ಇವತ್ತು ಯಾರಿಗೆ ತಾನೆ ಕ್ಯಾಷ್ಬ್ಯಾಕ್ (Cashback) ಎಂದ್ರೆ ಇಷ್ಟವಾಗಲ್ಲ? ಫೋನ್ ಪೇ, ಗೂಗಲ್ ಪೇ ಇತ್ಯಾದಿ ವ್ಯಾಲಟ್ ಆ್ಯಪ್ಗಳು ಹೆಚ್ಚೆಚ್ಚು ಜನರ ಬಳಕೆಗೆ ಹೋಗಲು ಸ್ವಲ್ಪಮಟ್ಟಿಗಾದರೂ ಕಾರಣವಾಗಿದ್ದು ಈ ಕ್ಯಾಷ್ಬ್ಯಾಕ್ಗಳೇ. ಆನ್ಲೈನ್ನಲ್ಲಿ ನಾವು ಮಾಡಿದ ಪ್ರತೀ ವಹಿವಾಟಿಗೂ ಏನಾದರೂ ಕ್ಯಾಷ್ಬ್ಯಾಕ್ ಅಥವಾ ಗಿಫ್ಟ್ ಕೂಪನ್ ಸಿಗುತ್ತಾ ಎಂದು ಕಾತರದಿಂದ ನೋಡುವವರು ಬಹಳ ಮಂದಿ. ಕ್ಯಾಷ್ಕರೋ (CashKaro) ಎಂಬ ವೆಬ್ಸೈಟ್ ಭಾರತದಲ್ಲಿ ಇದೇ ಕಾರಣಕ್ಕೆ ಇದೀಗ ಟ್ರೆಂಡಿಂಗ್ನಲ್ಲಿದೆ. ಈ ಕಂಪನಿಯ ಸಹ ಸಂಸ್ಥಾಪಕಿ ಸ್ವಾತಿ ಭಾರ್ಗವ. ತಮ್ಮ ಪತಿ ಜೊತೆ ಸೇರಿ ಸ್ವಾತಿ ಭಾರ್ಗವ (Swati Bhargava) ಸ್ಥಾಪಿಸಿದ ಕ್ಯಾಷ್ಕರೋ ಈಗ ಭಾರತದ ಅತಿದೊಡ್ಡ ಕ್ಯಾಷ್ಬ್ಯಾಕ್ ಮತ್ತು ಕೂಪನ್ ವೆಬ್ಸೈಟ್ ಎಂದು ಹೆಸರು ಮಾಡಿದೆ. ಕ್ಯಾಷ್ಕರೋ ಸಂಸ್ಥೆಯ ವ್ಯವಹಾರಕ್ಕೆ ಐಡಿಯಾ ಹುಡುಕಿದ್ದೇ ಸ್ವಾತಿ ಭಾರ್ಗವ. ಇದರ ಹಿಂದೆ ತುಸು ಕುತೂಹಲ ಮೂಡಿಸುವ ಹನಿಮೂನ್ ಘಟನೆ ಇದೆ ಎಂದರೆ ಅಚ್ಚರಿ ಅಗಬಹುದು.
2009ರಲ್ಲಿ ಸ್ವಾತಿ ಅವರು ರೋಹನ್ ಭಾರ್ಗವರನ್ನು ವಿವಾಹವಾದರು. ಆಗ ಸ್ವಾತಿ ಭಾರ್ಗವರೇ ಖುದ್ದಾಗಿ ತಮ್ಮ ಹನಿಮೂನ್ ಟಿಕೆಟ್ಗಳನ್ನು ಬುಕ್ ಮಾಡಲು ನಿರ್ಧರಿಸಿದರು. ಕ್ಯಾಷ್ಬ್ಯಾಕ್ ವೆಬ್ಸೈಟ್ವೊಂದರ ಮೂಲಕ ಹನಿಮೂನ್ ಟಿಕೆಟ್ ಬುಕ್ ಮಾಡಿದರು. ಸಾಕಷ್ಟು ಕ್ಯಾಷ್ಬ್ಯಾಕ್ ಕೂಡ ಸಿಕ್ಕಿತು. ಹನಿಮೂನ್ಗೆ ಹೆಚ್ಚು ಖರ್ಚು ಆಯಿತು ಎಂದೇ ಸ್ವಾತಿ ಹಾಗೂ ರೋಹನ್ ಭಾರ್ಗವ ದಂಪತಿಗೆ ಅನಿಸಲಿಲ್ಲ. ಕ್ಯಾಷ್ಬ್ಯಾಕ್ ಎಷ್ಟು ಪ್ರಯೋಜನಕಾರಿ ಎಂಬ ಸಂಗತಿ ಸ್ವಾತಿ ಭಾರ್ಗವರಿಗೆ ಅಂದು ಅರಿವಾಯಿತು. ಕ್ಯಾಷ್ಬ್ಯಾಕ್ಗೆ ಒಂದು ಒಳ್ಳೆಯ ಪ್ಲಾಟ್ಫಾರ್ಮ್ ರೂಪಿಸಲು ಆ ಘಟನೆ ಸ್ವಾತಿ ಭಾರ್ಗವ ಮತ್ತವರ ಪತಿಯನ್ನು ಪ್ರೇರೇಪಿಸಿತಂತೆ.
ಇದನ್ನೂ ಓದಿ: Apple In Bengaluru: ಬೆಂಗಳೂರಿನಲ್ಲಿ ಕಚೇರಿ ತೆರೆದ ಆ್ಯಪಲ್; ಮುಂಬೈನ ಆ್ಯಪಲ್ ಸ್ಟೋರ್ಗಿಂತ 6 ಪಟ್ಟು ಹೆಚ್ಚು ಬಾಡಿಗೆ
ಸ್ವಾತಿ ಮತ್ತು ರೋಹನ್ ಭಾರ್ಗವ ದಂಪತಿ ತಮ್ಮ ಹನಿಮೂನ್ ಘಟನೆ ವೇಳೆ ಸಿಕ್ಕ ಕ್ಯಾಷ್ಬ್ಯಾಕ್ ಐಡಿಯಾ ಇಟ್ಟುಕೊಂಡು 2013ರಲ್ಲಿ ಕ್ಯಾಷ್ಬ್ಯಾಕ್ ಪ್ಲಾಟ್ಫಾರ್ಮ್ ರೂಪಿಸಿದರು. ಅದು ಯಶಸ್ವಿಯೂ ಆಯಿತು. ಸ್ವಲ್ಪವೂ ತಡ ಮಾಡದೇ ಭಾರತೀಯ ಮಾರುಕಟ್ಟೆಗೂ ಕ್ಯಾಷ್ಕರೋ ಸೇವೆ ತಂದರು. ಆಗ ಅವರ ಬಳಿ ಇದ್ದ ನೌಕರರ ಸಂಖ್ಯೆ ಕೇವಲ 17 ಮಾತ್ರ. ವ್ಯವಹಾರವನ್ನು ಅಗ್ರೆಸಿವ್ ಆಗಿ ಮಾಡಲು ಹೆಚ್ಚು ಬಂಡವಾಳ ಬೇಕಾಗಿತ್ತು. ತಮ್ಮ ಕಾಲೇಜು ಮಿತ್ರರು ಮತ್ತು ಸಹಪಾಠಿಗಳನ್ನು ಸಂಪರ್ಕಿಸಿ ನೆರವು ಯಾಚಿಸಿದರು. ಕೇವಲ ಎರಡು ದಿನದಲ್ಲಿ ತಾವು ನಿರೀಕ್ಷಿಸಿದ್ದಕ್ಕಿಂತ ಎರಡು ಪಟ್ಟು ಹೆಚ್ಚು ಬಂಡವಾಳ ಭಾರ್ಗವ ದಂಪತಿಗೆ ಹರಿದುಬಂತು.
2015ರಲ್ಲಿ ಕಲಾರಿ ಕ್ಯಾಪಿಟಲ್ ಸಂಸ್ಥೆಯಿಂದ 25 ಕೋಟಿ ರೂ ಸಾಲ ಸಿಕ್ಕಿತು. ಮರು ವರ್ಷ, ಅಂದರೆ 2016ರಲ್ಲಿ ರತನ್ ಟಾಟಾ ಕೂಡ ಧನ ಸಹಾಯ ನೀಡಿದರು.
ಕ್ಯಾಷ್ಕರೋ ಸಂಸ್ಥೆ ಭಾರತದಲ್ಲಿ 1,500 ಆನ್ಲೈನ್ ರೀಟೇಲ್ ವ್ಯಾಪಾರಿಗಳೊಂದಿಗೆ ಸಹಕಾರ ಒಪ್ಪಂದ ಹೊಂದಿದೆ. ಕ್ಯಾಷ್ಕರೋ ವೆಬ್ಸೈಟ್ನಲ್ಲಿ ನೀಡಲಾಗುವ ಕ್ಯಾಷ್ಬ್ಯಾಕ್ ಕೂಪನ್ ಬಳಸಿ ಗ್ರಾಹಕರು ಈ ರೀಟೇಲ್ ಸ್ಟೋರ್ಗಳಲ್ಲಿ ಬಟ್ಟೆ, ಯಂತ್ರೋಪಕರಣ, ಔಷಧ, ದಿನಸಿ ಸಾಮಾನು ಮತ್ತಿತರ ವಸ್ತುಗಳನ್ನು ಖರೀದಿಸಿದಾಗ ಕ್ಯಾಷ್ಕರೋ ವತಿಯಿಂದ ಹೆಚ್ಚುವರಿ ಕ್ಯಾಷ್ಬ್ಯಾಕ್ ಸಿಗುತ್ತದೆ. ಇಂಥ ಪ್ರತಿಯೊಂದು ವಹಿವಾಟಿಗೂ ಆ ರೀಟೇಲ್ ಸ್ಟೋರ್ಗಳು ಕ್ಯಾಷ್ಕರೋಗೆ ಇಂತಿಷ್ಟು ಕಮಿಷನ್ ಕೊಡುತ್ತವೆ. ಇದೇ ಕ್ಯಾಷ್ಕರೋಗೆ ಆದಾಯ ಮೂಲವಾಗಿದೆ. 2022ರಲ್ಲಿ ಕ್ಯಾಷ್ಕರೋ ಬಹಳ ವೇಗವಾಗಿ ಬೆಳೆಯಿತು. 2021ರಲ್ಲಿ 100 ಕೋಟಿ ರೂ ಇದ್ದ ಅದರ ಆದಾಯ 2022ರಲ್ಲಿ 225 ಕೋಟಿಗೆ ಏರಿದೆ.
ಇದನ್ನೂ ಓದಿ: Mango EMI: ಈಗ ತಿನ್ನಿ, ಆಮೇಲೆ ದುಡ್ಡು ಕೊಡಿ; ಮಾವಿನ ಹಣ್ಣಿಗೂ ಬಂತು ಇಎಂಐ
ಹರ್ಯಾಣದ ಅಂಬಾಲ ನಗರ ಮೂಲದ ಸ್ವಾತಿ ಭಾರ್ಗವ ಬಾಲ್ಯದಲ್ಲಿ ತಮ್ಮ ಶಾಲೆಗೆ ಟಾಪ್ ಆಗುತ್ತಾ ಬಂದಿದ್ದರು. 11 ಮತ್ತು 12ನೇ ತರಗತಿಯನ್ನು ಸಿಂಗಾಪುರದಲ್ಲಿ ಓದಿ, ಬಳಿಕ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ನಲ್ಲಿ ಪದವಿ ಮಾಡಿ, ಆ ನಂತರ ಅರ್ಥಶಾಸ್ತ್ರ ಮತ್ತು ಗಣಿತ ಶಾಸ್ತ್ರದಲ್ಲಿ ಉನ್ನತ ವ್ಯಾಸಂಗ ಮಾಡಿದ್ದಾರೆ.
ಓದಿನಲ್ಲಿ ಬುದ್ಧಿವಂತೆಯಾದ ಸ್ವಾತಿ ಭಾರ್ಗವ ವ್ಯವಹಾರದಲ್ಲೂ ತಾನು ಚುರುಕು ಎಂದು ತೋರಿಸಿಕೊಟ್ಟಿದ್ದಾರೆ. ಇವರ ನಿವ್ವಳ ಆಸ್ತಿ ಮೌಲ್ಯ 2 ಮಿಲಿಯನ್ ಡಾಲರ್. ಅಂದರೆ ಸುಮಾರು 16 ಕೋಟಿ ರೂ ಆಸ್ತಿಯ ಒಡತಿ. ಭಾರತದ 40 ವರ್ಷದೊಳಗಿನವರ ಫಾರ್ಚೂನ್ ಪಟ್ಟಿಯಲ್ಲಿ ಅವರು ಸ್ಥಾನ ಪಡೆದಿದ್ದಾರೆ. ಅಗ್ರಮಾನ್ಯ ಯುವ ಮಹಿಳಾ ಉದ್ಯಮಿಗಳ ಪಟ್ಟಿಯಲ್ಲೂ ಅವರು ನಾಮಿನೇಟ್ ಆಗಿದ್ದರು.
Published On - 4:55 pm, Sun, 9 April 23