ವಾಷಿಂಗ್ಟನ್, ಮೇ 2: ವಲಸಿಗರ ಬಗ್ಗೆ ಅನಗತ್ಯ ಭಯ ಹೊಂದಿರುವ ದೇಶಗಳು ಆರ್ಥಿಕವಾಗಿ ಬೆಳೆಯಲು ಕಷ್ಟಪಡಬೇಕಾಗುತ್ತದೆ. ವಲಸಿಗರನ್ನು ಕೈಬೀಸಿ ಕರೆಯುತ್ತಿರುವ ಅಮೆರಿಕದ ಆರ್ಥಿಕತೆ ಉತ್ತಮವಾಗಿದೆ ಎಂದು ಅಧ್ಯಕ್ಷ ಜೋ ಬೈಡನ್ (Joe Biden) ಹೇಳಿದ್ದಾರೆ. ಚೀನಾದಿಂದ ಹಿಡಿದು ಜಪಾನ್, ಭಾರತದವರೆಗೆ ಹಲವು ದೇಶಗಳು ಜೆನಾಫೋಬಿಯಾಗೆ (Xenophobia) ಒಳಗಾಗಿವೆ ಎಂದು ಅಮೆರಿಕ ಅಧ್ಯಕ್ಷರು ಅಭಿಪ್ರಾಯಪಟ್ಟಿದ್ದಾರೆ. ಇಲ್ಲಿ ಜೆನಾಫೋಬಿಯಾ ಎಂದರೆ ವಲಸಿಗರ ಬಗ್ಗೆ ಇರುವ ಅಸಹನೆ ಭಾವನೆ. ಭಾರತದಲ್ಲಿ ರೋಹಿಂಗ್ಯ ಮುಸ್ಲಿಮ್ ವಲಸಿಗರ ಸಮಸ್ಯೆ, ಬಾಂಗ್ಲಾದೇಶೀ ವಲಸಿಗರ ಬಗ್ಗೆ ಆತಂಕ ಇದೆ. ಈ ವಿಚಾರವನ್ನು ಅಮೆರಿಕ ಅಧ್ಯಕ್ಷರು ಪ್ರಸ್ತಾಪಿಸಿ ಪರೋಕ್ಷವಾಗಿ ಕುಟುಕಿದರಾ? ಅಥವಾ ಸಿಎಎ ವಿಚಾರವಾಗಿ ಅವರು ಕುಟುಕಿದರಾ? ಎಂಬ ಅನುಮಾನ ಮೂಡುತ್ತಿದೆ.
ಜೋ ಬೈಡನ್ ಅವರು 2024ರ ಚುನಾವಣೆಯಲ್ಲಿ ತಮ್ಮ ಸ್ಪರ್ಧೆಗೆ ಚಂದಾ ಪಡೆಯಲು ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ವಲಸಿಗರಿಗೆ ಮಣೆ ಹಾಕುವ ಅಜೆಂಡಾ ಇಟ್ಟುಕೊಂಡೇ ಕಳೆದ ಬಾರಿ ಅವರು ಅಧ್ಯಕ್ಷೀಯ ಚುನಾವಣೆ ಜಯಿಸಿದ್ದರು. ಅಮೆರಿಕದಲ್ಲಿ ವಲಸಿಗರ ಪ್ರಾಬಲ್ಯ ಹೆಚ್ಚುತ್ತಿರುವ ಹೊತ್ತಿನಲ್ಲೇ ಅವರ ಪರವಾಗಿ ಬೈಡನ್ ನಿಂತಿದ್ದಾರೆ.
ಇದನ್ನೂ ಓದಿ: ಶೇ. 5.25ರಿಂದ ಶೇ. 5.50ರಲ್ಲಿ ಬಡ್ಡಿದರ ಮುಂದುವರಿಸಿದ ಅಮೆರಿಕ; ಬಡ್ಡಿ ಹೆಚ್ಚಳ ಸಾಧ್ಯತೆ ಇಲ್ಲ
‘ಚೀನಾ ಯಾಕೆ ಆರ್ಥಿಕವಾಗಿ ಹೀನವಾಗುತ್ತಿದೆ? ಜಪಾನ್ ಯಾಕೆ ಸಮಸ್ಯೆ ಎದುರಿಸುತ್ತಿದೆ? ರಷ್ಯಾ, ಭಾರತ ಇವೆಲ್ಲಾ ಯಾಕೆ ಸಮಸ್ಯೆ ಎದುರಿಸುತ್ತಿವೆ? ಯಾಕೆಂದರೆ ಈ ದೇಶಗಳೆಲ್ಲಾ ಜೆನಾಫೋಬಿಕ್ ಆಗಿವೆ. ವಲಸಿಗರನ್ನು ಅವು ದೂರ ಇಟ್ಟಿವೆ. ಆದರೆ, ವಲಸಿಗರಿಂದಲೇ ನಾವು ಬಲಶಾಲಿಗಳಾಗಿದ್ದೇವೆ,’ ಎಂದು ಜೋ ಬೈಡನ್ ತಿಳಿಸಿದ್ದಾರೆ.
ಅಂತಾರಾಷ್ಟ್ರೀಯ ಹಣಕಾಸು ನಿಧಿ ಐಎಂಎಫ್ ಪ್ರಕಾರ 2023ಕ್ಕೆ ಹೋಲಿಸಿದರೆ 2024ರಲ್ಲಿ ಬಹುತೇಕ ದೇಶಗಳ ಆರ್ಥಿಕ ಬೆಳವಣಿಗೆ ಕಡಿಮೆ ಆಗಬಹುದು. ಜಪಾನ್ ಬೆಳವಣಿಗೆ ಕೇವಲ ಶೇ. 0.9ರಷ್ಟಾಗಬಹುದು. ಭಾರತದ ಜಿಡಿಪಿ ದರ ಶೇ. 6.8ರಷ್ಟು ಇರಬಹುದು ಎಂದು ಐಎಂಎಫ್ ಅಂದಾಜು ಮಾಡಿದೆ.
ಇದೇ ವೇಳೆ ಅಮೆರಿಕದ ಆರ್ಥಿಕ ಬೆಳವಣಿಗೆ ಶೇ. 2.5ರಿಂದ ಶೇ. 2.7ರಷ್ಟು ಹೆಚ್ಚಬಹುದು ಎಂದು ಅದು ನಿರೀಕ್ಷಿಸಿದೆ. ಈ ಅಚ್ಚರಿಯ ವೃದ್ಧಿಗೆ ವಲಸಿಗರು ಕಾರಣವಾಗಬಹುದು ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ವಲಸಿಗರ ಆಗಮನದಿಂದಾಗಿ ಅಮೆರಿಕದ ಕಾರ್ಮಿಕ ಶಕ್ತಿ ಹೆಚ್ಚಿದ್ದು ಅದು ಆರ್ಥಿಕತೆಗೆ ಪಾಕ್ಷಿಕವಾಗಿ ಪುಷ್ಟಿ ಕೊಡಬಹುದು ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಭಾರತ ಸೂಪರ್ ಪವರ್ ಆಗುತ್ತಿದೆ, ನಾವು ಭಿಕ್ಷೆ ಬೇಡುತ್ತಿದ್ದೇವೆ, ಸಂಸತ್ತಿನಲ್ಲಿ ಗುಡುಗಿದ ಪಾಕ್ ನಾಯಕ
ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿಯ ಅಧ್ಯಕ್ಷೀಯ ಚುನಾವಣೆಯಲ್ಲಿ ವಲಸಿಗರ ವಿಚಾರ ಹೆಚ್ಚು ಪ್ರಧಾನವಾಗಿರಲಿದೆ. ಡೆಮಾಕ್ರಾಟ್ ಪಕ್ಷದ ಜೋ ಬೈಡನ್ ಅವರು ವಲಸಿಗರ ಪರವಾಗಿ ನಿಂತಿದ್ದಾರೆ. ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ವಲಸಿಗರಿಗೆ ಕಡಿವಾಣ ಹಾಕುವ ಅಜೆಂಡಾ ಇಟ್ಟು ಪ್ರಚಾರ ಮಾಡುತ್ತಿದ್ದಾರೆ. ನವೆಂಬರ್ನಲ್ಲಿ ಮತದಾರರು ಡೆಮಾಕ್ರಾಟ್ ಅಥವಾ ರಿಪಬ್ಲಿಕನ್ ಪಕ್ಷಗಳ ಪೈಕಿ ಯಾರ ಕೈ ಹಿಡಿಯುತ್ತಾರೆ ನೋಡಬೇಕು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ