬಳ್ಳಿಯ ಕಾಲೇಜು, ಮನೆಗಳಲ್ಲಾದ ಬದಲಾವಣೆ ಕುರಿತು ಪ್ರಾಂಶುಪಾಲರ, ಪೋಷಕರ ಮಾತು ಟಿವಿ9 ಸಂದರ್ಶನದಲ್ಲಿ
ನೇಹಾ ಹಿರೇಮಠ, ಅಂಜಲಿ ಅಂಬಿಗೇರ
Follow us
ವಿವೇಕ ಬಿರಾದಾರ
|

Updated on:Jun 16, 2024 | 2:31 PM

ನೇಹಾ ಹಿರೇಮಠ ಮತ್ತು ಅಂಜಲಿ ಅಂಬಿಗೇರ ಕೊಲೆಯಿಂದ ವಿದ್ಯಾರ್ಥಿನಿ ಪೂಜಾ ಹಾಗೆ ಅನೇಕ ಯುವತಿಯರು ವಿಚಲಿತರಾಗಿದ್ದಾರೆ. ಈ ಎರಡೂ ಕೊಲೆಗಳು ಅವರೆಂದೂ ಮರೆಯದಂತಾಗಿದೆ. ನೇಹಾ ಮತ್ತು ಅಂಜಲಿ ಕೊಲೆ ಬರೀ ಯುವತಿರ ಮೇಲೆ ಮಾತ್ರ ಪರಿಣಾಮ ಬೀರಿಲ್ಲ, ಅವರ ಪೋಷಕರ ಮೇಲೂ ಪ್ರಭಾವ ಬೀರಿದೆ. ಮನೆಯಲ್ಲಿನ ವಾತಾವರಣ ಕುಟುಂಬದ ಸದಸ್ಯರಿಗೆ ಅರಿಯದಂತೆ ಬದಲಾಗಿದೆ. ಮನೆಯ ಹೆಣ್ಣುಮಕ್ಕಳ ಮೇಲಿನ ಕಾಳಜಿ ಹೆಚ್ಚಿದೆ. ಬೆಳಗ್ಗೆ ಕಾಲೇಜಿಗೆ ಹೋದ ಮಗಳು ಸಾಯಂಕಾಲ 6 ಗಂಟೆಯಾದರೂ ಮನೆಗೆ ಬಾರದಿದ್ದರೆ ಪೋಷಕರು ತಡಬಡಾಯಿಸುತ್ತಿದ್ದಾರೆ. ಪದೇ ಪದೇ ಗೇಟ್​​ ಬಳಿ ಹೋಗಿ ನೋಡುವ ಅಮ್ಮ, ಮೇಲಿಂದ ಮೇಲೆ ಕರೆ ಮಾಡುವ ಅಪ್ಪ, ಕಾಡಿತೊಗೊಂಡು ಕಾಲೇಜು ಬಳಿ ಒಂದು ರೌಡು ಹಾಕಿ ಬರುವ ಅಣ್ಣ ಹೀಗೆ ಅನೇಕ ಬದಲಾವಣೆಗಳು ಹುಬ್ಬಳ್ಳಿಯ ಅನೇಕ ಹೆಣ್ಣುಮಕ್ಕಳ ಮನೆಯಲ್ಲಿ ಆಗಿವೆ.

ಹಾಗೆ, ನೇಹಾ ಕೊಲೆಯಾದ ಬಳಿಕ ಹುಬ್ಬಳ್ಳಿಯ ಕಾಲೇಜುಗಳಲ್ಲೂ ವಾತಾವರಣ ಬದಲಾಗಿದೆ. ಕಾಲೇಜಿನ ಆಡಳಿತ ಮಂಡಳಿ ಅನೇಕ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ. ಪ್ರಾಂಶುಪಾಲು ಮತ್ತು ಉಪನ್ಯಾಸಕರು ವಿದ್ಯಾರ್ಥಿಗಳ ಮೇಲೆ, ವಿಶೇಷವಾಗಿ ವಿದ್ಯಾರ್ಥಿನಿಯರ ಮೇಲೆ ಹೆಚ್ಚು ಗಮನವಿಡುತ್ತಿದ್ದಾರೆ.

ಹಾಗಿದ್ದರೆ ಮನೆಯಲ್ಲಿ ಹಾಗೂ ಕಾಲೇಜಿನಲ್ಲಿ ಆದ ಬದಲಾವಣೆಗಳೇನು? ಈ ಕುರಿತು ಹುಬ್ಬಳ್ಳಿಯ ಪ್ರತಿಷ್ಠಿತ ಕಾಲೇಜಿನ ಪ್ರಾಂಶುಪಾಲರ ಜೊತೆ ಮತ್ತು ಓರ್ವ ವಿದ್ಯಾರ್ಥಿನಿಯ ತಾಯಿಯ ಜೊತೆ ಟಿವಿ9 ನಡೆಸಿದ ವಿಶೇಷ ಸಂದರ್ಶನ ಇಲ್ಲಿದೆ.

ಪ್ರಾಂಶುಪಾಲರ ಜೊತೆ ಸಂದರ್ಶನ

 ಟಿವಿ9: ನೇರವಾಗಿ ವಿಷಯಕ್ಕೆ ಬರುತ್ತೇನೆ, ನೇಹಾ ಮತ್ತು ಅಂಜಲಿ ಕೊಲೆಗಳ ಬಗ್ಗೆ ಏನು ಅನ್ನಿಸುತ್ತೆ ನಿಮಗೆ?

ಪ್ರಾಂಶುಪಾಲರು: ಇಂತಹ ಘಟನೆ ನಡೆಯಬಾರದಿತ್ತು ಸರ್. ಅವರಿಬ್ಬರೂ ಹೆಚ್ಚು-ಕಡಿಮೆ ನನ್ನ ಮಗಳ ವಯಸ್ಸಿನವರು, ನೋವಾಗುತ್ತೆ ಸರ್​.

ಟಿವಿ9: ನೇಹಾ ಮತ್ತು ಅಂಜಲಿ ಕೊಲೆ ಬಳಿಕ ನಿಮ್ಮ ಕಾಲೇಜಿನ ಏನಾದರು ಬದಲಾವಣೆ ಮಾಡಿದ್ದೀರಾ ಮೇಡಂ? ಪ್ರಾಂಶುಪಾಲರು: ಹಾ, ಸರ್​ ಮಾಡಿದ್ದೇವೆ. ನೇಹಾ ಕೊಲೆ ಬಳಿಕ ಬರೀ ನಮ್ಮ ಕಾಲೇಜಿ ಅಂತಲ್ಲ ಸರ್​, ಹುಬ್ಬಳ್ಳಿಯ ಬಹತೇಕ ಕಾಲೇಜು ಕ್ಯಾಂಪಸ್​ನ ವಾತಾವರಣ ಬದಲಾವಣೆಯಾಗಿದೆ. ನಮ್ಮ ಕಾಲೇಜಿನಲ್ಲೂ ಅನೇಕ ಬದಲಾವಣೆಗಳು ಆಗಿವೆ.

ಟಿವಿ9: ಏನೆಲ್ಲ ಬದಲಾವಣೆಗಳು ಆಗಿವೆ?

ಪ್ರಾಂಶುಪಾಲರು: ಕಾಲೇಜು ಸಿಬ್ಬಂದಿ ವರ್ಗದವರ ಜೊತೆ 3-4 ಮೀಟಿಂಗ್​ ಮಾಡಿದ್ವಿ. ಯಾವುದೇ ತಪ್ಪು ನಡೆಯದಂತೆ ಎಚ್ಚರ ವಹಿಸಿ ಅಂತ ಸೂಚನೆ ನೀಡಿದ್ದೇವೆ. ಅಲ್ಲದೆ, ನಮ್ಮ ಕಾಲೇಜು ಆಡಳಿತ ಮಂಡಳಿ ಕೂಡ ಕೆಲವೊಂದು ಸೂಚನೆಗಳನ್ನು ನೀಡಿದೆ. ಸಿಸಿ ಕ್ಯಾಮರಾಗಳನ್ನು ಮರು ಪರಿಶೀಲಿಸಿ 24 ಗಂಟೆಯೂ ಚಾಲು ಇರುವಂತೆ ನೋಡಿಕೊಂಡಿದ್ದೇವೆ. ಡ್ರೆಸ್​​, ಐಡಿ ಕಾರ್ಡ್​ ಇಲ್ಲದೆ ಕ್ಯಾಂಪಸ್​ ಒಳಗಡೆ ಬರುವ ಹಾಗಿಲ್ಲ. ಯಾರೇ ಹೊರಗಿನವರು ಬಂದರೂ ಅವರ ಪೂರ್ವಾಪರ ವಿಚಾರಿಸಿ, ಅವರು ಭೇಟಿಯಾಗಲು ಬಂದವರ ಅವರ ಬಗ್ಗೆ ವಿಚಾರಿಸಿ, ಅವರನ್ನು ಕ್ಯಾಪಂಸ್​ ಒಳಗಡೆ ಬಿಟ್ಟುಕೊಳ್ಳುತ್ತೇವೆ ಸರ್​. ಅವರು ಹೊರಗೆ ಹೋಗುವವರೆಗೂ ನಮ್ಮ ಕಾವಲು ಸಿಬ್ಬಂದಿ​ ಅವರನ್ನು ಗಮನಿಸುತ್ತಿರುತ್ತಾರೆ​​.

ಟಿವಿ9: ವಿದ್ಯಾರ್ಥಿನಿಯರ ಸುರಕ್ಷತೆ ಬಗ್ಗೆ ಏನಾದರೂ ಕ್ರಮ ಕೈಗೊಂಡಿದ್ದೀರಾ?

ಪ್ರಾಂಶುಪಾಲರು: ಹಾ, ​ಕ್ರಮ ಕೈಗೊಂಡಿದ್ದೇವೆ. ಪ್ರತಿಯೊಬ್ಬ ವಿದ್ಯಾರ್ಥಿನಿಯಿಂದ ಅವರ ಪೋಷಕರ ಮೊಬೈಲ್​ ನಂಬರ್​ ತೆಗೆದುಕೊಂಡಿದ್ದೇವೆ. ಕಾಲೇಜಿಗೆ ಬರುವುದು ತಡವಾದರೆ ಅಥವಾ ಒಂದು ದಿನ ಕಾಲೇಜಿಗೆ ಬರದಿದ್ದರೇ ನೇರವಾಗಿ ಪೋಷಕರಿಗೆ ಕರೆ ಮಾಡುತ್ತೇವೆ. ಆಗ ಪೋಷಕರು ಮತ್ತು ವಿದ್ಯಾರ್ಥಿನಿಯರು ಹೇಳುವ ಕಾರಣ ಒಂದೇ ಆಗಿರಬೇಕು. ಇಲ್ಲವಾದರೆ ಪೋಷಕರನ್ನು ಕಾಲೇಜಿಗೆ ಕರೆಸಿ ಸೂಕ್ತ ಕಾರಣ ನೀಡುವವರೆಗೂ ಬಿಡುವುದಿಲ್ಲ.

ಮತ್ತೆ, ವಿದ್ಯಾರ್ಥನಿಯರ ಹಾವ-ಭಾವದಲ್ಲಿ ಸ್ವಲ್ಪ ಬದಲಾವಣೆಯಾದರೂ ಅವರನ್ನು ಪ್ರತ್ಯೇಕವಾಗಿ ಕರೆದು ಮಾತನಾಡಿಸುತ್ತೇವೆ. ಅಲ್ಲದೆ, ಪ್ರತಿಯೊಂದು ಕ್ಲಾಸ್​​ನಲ್ಲೂ 2-3 ವಿದ್ಯಾರ್ಥಿಗಳ ಗುಂಪು ಮಾಡಿದ್ದೇವೆ. ಆ ಗುಂಪಿಗೆ ಓರ್ವ ಉಪನ್ಯಾಸಕರು ಲೀಡರ್​ ಆಗಿರುತ್ತಾರೆ. ಆ ಗುಂಪಿನ ವಿದ್ಯಾರ್ಥಿಗಳ ಸಂಪೂರ್ಣ ಜವಾಬ್ದಾರಿ ಆ ಲೀಡಿರ್​ ಮೇಲಿರುತ್ತದೆ. ಹೀಗೆ ಇನ್ನೂ ಅನೇಕ ಕ್ರಮಗಳನ್ನು ಕೈಗೊಂಡಿದ್ದೇವೆ. ವಿದ್ಯಾರ್ಥಿನಿಯರು ಮಾತ್ರವಲ್ಲದೆ ವಿದ್ಯಾರ್ಥಿಗಳನ್ನೂ ಹದ್ದುಬದ್ದಸ್ತಿನಲ್ಲಿ ಇಡುತ್ತಿದ್ದೇವೆ. ಅವರ ಮೇಲೂ ಕಠೀಣ ಕ್ರಮಗಳು ತೆಗೆದುಕೊಳ್ಳುತ್ತಿದ್ದೇವೆ.

ಟಿವಿ9: ಪೊಲೀಸ್​ ಇಲಾಖೆ ಏನಾದರೂ ಸಲಹೆ-ಸೂಚನೆಗಳನ್ನು ನೀಡಿದೆಯೇ?

ಪ್ರಾಂಶುಪಾಲರು: ಹಾ​, ನೇಹಾ ಕೊಲೆಯಾದ ಬಳಿಕ ಕಮಿಷನರ್​​ ಅವರು ಎಲ್ಲ ಕಾಲೇಜುಗಳ ಪ್ರಾಂಶುಪಾಲರನ್ನು ಕರೆದು ಸಭೆ ಮಾಡಿ ಅನೇಕ ಸೂಚನೆ ನೀಡಿದ್ದಾರೆ. ಅವುಗಳನ್ನೂ ಪಾಲಿಸುತ್ತಿದ್ದೇವೆ. ಅಲ್ಲದೆ, ಮಹಿಳಾ ಸಿಬ್ಬಂದಿ ಚೆನ್ನಮ್ಮ ಪಡೆ ಅಂತ ತಂಡ ಮಾಡಿಕೊಂಡು ಕಾಲೇಜು ಕಾಲೇಜುಗಳಿಗೆ ತೆರಳಿ ಸುರಕ್ಷತೆ ಬಗ್ಗೆ, ಆತ್ಮ ರಕ್ಷಣೆ ಬಗ್ಗೆ ಪಾಠ ಮಾಡುತ್ತಿದ್ದಾರೆ. 112 ಬಗ್ಗೆ ಹೇಳುತ್ತಿದ್ದಾರೆ.

ಟಿವಿ9: ಕಾಲೇಜು ದಾಖಲಾತಿ ಮೇಲೆ ಪರಿಣಾಮ ಬೀರಿದೆಯೇ?

ಪ್ರಾಂಶುಪಾಲರು: ಹೌದು ಸರ್​, ಕಳೆದ ಬಾರಿಗಿಂತ ಈ ಸಲ ಶಾಲಾ ದಾಖಲಾತಿ ಕಡಿಮೆಯಾಗಿದೆ. ವಿಶೇಷವಾಗಿ ಹಳ್ಳಿಯಿಂದ ಬರುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿದೆ. ಹಳ್ಳಿ ಮಕ್ಕಳು ತಮ್ಮ ಊರ ಅಕ್ಕಪಕ್ಕದ ಕಾಲೇಜುಗಳಿಗೆ ಹೆಚ್ಚಾಗಿ ದಾಖಲಾಗುತ್ತಿದ್ದಾರೆ.

ಟಿವಿ9: ಕೊನೆಯದಾಗಿ ಏನು ಹೇಳುತ್ತೀರಾ?

ಪ್ರಾಂಶುಪಾಲರು: ಇಂತಹ ಘಟನೆ ಮತ್ತೆ ನಡೆಯದಿರಲಿ. ನಮಗಿಂತ ಹೆಚ್ಚಾಗಿ ಪೋಷಕರು ತಮ್ಮ ಮಕ್ಕಳ ಬಗ್ಗೆ ಕಾಳಜಿ ವಹಿಸಲಿ. ಎಷ್ಟೋ ತಂದೆ-ತಾಯಿ ನಮ್ಮ ಮಕ್ಕಳನ್ನು ನಮ್ಮಿಂದ ತಿದ್ದೋಕೆ ಆಗುತ್ತಿಲ್ಲ, ನೀವೇ ತಿದ್ದಿ ಅಂತ ನಮಗೆ ಹೇಳುತ್ತಾರೆ. ಆದ್ರೆ, ನಮ್ಮ ಕೈಲಾದಷ್ಟು ತಿದ್ದುತ್ತೇವೆ. ಆದ್ರೆ, ಮನೆಯೆ ಮೊದಲ ಪಾಠ ಶಾಲೆ ತಾಯಿ ಮೊದಲ ಗುರುವಾದಾಗ ಇಂತಹ ಘಟನೆಗಳು ನಡೆಯಲ್ಲ ಸರ್​.

ಓರ್ವ ವಿದ್ಯಾರ್ಥಿನಿಯ ತಾಯಿ ಮಾತು

 ಟಿವಿ9: ಮನೆಯಲ್ಲಿ ಎಷ್ಟು ಜನರು ಇರುತ್ತೀರಾ?

ವಿದ್ಯಾರ್ಥಿನಿ ತಾಯಿ: ನಾನು, ನನ್ನ ಮಗ, ಮಗಳು ಮತ್ತು ನನ್ನ ಪತಿ ಗೋಕಾಕ್​​ನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಾರೆ

ಟಿವಿ9: ಸಂತೋಷ, ಮಕ್ಕಳು ಯಾವ ತರಗತಿಯಲ್ಲಿ ಓದುತ್ತಿದ್ದಾರೆ? ವಿದ್ಯಾಭ್ಯಾಸ ಹೇಗೆ ನಡೆಯುತ್ತಿದೆ

ವಿದ್ಯಾರ್ಥಿನಿ ತಾಯಿ: ಮಗ 10ನೇ ತರಗಿತಿ ಓದುತ್ತಿದ್ದಾನೆ, ಮಗಳು ಈ ಬಾರಿ ದ್ವೀತಿಯ ಪಿಯುಸಿ. ಇಬ್ಬರೂ ಚೆನ್ನಾಗಿ ಓದುತ್ತಿದ್ದಾರೆ.

ಟಿವಿ9: ಮಕ್ಕಳ ಮುಂದಿನ ಗುರಿ ಏನು?

ವಿದ್ಯಾರ್ಥಿನಿ ತಾಯಿ: ಮಗ ಭಾರತೀಯ ನೌಕಾ ಸೇನೆಗೆ ಸೇರಬೇಕೆಂದಿದ್ದಾನೆ. ಮಗಳಿಗೆ ವೈದ್ಯ ಆಗಬೇಕೆಂಬ ಆಸೆ ಇದೆ. ನೋಡಬೇಕು ಸರ್​ ಏನಾಗತ್ತೆ.

ಟಿವಿ9: ನೇಹಾ ಮತ್ತು ಅಂಜಲಿ ಕೊಲೆ ಬಗ್ಗೆ ಏನಂತಿರಿ?

ವಿದ್ಯಾರ್ಥಿನಿ ತಾಯಿ: ಬಹಳ ದುಃಖ ಆಗುತ್ತದೆ ಸರ್​. ಮಕ್ಕಳು ಪಾಪ. ಈ ರೀತಿ ಆಗಬಾರದಿತ್ತು ಸರ್​.

ಟಿವಿ9: ಈ ಎರಡು ಘಟನೆಯಾದ ಮೇಲೆ ನಿಮ್ಮ ಮಕ್ಕಳಲ್ಲಿ ಏನಾದರೂ ಬದಲಾವಣೆ ಆಗಿದೆಯಾ

ವಿದ್ಯಾರ್ಥಿನಿ ತಾಯಿ: ಬದಲಾವಣೆ ಆಗಿದೆ ಸರ್​. ಸಾಕಷ್ಟು ಭಯಪಟ್ಟಿದ್ದಳು. ಇನ್ನೂವರೆಗೂ ಅವಳಲ್ಲಿ ಸ್ವಲ್ಪ ಭಯ ಇದೆ. ನಾವೇ ಧೈರ್ಯ ತುಂಬುತಿದ್ದೇವೆ ಸರ್​.

ಟಿವಿ9: ಭಯ ಅಂದರೆ ಯಾವ ರೀತಿ?

ವಿದ್ಯಾರ್ಥಿನಿ ತಾಯಿ: ಒಬ್ಬಳೆ ಹೊರಗಡೆ ತಿರುಗಾಡಲು ಹಿಂದೇಟು ಹಾಕುತ್ತಿದ್ದಾಳೆ. ಮೊದಲು ಸರ್ಕಾರಿ ಬಸ್​ನಲ್ಲಿ ಕಾಲೇಜಿಗೆ ಹೋಗುತ್ತಿದ್ದಳು. ಆದ್ರೆ ಘಟನೆ ನಡೆದ ಮೇಲೆ ಸರ್ಕಾರಿ ಬಸ್​ನಲ್ಲಿ ಹೋಗಲು ಒಲ್ಲೆ ಅಂದಳು. ಆಗ ನಾನೇ ಕಾಲೇಜಿಗೆ ಬಿಟ್ಟು ಬರುವುದು ಮತ್ತು ಕರೆದುಕೊಂಡು ಬರುತ್ತಿದೆ. ಮತ್ತು ಆಕೆಯ ಸುರಕ್ಷತೆ ದೃಷ್ಟಿಯಿಂದ ನನಗೂ ಕೂಡ ಇದೇ ಒಳ್ಳೆಯದು ಅನ್ನಿಸಿತು. ಮೊದಲು ಬಾಯ್ಸ್​ ಫ್ರೆಂಡ್ಸ್​ ಇದ್ದರು. ಈಗ ಅವರ ಸಂಪರ್ಕ ಬಿಟ್ಟಿದ್ದಾಳೆ. ಈಗ ಮತ್ತೆ ಸರ್ಕಾರಿ ಬಸ್​ನಲ್ಲಿ ಹೋಗಿ, ಬಂದು ಮಾಡುತ್ತಿದ್ದಾಳೆ.

ಟಿವಿ9: ಆಕೆಯ ಸುರಕ್ಷತೆ ದೃಷ್ಟಿಯಿಂದ ನೀವು ಯಾವ ರೀತಿ ಕ್ರಮ ಕೈಗೊಂಡಿದ್ದೀರಿ?

ವಿದ್ಯಾರ್ಥಿನಿ ತಾಯಿ: ಹೊರಗಡೆ ಹೋಗುವಾಗ ಆಕೆಯ ಜೊತೆಗೆ ಹೋಗುತ್ತೇನೆ. ಅವಳು ನನ್ನೊಂದಿಗೆ ಮುಕ್ತವಾಗಿ ಎಲ್ಲ ವಿಚಾರವನ್ನು ನನ್ನೊಂದಿಗೆ ಚರ್ಚಿಸಲೆಂದು ಆಕೆಯೊಂದುಗೆ ಗೆಳತಿಯಾಗೆ ಇದ್ದೇನೆ. ಅವಳು ಕೂಡ ನನ್ನ ಮುಂದೆ ಎಲ್ಲ ವಿಚಾರಗಳನ್ನು ಹಂಚಿಕೊಳ್ಳುತ್ತಾಳೆ. ಹೀಗಾಗಿ ಆಕೆಯ ಮೇಲೆ ನನಗೆ ಯಾವುದೇ ಅನುಮಾನ ಇಲ್ಲ.

ಟಿವಿ9: ಆಕೆಯ ಕಾಲೇಜಿನಲ್ಲಿ ಏನದಾರು ಕಟ್ಟು ನಿಟ್ಟಿನ ಕ್ರಮ ಜಾರಿಗೆ ತಂದಿದ್ದಾರಾ?

ವಿದ್ಯಾರ್ಥಿನಿ ತಾಯಿ: ತಂದಿದ್ದಾರೆ ಸರ್​, ಅವಳ ಕಾಲೇಜಿಗೆ ಹೋಗದಿದ್ದರೆ ನಮಗೆ ಕರೆ ಮಾಡುತ್ತಾರೆ. ತಿಂಗಳಿಗೊಮ್ಮೆ ಪಾಲಕರ ಸಭೆ ಕರೆಯುತ್ತಾರೆ. ಸಭೆಯಲ್ಲಿ ಆಕೆಯ ವಿದ್ಯಾಭ್ಯಾಸ ಸೇರಿದಂತೆ ಆಕೆಯ ಎಲ್ಲ ಚಟುವಟಿಕೆಗಳ ಬಗ್ಗೆ ಹೇಳುತ್ತಾರೆ.

ಟಿವಿ9: ನಿಮ್ಮ ಪತಿ ಏನಂತಾರೆ?

ವಿದ್ಯಾರ್ಥಿನಿ ತಾಯಿ: ಅವರು ಗೋಕಾಕ್​ಗೆ ಬಂದು ಬಿಡಿ. ಇಲ್ಲೇ ಆಕೆಯ ಕಾಲೇಜು ದಾಖಲಾತಿ ಮಾಡಿಸೋಣ ಅಂತಾರೆ. ಇಲ್ಲ ಅವರೇ ಟ್ರಾನ್ಸಫರ್​​ ತೆಗೆದುಕೊಂಡು ಬರುತ್ತೇನೆ ಅಂತಾರೆ. ನಾನೆ ದ್ವೀತಿಯ ಪಿಯುಸಿ ಒಂದು ಇಲ್ಲೇ ಮುಗಿದು ಬಿಡಲಿ ಮುಂದಿನ ವರ್ಷ ನೋಡೋಣ ಅಂದಿದ್ದೇನೆ ಸರ್​.

ಟಿವಿ9: ಒಬ್ಬ ತಾಯಿಯಾಗಿ ಈ ಘಟನೆಗಳ ಬಗ್ಗೆ ನಿಮ್ಮ ಅಭಿಪ್ರಾಯ?

ವಿದ್ಯಾರ್ಥಿನಿ ತಾಯಿ: ಸರ್​, ಮಗ ಆಗಿರಲಿ ಅಥವಾ ಮಗಳಾಗಿರಲಿ ಮನೆಯಲ್ಲಿ ಒಳ್ಳೆ ಸಂಸ್ಕಾರ ಕೊಡಬೇಕು. ನಾವು ಮಗಳ ಸುರಕ್ಷತೆ ಬಗ್ಗೆ ಮತ್ತು ಮಗಳ ಕುರಿತಾಗಿ ಹಲವಾರು ಮುಂಜಾಗೃತೆ ಕ್ರಮಗಳನ್ನು ಕೈಗೊಳ್ಳುತ್ತೇವೆ. ಆದರೆ, ಮಗನಿಗೆ ಯಾಕೆ ನಾವು ತಪ್ಪು-ಸರಿ ಬಗ್ಗೆ ಹೇಳುವುದಿಲ್ಲ. ಅವನನ್ನೂ ಕೂಡ ಹದ್ದು ಬಸ್ತಿನಲ್ಲಿ ಇಡಬೇಕಲ್ವಾ. ಪ್ರತಿ ಬಾರಿ ಹೆಣ್ಣುಮಕ್ಕಳ್ಳನೇ ಕಟ್ಟಿಹಾಕಲು ನೋಡುತ್ತೇವೆ. ಯಾಕೆ ಗಂಡು ಮಕ್ಕಳನ್ನು ಕಟ್ಟಿ ಹಾಕಲ್ಲ. ಗಂಡು ಮಕ್ಕಳಿಗೂ ಒಳ್ಳೆ ಸಂಸ್ಕಾರ ಕೊಟ್ಟು, ಪರ ಸ್ತ್ರೀಯರನ್ನ ಗೌರವದಿಂದ ಕಾಣು ಎಂದು ಹೇಳಬೇಕು. ಪ್ರೀತಿ ಮಾಡಲಿ ಬೇಡ ಅನ್ನಲ್ಲ, ಪ್ರೀತಿಗಾಗಿ ಇಂಹದೆಲ್ಲ ಮಾಡಬಾರದು ಎನ್ನುವುದು ನನ್ನ ಅಭಿಪ್ರಾಯ.

ಒಟ್ಟಿನಲ್ಲಿ ನೇಹಾ ಹಿರೇಮಠ ಮತ್ತು ಅಂಜಲಿ ಅಂಬಿಗೇರ ಕೊಲೆ ಬಳಿಕ ಹುಬ್ಬಳ್ಳಿಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಆದಂತ ಬದಲಾವಣೆಗಳ ಕುರಿತು ಹುಬ್ಬಳ್ಳಿಯ ಪ್ರತಿಷ್ಠಿತ ಕಾಲೇಜುಗಳ ಪ್ರಾಂಶುಪಾಲರೊಂದಿಗೆ ಟಿವಿ9 ಸಂದರ್ಶಿಸಿದ್ದು, ಅದರಲ್ಲಿ ಕೆಲವು ಪ್ರಾಂಶುಪಾಲರ ಮಾತುಗಳು ಈ ಮೇಲಿದೆ. ಇದೇ ರೀತಿ ಅನೇಕ ಪೋಷಕರನ್ನು ಮಾತನಾಡಿಸಿದ್ದು, ಕೆಲವು ಪೋಷಕರ ಮಾತುಗಳು ಇಲ್ಲಿ ಬರೆಯಲಾಗಿದೆ.

Published On - 8:00 am, Tue, 11 June 24

ಗೆಳೆಯನನ್ನು ಕಚ್ಚಿ ಹಿಡಿದ ಸಿಂಹಕ್ಕೆ ಮನಬಂದಂತೆ ಥಳಿಸಿದ ವ್ಯಕ್ತಿ
ಗೆಳೆಯನನ್ನು ಕಚ್ಚಿ ಹಿಡಿದ ಸಿಂಹಕ್ಕೆ ಮನಬಂದಂತೆ ಥಳಿಸಿದ ವ್ಯಕ್ತಿ
ಮಹಾರಾಷ್ಟ್ರದಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ
ಮಹಾರಾಷ್ಟ್ರದಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ
ಸೋಮನಹಳ್ಳಿಯ ಚಿತಾಗಾರದಿಂದ ಭಾರವಾದ ಹೆಜ್ಜೆಹಾಕುತ್ತ ವಾಪಸ್ಸಾದರು ಪ್ರೇಮ
ಸೋಮನಹಳ್ಳಿಯ ಚಿತಾಗಾರದಿಂದ ಭಾರವಾದ ಹೆಜ್ಜೆಹಾಕುತ್ತ ವಾಪಸ್ಸಾದರು ಪ್ರೇಮ
ಒಕ್ಕಲಿಗ ಸಂಪ್ರದಾಯದಂತೆ ನಡೆದ ಅಂತಿಮ ಸಂಸ್ಕಾರದಲ್ಲಿ ಅನೇಕ ಗಣ್ಯರು ಭಾಗಿ
ಒಕ್ಕಲಿಗ ಸಂಪ್ರದಾಯದಂತೆ ನಡೆದ ಅಂತಿಮ ಸಂಸ್ಕಾರದಲ್ಲಿ ಅನೇಕ ಗಣ್ಯರು ಭಾಗಿ
ಉಗ್ರಂ ಮಂಜು ನಿಜವಾದ ಮುಖ ಬಯಲು ಮಾಡಿದ ಗೌತಮಿ; ಬದಲಾಯ್ತು ಆಟ
ಉಗ್ರಂ ಮಂಜು ನಿಜವಾದ ಮುಖ ಬಯಲು ಮಾಡಿದ ಗೌತಮಿ; ಬದಲಾಯ್ತು ಆಟ
ಮಗಳು ಮತ್ತು ಮೊಮ್ಮಗನೊಂದಿಗೆ ಆಗಮಿಸಿ ತಿರಂಗ ಸ್ವೀಕರಿಸಿದ ಪ್ರೇಮ ಕೃಷ್ಣ
ಮಗಳು ಮತ್ತು ಮೊಮ್ಮಗನೊಂದಿಗೆ ಆಗಮಿಸಿ ತಿರಂಗ ಸ್ವೀಕರಿಸಿದ ಪ್ರೇಮ ಕೃಷ್ಣ
ವಿಡಿಯೋ: ರಾಜಕೀಯ ಗುರುವಿಗೆ ಹೆಗಲು ಕೊಟ್ಟು ವಿದಾಯ ಹೇಳಿದ ಡಿಕೆ ಬ್ರದರ್ಸ್
ವಿಡಿಯೋ: ರಾಜಕೀಯ ಗುರುವಿಗೆ ಹೆಗಲು ಕೊಟ್ಟು ವಿದಾಯ ಹೇಳಿದ ಡಿಕೆ ಬ್ರದರ್ಸ್
ರಾಜ್ಯ ಮತ್ತು ರಾಷ್ಟ್ರದ ಹಲವಾರು ನಾಯಕರು ಕೃಷ್ಣರ ಅಂತ್ಯಕ್ರಿಯೆಯಲ್ಲಿ ಭಾಗಿ
ರಾಜ್ಯ ಮತ್ತು ರಾಷ್ಟ್ರದ ಹಲವಾರು ನಾಯಕರು ಕೃಷ್ಣರ ಅಂತ್ಯಕ್ರಿಯೆಯಲ್ಲಿ ಭಾಗಿ
ರಜತ್ ವಿರುದ್ಧ ಮುಗಿಬಿದ್ದ ಮಂಜು, ತ್ರಿವಿಕ್ರಮ್
ರಜತ್ ವಿರುದ್ಧ ಮುಗಿಬಿದ್ದ ಮಂಜು, ತ್ರಿವಿಕ್ರಮ್
ಅಂತ್ಯಕ್ರಿಯೆ ಉಸ್ತುವಾರಿ ವಹಿಸಿಕೊಂಡ ಡಿಕೆ ಶಿವಕುಮಾರ್​ರಿಂದ ಚುರುಕು ಓಡಾಟ
ಅಂತ್ಯಕ್ರಿಯೆ ಉಸ್ತುವಾರಿ ವಹಿಸಿಕೊಂಡ ಡಿಕೆ ಶಿವಕುಮಾರ್​ರಿಂದ ಚುರುಕು ಓಡಾಟ