
ನವದೆಹಲಿ, ನವೆಂಬರ್ 28: ಈ ವರ್ಷ ಭಾರತವು ಏಷ್ಯಾದ ಪ್ರಮುಖ ಶಕ್ತಿ ಗುಂಪಿಗೆ ಸೇರ್ಪಡೆಯಾಗಿದೆ. ಲೋವಿ ಇನ್ಸ್ಟಿಟ್ಯೂಟ್ ಪ್ರತೀ ವರ್ಷ ಬಿಡುಗಡೆ ಮಾಡುವ ಏಷ್ಯಾ ಪವರ್ ಇಂಡೆಕ್ಸ್ನಲ್ಲಿ ಭಾರತ ಮೊದಲ ಬಾರಿಗೆ 40 ಅಂಕಗಳ ಗಡಿ ದಾಟಿ ಮೇಜರ್ ಪವರ್ ಎನಿಸಿದೆ. ಈ ವರ್ಷದ ಇಂಡೆಕ್ಸ್ನಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿ ಮುಂದುವರಿದಿದೆ. ಆದರೆ, ಎರಡನೇ ಸ್ಥಾನದಲ್ಲಿರುವ ಚೀನಾ ಹಾಗೂ ಅಮೆರಿಕದ ನಡುವಿನ ಅಂತರ ನಿರಂತರವಾಗಿ ಕಡಿಮೆ ಆಗುತ್ತಿದೆ. ಅಮೆರಿಕ ಮತ್ತು ಚೀನಾಗೆ ಹೋಲಿಸಿದರೆ ಭಾರತ ತೀರಾ ಕೆಳಗೆ ಇದೆ. ಆದರೂ ಕ್ರಮೇಣವಾಗಿ ಪ್ರಭಾವ ಹೆಚ್ಚಿಸಿಕೊಳ್ಳುತ್ತಿದ್ದು, ಮೊದಲ ಬಾರಿಗೆ ಪ್ರಮುಖ ಶಕ್ತಿ ಎನಿಸಿಕೊಳ್ಳುವ ಮಟ್ಟ ಮುಟ್ಟಿದೆ.
ಲೋವಿ ಇನ್ಸ್ಟಿಟ್ಯೂಟ್ ಸಂಸ್ಥೆಯು ಆಸ್ಟ್ರೇಲಿಯಾವನ್ನೂ ಒಳಗೊಂಡಂತೆ ಏಷ್ಯಾ-ಪೆಸಿಫಿಕ್ ಭಾಗದ 27 ದೇಶಗಳ ಶಕ್ತಿಯನ್ನು ಅವಲೋಕಿಸಿ ಪ್ರತೀ ವರ್ಷ ಏಷ್ಯಾ ಪವರ್ ಇಂಡೆಕ್ಸ್ ರಚಿಸುತ್ತದೆ. ಮಿಲಿಟರಿ ಸಾಮರ್ಥ್ಯ, ಡಿಫೆನ್ಸ್ ನೆಟ್ವರ್ಕ್, ಆರ್ಥಿಕ ಸಾಮರ್ಥ್ಯ, ಸಂಬಂಧಗಳು, ರಾಜತಾಂತ್ರಿಕ ಪ್ರಭಾವ, ಸಾಂಸ್ಕೃತಿಕ ಪ್ರಭಾವ, ಪುಟಿದೇಳುವಿಕೆ ಮತ್ತು ಭವಿಷ್ಯದ ಸಂಪನ್ಮೂಲ ಹೀಗೆ ಎಂಟು ಮಾನದಂಡಗಳಲ್ಲಿ 131 ಅಂಶಗಳ ಆಧಾರದ ಮೇಲೆ ಒಂದು ದೇಶದ ಶಕ್ತಿ ಮತ್ತು ಪ್ರಭಾವವನ್ನು ಅಳೆಯಲಾಗುತ್ತದೆ.
ಇದನ್ನೂ ಓದಿ: ತೃತೀಯ ಜಗತ್ತಿನ ದೇಶಗಳಿಂದ ವಲಸೆ ಬಂದ್ ಮಾಡುತ್ತೇವೆ: ಟ್ರಂಪ್ ಬೆದರಿಕೆ; ಯಾವುದಿದು ಥರ್ಡ್ ವರ್ಲ್ಡ್?
100 ಅಂಕಗಳಲ್ಲಿ ಅಮೆರಿಕ 81.7 ಅಂಕಗಳೊಂದಿಗೆ ಮೊದಲ ಸ್ಥಾನ ಉಳಿಸಿಕೊಂಡಿದೆ. ಚೀನಾ 73.7 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದೆ. 2024ರಲ್ಲಿಗಿಂತ 1 ಅಂಕ ಹೆಚ್ಚು ಹೊಂದಿದೆ. ಭಾರತ ಕಳೆದ ವರ್ಷದಕ್ಕಿಂತ 0.9 ಹೆಚ್ಚು ಗಳಿಸಿ 40 ಅಂಕದ ಮಟ್ಟ ಮುಟ್ಟಿದೆ. ಮೂರನೇ ಸ್ಥಾನದಲ್ಲಿರುವುದರ ಜೊತೆಗೆ ಏಷ್ಯಾದ ಪ್ರಮುಖ ಶಕ್ತಿ ಎನ್ನುವ ಹಂತಕ್ಕೆ ಹೋಗಿದೆ.
ಲೋವಿ ಇನ್ಸ್ಟಿಟ್ಯೂಟ್ ಪ್ರಕಾರ ಈ ಇಂಡೆಕ್ಸ್ನಲ್ಲಿ 40-70 ಅಂಕ ಹೊಂದಿರುವ ದೇಶಗಳು ಮೇಜರ್ ಪವರ್ ಅಥವಾ ಪ್ರಮುಖ ಶಕ್ತಿಗಳೆನಿಸುತ್ತವೆ. 70ಕ್ಕಿಂತ ಹೆಚ್ಚು ಅಂಕ ಇದ್ದರೆ ಸೂಪರ್ ಪವರ್ ಎನಿಸುತ್ತವೆ. 10ಕ್ಕಿಂತ ಹೆಚ್ಚು ಅಂಕ ಇದ್ದರೆ ಮಿಡಲ್ ಪವರ್; 10ಕ್ಕಿಂತ ಕಡಿಮೆ ಇದ್ದರೆ ಮೈನರ್ ಪವರ್ ದೇಶಗಳೆಂದು ಪರಿಗಣಿಸಲಾಗುತ್ತದೆ.
2024ರವರೆಗೂ ಭಾರತವು ಏಷ್ಯಾದಲ್ಲಿ ಮಧ್ಯಮ ಶಕ್ತಿ ಎನಿಸಿತ್ತು. ಈಗ ಅದು ಪ್ರಮುಖ ಶಕ್ತಿಯಾಗಿ ಬೆಳೆದಿದೆ. ಗಮನಿಸಬೇಕಾದ ಸಂಗತಿ ಎಂದರೆ, ಈ ಪಟ್ಟಿಯಲ್ಲಿರುವುದು ಏಷ್ಯಾ ಪ್ರದೇಶದ ಮೇಲೆ ವಿವಿಧ ರೀತಿಯಲ್ಲಿ ಪ್ರಭಾವ ಬೀರುವ ಶಕ್ತಿ ಯಾವ ದೇಶಗಳಿಗೆ ಇದೆ ಎಂಬುದನ್ನು ತೋರಿಸುತ್ತದೆ. ಅಮೆರಿಕವು ಪಾಶ್ಚಿಮಾತ್ಯ ದೇಶವಾದರೂ ಏಷ್ಯಾದಲ್ಲಿ ದಟ್ಟವಾದ ಪ್ರಭಾವ ಹೊಂದಿದೆ. ಅದು ಹೇಳುವ ಮಾತುಗಳನ್ನು ಕೇಳುವ ದೇಶಗಳು ಹಲವಿವೆ.
ಇದನ್ನೂ ಓದಿ: ಪರಮಾಣು ಶಕ್ತಿ ಉತ್ಪಾದನೆಗೆ ಖಾಸಗಿಯವರಿಗೂ ಅವಕಾಶ ನೀಡಲಿದೆ ಸರ್ಕಾರ; ಮುಂಬರುವ ಅಧಿವೇಶನದಲ್ಲಿ ಮಸೂದೆ
ಲೋವಿ ಇನ್ಸ್ಟಿಟ್ಯೂಟ್ನ ಈ ಪವರ್ ಇಂಡೆಕ್ಸ್ನಲ್ಲಿ ಭಾರತದ ಬಗ್ಗೆ ಮತ್ತೊಂದು ಕುತೂಹಲ ಸಂಗತಿ ತಿಳಿಸಿದೆ. ಭಾರತವು ಆರ್ಥಿಕ ಮತ್ತು ಮಿಲಿಟರಿ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡರೂ, ಅದಕ್ಕಿರುವ ಸಂಪನ್ಮೂಲ ಮತ್ತು ಶಕ್ತಿಗೆ ಹೋಲಿಸಿದರೆ ಪ್ರಾದೇಶಿಕವಾಗಿ ಹೆಚ್ಚು ಪ್ರಭಾವಶಾಲಿ ಎನಿಸಿಲ್ಲ. ಅದರ ಡಿಫೆನ್ಸ್ ನೆಟ್ವರ್ಕ್ ದುರ್ಬಲವಾಗಿದೆ. ಆದರೆ, ಆರ್ಥಿಕ ಸಂಬಂಧ, ಆರ್ಥಿಕ ಸಾಮರ್ಥ್ಯ, ಮಿಲಿಟರಿ ಸಾಮರ್ಥ್ಯ ಮತ್ತು ಸಾಂಸ್ಕೃತಿಕ ಪ್ರಭಾವ ಗಣನೀಯವಾಗಿದೆ ಎಂದು ಈ ವರದಿಯು ಹೇಳುತ್ತಿದೆ.
ಏಷ್ಯಾ ಪವರ್ ಇಂಡೆಕ್ಸ್
ಇದನ್ನೂ ಓದಿ: ವಿರಳ ಭೂ ಖನಿಜ ಹಿಡಿದು ಅಮೆರಿಕವನ್ನೂ ಬಗ್ಗಿಸುತ್ತಿರುವ ಚೀನಾ; 7,280 ಕೋಟಿ ರೂನ ಭಾರತದ ಪ್ಲಾನ್ ಹಿಂದಿದೆ ದೂರದೃಷ್ಟಿ
ಇಲ್ಲಿರುವ ಪಟ್ಟಿಯಲ್ಲಿ ಪಶ್ಚಿಮ ಏಷ್ಯಾ ಮತ್ತು ಸೆಂಟ್ರಲ್ ಏಷ್ಯನ್ ದೇಶಗಳನ್ನು ಒಳಗೊಳ್ಳಲಾಗಿಲ್ಲ ಎಂಬುದು ಗಮನಿಸಬೇಕಾದ ಮತ್ತೊಂದು ವಿಚಾರ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ