ಮತ್ತೆ ಜಾಸ್ತಿ ಆಗುತ್ತಿರುವ ಕೊರೊನಾ ಬಿಕ್ಕಟ್ಟಿನಿಂದಾಗಿ ಭಾರತದಲ್ಲಿ ಆರಂಭಿಕ ಹಂತದಲ್ಲಿದ್ದ ಚೇತರಿಕೆ ಪ್ರಕ್ರಿಯೆ ಮೇಲೆ ಪ್ರತಿಕೂಲ ಪರಿಣಾಮ ಆಗಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬುಧವಾರ ಹೇಳಿದ್ದಾರೆ. ಸರ್ಕಾರದಿಂದ ಸಾರ್ವಜನಿಕ ಆರೋಗ್ಯ ಕ್ರಮಗಳನ್ನು ಉತ್ತೇಜಿಸಿ, ಸೋಂಕಿತ ವ್ಯಕ್ತಿಗಳಿಗೆ ಸಮಯಕ್ಕೆ ಸೂಕ್ತ ಚಿಕಿತ್ಸೆ ದೊರಕಿಸಲಾಗುತ್ತಿದೆ. ಸಮಗ್ರ ಆರ್ಥಿಕ ನಿರ್ವಹಣೆ ಮತ್ತು ಪ್ರಬಲವಾದ ಸಮಗ್ರ ಮೂಲಾಂಶಗಳ ಮೂಲಕ ಈಗಿನ ಸಮಸ್ಯೆಗಳನ್ನು ದೇಶ ದಾಟಲಿದೆ ಎಂದು ಅವರು ಹೇಳಿದ್ದಾರೆ.
ಕೊರೊನಾ ಎರಡನೇ ಅಲೆಯ ಹಿಡಿತದಲ್ಲಿ ಈಗ ದೇಶ ಸಿಲುಕಿಕೊಂಡಿದೆ. ಇದರಿಂದ ತುಂಬ ದೊಡ್ಡ ಸಂಖ್ಯೆಯಲ್ಲಿ ಜನರು ಕಷ್ಟ ಪಡುವಂತಾಗಿದೆ. ಹೆಲ್ತ್ಕೇರ್ ವ್ಯವಸ್ಥೆಯ ಮೇಲೆ ಭಾರೀ ಒತ್ತಡ ಬಿದ್ದಿದೆ ಎಂದು ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ (ಎಡಿಬಿ) 54ನೇ ರಾಷ್ಟ್ರೀಯ ಸಭೆಯಲ್ಲಿ ತಿಳಿಸಿದ್ದಾರೆ. “ತೀರಾ ಅಗತ್ಯ ಇರುವ ಸಂದರ್ಭದಲ್ಲಿ ಬೆಂಬಲ ನೀಡಿದ್ದಕ್ಕಾಗಿ ಅಂತರರಾಷ್ಟ್ರೀಯ ಸಮುದಾಯಕ್ಕೆ ಅಭಾರಿಗಳಾಗಿದ್ದೇವೆ. ದೇಶದಲ್ಲಿ ಲಸಿಕೆ ಉತ್ಪಾದನೆ ಸಾಮರ್ಥ್ಯವನ್ನು ಹೆಚ್ಚು ಮಾಡಲಾಗಿದೆ ಮತ್ತು ಇನ್ನೂ ಹೆಚ್ಚು ಮಂದಿ ವಾಣಿಜ್ಯ ಪೂರೈಕೆಗೆ ಪ್ರವೇಶಿಸುವುದರಲ್ಲಿದ್ದಾರೆ. ತುಂಬ ಪ್ರಮುಖವಾದ ಕಚ್ಚಾ ವಸ್ತುಗಳು ದೊರೆಯುತ್ತವೆ ಎಂಬ ವಿಶ್ವಾಸ ನಮಗಿದೆ. ನಮ್ಮ ಅಗತ್ಯಗಳನ್ನು ಪೂರೈಕೆ ಮಾಡಿಕೊಳ್ಳುವುದಕ್ಕಷ್ಟೇ ಅಲ್ಲ, ವಿಶ್ವಕ್ಕೆ ಅಗತ್ಯ ಇರುವ ಲಸಿಕೆಯನ್ನು ಒದಗಿಸುತ್ತೇವೆ,” ಎಂದು ವರ್ಚುವಲ್ ಸಭೆಯಲ್ಲಿ ನಿರ್ಮಲಾ ಹೇಳಿದ್ದಾರೆ.
ಈ ಹಿಂದೆಂದೂ ಕಂಡರಿಯದಂಥ ಜಾಗತಿಕ ಬಿಕ್ಕಟ್ಟನ್ನು ವಿಶ್ವ ಆರ್ಥಿಕತೆಯು ಕಳೆದ ವರ್ಷ ಎದುರಿಸಿದೆ. 2030ರ ಹೊತ್ತಿಗೆ ಸುಸ್ಥಿರ ಅಭಿವೃದ್ಧಿ ಸಾಧಿಸುವುದಕ್ಕೆ ಅಭಿವೃದ್ಧಿಶೀಲ ರಾಷ್ಟ್ರಗಳು ಹಾಕಿಕೊಂಡಿದ್ದ ಗುರಿಗೆ ತುಂಬ ಗಂಭೀರವಾದ ಬೆಳವಣಿಗೆ ಹಿನ್ನಡೆ ಆಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. “ಬಡತನವು ವರ್ಷದಿಂದ ವರ್ಷಕ್ಕೆ ಕಡಿಮೆ ಆಗುತ್ತಿತ್ತು. ಆದರೆ ಅಂದಾಜಿನ ಪ್ರಕಾರ 2020ರಲ್ಲಿ 7.8 ಕೋಟಿ ಜನರು ಮತ್ತೆ ತೀವ್ರತರದ ಬಡತನ ಮತ್ತು ಅಸಮಾನತೆಗೆ ದೂಡಲ್ಪಟ್ಟಿದ್ದಾರೆ,” ಎಂದು ಅವರು ಹೇಳಿದ್ದಾರೆ.
Pew ಸಂಶೋಧನಾ ವರದಿ ಮಾರ್ಚ್ನಲ್ಲಿ ಬಿಡುಗಡೆ ಆಗಿದೆ. ಅದರ ಪ್ರಕಾರ, ಭಾರತದಲ್ಲಿ ಮಧ್ಯಮ ವರ್ಗದವರ ಸಂಖ್ಯೆ 3.2 ಕೊಟಿ ಕಡಿಮೆ ಆಗಿದೆ. 7.5 ಕೋಟಿ ಮಂದಿ ಬಡತನ ರೇಖೆಗಿಂತ ಕೆಳಗೆ ಹೋಗಿದ್ದಾರೆ. ಇದು 2020ರ ಲೆಕ್ಕಾಚಾರ. ತುಂಬ ಗಂಭೀರವಾದ ಆರ್ಥಿಕ ಕುಸಿತವು ಏಷ್ಯಾದ ಮೂರನೇ ಅತಿದೊಡ್ಡ ಆರ್ಥಿಕತೆಯನ್ನು ಅಮರಿಕೊಂಡಿದೆ. ವಿಶ್ವ ಬ್ಯಾಂಕ್ ಈಗಾಗಲೇ ಎಚ್ಚರಿಸಿದ್ದು, ಕೊರೊನಾದಿಂದ ಹತ್ತಾರು ಲಕ್ಷ ಭಾರತೀಯರು ಬಡತನಕ್ಕೆ ತಳ್ಳಲ್ಪಡುತ್ತಿದ್ದಾರೆ. ಕಳೆದ ಇಪ್ಪತ್ತು ವರ್ಷಗಳಲ್ಲಿ ಗಳಿಸಿದ್ದೆಲ್ಲ ಕೊಚ್ಚಿಹೋಗುತ್ತಿದೆ ಎಂದು ಹೇಳಲಾಗಿದೆ.
ಮೊದಲ ಸಮಗ್ರ ಕೋವಿಡ್ ಸ್ಪಂದನಾ ಕಾರ್ಯಕ್ರಮದೊಂದಿಗೆ ಸಮಗ್ರ ಆರ್ಥಿಕ ಮತ್ತು ಆರೋಗ್ಯ ಪರಿಣಾಮ ಎದುರಿಸಲು ಸಹಕರಿಸಿದ್ದಕ್ಕೆ, ಲಸಿಕೆ ಬೆಂಬಲ ಪ್ಯಾಕೇಜ್ ನೀಡಿದ್ದಕ್ಕೆ, ಶೀಘ್ರ ಮತ್ತು ವೇಗವಾದ ಬೆಂಬಲವನ್ನು ನೀಡಿದ್ದಕ್ಕಾಗಿ ಎಡಿಬಿಗೆ ಧನ್ಯವಾದ ಹೇಳಿದ್ದಾರೆ ನಿರ್ಮಲಾ ಸೀತಾರಾಮನ್. ಆದರೆ ಬಂಡವಾಳ ಮೂಲ ಹಾಗೂ ಭಾರತಕ್ಕೆ ನೀಡುವ ಸಾಲವನ್ನು ಹೆಚ್ಚಿಸುವಂತೆ ಸಚಿವೆ ಕೇಳಿದ್ದಾರೆ. “ಭಾರತಕ್ಕೆ ಒಂದು ವರ್ಷಕ್ಕೆ ಸವರನ್ ಕಾರ್ಯಾಚರಣೆಯಿಂದ 400 ಕೋಟಿ ಅಮೆರಿಕನ್ ಡಾಲರ್ ಪಡೆಯುವ ಮತ್ತು ಖಾಸಗಿ ಹಣಕಾಸು ಮೂಲದಿಂದ 150 ಕೋಟಿ ಅಮೆರಿಕನ್ ಡಾಲರ್ ತೆಗೆದುಕೊಳ್ಳುವ ಸಾಮರ್ಥ್ಯ ಹೊಂದಿದೆ. ಇದರ ಹಿನ್ನೆಲೆಯಲ್ಲಿ ನೋಡಿದರೆ ಕಳೆದ 5 ವರ್ಷದಲ್ಲಿ ಸರಾಸರಿ ಕೋವಿಡ್ 19 ಪ್ಯಾಂಡಮಿಕ್ ರೆಸ್ಪಾನ್ಸ್ ಆಪ್ಷನ್ ಬಿಟ್ಟು, ಭಾರತಕ್ಕೆ 70 ಕೋಟಿ ಅಮೆರಿಕನ್ ಡಾಲರ್ಗಿಂತ ಕಡಿಮೆ ಬಂದಿದೆ. ಮತ್ತು ನಿವ್ವಳ ನಾನ್- ಸವರನ್ ಸಾಲವು ನೆಗೆಟಿವ್ ಇದೆ,” ಎಂದು ಅವರು ಹೇಳಿದ್ದಾರೆ. ಎಡಿಬಿಯಿಂದ ಖಾಸಗಿ ವಲಯ ಫೈನಾನ್ಸಿಂಗ್ ಹೆಚ್ಚಿಸಬೇಕು ಎಂದು ಕೂಡ ನಿರ್ಮಲಾ ಕೇಳಿದ್ದಾರೆ.
ಇದನ್ನೂ ಓದಿ: ದೇಶಾದ್ಯಂತ ಮತ್ತೆ ಲಾಕ್ಡೌನ್ ಇಲ್ಲ..ಸಾರ್ವಜನಿಕ ಸಾರಿಗೆಯನ್ನೂ ಸ್ಥಗಿತಗೊಳಿಸುವುದಿಲ್ಲ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
(Union finance minister Nirmala Sitharaman explained India economic situation in Asian Development Bank 54th annual meeting)
Published On - 11:24 am, Thu, 6 May 21