LIC IPO: ಎಲ್ಐಸಿ ಐಪಿಒಗೆ ಅಪ್ಲೈ ಮಾಡೋಕೆ ಆಸೆಯಿದೆಯೇ? ಡಿಮ್ಯಾಟ್ ಅಕೌಂಟ್ ಬೇಕೇಬೇಕು: ಎಲ್ಲಿ ಓಪನ್ ಮಾಡಿದ್ರೆ ಒಳ್ಳೇದು?
Demat Account: ಡಿಮ್ಯಾಟ್ ಅಕೌಂಟ್ನಿಂದ ಮಾಡಿಸುವುದರಿಂದ ಆಗುವ ಲಾಭಗಳೇನು? ಡಿಮ್ಯಾಟ್ ಅಕೌಂಟ್ ನಿರ್ವಹಿಸಲು ಏನೆಲ್ಲಾ ಖರ್ಚುಗಳು ಬರಲಿವೆ? ಡಿಮ್ಯಾಟ್ ಖಾತೆ ತೆರೆಯಲು ಬೇಕಿರುವ ದಾಖಲೆಗಳೇನು ಎಂಬ ವಿವರ ಇಲ್ಲಿದೆ.
ಕೇಂದ್ರ ಸರ್ಕಾರದ ಈವರೆಗಿನ ನಡೆಯ ಆಧಾರದ ಮೇಲೆ ಭಾರತದ ಕೋಟ್ಯಂತರ ಜನರು ಮಾಡಿರುವ ಲೆಕ್ಕಾಚಾರ ನಿಜವೇ ಆದರೆ ಮಾರ್ಚ್ ತಿಂಗಳಲ್ಲಿ ಭಾರತೀಯ ಜೀವ ವಿಮಾ ನಿಗಮದ (Life Insurance Corporation of India – LIC) ಐಪಿಒ (Intial Public Offer – IPO) ಬಿಡುಗಡೆಯಾಗಲಿದೆ. ದೇಶದ ಹೂಡಿಕೆದಾರರು ಕಾತರದಿಂದ ಕಾಯುತ್ತಿರುವ ಈ ಐಪಿಒದಲ್ಲಿ ಎಲ್ಐಸಿ ತನ್ನ ಪಾಲಿಸಿದಾರರಿಗೆ ಶೇ 10ರಷ್ಟು ಮತ್ತು ಉದ್ಯೋಗಿಗಳಿಗೆ ಶೇ 5ರಷ್ಟು ಷೇರುಗಳನ್ನು ಮೀಸಲಿಡುವುದಾಗಿ ಘೋಷಿಸಿದೆ. ಇದರ ಜೊತೆಗೆ ಶೇ 35ರಷ್ಟು ಷೇರುಗಳನ್ನು ಚಿಲ್ಲರೆ ಹೂಡಿಕೆದಾರರಿಗೆ ಹಂಚಿಕೆ ಮಾಡುವುದಾಗಿ ಹೇಳಿದೆ. ಈವರೆಗಿನ ವಿಶ್ಲೇಷಣೆಗಳ ಪ್ರಕಾರ ಈ ಐಪಿಒಗೆ ಬೇಡಿಕೆ ಸಹಜವಾಗಿಯೇ ಹೆಚ್ಚಾಗಲಿದೆ. ಹೀಗಾಗಿ ಲಭ್ಯವಿರುವ ಷೇರುಗಳ ಪ್ರಮಾಣದ ಹಲವು ಪಟ್ಟು ಬೇಡಿಕೆ ವ್ಯಕ್ತವಾಗುವ ನಿರೀಕ್ಷೆಯಿದೆ.
ಪಾಲಿಸಿದಾರರಿಗೆ ವಿಶೇಷ ಮೀಸಲಾತಿ ಇರುವುದರಿಂದ, ಆ ವರ್ಗದಲ್ಲಿ ಅಪ್ಲೈ ಮಾಡಿದರೆ ನಿಮಗೆ ಷೇರು ಅಲಾಟ್ ಆಗುವ ಸಾಧ್ಯತೆ ಹೆಚ್ಚು. ಪಾಲಿಸಿದಾರರಿಗೆ ಸಾರ್ವಜನಿಕ ವಿಭಾಗದಲ್ಲಿಯೂ ಅಪ್ಲೈ ಮಾಡಲು ಅವಕಾಶವಿದೆ. ಎಲ್ಐಸಿ ಬಿಡುಗಡೆ ಮಾಡುತ್ತಿರುವ ಜಾಹೀರಾತುಗಳ ಪ್ರಕಾರ ನೀವು ಪಾಲಿಸಿದಾರರಾಗಿದ್ದು, ಆ ವಿಭಾಗದ ಮೀಸಲಾತಿ ಪಡೆಯಲು ಇಷ್ಟಪಟ್ಟರೆ ಫೆಬ್ರುವರಿ 13ರ ಒಳಗೆ ನೀವು ಎಲ್ಐಸಿ ಪಾಲಿಸಿ ಖರೀದಿಸಿದ್ದು, ಫೆ.28ರ ಒಳಗೆ ನಿಮ್ಮ ಪಾನ್ ಸಂಖ್ಯೆಯನ್ನು ಎಲ್ಐಸಿ ಪಾಲಿಸಿಗೆ ಜೋಡಿಸಬೇಕು.
ಲಾಭಾಂಶ ಹಂಚಿಕೆಯ ಸಾಧ್ಯತೆ (ಡೆವಿಡೆಂಡ್) ಇರುವುದರಿಂದ ಮತ್ತು ಷೇರುಪೇಟೆಯಲ್ಲಿ ಲಿಸ್ಟ್ ಆಗುವ ಎಲ್ಐಸಿಯ ಷೇರುಗಳಿಗೆ ಮುಂದಿನ ದಿನಗಳಲ್ಲಿ ಹೆಚ್ಚು ಬೇಡಿಕೆ ವ್ಯಕ್ತವಾಗುವ ನಿರೀಕ್ಷೆ ಇರುವುದರಿಂದ ಸಹಜವಾಗಿಯೇ ಈ ಐಪಿಒದಲ್ಲಿ ಷೇರುಗಳು ಅಲಾಟ್ ಆದರೆ ಲಾಭವಾಗಲಿದೆ ಎಂಬ ನಿರೀಕ್ಷೆ ಹೂಡಿಕೆದಾರರಲ್ಲಿ ಗರಿಗೆದರಿದೆ. ಈ ಹಿನ್ನೆಲೆಯಲ್ಲಿ ಸಾವಿರಾರು ಜನರು ಹೊಸದಾಗಿ ಡಿಮ್ಯಾಟ್ ಅಕೌಂಟ್ಗಳನ್ನು ಓಪನ್ ಮಾಡಲು ಬ್ರೋಕರೇಜ್ ಕಂಪನಿಗಳನ್ನು ಎಡತಾಕುತ್ತಿದ್ದಾರೆ.
ಡಿಮ್ಯಾಟ್ ಅಕೌಂಟ್ನಿಂದ ಮಾಡಿಸುವುದರಿಂದ ಆಗುವ ಲಾಭಗಳೇನು? ಡಿಮ್ಯಾಟ್ ಅಕೌಂಟ್ ನಿರ್ವಹಿಸಲು ಏನೆಲ್ಲಾ ಖರ್ಚುಗಳು ಬರಲಿವೆ? ಡಿಮ್ಯಾಟ್ ಖಾತೆ ತೆರೆಯಲು ಬೇಕಿರುವ ದಾಖಲೆಗಳೇನು ಎಂಬ ವಿವರ ಇಲ್ಲಿದೆ.
ಡಿಮ್ಯಾಟ್ ಅಕೌಂಟ್ ಎಂದರೆ ಏನು? ಎಲೆಕ್ಟ್ರಾನಿಕ್ ರೂಪದಲ್ಲಿ ಷೇರುಗಳು ಮತ್ತು ಸೆಕ್ಯುರಿಟಿಗಳನ್ನು ವಹಿವಾಟು ನಡೆಸಲು ಅವಕಾಶ ಕಲ್ಪಿಸುವ ವೇದಿಕೆ ಡಿಮ್ಯಾಟ್ ಅಕೌಂಟ್. ಇದನ್ನು ಡಿಮೆಟಿರಿಯಲೈಸ್ಡ್ ಅಕೌಂಟ್ ಎಂದೂ ಕರೆಯುತ್ತಾರೆ. ಷೇರುಪೇಟೆಯಲ್ಲಿ ನೀವು ಖರೀದಿಸುವ ಷೇರುಗಳು, ಇಟಿಎಫ್ಗಳು, ಬಾಂಡ್ಗಳು ಮತ್ತು ಮ್ಯೂಚುವಲ್ ಫಂಡ್ಗಳನ್ನು ಇಲ್ಲಿ ಇರಿಸಿಕೊಳ್ಳಬಹುದು. ಮಾರಬಹುದು ಮತ್ತು ಕೊಳ್ಳಬಹುದು.
ಬ್ಯಾಂಕ್ ಖಾತೆಗೂ ಡಿಮ್ಯಾಟ್ ಖಾತೆಗೂ ಏನು ವ್ಯತ್ಯಾಸ? ಬ್ಯಾಂಕ್ ಖಾತೆಯಲ್ಲಿ ನೀವು ನಗದು ವಹಿವಾಟು ಮಾತ್ರ ನಡೆಸಬಹುದು. ಡಿಮ್ಯಾಟ್ ಖಾತೆಯ ಮೂಲಕ ಷೇರುಪೇಟೆಯಲ್ಲಿ ನಡೆಯುವ ವಹಿವಾಟುಗಳಲ್ಲಿ ಪಾಲ್ಗೊಳ್ಳಬಹುದು. ಡಿಮ್ಯಾಟ್ ಖಾತೆಯ ಸುಸೂತ್ರ ಕಾರ್ಯ ನಿರ್ವಹಣೆಗೆ ನಿಮ್ಮ ಬ್ಯಾಂಕ್ ಖಾತೆಯನ್ನು ಅದರೊಂದಿಗೆ ಜೋಡಿಸುವುದು ಅಂದರೆ ಮ್ಯಾಪ್ ಮಾಡುವುದು ಅನಿವಾರ್ಯ.
ತ್ರಿ-ಇನ್ ಒನ್ ಅಕೌಂಟ್ ಎಂದರೇನು? ಡಿಮ್ಯಾಟ್ ಖಾತೆ, ಷೇರು ವಹಿವಾಟು ನಡೆಸಲು ಅವಕಾಶ ಕೊಡುವ ಟ್ರೇಡಿಂಗ್ ಖಾತೆ ಮತ್ತು ಆನ್ಲೈನ್ ಬ್ಯಾಂಕಿಂಗ್ ಸೌಲಭ್ಯವಿರುವ ಬ್ಯಾಂಕ್ ಖಾತೆಯನ್ನು ಒಂದೇ ವೇದಿಕೆಯಡಿ ಹಲವು ಕಂಪನಿಗಳು ಒದಗಿಸಿಕೊಡುತ್ತಿವೆ. ಈ ಎಲ್ಲ ಸೌಲಭ್ಯಗಳು ಒಂದೇ ಕಡೆ ಸಿಗುವ ವ್ಯವಸ್ಥೆಯನ್ನು ತ್ರಿ-ಇನ್ ಒನ್ ಅಕೌಂಟ್ ಎನ್ನುತ್ತಾರೆ. ಎಸ್ಬಿಐ, ಐಸಿಐಸಿಐ, ಎಚ್ಡಿಎಫ್ಸಿ, ಕೋಟಕ್ ಸೇರಿದಂತೆ ಬಹುತೇಕ ಕಂಪನಿಗಳು ತಮ್ಮದೇ ಬ್ಯಾಂಕ್ ಮತ್ತು ಬ್ರೋಕರೇಜ್ ಕಂಪನಿಗಳೊಂದಿಗೆ ತ್ರಿ-ಇನ್ ಒನ್ ಅಕೌಂಟ್ ಸೇವೆ ಒದಗಿಸುತ್ತಿವೆ.
ಡಿಮ್ಯಾಟ್ ಅಕೌಂಟ್ ಎಲ್ಲಿ ಓಪನ್ ಮಾಡಬೇಕು? ಎಲ್ಲ ಡಿಮ್ಯಾಟ್ ಅಕೌಂಟ್ಗಳು ಎನ್ಎಸ್ಡಿಎಲ್ ಅಥವಾ ಸಿಡಿಎಸ್ಎಲ್ನಲಲ್ಲಿ ಓಪನ್ ಆಗುತ್ತವೆ. ಇವನ್ನು ಡೆಪಾಸಿಟರಿ ಎಂದು ಕರೆಯುತ್ತಾರೆ. ಷೇರುಪೇಟೆಯನ್ನು ನಿಯಂತ್ರಿಸುವ ಸರ್ಕಾರಿ ಸಂಸ್ಥೆ ಸೆಬಿ (Securities and Exchange Board of India – SEBI) ರೂಪಿಸುವ ನಿಯಮಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸುವ ಬ್ರೋಕರೇಜ್ ಕಂಪನಿಗಳು ಹೂಡಿಕೆದಾರರಿಗೆ ಈ ಸಂಸ್ಥೆಗಳಲ್ಲಿ ಡಿಮ್ಯಾಟ್ ಖಾತೆ ಓಪನ್ ಮಾಡಿಕೊಡುತ್ತವೆ. ಪ್ರತಿ ಬ್ರೋಕರೇಜ್ ಕಂಪನಿಗಳ ಕಾರ್ಯನಿರ್ವಹಣೆಯ ವೈಖರಿ, ಅದು ಪ್ರತಿ ವಹಿವಾಟಿಗೆ ವಿಧಿಸುವ ಶುಲ್ಕ, ಗ್ರಾಹಕರಿಗೆ ಒದಗಿಸುವ ಸೇವೆಯಲ್ಲಿ ವ್ಯತ್ಯಾಸ ಇರುತ್ತದೆ. ಡಿಮ್ಯಾಟ್ ಖಾತೆ ಓಪನ್ ಮಾಡುವಾಗ ಇಂಥ ಅಂಶಗಳನ್ನು ಗಮನಿಸಬೇಕು.
ಡಿಮ್ಯಾಟ್ ವ್ಯವಹಾರದಲ್ಲಿ ಈಗಿನ ಟ್ರೆಂಡ್ ಏನು? ಕೊವಿಡ್ ಪಿಡುಗಿನ ನಂತರ ಷೇರು ವ್ಯವಹಾರದಲ್ಲಿ ಡಿಸ್ಕೌಂಟ್ ಬ್ರೋಕರೇಜ್ ಟ್ರೆಂಡ್ ಹೆಚ್ಚಾಗುತ್ತಿದೆ. ಜೆರೊದಾ, ಗ್ರೋ, ಸ್ಕ್ರಿಪ್ಬಾಕ್ಸ್ನಂಥ ಕಂಪನಿಗಳು ಷೇರು ವಹಿವಾಟಿಗೆ ಅತ್ಯಂತ ಕನಿಷ್ಠ ಶುಲ್ಕ ವಿಧಿಸುತ್ತಿವೆ. ತಂತ್ರಜ್ಞಾನಕ್ಕೆ ಹೆಚ್ಚು ಒತ್ತು ನೀಡುವ ಈ ಕಂಪನಿಗಳು ವೈಯಕ್ತಿಕ ಮಟ್ಟದ ತಾಂತ್ರಿಕ ಸಲಹೆ ಮತ್ತು ಶಾಖಾ ಕಚೇರಿಗಳ ನೆಟ್ವರ್ಕ್ ಮೂಲಕ ವಹಿವಾಟು ನಡೆಸಲು ಒತ್ತು ನೀಡುವುದಿಲ್ಲ. ತಾಂತ್ರಿಕ ಪರಿಣಿತರು ಮತ್ತು ಷೇರುಪೇಟೆಯ ಬಗ್ಗೆ ಒಂದು ಮಟ್ಟದ ಜ್ಞಾನ ಇರುವವರಿಗೆ ಇವು ಸೂಕ್ತ.
ಇಂದಿಗೂ ಸಾಂಪ್ರದಾಯಿಕ ರೀತಿಯಲ್ಲಿ ವಹಿವಾಟು ನಡೆಸುತ್ತಿರುವ ಜಿಯೊಜಿತ್, ಮೋತಿಲಾಲ್ ಓಸ್ವಾಲ್, ಆನಂದ ರಾಠಿ, ಏಂಜೆಲ್ ಬ್ರೋಕಿಂಗ್ನಂಥ ಕಂಪನಿಗಳು ಶಾಖಾ ನೆಟ್ವರ್ಕ್ ಮೂಲಕ ಷೇರು ಬ್ರೋಕರ್ಗಳೊಂದಿಗೆ ಗ್ರಾಹಕರ ಸಂಬಂಧ ಇರಿಸಿಕೊಳ್ಳುತ್ತವೆ. ಇಂಥ ಕಂಪನಿಗಳಲ್ಲಿ ಸಹಜವಾಗಿಯೇ ಬ್ರೋಕರೇಜ್ ಮೊತ್ತ ಹೆಚ್ಚು. ಇತ್ತೀಚೆಗೆ ಮೊಬೈಲ್ ಆ್ಯಪ್ ಸೇರಿದಂತೆ ತಾಂತ್ರಿಕವಾಗಿಯೂ ಹಲವು ಸುಧಾರಣೆಗಳಿಗೆ ತಮ್ಮನ್ನು ತೆರೆದುಕೊಂಡಿವೆ. ಹೊಸಬರು ಇಂಥ ವೇದಿಕೆಗಳ ಮೂಲಕ ವಹಿವಾಟು ಆರಂಭಿಸುವುದು ಒಳ್ಳೆಯದು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.
ಡಿಮ್ಯಾಟ್ ಅಕೌಂಟ್ ತೆರೆಯಲು ಏನೆಲ್ಲಾ ದಾಖಲೆಗಳು ಬೇಕು? ಮೊದಲು ನಿಮಗೆ ಯಾವ ಬ್ರೋಕರೇಜ್ ಕಂಪನಿ ಸೂಕ್ತ ಎಂಬುದನ್ನು ನಿರ್ಧರಿಸಿ. ಆಫ್ಲೈನ್ ಮೂಲಕ ಸೇವೆ ಒದಗಿಸುವ ಸಂಸ್ಥೆಯಾದರೆ ಅವರ ಶಾಖಾ ಕಚೇರಿಗೆ ಹೋಗಿ ಅರ್ಜಿತುಂಬಿ, ಸಹಿಗಳನ್ನು ಹಾಕಿಕೊಡಬೇಕು. ಆನ್ಲೈನ್ ಮೂಲಕ ಮಾಡುವುದಾದರೆ ಸಂಬಂಧಿಸಿದ ಬ್ರೋಕರೇಜ್ ಕಂಪನಿಯ ಆ್ಯಪ್ನಲ್ಲಿ ಫಾರ್ಮ್ ಭರ್ತಿ ಮಾಡಬೇಕು.
ಡಿಮ್ಯಾಟ್ ಖಾತೆ ತೆರೆಯಲು ಈ ಕೆಳಕಂಡ ದಾಖಲೆಗಳು ಬೇಕು. – ನಿಮ್ಮ ಆಧಾರ್ ಕಾರ್ಡ್ – ಪ್ಯಾನ್ ಕಾರ್ಡ್ – ಬ್ಯಾಂಕ್ ಖಾತೆಯ ವಿವರಗಳು – ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಲು ಕೆಲ ಕಂಪನಿಗಳು ಖುದ್ದಾಗಿ ತಮ್ಮ ಕಚೇರಿಗಳಿಗೆ ಬರಬೇಕು ಎಂದು ಕೋರುತ್ತವೆ. ಕೆಲ ಕಂಪನಿಗಳಲ್ಲಿ ವಿಡಿಯೊ ಮೆಸೇಜ್ ಮೂಲಕ ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಲು ಅವಕಾಶವಿದೆ.
ಡಿಮ್ಯಾಟ್ ಖಾತೆ ತೆರೆದ ನಂತರ ಮುಂದೇನು? ಡಿಮ್ಯಾಟ್ ಖಾತೆ ಓಪನ್ ಆದ ನಂತರ 16 ಅಂಕಿಗಳ ಗ್ರಾಹಕರ ಅಕೌಂಟ್ ನಂಬರ್ ಬರುತ್ತದೆ. ಷೇರುಪೇಟೆಯಲ್ಲಿ ವಹಿವಾಟು ನಡೆಸಲು ಇದು ಅತ್ಯಗತ್ಯ. ಇದೇ ಅಕೌಂಟ್ ಬಳಸಿ ಈಗ ನೀವು ಐಪಿಒಗಳಿಗೆ ಅಪ್ಲೈ ಮಾಡುವುದು ಸೇರಿದಂತೆ ಷೇರುಗಳ ಖರೀದಿ-ಮಾರಾಟ, ಸಾವರಿನ್ ಗೋಲ್ಡ್ ಬಾಂಡ್ ಖರೀದಿ, ಮ್ಯೂಚುವಲ್ ಫಂಡ್ ಖರೀದಿ, ಎಸ್ಐಪಿ ಹೂಡಿಕೆ ಸೇರಿದಂತೆ ಎಲ್ಲ ರೀತಿಯ ವಹಿವಾಟು ನಡೆಸಬಹುದು.
ಷೇರುಪೇಟೆಯಲ್ಲಿ ಯಾವಾಗಲೂ ಲಾಭವೇ ಆಗುತ್ತಾ? ನೀವು ಒಂದು ವೇಳೆ ಎಲ್ಐಸಿ ಐಪಿಒಗೆ ಅಪ್ಲೈ ಮಾಡುವ ಉದ್ದೇಶದಿಂದಲೇ ಡಿಮ್ಯಾಟ್ ಖಾತೆ ತೆರೆಯಲು ಮುಂದಾಗಿದ್ದರೆ ಮೊದಲು ಷೇರುಪೇಟೆಯ ಬಗ್ಗೆ ಮೊದಲು ಸರಿಯಾಗಿ ತಿಳಿದುಕೊಳ್ಳಿ. ಷೇರುಪೇಟೆ ಎನ್ನುವುದು ಖಂಡಿತ ಜೂಜಾಟವಲ್ಲ. ಅದರ ಬಗ್ಗೆ ಹೆದರಿಕೆ ಅಥವಾ ಹಿಂಜರಿಕೆ ಅನಗತ್ಯ. ಆದರೆ ಅಧ್ಯಯನ ಅತ್ಯಗತ್ಯ.
(ಗಮನಿಸಿ: ಎಲ್ಐಸಿ ಐಪಿಒಗೆ ನಮ್ಮ ಓದುಗರು ಅಪ್ಲೈ ಮಾಡಬೇಕು ಅಥವಾ ಮಾಡಬಾರದು ಎಂದು ‘ಟಿವಿ9 ಕನ್ನಡ ಡಿಜಿಟಲ್’ ಪ್ರತಿಪಾದಿಸುತ್ತಿಲ್ಲ. ಯಾವುದೇ ನಿರ್ದಿಷ್ಟ ಬ್ರೋಕರೇಜ್ ಕಂಪನಿಯಲ್ಲಿ ನಮ್ಮ ಓದುಗರು ಡಿಮ್ಯಾಟ್ ಅಕೌಂಟ್ ತೆರೆಯಬೇಕು ಎಂಬ ಶಿಫಾರಸನ್ನೂ ಮಾಡುತ್ತಿಲ್ಲ. ಷೇರುಪೇಟೆಯಲ್ಲಿ ಹೂಡಿಕೆ ಮಾಡುವ ಹಣ ನಷ್ಟಕ್ಕೆ ಈಡಾಗುವ ಸಾಧ್ಯತೆ ಇರುತ್ತದೆ. ಎಚ್ಚರಿಕೆಯಿಂದ ಮತ್ತು ವೈಯಕ್ತಿಕ ನಿರ್ಧಾರದಿಂದ ಹೂಡಿಕೆ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು)
ಇದನ್ನೂ ಓದಿ: LIC IPO: ಎಲ್ಐಸಿ ಐಪಿಒ ಬಗ್ಗೆ ಪಾಲಿಸಿದಾರರು, ರೀಟೇಲ್ ಹೂಡಿಕೆದಾರರು, ಉದ್ಯೋಗಿಗಳು ತಿಳಿದಿರಬೇಕಾದ 10 ಸಂಗತಿ
ಇದನ್ನೂ ಓದಿ: LIC IPO: ಐಪಿಒದಲ್ಲಿ ಭಾಗವಹಿಸಲು ಎಲ್ಐಸಿ ಪಾಲಿಸಿದಾರರು ಫೆಬ್ರವರಿ 28ರೊಳಗೆ ಪ್ಯಾನ್ ವಿವರ ಅಪ್ಡೇಟ್ ಮಾಡಬೇಕು
Published On - 4:44 pm, Fri, 25 February 22