ಐಟಿ ದಾಳಿ ನಡೆಯುವ ಮುನ್ನ ಇಲಾಖೆ ತಯಾರಿ ಹೇಗಿರುತ್ತೆ? ಸುಳ್ಳು ಕೇಸ್ ದಾಖಲಿಸುವುದಿಲ್ಲವಾ ಇಲಾಖೆ?

|

Updated on: Dec 10, 2023 | 3:40 PM

Income tax Raid: ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಒಂದು ಸ್ಥಳದಲ್ಲಿ ನಡೆಸುವ ಶೋಧ ಮತ್ತು ಸರ್ವೇಕ್ಷಣೆ ಕಾರ್ಯಾಚರಣೆಯನ್ನು ಐಟಿ ರೇಡ್ ಎನ್ನುವುದು. ಒಬ್ಬ ವ್ಯಕ್ತಿ ಅಥವಾ ಸಂಸ್ಥೆ ಅಕ್ರಮವಾಗಿ ಹಣ ಇಟ್ಟುಕೊಂಡಿದ್ದು ಗೊತ್ತಾದರೆ ಅಥವಾ ಅನುಮಾನ ಬಂದರೆ ಐಟಿ ಇಲಾಖೆ ರೇಡ್ ಮಾಡುತ್ತದೆ. ಆದಾಯ ತೆರಿಗೆ ಇಲಾಖೆ ಸುಳ್ಳು ಅಥವಾ ಅಧಾರರಹಿತ ಪ್ರಕರಣ ದಾಖಲಿಸುವುದು ಕಡಿಮೆ. ಕೋರ್ಟ್​ನಲ್ಲಿ ವಿಚಾರಣೆಗೆ ಹೋಗುವುದರಿಂದ ವಿವರಣೆ ಕೊಡಬೇಕಾಗುತ್ತದೆ.

ಐಟಿ ದಾಳಿ ನಡೆಯುವ ಮುನ್ನ ಇಲಾಖೆ ತಯಾರಿ ಹೇಗಿರುತ್ತೆ? ಸುಳ್ಳು ಕೇಸ್ ದಾಖಲಿಸುವುದಿಲ್ಲವಾ ಇಲಾಖೆ?
ಆದಾಯ ತೆರಿಗೆ ಇಲಾಖೆ
Follow us on

ಬೆಂಗಳೂರು, ಡಿಸೆಂಬರ್ 10: ಜಾರ್ಖಂಡ್, ಛತ್ತೀಸ್​ಗಡ, ಒಡಿಶಾದಲ್ಲಿ ಕಾಂಗ್ರೆಸ್ ರಾಜ್ಯಸಭಾ ಸಂಸದ ಧೀರಜ್ ಕುಮಾರ್ ಸಾಹು ಅವರಿಗೆ ಸೇರಿದವೆನ್ನಲಾದ ಸ್ಥಳಗಳಲ್ಲಿ ಐಟಿ ಇಲಾಖೆ ಅಧಿಕಾರಿಗಳು ರೇಡ್ (Income Tax Raid) ನಡೆಸಿರುವುದು ಇಡೀ ದೇಶದ ಗಮನ ಸೆಳೆದಿದೆ. 300 ಕೋಟಿ ರೂಗೂ ಹೆಚ್ಚು ಮೊತ್ತದ ನಗದು ಹಣ ಇಲಾಖೆಗೆ ಸಿಕ್ಕಿದೆ. ಭಾರತದ ಯಾವುದೇ ಏಜೆನ್ಸಿಗೂ ಒಂದೇ ಕಾರ್ಯಾಚರಣೆಯಲ್ಲಿ ಇಷ್ಟೊಂದು ಪ್ರಮಾಣದಲ್ಲಿ ನಗದು ಹಣ ಸಿಕ್ಕಿದ್ದು ಇದೇ ಮೊದಲು ಎನ್ನಲಾಗಿದೆ. ಒಂದು ರೇಡ್ ನಡೆಸಲು ಆದಾಯ ತೆರಿಗೆ ಎಷ್ಟೆಲ್ಲಾ ಕಸರತ್ತು, ಸಿದ್ಧತೆ ನಡೆಸಬಹುದು ಎಂಬ ಕುತೂಹಲ ಯಾರಿಗಾದರೂ ಇದ್ದೀತು.

ಏನಿದು ಐಟಿ ರೇಡ್?

ಆದಾಯ ತೆರಿಗೆ ಇಲಾಖೆ ಒಂದು ಸ್ಥಳದಲ್ಲಿ ನಡೆಸುವ ಶೋಧ ಮತ್ತು ಸರ್ವೇಕ್ಷಣೆ ಕಾರ್ಯಾಚರಣೆಯನ್ನೇ ರೇಡ್ ಎನ್ನುವುದು. ಒಬ್ಬ ವ್ಯಕ್ತಿ ಅಥವಾ ಸಂಸ್ಥೆ ಅಕ್ರಮವಾಗಿ ಹಣ ಇಟ್ಟುಕೊಂಡಿದ್ದು ಗೊತ್ತಾದರೆ ಅಥವಾ ಅನುಮಾನ ಬಂದರೆ ಐಟಿ ಇಲಾಖೆ ರೇಡ್ ಮಾಡುತ್ತದೆ.

ಕಪ್ಪು ಹಣ ಸಂಗ್ರಹವನ್ನು ನಿಗ್ರಹಿಸಲು ಸಾಮಾನ್ಯವಾಗಿ ಈ ರೇಡ್ ನಡೆಸಲಾಗುತ್ತದೆ. ತೆರಿಗೆ ಪಾವತಿಯಾಗದ ಹಣವನ್ನು ಕಪ್ಪು ಹಣ ಎಂದು ಭಾವಿಸಲಾಗುತ್ತದೆ. ಹೀಗಾಗಿ, ಅನ್​ಅಕೌಂಟೆಡ್ ಆಗಿರುವ ಹಣ, ಅಂದರೆ ದಾಖಲೆ ಇಲ್ಲದ ಮತ್ತು ತೆರಿಗೆ ಕಟ್ಟದೇ ಇರುವ ಹಣ ಕಪ್ಪು ಹಣ. ಒಡವೆಯೂ ಒಳಗೊಂಡಂತೆ ಯಾವುದೇ ಲೆಕ್ಕವಿಲ್ಲದ ಆಸ್ತಿಗಳು ಇದರಲ್ಲಿ ಒಳಗೊಳ್ಳುತ್ತವೆ.

ಆದಾಯ ತೆರಿಗೆ ಇಲಾಖೆ ದೇಶದ ಹಣಕಾಸು ಬೆಳವಣಿಗೆ ಬಗ್ಗೆ ಸದಾ ಜಾಗೃತವಾಗಿರುತ್ತದೆ. ಯಾವ ಬಿಸಿನೆಸ್ ಎಷ್ಟು ಲಾಭ ಮಾಡಿದೆ ಇತ್ಯಾದಿ ಎಲ್ಲವನ್ನೂ ಗಮನಿಸುತ್ತಾ ಇರುತ್ತದೆ.

ಇದನ್ನೂ ಓದಿ: ಬೌದ್ ಡಿಸ್ಟಿಲರಿಗೆ ಸೇರಿದ ಕಂಪನಿಗಳಿಂದ ಮತ್ತಷ್ಟು ನಗದು ವಶ; ಇಲ್ಲಿವರೆಗೆ ಸಿಕ್ಕಿದ್ದು ₹ 290 ಕೋಟಿ

ರೇಡ್​ಗೆ ಐಟಿ ಇಲಾಖೆ ಸಿದ್ಧತೆ ಹೇಗಿರುತ್ತೆ?

ಆದಾಯ ತೆರಿಗೆ ಇಲಾಖೆಯ ಕರ್ನಾಟಕ ವಿಭಾಗದ ಚೀಫ್ ಮುಖ್ಯ ಕಮಿಷನರ್ ಆಗಿ ನಿವೃತ್ತರಾಗಿರುವ ಹಾಗೂ ಕನ್ನಡದ ಖ್ಯಾತ ಸಾಹಿತಿಯೂ ಆಗಿರುವ ಕೆ ಸತ್ಯನಾರಾಯಣ ಅವರು ಟಿವಿ9 ಕನ್ನಡಕ್ಕೆ ನೀಡಿದ ಮಾಹಿತಿ ಪ್ರಕಾರ, ಐಟಿ ದಾಳಿ ಸಾಮಾನ್ಯವಾಗಿ ತೀರಾ ನಾಟಕೀಯವಾಗಿ, ದಿಢೀರ್ ಆಗಿ ನಡೆಯುವಂಥದ್ದಲ್ಲ. ಸಾಕಷ್ಟು ತಯಾರಿ ಮಾಡಿ, ಒಂದು ನೋಟ್ ಸಿದ್ಧಪಡಿಸಿ, ಡೈರೆಕ್ಟರ್, ಅಡಿಶನಲ್ ಡೈರೆಕ್ಟರ್ ಮಟ್ಟಕ್ಕೆ ಅದನ್ನು ತರಲಾಗುತ್ತದೆ. ಆ ಬಳಿಕ ವಾರಂಟ್ ಇಷ್ಯೂ ಮಾಡಲಾಗುತ್ತದೆ. ಇಲಾಖೆ ಮಟ್ಟದಲ್ಲೂ ಯಾವ ದುರ್ಬಳಕೆ ಆಗದಿರುವುದನ್ನು ಖಚಿಪಡಿಸಿಕೊಳ್ಳಲು ಕ್ರಾಸ್ ಚೆಕ್ ಮಾಡಲಾಗುತ್ತದೆ.

ಒಂದು ಕಡೆ ರೇಡ್ ನಡೆಸಲು ಬೇಕಾದ ಸಾಕ್ಷ್ಯಾಧಾರ ಇದ್ದರೂ ತತ್​ಕ್ಷಣವೇ ದಾಳಿ ಮಾಡಲಾಗುತ್ತದೆ ಎಂಬಂತಿಲ್ಲ. ಇಲಾಖೆಯಲ್ಲೂ ಸಿಬ್ಬಂದಿ ಕೊರತೆ ಇರುತ್ತದೆ. ಅಧಿಕಾರಿಗಳನ್ನು ಸಂಯೋಜಿಸಿ, ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ ರೇಡ್ ಅಖಾಡಕ್ಕೆ ಇಳಿಯಲು ಒಂದೆರಡು ವಾರವೇ ಆಗಬಹುದು.

ಸುಖಾಸುಮ್ಮನೆ ರೇಡ್ ಮಾಡಲು ಆಗುವುದಿಲ್ಲ?

ರಾಜಕೀಯ ಒತ್ತಡ ಇತ್ಯಾದಿಯಿಂದ ಐಟಿ ರೇಡ್ ಆಗುವುದು ಕಡಿಮೆ. ಕೋರ್ಟ್​ನಲ್ಲಿ ವಿಚಾರಣೆಗೆ ಹೋಗುವುದರಿಂದ ಐಟಿ ಇಲಾಖೆ ಆಧಾರರಹಿತ ಪ್ರಕರಣಗಳನ್ನು ದಾಖಲಿಸುವುದಿಲ್ಲ.

ಇದನ್ನೂ ಓದಿ: ಜಾರ್ಖಂಡ್‌, ಒಡಿಶಾದಲ್ಲಿ ಐಟಿ ದಾಳಿ ವೇಳೆ ಸಿಕ್ಕಿದ್ದು ರಾಶಿ ಕರೆನ್ಸಿ ನೋಟು; ಯಾರು ಈ ಧೀರಜ್ ಸಾಹು?

‘ಐಟಿಯವರು ಮಿಸ್​ಯೂಸ್ ಮಾಡೋಕೆ ಆಗಿಲ್ಲ. ಕೋರ್ಟ್​ನಲ್ಲಿ ವಿಚಾರಣೆ ಇರುತ್ತೆ. ಅದಕ್ಕೆ ಉತ್ತರ ಕೊಡಬೇಕಾಗುತ್ತದೆ. ಪಂಜಾಬ್​ನಲ್ಲಿ ಒಂದು
ಘಟನೆ ಆಗಿತ್ತು. ಅಲ್ಲಿನ ಅಡ್ವೋಕೇಟ್ ಜನರಲ್​ ಜೊತೆಗಿನ ವೈಯಕ್ತಿಕ ಈರ್ಷ್ಯೆ ಮೇಲೆ ಐಟಿ ಕಮಿಷನರ್ ರೇಡ್ ಮಾಡಿಸಿದ್ದರು. ಅದು ಬೇಸ್​ಲೆಸ್ ಕೇಸ್ ಆಗಿತ್ತು. ಕೋರ್ಟ್​ನಲ್ಲಿ ಈ ಮ್ಯಾಟರ್ ವಿಚಾರಣೆ ಆಯಿತು. ಕಮಿಷನರ್​ಗೆ ಪೆನ್ಷನ್ ಕಟ್ ಮಾಡಲಾಯಿತು. ಹೀಗಾಗಿ ಐಟಿಯವರು ಸುಮ್ಮನೆ ಕೇಸ್ ಹಾಕೋಕ್ಕಾಗಲ್ಲ’ ಎಂದು ಸಾಹಿತಿ ಮತ್ತು ನಿವೃತ್ತ ಐಟಿ ಅಧಿಕಾರಿ ಸತ್ಯನಾರಾಯಣ ಕೆ ಹೇಳುತ್ತಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 3:39 pm, Sun, 10 December 23