LIC IPO: ಎಲ್​ಐಸಿ ಐಪಿಒ ಹೂಡಿಕೆಯಲ್ಲಿ ಲಾಭವೇ ಆಗುತ್ತೆ ಎಂಬ ಖಾತ್ರಿಯಿಲ್ಲ: ವೈಭವ್ ಅಗರ್​ವಾಲ್

Share Market: ಎಲ್​ಐಸಿ ಐಪಿಒ ಬಗ್ಗೆ ಪ್ರತಿದಿನ ಎಂಬಂತೆ ಒಂದಲ್ಲಾ ಒಂದು ಸುದ್ದಿ, ವಿಶ್ಲೇಷಣೆಗಳು ರಾಷ್ಟ್ರಮಟ್ಟದಲ್ಲಿ ಪ್ರಕಟವಾಗುತ್ತಿವೆ. ಈ ನಡುವೆ ಎಲ್​ಐಸಿ ಐಪಿಒ ಲಾಭದಾಯಕವಾಗಲಾರದು ಎಂಬ ವಿಶ್ಲೇಷಣೆಯೊಂದು ಎಲ್ಲರ ಗಮನ ಸೆಳೆಯುತ್ತಿದೆ.

LIC IPO: ಎಲ್​ಐಸಿ ಐಪಿಒ ಹೂಡಿಕೆಯಲ್ಲಿ ಲಾಭವೇ ಆಗುತ್ತೆ ಎಂಬ ಖಾತ್ರಿಯಿಲ್ಲ: ವೈಭವ್ ಅಗರ್​ವಾಲ್
ಸಾಂದರ್ಭಿಕ ಚಿತ್ರ
Follow us
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 28, 2022 | 7:00 AM

ಭಾರತೀಯ ಜೀವ ವಿಮಾ ನಿಗಮದ (Life Insurance Corporation of India – LIC) ಆರಂಭಿಕ ಸಾರ್ವಜನಿಕ  ಕೊಡುಗೆ (Intial Public Offering – IPO) ಘೋಷಣೆಯಾದ ನಂತರ ಎಲ್​ಐಸಿ ಪಾಲಿಸಿದಾರರು ಮತ್ತು ಹೂಡಿಕೆದಾರರಲ್ಲಿ ನಿರೀಕ್ಷೆಗಳು ಗರಿಗೆದರಿವೆ. ಪಾಲಿಸಿದಾರರಿಗೆ ಐಪಿಒದಲ್ಲಿ ಮೀಸಲು ಘೋಷಣೆಯಾಗಿರುವುದರಿಂದ ಲಕ್ಷಾಂತರ ಮಂದಿ ಹೊಸದಾಗಿ ಡಿಮ್ಯಾಟ್ (Demat) ಖಾತೆಗಳನ್ನು ತೆರೆದು ಐಪಿಒ ಘೋಷಣೆಗೆ ಕಾದುಕುಳಿತಿದ್ದಾರೆ. ಎಲ್​ಐಸಿ ಐಪಿಒ ಬಗ್ಗೆ ಪ್ರತಿದಿನ ಎಂಬಂತೆ ಒಂದಲ್ಲಾ ಒಂದು ಸುದ್ದಿ, ವಿಶ್ಲೇಷಣೆಗಳು ರಾಷ್ಟ್ರಮಟ್ಟದಲ್ಲಿ ಪ್ರಕಟವಾಗುತ್ತಿವೆ. ಈ ನಡುವೆ ಎಲ್​ಐಸಿ ಐಪಿಒ ಲಾಭದಾಯಕವಾಗಲಾರದು ಎಂಬ ವಿಶ್ಲೇಷಣೆಯೊಂದು ಎಲ್ಲರ ಗಮನ ಸೆಳೆಯುತ್ತಿದೆ. ‘ತೇಜಿ ಮಂಡಿ’ ಷೇರು ದಲ್ಲಾಳಿ ಕಂಪನಿಯ ಮುಖ್ಯ ಹೂಡಿಕೆ ಅಧಿಕಾರಿ ವೈಭವ್ ಅಗರ್​ವಾಲ್ ಅವರು ಪ್ರಸ್ತುತಪಡಿಸಿರುವ ವಿಶ್ಲೇಷಣೆಯ ಮುಖ್ಯಾಂಶಗಳು ಇಲ್ಲಿದೆ.

ಭಾರತದಲ್ಲಿ ಮಾರಾಟವಾಗುವ 4 ಪಾಲಿಸಿಗಳ ಪೈಕಿ 3 ಪಾಲಿಸಿಗಳು ಎಲ್​ಐಸಿಯದ್ದೇ ಆಗಿರುತ್ತವೆ. ಭಾರತದ ಅತಿದೊಡ್ಡ ಜೀವವಿಮಾ ಕಂಪನಿಯಾಗಿರುವ ಎಲ್​ಐಸಿ ವಿಶ್ವದ 5ನೇ ಅತಿದೊಡ್ಡ ಜೀವವಿಮಾ ಕಂಪನಿ ಎನಿಸಿದೆ. ಭಾರತದಲ್ಲಿ ಸಂಗ್ರಹವಾಗುತ್ತಿರುವ ಒಟ್ಟು ವಿಮಾ ಪ್ರೀಮಿಯಂ ಕಂತಿನಲ್ಲಿ ಶೇ 64ರಷ್ಟು ಪಾಲು ಎಲ್ಐಸಿಯದ್ದು. 13 ಲಕ್ಷಕ್ಕೂ ಹೆಚ್ಚು ಏಜೆಂಟರ ಕಠಿಣ ಪರಿಶ್ರಮದಿಂದ ಎಲ್​ಐಸಿ ಈ ಹಂತಕ್ಕೆ ಮುಟ್ಟಿದೆ. ಎಲ್ಲ ಜಾತಿ, ವರ್ಗದಲ್ಲಿಯೂ ಇರುವ ಏಜೆಂಟರ ಪಡೆ ಎಲ್​ಐಸಿಗೆ ಈ ನಿಚ್ಚಳ ಮೇಲುಗೈ ತಂದುಕೊಟ್ಟಿದೆ.

ಎಲ್​ಐಸಿ ಬಳಿ ಭಾರತೀಯರು ಹೂಡಿಕೆ ಮಾಡಿರುವ ₹ 39 ಲಕ್ಷ ಕೋಟಿಯಷ್ಟು ದೊಡ್ಡಮೊತ್ತದ ನಿಧಿಯಿದೆ. ಭಾರತದ ಎಲ್ಲ ಮ್ಯೂಚುವಲ್ ಫಂಡ್​ ಕಂಪನಿಗಳು ನಿರ್ವಹಿಸುತ್ತಿರುವ ನಿಧಿಯ ಒಟ್ಟು ಮೊತ್ತಕ್ಕಿಂತ ಈ ಮೊತ್ತ ಹೆಚ್ಚು. ಷೇರುಪೇಟೆಯ ಪ್ರಾತಿನಿಧಿಕ ಸಂವೇದಿ ಸೂಚ್ಯಂಕ ಎನಿಸಿರುವ ಎನ್​ಎಸ್​ಇಯಲ್ಲಿ (National Stock Exchage – NSE) ಲಿಸ್ಟ್ ಆಗಿರುವ ಕಂಪನಿಗಳಲ್ಲಿ ಹೂಡಿಕೆಯಾಗಿರುವ ಒಟ್ಟು ನಿಧಿಯ ಪೈಕಿ ಶೇ 4ರಷ್ಟನ್ನು ಎಲ್​ಐಸಿಯೊಂದೇ ಹೂಡಿಕೆ ಮಾಡಿದೆ. ಭಾರತದ ಅರ್ಥಿಕ ವ್ಯವಸ್ಥೆಯಲ್ಲಿ ಎಲ್​ಐಸಿ ಹೊಂದಿರುವ ಪ್ರಾಮುಖ್ಯತೆಗೆ ಇದು ದ್ಯೋತಕ. ಜೀವವಿಮಾ ಕ್ಷೇತ್ರದ ದೈತ್ಯ ಕಂಪನಿಯಾಗಿದ್ದರೂ ಎಲ್​ಐಸಿ ಮುಂದಿನ ದಿನಗಳಲ್ಲಿಯೂ ಇದೇ ಮುನ್ನಡೆ ಕಾಯ್ದುಕೊಳ್ಳಲಿದೆ ಎನ್ನಲು ಆಗುವುದಿಲ್ಲ. ಎಲ್​ಐಸಿಯ ಹೊಸ ವ್ಯವಹಾರಗಳ ಪ್ರಗತಿಯು (New Business Premiums – NBP) ಶೇ 14ರಷ್ಟಿದ್ದರೆ ಖಾಸಗಿ ವ್ಯವಹಾರಗಳ ಪ್ರಗತಿಯು ಶೇ 18 ಇದೆ.

ದೇಶದ ಪ್ರಮುಖ ಹಣಕಾಸು ಸಂಸ್ಥೆಗಳು ದಿವಾಳಿಯಾದಾಗ ಅಥವಾ ಹಣಕಾಸು ಮುಗ್ಗಟ್ಟಿಗೆ ಸಿಲುಕಿದಾಗ ಎಲ್​ಐಸಿಯನ್ನು ಸರ್ಕಾರ ಗುರಾಣಿಯಾಗಿ ಬಳಸಿತು. ಐಡಿಬಿಐ ಬ್ಯಾಂಕ್​ನಲ್ಲಿ ₹ 21,600 ಕೋಟಿ ಬಂಡವಾಳ ಹೂಡಿಕೆ ಮಾಡುವ ಒಟ್ಟು ಎಲ್​ಐಸಿ ತನ್ನ ಹೂಡಿಕೆಯ ಪಾಲನ್ನು ಶೇ 51ರಷ್ಟಕ್ಕೆ ಹೆಚ್ಚಿಸಿಕೊಂಡಿತು. ಆದರೆ ಅದೇ ಬ್ಯಾಂಕ್ ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿದಾಗ ₹ 4,743 ಕೋಟಿ ಹೆಚ್ಚುವರಿಯಾಗಿ ತೊಡಗಿಸಿ, ರಕ್ಷಿಸಿಕೊಂಡಿತು. ಇದಕ್ಕೆ ಬಳಕೆಯಾಗಿದ್ದು ಪಾಲಿಸಿದಾರರ ಹಣ. ಇಂಥ ಬೆಳವಣಿಗೆಗಳು ಮುಂದಿನ ದಿನಗಳಲ್ಲಿಯೂ ನಡೆಯಬಹುದು. ಭಾರತ ಸರ್ಕಾರ ಸೂಚಿಸಿದಾಗ ಪಾಲಿಸಿದಾರರ ಹಿತಾಸಕ್ತಿಗೆ ವ್ಯತಿರಿಕ್ತವಾಗಿಯೂ ಇಂಥ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಬಹುದು ಎಂದು ಎಲ್​ಐಸಿ ತನ್ನ ಐಪಿಒ ಪ್ರಸ್ತಾವದಲ್ಲಿ ನಮೂದಿಸಿದೆ.

ಜೀವವಿಮಾ ವ್ಯವಹಾರಗಳಲ್ಲಿ ಎಲ್​ಐಸಿಯ ಹೊಸ ವ್ಯವಹಾರಗಳು (Value of the New Business – VNB) ಇತರ ಪ್ರತಿಸ್ಪರ್ಧಿ ಕಂಪನಿಗಳಷ್ಟು ವೇಗವಾಗಿ ಬೆಳೆಯುತ್ತಿಲ್ಲ. 2020-21ರ ಆರ್ಥಿಕ ವರ್ಷದಲ್ಲಿ ಎಲ್​ಐಸಿಯ ಹೊಸ ವ್ಯವಹಾರಗಳು ಶೇ 9.9ರಷ್ಟು ಬೆಳೆದಿದ್ದರೆ, 2021-22ರಲ್ಲಿ ಶೇ 9.3ಕ್ಕೆ ಮುಟ್ಟಿದೆ. ಆದರೆ ಎಲ್​ಐಸಿಯ ಪ್ರತಿಸ್ಪರ್ಧಿಯಾಗಿರುವ ಖಾಸಗಿ ಕಂಪನಿಗಳ ವ್ಯವಹಾರ ಈ ಅವಧಿಯಲ್ಲಿ ಶೇ 20ರಿಂದ 25ರಷ್ಟು ಬೆಳೆದಿದೆ.

ಒಂದು ಸಲ ಕಂಪನಿಯು ಷೇರುಪೇಟೆಯಲ್ಲಿ ಲಿಸ್ಟ್ ಆದರೆ, ಅನಂತರ ಪಾಲಿಸಿದಾರರು ಮತ್ತು ಷೇರುದಾರರ ಹಿತ ಕಾಪಾಡುವ ಸವಾಲನ್ನು ಎಲ್​ಐಸಿ ನಿರ್ವಹಿಸಬೇಕಾಗುತ್ತದೆ. ಈ ಮೊದಲು ಲಾಭಗಳಿಕೆಯ ಶೇ 95ರಷ್ಟು ಮೊತ್ತವನ್ನು ಪಾಲಿಸಿದಾರರೊಂದಿಗೆ ಹಂಚಿಕೊಳ್ಳುತ್ತಿತ್ತು. ಮುಂದಿನ ದಿನಗಳಲ್ಲಿ ಈ ಪ್ರಕ್ರಿಯೆಯಲ್ಲಿ ತುಸು ಬದಲಾವಣೆಯಾಗುತ್ತದೆ. ಪಾಲಿಸಿದಾರರಿಗೆ ಹಂಚಿಕೆಯಾಗುತ್ತಿರುವ ಲಾಭಾಂಶದಲ್ಲಿ ಕೊಂಚ ಪಾಲನ್ನು ಮುಂದಿನ ದಿನಗಳಲ್ಲಿ ಷೇರುದಾರರಿಗೂ ಹಂಚಿಕೆ ಮಾಡಬೇಕಾಗುತ್ತದೆ. ಈ ಎರಡೂ ವರ್ಗದ ನಡುವೆ ಹೇಗೆ ಸಮತೋಲನ ಕಾಪಾಡುವುದು ಸವಾಲಾಗುತ್ತದೆ.

ಎಲ್​ಐಸಿ ಐಪಿಒಗೆ ನೀವು ಅಪ್ಲೈ ಮಾಡಬೇಕೆ? ದೇಶದೆಲ್ಲೆಡೆ ಎದ್ದು ಕಾಣುವಂತಿರುವ ಅಸ್ತಿತ್ವ ಮತ್ತು ತನ್ನ ಸುಪರ್ದಿಯಲ್ಲಿರುವ ದೊಡ್ಡಮಟ್ಟದ ನಿಧಿಯ ಹೊರತಾಗಿಯೂ ಎಲ್​ಐಸಿಗೆ ಜೀವವಿಮಾ ಕ್ಷೇತ್ರದಲ್ಲಿ ಸವಾಲು ಹೆಚ್ಚಾಗುತ್ತಿದೆ. ಈಗಾಗಲೇ ಷೇರುಪೇಟೆಯಲ್ಲಿ ವಹಿವಾಟಾಗುತ್ತಿರುವ ಹಲವು ಕಂಪನಿಗಳು ಎಲ್​ಐಸಿಗಿಂತಲೂ ಉತ್ತಮ ಸಾಧ್ಯತೆಗಳನ್ನು ಪ್ರದರ್ಶಿಸುತ್ತಿವೆ. ವಿಎನ್​ಬಿ, ಘೋಷಿತ ಮೌಲ್ಯಕ್ಕೆ ಸಿಗುವ ಪ್ರತಿಫಲ, ಬೆಳವಣಿಗೆ ಸಾಧ್ಯತೆಯಲ್ಲಿ ಎಲ್​ಐಸಿಗಿಂತಲೂ ಈ ಕಂಪನಿಗಳು ಮುನ್ನಡೆ ದಾಖಲಿಸಿವೆ. ಎಲ್​ಐಸಿ ಐಪಿಒಗೆ ಅಪ್ಲೈ ಮಾಡಬೇಕು ಎನ್ನುವ ಕಾರಣಕ್ಕೇ ಸಾಕಷ್ಟು ಜನರು ಡಿಮ್ಯಾಟ್ ಖಾತೆ ತೆರೆದಿದ್ದಾರೆ. ಭಾರತದ ಆರ್ಥಿಕತೆ ಸದೃಢವಾಗಲು ಇದು ಪೂರಕವಾದ ಅಂಶ ಎನ್ನುವುದು ನಿಜವೇ ಆಗಿದ್ದರೂ ಎಲ್​ಐಸಿ ಐಪಿಒಗೆ ಅಪ್ಲೈ ಮಾಡುವುದರಿಂದ, ಎಲ್​ಐಸಿ ಷೇರುಗಳು ಅಲಾಟ್ ಆಗುವುದು ಅಥವಾ ಖರೀದಿ ಮಾಡುವುದರಿಂದ ಚಿಲ್ಲರೆ ಹೂಡಿಕೆದಾರರಿಗೆ ಇದರಿಂದ ಖಡಾಖಂಡಿತವಾಗಿ ಲಾಭವೇ ಆಗುತ್ತದೆ ಎನ್ನಲು ಸಾಧ್ಯವಿಲ್ಲ. ಲಿಸ್ಟಿಂಗ್​ಗೆ ನಿಗದಿಪಡಿಸಿರುವ ಬೆಲೆಯಷ್ಟು ಮೌಲ್ಯವನ್ನು ಎಲ್​ಐಸಿ ಷೇರುಗಳು ಉಳಿಸಿಕೊಳ್ಳದೆಯೂ ಇರಬಹುದು.

ಇದನ್ನೂ ಓದಿ: LIC IPO: ಎಲ್​ಐಸಿ ಐಪಿಒಗೆ ಅಪ್ಲೈ ಮಾಡೋಕೆ ಆಸೆಯಿದೆಯೇ? ಡಿಮ್ಯಾಟ್ ಅಕೌಂಟ್ ಬೇಕೇಬೇಕು: ಎಲ್ಲಿ ಓಪನ್ ಮಾಡಿದ್ರೆ ಒಳ್ಳೇದು?

ಇದನ್ನೂ ಓದಿ: LIC IPO: ಎಲ್​ಐಸಿ ಐಪಿಒ ಬಗ್ಗೆ ಪಾಲಿಸಿದಾರರು, ರೀಟೇಲ್ ಹೂಡಿಕೆದಾರರು, ಉದ್ಯೋಗಿಗಳು ತಿಳಿದಿರಬೇಕಾದ 10 ಸಂಗತಿ

ಉತ್ತರ ಕನ್ನಡ: ಮುರುಡೇಶ್ವರ ಕಡಲತೀರಕ್ಕೆ ಪ್ರವಾಸಿಗರಿಗೆ ನಿರ್ಬಂಧ
ಉತ್ತರ ಕನ್ನಡ: ಮುರುಡೇಶ್ವರ ಕಡಲತೀರಕ್ಕೆ ಪ್ರವಾಸಿಗರಿಗೆ ನಿರ್ಬಂಧ
ಬಿಗ್​ಬಾಸ್​ನಲ್ಲಿ ಮನೆಯಲ್ಲಿ ಯಾರು ಹಿಟ್? ಫ್ಲಾಪ್ ಆಗಿದ್ದು ಯಾರು?
ಬಿಗ್​ಬಾಸ್​ನಲ್ಲಿ ಮನೆಯಲ್ಲಿ ಯಾರು ಹಿಟ್? ಫ್ಲಾಪ್ ಆಗಿದ್ದು ಯಾರು?
ಮುಡಾ ಹಗರಣದ ಬಗ್ಗೆ ಪದೇ ಪದೆ ಮಾತಾಡೋದು ಬೇಡ: ಸಚಿವ ವಿ ಸೋಮಣ್ಣ
ಮುಡಾ ಹಗರಣದ ಬಗ್ಗೆ ಪದೇ ಪದೆ ಮಾತಾಡೋದು ಬೇಡ: ಸಚಿವ ವಿ ಸೋಮಣ್ಣ
ಅವರೇ ಹಾರೆ ಹಿಡಿದು ಗುಂಡಿ ಮುಚ್ಚಲು ಹೋಗಿದ್ದರಲ್ಲ ಈಗೇನಾಯ್ತು: ಹೆಚ್​ಡಿಕೆ
ಅವರೇ ಹಾರೆ ಹಿಡಿದು ಗುಂಡಿ ಮುಚ್ಚಲು ಹೋಗಿದ್ದರಲ್ಲ ಈಗೇನಾಯ್ತು: ಹೆಚ್​ಡಿಕೆ
ರಾಮಲೀಲಾ ನಾಟಕ ಪ್ರದರ್ಶನದ ವೇಳೆ ರಾಮ ಪಾತ್ರಧಾರಿ ಹೃದಯಾಘಾತದಿಂದ ಸಾವು
ರಾಮಲೀಲಾ ನಾಟಕ ಪ್ರದರ್ಶನದ ವೇಳೆ ರಾಮ ಪಾತ್ರಧಾರಿ ಹೃದಯಾಘಾತದಿಂದ ಸಾವು
‘ಬಿಗ್​ಬಾಸ್ ಏನು ಅಂಗಡಿಯಲ್ಲಿ ಸಿಗುವ ಒಳ ಉಡುಪಾ ಖರೀದಿ ಮಾಡೋಕೆ’
‘ಬಿಗ್​ಬಾಸ್ ಏನು ಅಂಗಡಿಯಲ್ಲಿ ಸಿಗುವ ಒಳ ಉಡುಪಾ ಖರೀದಿ ಮಾಡೋಕೆ’
ಸಿದ್ದರಾಮಯ್ಯ ವಾಹನಕ್ಕೆ ವಿರುದ್ಧ ದಿಕ್ಕಿನಲ್ಲಿ ಬಂದ ಜನಾರ್ದನ ರೆಡ್ಡಿ ಕಾರು
ಸಿದ್ದರಾಮಯ್ಯ ವಾಹನಕ್ಕೆ ವಿರುದ್ಧ ದಿಕ್ಕಿನಲ್ಲಿ ಬಂದ ಜನಾರ್ದನ ರೆಡ್ಡಿ ಕಾರು
ಅಕ್ಟೋಬರ್ 07 ರಿಂದ 13 ರವರೆಗಿನ ವಾರ ಭವಿಷ್ಯ ತಿಳಿಯಿರಿ
ಅಕ್ಟೋಬರ್ 07 ರಿಂದ 13 ರವರೆಗಿನ ವಾರ ಭವಿಷ್ಯ ತಿಳಿಯಿರಿ
Navratri 2024 4th Day: ನವರಾತ್ರಿ 4ನೇ ದಿನ ಕುಷ್ಮಾಂಡ ದೇವಿಯ ಮಹತ್ವವೇನು?
Navratri 2024 4th Day: ನವರಾತ್ರಿ 4ನೇ ದಿನ ಕುಷ್ಮಾಂಡ ದೇವಿಯ ಮಹತ್ವವೇನು?
Nithya Bhavishya: ನವರಾತ್ರಿಯ ನಾಲ್ಕನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ನಾಲ್ಕನೇ ದಿನದ ರಾಶಿ ಭವಿಷ್ಯ ತಿಳಿಯಿರಿ