ಜಾರ್ಖಂಡ್, ಒಡಿಶಾದಲ್ಲಿ ಐಟಿ ದಾಳಿ ವೇಳೆ ಸಿಕ್ಕಿದ್ದು ರಾಶಿ ಕರೆನ್ಸಿ ನೋಟು; ಯಾರು ಈ ಧೀರಜ್ ಸಾಹು?
ಬೌದ್ ಡಿಸ್ಟಿಲರಿ ಪ್ರೈವೇಟ್ ಲಿಮಿಟೆಡ್ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿ ಅಪಾರ ಪ್ರಮಾಣದ ನಗದು ವಶಪಡಿಸಿರುವ ಸುದ್ದಿಯನ್ನು ಶೇರ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ದೇಶದ ಜನರು ಈ ಕರೆನ್ಸಿ ನೋಟುಗಳ ರಾಶಿಯನ್ನು ನೋಡಬೇಕು. ಆನಂತರ ತಮ್ಮ ನಾಯಕರ ಪ್ರಾಮಾಣಿಕ 'ಭಾಷಣ'ಗಳನ್ನು ಕೇಳಬೇಕು ಎಂದು ಟ್ವೀಟ್ ಮಾಡಿದ್ದಾರೆ.
ದೆಹಲಿ ಡಿಸೆಂಬರ್ 08: ಜಾರ್ಖಂಡ್‌ನ ಕಾಂಗ್ರೆಸ್ (Congress) ರಾಜ್ಯಸಭಾ ಸದಸ್ಯ ಧೀರಜ್ ಸಾಹು(Dheeraj sahu) ಸುದ್ದಿಯಲ್ಲಿದ್ದಾರೆ. ಆದಾಯ ತೆರಿಗೆ ಇಲಾಖೆ ಬುಧವಾರ ಮೂರು ರಾಜ್ಯಗಳಲ್ಲಿ ಅವರ ಅರ್ಧ ಡಜನ್ ಸ್ಥಳಗಳ ಮೇಲೆ ದಾಳಿ ಮಾಡಿದೆ. ಆದಾಯ ತೆರಿಗೆ ಇಲಾಖೆಯು ಜಾರ್ಖಂಡ್ ಮತ್ತು ಒಡಿಶಾದಲ್ಲಿ ಮದ್ಯ ತಯಾರಿಕಾ ಕಂಪನಿ ಬೌದ್ ಡಿಸ್ಟಿಲರಿ ಪ್ರೈವೇಟ್ ಲಿಮಿಟೆಡ್ (Boudh Distilleries Pvt Ltd) ಮೇಲೆ ದಾಳಿ ನಡೆಸಿದ್ದು ಅಪಾರ ಪ್ರಮಾಣದ ಕರೆನ್ಸಿ ನೋಟುಗಳನ್ನು ವಶಪಡಿಸಿಕೊಂಡಿದೆ. ಅಧಿಕಾರಿಗಳ ಪ್ರಕಾರ, ಒಡಿಶಾದ ಬೋಲಂಗಿರ್ ಮತ್ತು ಸಂಬಲ್‌ಪುರ ಮತ್ತು ಜಾರ್ಖಂಡ್‌ನ ರಾಂಚಿ ಮತ್ತು ಲೋಹರ್ದಗಾದಲ್ಲಿ ಶೋಧ ನಡೆಸಲಾಗಿದೆ.
ಮೂಲಗಳ ಪ್ರಕಾರ ಕೋಟ್ಯಂತರ ರೂಪಾಯಿ ಮೌಲ್ಯದ ನೋಟುಗಳನ್ನು ಎಣಿಕೆ ಮಾಡಲಾಗಿತ್ತು, ಆದರೆ ಹೆಚ್ಚಿನ ಸಂಖ್ಯೆಯ ನೋಟುಗಳಿಂದಾಗಿ ಯಂತ್ರಗಳು ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿವೆ. ಬೌದ್ ಡಿಸ್ಟಿಲರಿ ಪ್ರೈವೇಟ್ ಲಿಮಿಟೆಡ್‌ನಲ್ಲಿ ತೆರಿಗೆ ವಂಚನೆ ನಡೆದಿದೆ ಎಂಬ ಶಂಕೆಯ ಮೇರೆಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಹಲವು ಸ್ಥಳಗಳಲ್ಲಿ ದಾಳಿ ನಡೆಸಿದ್ದರು. ಆದಾಯ ತೆರಿಗೆ ಇಲಾಖೆ ತಂಡದೊಂದಿಗೆ ಸಿಐಎಸ್‌ಎಫ್ ಸಿಬ್ಬಂದಿಯೂ ಸೇರಿದ್ದಾರೆ.
ಬುಧವಾರ ದಾಳಿ ನಡೆಸಲಾಗಿದ್ದು, ಇಲಾಖೆ ಅಧಿಕಾರಿಗಳು ನೋಟು ಎಣಿಕೆ ಯಂತ್ರವನ್ನು ಬಳಸಿ ನಿಜವಾದ ನಗದು ಮೊತ್ತವನ್ನು ಪತ್ತೆ ಹಚ್ಚಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಹಣವು ಲೆಕ್ಕಕ್ಕೆ ಸಿಗದಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದರು. ನೋಟುಗಳನ್ನು ಬ್ಯಾಂಕ್‌ಗೆ ತರಲು 157 ಚೀಲಗಳನ್ನು ಖರೀದಿಸಲಾಗಿದ್ದು, ಅದೂ ಸಾಕಾಗಿಲ್ಲ. ಆನಂತರ ಹೆಚ್ಚಿನ ಗೋಣಿಚೀಲಗಳನ್ನು ತರಲಾಯಿತು. ಅದರಲ್ಲಿ ನೋಟುಗಳನ್ನು ತುಂಬಿ ಲಾರಿಯಲ್ಲಿಟ್ಟು ಬ್ಯಾಂಕ್ ಗೆ ತೆಗೆದುಕೊಂಡು ಹೋಗುತ್ತಿದ್ದರು.
ಧೀರಜ್ ಸಾಹು ಯಾರು?
ಧೀರಜ್ ಸಾಹು ಕಾಂಗ್ರೆಸ್ ನಾಯಕ. ಅವರು ಜಾರ್ಖಂಡ್‌ನ ರಾಜ್ಯಸಭಾ ಸಂಸದರಾಗಿದ್ದಾರೆ. ಉದ್ಯಮಿಯೂ ಆಗಿರುವ ಅವರು ಕೈಗಾರಿಕೋದ್ಯಮಿ ಕುಟುಂಬದಿಂದ ಬಂದವರು. ಧೀರಜ್ ಸಾಹು ಅವರ ಸಹೋದರ ಶಿವಪ್ರಸಾದ್ ಸಾಹು ಕೂಡ ಸಂಸದರಾಗಿದ್ದಾರೆ. ಧೀರಜ್ ಅವರ ಕುಟುಂಬವು ಸ್ವಾತಂತ್ರ್ಯ ನಂತರ ಕಾಂಗ್ರೆಸ್ ಪಕ್ಷದೊಂದಿಗೆ ಸಂಪರ್ಕ ಹೊಂದಿದೆ. 1977ರಲ್ಲಿ ಧೀರಜ್ ಸಾಹು ರಾಜಕೀಯ ಪ್ರವೇಶಿಸಿದರು. 1978ರಲ್ಲಿ ಜೈಲ್ ಭರೋ ಚಳವಳಿಯ ಸಂದರ್ಭದಲ್ಲಿ ಜೈಲಿಗೆ ಹೋಗಿದ್ದರು. ಜೂನ್ 2009 ರಲ್ಲಿ, ಅವರು ಮೊದಲ ಬಾರಿಗೆ ರಾಜ್ಯಸಭೆಗೆ ಆಯ್ಕೆಯಾದರು.
ಇದನ್ನೂ ಓದಿ:ಜಾರ್ಖಂಡ್, ಒಡಿಶಾದಲ್ಲಿ ಐಟಿ ದಾಳಿ; ₹50 ಕೋಟಿ ಎಣಿಸಿದ ನಂತರ ನೋಟು ಎಣಿಸಲಾಗದೆ ಕೆಟ್ಟು ಹೋದ ಯಂತ್ರ
ಧೀರಜ್ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಅವರು ಕಾಂಗ್ರೆಸ್‌ನ ಹಿರಿಯ ನಾಯಕರಿಗೆ ಸಂಬಂಧಿಸಿದ ಸಂದೇಶಗಳನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡುತ್ತಲೇ ಇರುತ್ತಾರೆ. 2020 ರಲ್ಲಿ ಸುಪ್ರೀಂಕೋರ್ಟ್ ತನ್ನ ಚುನಾವಣೆಗೆ ಸಂಬಂಧಿಸಿದ ಅರ್ಜಿಯನ್ನು ತಿರಸ್ಕರಿಸಿದಾಗ ಧೀರಜ್ ಬೆಳಕಿಗೆ ಬಂದರು. ಬಿಜೆಪಿ ಅಭ್ಯರ್ಥಿ ಪ್ರದೀಪ್ ಸೋತನಾಲಿಯಾ ಅವರ ಆಯ್ಕೆಗೆ ಸವಾಲು ಹಾಕಿದ್ದರು. 2018ರಲ್ಲಿ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪ್ರದೀಪ್ ಸೊಂತಾಲಿಯಾ ಅವರು ಧೀರಜ್ ಸಾಹು ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಿದ್ದನ್ನು ಪ್ರಶ್ನಿಸಿದ್ದರು.
देशवासी इन नोटों के ढेर को देखें और फिर इनके नेताओं के ईमानदारी के 'भाषणों' को सुनें… 😂😂😂
जनता से जो लूटा है, उसकी पाई-पाई लौटानी पड़ेगी, यह मोदी की गारंटी है।
❌❌❌💵 💵 💵❌❌❌ pic.twitter.com/O2pEA4QTOj
— Narendra Modi (@narendramodi) December 8, 2023
ಮೋದಿ ಟ್ವೀಟ್
ಬೌದ್ ಡಿಸ್ಟಿಲರಿ ಪ್ರೈವೇಟ್ ಲಿಮಿಟೆಡ್ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿ ಅಪಾರ ಪ್ರಮಾಣದ ನಗದು ವಶಪಡಿಸಿರುವ ಸುದ್ದಿಯನ್ನು ಶೇರ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ದೇಶದ ಜನರು ಈ ಕರೆನ್ಸಿ ನೋಟುಗಳ ರಾಶಿಯನ್ನು ನೋಡಬೇಕು. ಆನಂತರ ತಮ್ಮ ನಾಯಕರ ಪ್ರಾಮಾಣಿಕ ‘ಭಾಷಣ’ಗಳನ್ನು ಕೇಳಬೇಕು.ಸಾರ್ವಜನಿಕರಿಂದ ಏನೇ ಲೂಟಿ ಮಾಡಿದರೂ ಪ್ರತಿ ಪೈಸೆ ವಾಪಸ್ ಕೊಡಲೇಬೇಕು ಇದು ಮೋದಿ ಗ್ಯಾರಂಟಿ ಎಂದು ಟ್ವೀಟ್ ಮಾಡಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ