ಭಾರತೀಯ ಜೀವ ವಿಮಾ ನಿಗಮ (Life Insurance Corporation of India – LIC) ಘೋಷಿಸಿರುವ ಆರಂಭಿಕ ಸಾರ್ವಜನಿಕ ಕೊಡುಗೆಯ (Intial Public Offer – IPO) ಬಗ್ಗೆ ಭಾರತೀಯ ಕಮ್ಯುನಿಸ್ಟ್ ಪಕ್ಷ (CPM) ಸೇರಿದಂತೆ ಹಲವು ರಾಜಕೀಯ ಪಕ್ಷಗಳು ಆರಂಭದಿಂದಲೂ ವಿರೋಧ ವ್ಯಕ್ತಪಡಿಸುತ್ತಿವೆ. ಎಲ್ಐಸಿ ಖಾಸಗೀಕರಣಕ್ಕೆ ಇದು ಮೊದಲ ಮೆಟ್ಟಿಲು, ಎಲ್ಐಸಿ ಒಂದು ಕಾರ್ಪೊರೇಟ್ ಕಂಪನಿಯಾಗಿ ಷೇರುಪೇಟೆಗೆ ಬಂದರೆ ಪಾಲಿಸಿದಾರರಿಗೆ ನಷ್ಟವಾಗುತ್ತದೆ ಎನ್ನುವುದು ಸಿಪಿಎಂ ವಾದಸರಣಿಯ ಹೂರಣ. ಭಾರತದ ಅತಿದೊಡ್ಡ ಸಾರ್ವಜನಿಕ ಉದ್ಯಮ ಎನಿಸಿರುವ ಎಲ್ಐಸಿ ಕಂಪನಿಯ ಐಪಿಒದಿಂದ ಏನೆಲ್ಲಾ ತೊಂದರೆಯಾಗಲಿದೆ ಎಂಬ ಬಗ್ಗೆ ಸಿಪಿಎಂ ನಾಯಕ ಮತ್ತು ಕೇರಳದ ಮಾಜಿ ಹಣಕಾಸು ಸಚಿವ ಟಿ.ಎಂ.ಥಾಮಸ್ ಐಸಾಕ್ ಮುಂದಿಡುವ ವಿಶ್ಲೇಷಣೆ ಹೀಗಿದೆ.
ಎಲ್ಐಸಿಯಿಂದ ಭಾರತ ಸರ್ಕಾರವು ತನ್ನ ಹೂಡಿಕೆ ಹಿಂಪಡೆಯಲು ಆರಂಭಿಸಿದರೆ ಇದೂ ಸಹ ಹತ್ತರಲ್ಲಿ ಹನ್ನೊಂದನೆಯದ್ದಾಗಿ ಲಾಭದ ಮೇಲೆ ಕಣ್ಣಿಡುವ ಸಂಸ್ಥೆಯೇ ಆಗಿಬಿಡುತ್ತದೆ. ಎಲ್ಐಸಿಯ ಸಾಮಾಜಿಕ ಕಾಳಜಿ ಮತ್ತು ಜನಸಾಮಾನ್ಯರಿಗೆ ಅತ್ಯಂತ ಸುಲಭವಾಗಿ ಲಭ್ಯವಿರುವ ಸುರಕ್ಷಿತ ಹೂಡಿಕೆ ಆಯ್ಕೆಯೊಂದು ದುರ್ಬಲಗೊಳ್ಳುತ್ತದೆ. ಈವರೆಗೆ ಎಲ್ಐಸಿ ಗಳಿಸುತ್ತಿದ್ದ ಒಟ್ಟು ಲಾಭದಲ್ಲಿ ಶೇ 90ರಿಂದ 95ರಷ್ಟನ್ನು ಪಾಲಿಸಿದಾರರಿಗೆ ಬೋನಸ್ ರೂಪದಲ್ಲಿ ಹಂಚಿಕೆ ಮಾಡುತ್ತಿತ್ತು. ಆದರೆ ಷೇರುಪೇಟೆಯಲ್ಲಿ ಕಂಪನಿ ಲಿಸ್ಟ್ ಆದ ಮೇಲೆ ಹೂಡಿಕೆದಾರರು ಹೆಚ್ಚು ಲಾಭಕ್ಕೆ ಒತ್ತಾಯಿಸಬಹುದು. ಇದರಿಂದ ಎಲ್ಐಸಿ ಪಾಲಿಸಿದಾರರಿಗೆ ಹಂಚುವ ಲಾಭಾಂಶದ ಜೊತೆಗೆ ಷೇರುದಾರರಿಗೂ ಲಾಭಾಂಶ ನೀಡಬೇಕಾಗುತ್ತಿದೆ. ಹೀಗಾಗಿ ಪಾಲಿಸಿದಾರರಿಗೆ ಹಂಚುವ ಬೋನಸ್ ಪ್ರಮಾಣ ಕಡಿಮೆಯಾಗುವ ಮತ್ತು ಎಲ್ಐಸಿ ಪಾಲಿಸಿಗಳಿಗೆ ಬೇಡಿಕೆ ಕಡಿಮೆಯಾಗುವ ಅಪಾಯವಿದೆ.
ಕೇವಲ ಲಾಭಕೋರತನವೇ ಸರ್ವಸ್ವವೂ ಎನ್ನುವ ಮನೋಭಾವ ಮುನ್ನೆಲೆಗೆ ಬರುವುದರಿಂದ ಎಲ್ಐಸಿಗೆ ಈವರೆಗೆ ಇದ್ದ ಸಾಮಾಜಿಕ ಬದ್ಧತೆ ಕಡಿಮೆಯಾಗಬಹುದು. ದೇಶದ ಹಲವು ಮಹತ್ವದ ಮೂಲ ಸೌಕರ್ಯ ಯೋಜನೆಗೆ ಎಲ್ಐಸಿ ದೊಡ್ಡ ಪ್ರಮಾಣದಲ್ಲಿ ಹಣ ತೊಡಗಿಸಿತ್ತು.
ಐಪಿಒದಲ್ಲಿ ಪಾಲಿಸಿದಾರರಿಗೆ ಆದ್ಯತೆ ನೀಡುವ ವಿಚಾರ ಕೇವಲ ಕಣ್ಣೊರೆಸುವ ತಂತ್ರ ಅಷ್ಟೇ. ಪಾಲಿಸಿಗಳಿಗೆ ಘೋಷಿಸುವ ಬೋನಸ್ ಪ್ರಮಾಣ ಕಡಿಮೆಯಾಗಬಹುದು ಎಂಬ ಕಾರಣಕ್ಕೆ ಈ ಮೂಲಕ ಪಾಲಿಸಿದಾರರನ್ನು ಸಮಾಧಾನಪಡಿಸಲು ಎಲ್ಐಸಿ ಮುಂದಾಗಿದೆ. ಎಲ್ಐಸಿ ಪಾಲಿಸಿ ಖರೀದಿಸುವ ಬಹುತೇಕರು ಹಿಂದುಳಿದವರು ಮತ್ತು ಸಮಾಜದ ನಿಮ್ನವರ್ಗಗಳಿಗೆ ಸೇರಿದವರು. ಅವರಿಗೆ ಡಿಮ್ಯಾಟ್ ಖಾತೆ ತೆರೆಯುವುದಾಗಲಿ, ಷೇರು ಖರೀದಿಸುವುದಾಗಲಿ ಗೊತ್ತಿಲ್ಲ. ಎಲ್ಐಸಿ ಪಾಲಿಸಿ ಎನ್ನುವುದು ಅಂಥವರ ಪಾಲಿಗೆ ಕೇವಲ ಜೀವವಿಮೆ ಮಾತ್ರವೇ ಅಲ್ಲ, ಅದು ಸುರಕ್ಷಿತ ಹೂಡಿಕೆ ಆಯ್ಕೆಯೂ ಹೌದು. ಕಡಿಮೆ ಮೊತ್ತದ ಪಾಲಿಸಿಗಳೊಂದಿಗೆ ಪ್ರತಿಫಲದ ಖಾತ್ರಿಯನ್ನೂ ಎಲ್ಐಸಿ ನೀಡುವುದರಿಂದ ಅವರು ಎಲ್ಐಸಿ ಪಾಲಿಸಿಗೆ ಆದ್ಯತೆ ಕೊಡುತ್ತಾರೆ. ಆದರೆ ಷೇರುಗಳಲ್ಲಿ ಹೂಡಿಕೆ ಹಾಗಲ್ಲ. ಅಲ್ಲಿ ಮಾರುಕಟ್ಟೆ ಏರಿಳಿತದ ಅಪಾಯ ಯಾವಾಗಲೂ ಇದ್ದೇ ಇರುತ್ತದೆ.
ಎಲ್ಐಸಿಯನ್ನು ಖಾಸಗಿ ರಂಗಕ್ಕೆ ಮುಕ್ತಗೊಳಿಸುವ ಪ್ರಕ್ರಿಯೆ ಈಗಷ್ಟೇ ಆರಂಭವಾಗಿದೆ. ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರವು ಶೇ 51ರಷ್ಟು ಹೂಡಿಕೆಯನ್ನು ತನ್ನ ಬಳಿ ಇರಿಸಿಕೊಂಡೇ ತೀರುತ್ತದೆ ಎಂಬ ಖಾತ್ರಿಯನ್ನು ಯಾರೂ ಕೊಡಲು ಸಾಧ್ಯವಿಲ್ಲ. ಭಾರತದ ಹಣಕಾಸು ರಂಗವನ್ನು ವಿದೇಶಿ ಕಂಪನಿಗಳಿಗೆ ಮುಕ್ತಗೊಳಿಸಬೇಕೆಂಬ ಒತ್ತಡ ಈಗಾಗಲೇ ಕೇಂದ್ರ ಸರ್ಕಾರದ ಮೇಲೆ ಬೀಳುತ್ತಿದೆ. ಇದೀಗ ಪಾಲಿಸಿದಾರರಿಂದ ಸಂಗ್ರಹಿಸಿರುವ ಪ್ರೀಮಿಯಂ ಮೊತ್ತ ಕಣ್ಣಿಗೆ ಕುಕ್ಕುವಂತೆ ಕಾಣಿಸುತ್ತಿದೆ. ಕೇಂದ್ರ ಸರ್ಕಾರವು ಅದನ್ನು ವಿದೇಶಿ ಕಂಪನಿಗಳನ್ನು ಆಕರ್ಷಿಸಲು ಬಳಸಬಹುದು.
ಬ್ಯಾಂಕ್ ಬಡ್ಡಿದರಗಳು ಕಡಿಮೆ ಇರುವ ಹಿನ್ನೆಲೆಯಲ್ಲಿ ಷೇರುಗಳಲ್ಲಿ ಹೂಡಿಕೆ ಮಾಡಿ, ಡೆವಿಡೆಂಡ್ ಮೂಲಕ ಲಾಭಾಂಶ ಪಡೆದುಕೊಳ್ಳುವುದು ಲಾಭದಾಯಕ ಎಂದು ಹಲವರು ಹೇಳುತ್ತಿದ್ದಾರೆ. ಆದರೆ ಇದು ನಿಜವಾದ ಸಮಸ್ಯೆ ಎಂದು ನನಗೆ ಅನ್ನಿಸುತ್ತದೆ. ಎಐಜಿಯಂಥ ದೊಡ್ಡದೊಡ್ಡ ವಿಮಾ ಕಂಪನಿಗಳೇ ಕುಸಿಯುತ್ತಿರುವ ಈ ಕಾಲದಲ್ಲಿ ಹತ್ತಾರು ವರ್ಷಗಳಿಂದ ಸುಭದ್ರ ಮತ್ತು ವಿಶ್ವಾಸಾರ್ಹ ರೀತಿಯಲ್ಲಿ ವಹಿವಾಟು ನಡೆಸುತ್ತಿರುವ ಎಲ್ಐಸಿಯಿಂದ ಬಂಡವಾಳ ಹಿಂಪಡೆಯುವ ಸರ್ಕಾರದ ನಿರ್ಧಾರದಿಂದ ಪಾಲಿಸಿದಾರರು ಭವಿಷ್ಯದಲ್ಲಿ ತೊಂದರೆಗೆ ಸಿಲುಕಬಹುದು.
ಇದೀಗ ಎಲ್ಐಸಿಯ ಐಪಿಒ ಬಿಡುಗಡೆಯಾಗಿದೆ. ಇದರ ಸಾಧಕ-ಬಾಧಕಗಳ ಸ್ಪಷ್ಟಚಿತ್ರಣ ಜನರಿಗೆ ಸಿಕ್ಕಿಲ್ಲ. ಆದರೆ ಮುಂದಿನ ದಿನಗಳಲ್ಲಿ ಸರ್ಕಾರವು ಹೆಚ್ಚುವರಿಯಾಗಿ ಷೇರು ಮಾರಾಟಕ್ಕೆ ಮುಂದಾದಾಗ ಜನರು ಬೀದಿಗಿಳಿದು ಹೋರಾಟಕ್ಕೆ ಮುಂದಾಗಬಹುದು. ರೈತ ಹೋರಾಟಕ್ಕೆ ಮಣಿದ ರೀತಿಯಲ್ಲಿಯೇ ಕೇಂದ್ರ ಸರ್ಕಾರ ಎಲ್ಐಸಿಯ ಖಾಸಗೀಕರಣದಿಂದಲೂ ಹಿಂದಕ್ಕೆ ಸರಿಯಬೇಕಾಗಬಹುದು. ಎಲ್ಐಸಿ ಖಾಸಗೀಕರಣ ವಿರೋಧಿಸಿ ಕೇರಳದಲ್ಲಿ ಈಗಾಗಲೇ ಜನಾಂದೋಲನ ಆರಂಭವಾಗಿದೆ. ಎಲ್ಐಸಿ ಖಾಸಗೀಕರಣ ವಿರೋಧಿಸಿ ಮಾರ್ಚ್ 13ರಂದು (ಬಿಜೆಪಿ ಹೊರತುಪಡಿಸಿ) ಸರ್ವಪಕ್ಷಗಳ ಸಮಾವೇಶ ನಡೆಯಲಿದೆ. ನಂತರದ ದಿನಗಳಲ್ಲಿ ದೇಶಾದ್ಯಂತ ಸರಣಿ ಹೋರಾಟ, ಪ್ರತಿಭಟನಾ ಕಾರ್ಯಕ್ರಮಗಳು ನಡೆಯಲಿವೆ.
ಇದನ್ನೂ ಓದಿ: LIC IPO: ಎಲ್ಐಸಿ ಐಪಿಒಗೆ ಅಪ್ಲೈ ಮಾಡೋಕೆ ಆಸೆಯಿದೆಯೇ? ಡಿಮ್ಯಾಟ್ ಅಕೌಂಟ್ ಬೇಕೇಬೇಕು: ಎಲ್ಲಿ ಓಪನ್ ಮಾಡಿದ್ರೆ ಒಳ್ಳೇದು?
Published On - 4:11 pm, Mon, 28 February 22