Fiscal Deficit: 2021ರ ಏಪ್ರಿಲ್​ನಿಂದ 2022ರ ಮಧ್ಯೆ ಕೇಂದ್ರದ ವಿತ್ತೀಯ ಕೊರತೆ 9.38 ಲಕ್ಷ ಕೋಟಿ ರೂಪಾಯಿ

| Updated By: Srinivas Mata

Updated on: Feb 28, 2022 | 7:06 PM

2021ರ ಏಪ್ರಿಲ್​ನಿಂದ 2022ರ ಜನವರಿ ಮಧ್ಯೆ ಭಾರತದ ವಿತ್ತೀಯ ಕೊರತೆ 9.38 ಲಕ್ಷ ಕೋಟಿ ರೂಪಾಯಿ ಆಗಿದ್ದು, ಒಟ್ಟಾರೆ ಬಜೆಟ್ ಅಂದಾಜಿನ ಶೇ 58.9ರಷ್ಟಾಗುತ್ತದೆ.

Fiscal Deficit: 2021ರ ಏಪ್ರಿಲ್​ನಿಂದ 2022ರ ಮಧ್ಯೆ ಕೇಂದ್ರದ ವಿತ್ತೀಯ ಕೊರತೆ 9.38 ಲಕ್ಷ ಕೋಟಿ ರೂಪಾಯಿ
ಸಾಂದರ್ಭಿಕ ಚಿತ್ರ
Follow us on

ಭಾರತ ಸರ್ಕಾರದ ವಿತ್ತೀಯ ಕೊರತೆ (Fiscal Deficit) 2021ರ ಏಪ್ರಿಲ್​ನಿಂದ 2022ರ ಜನವರಿ ಮಧ್ಯ 9.38 ಲಕ್ಷ ಕೋಟಿ ರೂಪಾಯಿಗೆ ಹೆಚ್ಚಳವಾಗಿದೆ. ಅಥವಾ ಕೇಂದ್ರ ಸರ್ಕಾರದ ಒಟ್ಟು ಬಜೆಟ್ ಗುರಿಯಲ್ಲಿನ ಶೇ 58.9ರಷ್ಟು ಆಗಿದೆ, ಎಂದು ಸೋಮವಾರ- ಫೆಬ್ರವರಿ 28ನೇ ತಾರೀಕಿನಂದು ಕಂಟ್ರೋಲರ್ ಜನರಲ್ ಆಫ್ ಅಕೌಂಟ್ಸ್ ಬಿಡುಗಡೆ ಮಾಡಿದ ದತ್ತಾಂಶ ತೋರಿಸಿದೆ. 2021ರ ಏಪ್ರಿಲ್​ನಿಂದ ಡಿಸೆಂಬರ್​ ಮಧ್ಯೆ ವಿತ್ತೀಯ ಕೊರತೆಯು ಇಡೀ ವರ್ಷದ ಗುರಿಯ ಶೇ 50.4ರಷ್ಟಿತ್ತು. 2022ರ ಬಜೆಟ್​ ನಂತರ ಸರ್ಕಾರದ ಈ ಹೊಸ ಸಂಖ್ಯೆಯು ಬಂದಿದೆ. ಕೇಂದ್ರ ಸರ್ಕಾರವು ಜಿಡಿಪಿಯ ಶೇ 6.8ರ ವಿತ್ತೀಯ ಕೊರತೆ ಗುರಿಯನ್ನು ದಾಟುತ್ತದೆ, ಅದು 10 ಬೇಸಿಸ್ ಪಾಯಿಂಟ್ಸ್​ನಿಂದ. ಆದರೆ ಶೇ 6.9ರಲ್ಲಿ ಕೂಡ ಪ್ರಸಕ್ತ ಹಣಕಾಸು ವರ್ಷದ ವಿತ್ತೀಯ ಕೊರತೆಯು ಕಳೆದ ವರ್ಷಕ್ಕಿಂತ ಬಹಳ ದೊಡ್ಡ ಮಟ್ಟದಲ್ಲಿ ಸುಧಾರಣೆ ಕಂಡಿದೆ.

ಸರ್ಕಾರವು ಬಜೆಟ್​ ವೇಳೆ ಮುಂದಿನ ಹಣಕಾಸು ವರ್ಷದಲ್ಲಿ ಮಾಡಬೇಕಾದ ವೆಚ್ಚದ ಅಂದಾಜು ಮಾಡುತ್ತದೆ. ಅದೇ ರೀತಿ ಆದಾಯದ ಅಂದಾಜನ್ನು ಸಹ ಮಾಡುತ್ತದೆ. ಆ ನಂತರ ಸರ್ಕಾರಕ್ಕೆ ಬರಬೇಕಾದ ವಿವಿಧ ಮೂಲದ ಅಂದಾಜು ಆದಾಯಕ್ಕಿಂತ ಅಂದಾಜು ವೆಚ್ಚ ಹೆಚ್ಚಾಗಿದ್ದಲ್ಲಿ ಅದನ್ನು ವಿತ್ತೀಯ ಕೊರತೆ ಎನ್ನಲಾಗುತ್ತದೆ.

ಹಣಕಾಸು ವರ್ಷ 2021ರಲ್ಲಿ ವಿತ್ತೀಯ ಕೊರತೆ ಶೇ 9.2ರಷ್ಟಾಗಿತ್ತು. ಕೊರೊನಾವನ್ನು ಎದುರಿಸಲು ಸರ್ಕಾರದಿಂದ ವೆಚ್ಚ ಹೆಚ್ಚಳ ಮಾಡಿದ್ದು, ಕೊರೊನಾ ಲಾಕೌಡೌನ್​ನಿಂದಾಗಿ ಸ್ತಬ್ಧವಾದ ಆರ್ಥಿಕ ಚಟುವಟಿಕೆಯಿಂದ ಹೀಗಾಯಿತು. ಸರ್ಕಾರದ ಹಣಕಾಸು ಸ್ಥಿತಿ ಈ ವರ್ಷ ಬಹಳಷ್ಟು ಸುಧಾರಿಸಿದೆ. ಹಣಕಾಸು ವರ್ಷ 2021ರ ಮೊದಲ ಹತ್ತು ತಿಂಗಳು ವಿತ್ತೀಯ ಕೊರತೆ ಪೂರ್ತಿ ವರ್ಷಕ್ಕೆ ಪರಿಷ್ಕೃತ ಗುರಿಯ ಶೇ 66.8ರಷ್ಟಿತ್ತು. 2021ರ ಬಜೆಟ್ ಹಣಕಾಸು ವರ್ಷಕ್ಕೆ ವಿತ್ತೀಯ ಕೊರತೆ ಮೊತ್ತವನ್ನು 18.49 ಲಕ್ಷ ಕೋಟಿಗೆ ಪರಿಷ್ಕೃತಗೊಳಿಸಲಾಯಿತು. ಅದಕ್ಕೂ ಮುನ್ನ ಬಜೆಟ್ ಗುರಿ 7.96 ಲಕ್ಷ ಕೋಟಿ ಇತ್ತು. ಆದರೆ ಸರ್ಕಾರದ ವೆಚ್ಚ ಮತ್ತು ಆದಾಯದ ಮೇಲೆ ಕೊರೊನಾದ ಪ್ರಭಾವವನ್ನು ಗಮನದಲ್ಲಿ ಇಟ್ಟುಕೊಂಡು, ಪರಿಷ್ಕರಣೆ ಮಾಡಲಾಯಿತು.

2022ರ ಜನವರಿಯಲ್ಲಿ ಕೇಂದ್ರ ಸರ್ಕಾರವು 1.79 ಲಕ್ಷ ಕೋಟಿ ರೂಪಾಯಿಗಳ ವಿತ್ತೀಯ ಕೊರತೆಯನ್ನು ದಾಖಲಿಸಿದ್ದು, ಇದು ಕಳೆದ ವರ್ಷ ಇದೇ ಅವಧಿಯಲ್ಲಿ ದಾಖಲಿಸಿದ್ದಕ್ಕಿಂತ ಎರಡು ಪಟ್ಟು ಹೆಚ್ಚು. 2022ರ ಜನವರಿಯಲ್ಲಿ ವಿತ್ತೀಯ ಕೊರತೆಯ ಹೆಚ್ಚಳವು ಆಗಿರುವುದು ಶೇ 32.1ರಷ್ಟು ರಸೀದಿಗಳ ಕುಸಿತ ಮತ್ತು ಶೇ 21.6ರಷ್ಟು ವೆಚ್ಚದ ಏರಿಕೆಯಿಂದಾಗಿ ಆಗಿದೆ. ಆದರೆ ಒಟ್ಟು ವೆಚ್ಚವು ಆರೋಗ್ಯಕರ ಹೆಚ್ಚಳವನ್ನು ಕಂಡರೂ ಬಂಡವಾಳ ವೆಚ್ಚದಲ್ಲಿ ಹಿಂದುಳಿದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 5.8ರಷ್ಟು ಕುಗ್ಗಿ, 50,042 ಕೋಟಿ ರೂಪಾಯಿ ಆಗಿದೆ,

ಒಟ್ಟಾರೆಯಾಗಿ, 2021ರ ಏಪ್ರಿಲ್​ನಿಂದ 2022ರ ಜನವರಿ ಮಧ್ಯೆ ಕೇಂದ್ರದ ಬಂಡವಾಳ ವೆಚ್ಚವು 4.42 ಲಕ್ಷ ಕೋಟಿ ರೂಪಾಯಿ. ಇದು ವರ್ಷದಿಂದ ವರ್ಷಕ್ಕೆ ಶೇ 22ರಷ್ಟು ಹೆಚ್ಚಿದ್ದರೂ ಇದು ಪೂರ್ಣ ವರ್ಷದ ಗುರಿಯ ಶೇ 73.4ರಷ್ಟು ಮಾತ್ರ. ತನ್ನ ಗುರಿಯನ್ನು ಪೂರೈಸಲು ಕೇಂದ್ರ ಸರ್ಕಾರವು 2022ರ ಫೆಬ್ರವರಿ-ಮಾರ್ಚ್​ನಲ್ಲಿ ಬಂಡವಾಳ ವೆಚ್ಚ 1.60 ಲಕ್ಷ ಕೋಟಿ ರೂಪಾಯಿಗಳನ್ನು ಖರ್ಚು ಮಾಡಬೇಕಾಗುತ್ತದೆ. ಬೆಳವಣಿಗೆಗೆ ಉತ್ತೇಜನ ನೀಡಲು ಮತ್ತು ಕೊವಿಡ್-19 ಸಾಂಕ್ರಾಮಿಕದಿಂದ ಉಂಟಾದ ನಿಧಾನಗತಿಯಿಂದ ಆರ್ಥಿಕತೆಯನ್ನು ಮುಂದಕ್ಕೆ ಒಯ್ಯಲು ಕೇಂದ್ರವು ಬಂಡವಾಳ ವೆಚ್ಚವನ್ನು ಹೆಚ್ಚಿಸಲು ನೋಡಿದೆ. ಗುರಿಯನ್ನು ತಲುಪುವುದು ಮುಖ್ಯವಾಗಿದೆ. 2022ರ ಬಜೆಟ್​ನಲ್ಲಿ ಹಣಕಾಸು ವರ್ಷ 2023ಕ್ಕಾಗಿ ಬಂಡವಾಳ ವೆಚ್ಚ 7.50 ಲಕ್ಷ ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದೆ.

ಅಷ್ಟೇ ಅಲ್ಲ, ಒಟ್ಟಾರೆ ವೆಚ್ಚದ ಗುರಿ ಕೂಡ ಆತಂಕ ಹುಟ್ಟಿಸುವಂತಿದೆ. 2021ರ ಏಪ್ರಿಲ್ ಹಾಗೂ 2022ರ ಜನವರಿ ಮಧ್ಯೆ ಪರಿಷ್ಕೃತ ಗುರಿ 37.70 ಲಕ್ಷ ಕೋಟಿ ಎಂದುಕೊಂಡಿತ್ತು. ಅದಕ್ಕೆ ಪ್ರತಿಯಾಗಿ ಕೇಂದ್ರವು 28.09 ಲಕ್ಷ ಕೋಟಿ ರೂಪಾಯಿ ಖರ್ಚು ಮಾಡಿದೆ. ಕೇಂದ್ರ ಸರ್ಕಾರವು ಗುರಿಯನ್ನು ತಲುಪುವುದಕ್ಕೆ 2022ರ ಫೆಬ್ರವರಿ ಮತ್ತು ಮಾರ್ಚ್ ಎರಡರಲ್ಲೂ 4.80 ಲಕ್ಷ ಕೋಟಿ ರೂಪಾಯಿ ಖರ್ಚು ಮಾಡಬೇಕಾಗುತ್ತದೆ. ಈ ವರ್ಷ ಇಲ್ಲಿಯವರೆಗೆ ಸರ್ಕಾರವು ಒಂದು ತಿಂಗಳಲ್ಲಿ ಮಾಡಿರುವ ಅತಿ ಹೆಚ್ಚಿನ ವೆಚ್ಚ ಅಂದರೆ 2021ರ ಡಿಸೆಂಬರ್ ತಿಂಗಳಲ್ಲಿ; 4.46 ಲಕ್ಷ ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ.

ಆದಾಯದ ಬಗ್ಗೆ ಹೇಳುವುದಾದರೆ, ಒಟ್ಟು ತೆರಿಗೆ ಆದಾಯವು 2022ರ ಜನವರಿಯಲ್ಲಿ ಶೇ 4.4ರಷ್ಟು ಕುಸಿದು, 1.69 ಲಕ್ಷ ಕೋಟಿ ರೂಪಾಯಿ ಆಗಿದೆ. ಅಬಕಾರಿ ತೆರಿಗೆ ಸಂಗ್ರಹ ಶೇಕಡಾ 24.3 ರಷ್ಟು ಕುಸಿದು, 29,884 ಕೋಟಿ ರೂಪಾಯಿಗೆ ಇಳಿದಿದೆ. ಪ್ರಧಾನಿ ನರೇಂದ್ರ ಮೋದಿ ಅವರು 2021ರ ನವೆಂಬರ್​ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸುವುದಾಗಿ ಘೋಷಿಸಿದ್ದರು.

ಇದನ್ನೂ ಓದಿ: 6 ಲಕ್ಷ ಕೋಟಿ ರೂ. ಮೌಲ್ಯದ ಆಸ್ತಿ ಮಾರಾಟಕ್ಕೆ ನಿರ್ಧಾರ; ವಿತ್ತೀಯ ಕೊರತೆ ನೀಗಿಸಲು ಕೇಂದ್ರ ಚಿಂತನೆ