LIC IPO: ಎಲ್​ಐಸಿ ಐಪಿಒ ಹೂಡಿಕೆಯಲ್ಲಿ ಲಾಭವೇ ಆಗುತ್ತೆ ಎಂಬ ಖಾತ್ರಿಯಿಲ್ಲ: ವೈಭವ್ ಅಗರ್​ವಾಲ್

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 28, 2022 | 7:00 AM

Share Market: ಎಲ್​ಐಸಿ ಐಪಿಒ ಬಗ್ಗೆ ಪ್ರತಿದಿನ ಎಂಬಂತೆ ಒಂದಲ್ಲಾ ಒಂದು ಸುದ್ದಿ, ವಿಶ್ಲೇಷಣೆಗಳು ರಾಷ್ಟ್ರಮಟ್ಟದಲ್ಲಿ ಪ್ರಕಟವಾಗುತ್ತಿವೆ. ಈ ನಡುವೆ ಎಲ್​ಐಸಿ ಐಪಿಒ ಲಾಭದಾಯಕವಾಗಲಾರದು ಎಂಬ ವಿಶ್ಲೇಷಣೆಯೊಂದು ಎಲ್ಲರ ಗಮನ ಸೆಳೆಯುತ್ತಿದೆ.

LIC IPO: ಎಲ್​ಐಸಿ ಐಪಿಒ ಹೂಡಿಕೆಯಲ್ಲಿ ಲಾಭವೇ ಆಗುತ್ತೆ ಎಂಬ ಖಾತ್ರಿಯಿಲ್ಲ: ವೈಭವ್ ಅಗರ್​ವಾಲ್
ಸಾಂದರ್ಭಿಕ ಚಿತ್ರ
Follow us on

ಭಾರತೀಯ ಜೀವ ವಿಮಾ ನಿಗಮದ (Life Insurance Corporation of India – LIC) ಆರಂಭಿಕ ಸಾರ್ವಜನಿಕ  ಕೊಡುಗೆ (Intial Public Offering – IPO) ಘೋಷಣೆಯಾದ ನಂತರ ಎಲ್​ಐಸಿ ಪಾಲಿಸಿದಾರರು ಮತ್ತು ಹೂಡಿಕೆದಾರರಲ್ಲಿ ನಿರೀಕ್ಷೆಗಳು ಗರಿಗೆದರಿವೆ. ಪಾಲಿಸಿದಾರರಿಗೆ ಐಪಿಒದಲ್ಲಿ ಮೀಸಲು ಘೋಷಣೆಯಾಗಿರುವುದರಿಂದ ಲಕ್ಷಾಂತರ ಮಂದಿ ಹೊಸದಾಗಿ ಡಿಮ್ಯಾಟ್ (Demat) ಖಾತೆಗಳನ್ನು ತೆರೆದು ಐಪಿಒ ಘೋಷಣೆಗೆ ಕಾದುಕುಳಿತಿದ್ದಾರೆ. ಎಲ್​ಐಸಿ ಐಪಿಒ ಬಗ್ಗೆ ಪ್ರತಿದಿನ ಎಂಬಂತೆ ಒಂದಲ್ಲಾ ಒಂದು ಸುದ್ದಿ, ವಿಶ್ಲೇಷಣೆಗಳು ರಾಷ್ಟ್ರಮಟ್ಟದಲ್ಲಿ ಪ್ರಕಟವಾಗುತ್ತಿವೆ. ಈ ನಡುವೆ ಎಲ್​ಐಸಿ ಐಪಿಒ ಲಾಭದಾಯಕವಾಗಲಾರದು ಎಂಬ ವಿಶ್ಲೇಷಣೆಯೊಂದು ಎಲ್ಲರ ಗಮನ ಸೆಳೆಯುತ್ತಿದೆ. ‘ತೇಜಿ ಮಂಡಿ’ ಷೇರು ದಲ್ಲಾಳಿ ಕಂಪನಿಯ ಮುಖ್ಯ ಹೂಡಿಕೆ ಅಧಿಕಾರಿ ವೈಭವ್ ಅಗರ್​ವಾಲ್ ಅವರು ಪ್ರಸ್ತುತಪಡಿಸಿರುವ ವಿಶ್ಲೇಷಣೆಯ ಮುಖ್ಯಾಂಶಗಳು ಇಲ್ಲಿದೆ.

ಭಾರತದಲ್ಲಿ ಮಾರಾಟವಾಗುವ 4 ಪಾಲಿಸಿಗಳ ಪೈಕಿ 3 ಪಾಲಿಸಿಗಳು ಎಲ್​ಐಸಿಯದ್ದೇ ಆಗಿರುತ್ತವೆ. ಭಾರತದ ಅತಿದೊಡ್ಡ ಜೀವವಿಮಾ ಕಂಪನಿಯಾಗಿರುವ ಎಲ್​ಐಸಿ ವಿಶ್ವದ 5ನೇ ಅತಿದೊಡ್ಡ ಜೀವವಿಮಾ ಕಂಪನಿ ಎನಿಸಿದೆ. ಭಾರತದಲ್ಲಿ ಸಂಗ್ರಹವಾಗುತ್ತಿರುವ ಒಟ್ಟು ವಿಮಾ ಪ್ರೀಮಿಯಂ ಕಂತಿನಲ್ಲಿ ಶೇ 64ರಷ್ಟು ಪಾಲು ಎಲ್ಐಸಿಯದ್ದು. 13 ಲಕ್ಷಕ್ಕೂ ಹೆಚ್ಚು ಏಜೆಂಟರ ಕಠಿಣ ಪರಿಶ್ರಮದಿಂದ ಎಲ್​ಐಸಿ ಈ ಹಂತಕ್ಕೆ ಮುಟ್ಟಿದೆ. ಎಲ್ಲ ಜಾತಿ, ವರ್ಗದಲ್ಲಿಯೂ ಇರುವ ಏಜೆಂಟರ ಪಡೆ ಎಲ್​ಐಸಿಗೆ ಈ ನಿಚ್ಚಳ ಮೇಲುಗೈ ತಂದುಕೊಟ್ಟಿದೆ.

ಎಲ್​ಐಸಿ ಬಳಿ ಭಾರತೀಯರು ಹೂಡಿಕೆ ಮಾಡಿರುವ ₹ 39 ಲಕ್ಷ ಕೋಟಿಯಷ್ಟು ದೊಡ್ಡಮೊತ್ತದ ನಿಧಿಯಿದೆ. ಭಾರತದ ಎಲ್ಲ ಮ್ಯೂಚುವಲ್ ಫಂಡ್​ ಕಂಪನಿಗಳು ನಿರ್ವಹಿಸುತ್ತಿರುವ ನಿಧಿಯ ಒಟ್ಟು ಮೊತ್ತಕ್ಕಿಂತ ಈ ಮೊತ್ತ ಹೆಚ್ಚು. ಷೇರುಪೇಟೆಯ ಪ್ರಾತಿನಿಧಿಕ ಸಂವೇದಿ ಸೂಚ್ಯಂಕ ಎನಿಸಿರುವ ಎನ್​ಎಸ್​ಇಯಲ್ಲಿ (National Stock Exchage – NSE) ಲಿಸ್ಟ್ ಆಗಿರುವ ಕಂಪನಿಗಳಲ್ಲಿ ಹೂಡಿಕೆಯಾಗಿರುವ ಒಟ್ಟು ನಿಧಿಯ ಪೈಕಿ ಶೇ 4ರಷ್ಟನ್ನು ಎಲ್​ಐಸಿಯೊಂದೇ ಹೂಡಿಕೆ ಮಾಡಿದೆ. ಭಾರತದ ಅರ್ಥಿಕ ವ್ಯವಸ್ಥೆಯಲ್ಲಿ ಎಲ್​ಐಸಿ ಹೊಂದಿರುವ ಪ್ರಾಮುಖ್ಯತೆಗೆ ಇದು ದ್ಯೋತಕ. ಜೀವವಿಮಾ ಕ್ಷೇತ್ರದ ದೈತ್ಯ ಕಂಪನಿಯಾಗಿದ್ದರೂ ಎಲ್​ಐಸಿ ಮುಂದಿನ ದಿನಗಳಲ್ಲಿಯೂ ಇದೇ ಮುನ್ನಡೆ ಕಾಯ್ದುಕೊಳ್ಳಲಿದೆ ಎನ್ನಲು ಆಗುವುದಿಲ್ಲ. ಎಲ್​ಐಸಿಯ ಹೊಸ ವ್ಯವಹಾರಗಳ ಪ್ರಗತಿಯು (New Business Premiums – NBP) ಶೇ 14ರಷ್ಟಿದ್ದರೆ ಖಾಸಗಿ ವ್ಯವಹಾರಗಳ ಪ್ರಗತಿಯು ಶೇ 18 ಇದೆ.

ದೇಶದ ಪ್ರಮುಖ ಹಣಕಾಸು ಸಂಸ್ಥೆಗಳು ದಿವಾಳಿಯಾದಾಗ ಅಥವಾ ಹಣಕಾಸು ಮುಗ್ಗಟ್ಟಿಗೆ ಸಿಲುಕಿದಾಗ ಎಲ್​ಐಸಿಯನ್ನು ಸರ್ಕಾರ ಗುರಾಣಿಯಾಗಿ ಬಳಸಿತು. ಐಡಿಬಿಐ ಬ್ಯಾಂಕ್​ನಲ್ಲಿ ₹ 21,600 ಕೋಟಿ ಬಂಡವಾಳ ಹೂಡಿಕೆ ಮಾಡುವ ಒಟ್ಟು ಎಲ್​ಐಸಿ ತನ್ನ ಹೂಡಿಕೆಯ ಪಾಲನ್ನು ಶೇ 51ರಷ್ಟಕ್ಕೆ ಹೆಚ್ಚಿಸಿಕೊಂಡಿತು. ಆದರೆ ಅದೇ ಬ್ಯಾಂಕ್ ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿದಾಗ ₹ 4,743 ಕೋಟಿ ಹೆಚ್ಚುವರಿಯಾಗಿ ತೊಡಗಿಸಿ, ರಕ್ಷಿಸಿಕೊಂಡಿತು. ಇದಕ್ಕೆ ಬಳಕೆಯಾಗಿದ್ದು ಪಾಲಿಸಿದಾರರ ಹಣ. ಇಂಥ ಬೆಳವಣಿಗೆಗಳು ಮುಂದಿನ ದಿನಗಳಲ್ಲಿಯೂ ನಡೆಯಬಹುದು. ಭಾರತ ಸರ್ಕಾರ ಸೂಚಿಸಿದಾಗ ಪಾಲಿಸಿದಾರರ ಹಿತಾಸಕ್ತಿಗೆ ವ್ಯತಿರಿಕ್ತವಾಗಿಯೂ ಇಂಥ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಬಹುದು ಎಂದು ಎಲ್​ಐಸಿ ತನ್ನ ಐಪಿಒ ಪ್ರಸ್ತಾವದಲ್ಲಿ ನಮೂದಿಸಿದೆ.

ಜೀವವಿಮಾ ವ್ಯವಹಾರಗಳಲ್ಲಿ ಎಲ್​ಐಸಿಯ ಹೊಸ ವ್ಯವಹಾರಗಳು (Value of the New Business – VNB) ಇತರ ಪ್ರತಿಸ್ಪರ್ಧಿ ಕಂಪನಿಗಳಷ್ಟು ವೇಗವಾಗಿ ಬೆಳೆಯುತ್ತಿಲ್ಲ. 2020-21ರ ಆರ್ಥಿಕ ವರ್ಷದಲ್ಲಿ ಎಲ್​ಐಸಿಯ ಹೊಸ ವ್ಯವಹಾರಗಳು ಶೇ 9.9ರಷ್ಟು ಬೆಳೆದಿದ್ದರೆ, 2021-22ರಲ್ಲಿ ಶೇ 9.3ಕ್ಕೆ ಮುಟ್ಟಿದೆ. ಆದರೆ ಎಲ್​ಐಸಿಯ ಪ್ರತಿಸ್ಪರ್ಧಿಯಾಗಿರುವ ಖಾಸಗಿ ಕಂಪನಿಗಳ ವ್ಯವಹಾರ ಈ ಅವಧಿಯಲ್ಲಿ ಶೇ 20ರಿಂದ 25ರಷ್ಟು ಬೆಳೆದಿದೆ.

ಒಂದು ಸಲ ಕಂಪನಿಯು ಷೇರುಪೇಟೆಯಲ್ಲಿ ಲಿಸ್ಟ್ ಆದರೆ, ಅನಂತರ ಪಾಲಿಸಿದಾರರು ಮತ್ತು ಷೇರುದಾರರ ಹಿತ ಕಾಪಾಡುವ ಸವಾಲನ್ನು ಎಲ್​ಐಸಿ ನಿರ್ವಹಿಸಬೇಕಾಗುತ್ತದೆ. ಈ ಮೊದಲು ಲಾಭಗಳಿಕೆಯ ಶೇ 95ರಷ್ಟು ಮೊತ್ತವನ್ನು ಪಾಲಿಸಿದಾರರೊಂದಿಗೆ ಹಂಚಿಕೊಳ್ಳುತ್ತಿತ್ತು. ಮುಂದಿನ ದಿನಗಳಲ್ಲಿ ಈ ಪ್ರಕ್ರಿಯೆಯಲ್ಲಿ ತುಸು ಬದಲಾವಣೆಯಾಗುತ್ತದೆ. ಪಾಲಿಸಿದಾರರಿಗೆ ಹಂಚಿಕೆಯಾಗುತ್ತಿರುವ ಲಾಭಾಂಶದಲ್ಲಿ ಕೊಂಚ ಪಾಲನ್ನು ಮುಂದಿನ ದಿನಗಳಲ್ಲಿ ಷೇರುದಾರರಿಗೂ ಹಂಚಿಕೆ ಮಾಡಬೇಕಾಗುತ್ತದೆ. ಈ ಎರಡೂ ವರ್ಗದ ನಡುವೆ ಹೇಗೆ ಸಮತೋಲನ ಕಾಪಾಡುವುದು ಸವಾಲಾಗುತ್ತದೆ.

ಎಲ್​ಐಸಿ ಐಪಿಒಗೆ ನೀವು ಅಪ್ಲೈ ಮಾಡಬೇಕೆ?
ದೇಶದೆಲ್ಲೆಡೆ ಎದ್ದು ಕಾಣುವಂತಿರುವ ಅಸ್ತಿತ್ವ ಮತ್ತು ತನ್ನ ಸುಪರ್ದಿಯಲ್ಲಿರುವ ದೊಡ್ಡಮಟ್ಟದ ನಿಧಿಯ ಹೊರತಾಗಿಯೂ ಎಲ್​ಐಸಿಗೆ ಜೀವವಿಮಾ ಕ್ಷೇತ್ರದಲ್ಲಿ ಸವಾಲು ಹೆಚ್ಚಾಗುತ್ತಿದೆ. ಈಗಾಗಲೇ ಷೇರುಪೇಟೆಯಲ್ಲಿ ವಹಿವಾಟಾಗುತ್ತಿರುವ ಹಲವು ಕಂಪನಿಗಳು ಎಲ್​ಐಸಿಗಿಂತಲೂ ಉತ್ತಮ ಸಾಧ್ಯತೆಗಳನ್ನು ಪ್ರದರ್ಶಿಸುತ್ತಿವೆ. ವಿಎನ್​ಬಿ, ಘೋಷಿತ ಮೌಲ್ಯಕ್ಕೆ ಸಿಗುವ ಪ್ರತಿಫಲ, ಬೆಳವಣಿಗೆ ಸಾಧ್ಯತೆಯಲ್ಲಿ ಎಲ್​ಐಸಿಗಿಂತಲೂ ಈ ಕಂಪನಿಗಳು ಮುನ್ನಡೆ ದಾಖಲಿಸಿವೆ. ಎಲ್​ಐಸಿ ಐಪಿಒಗೆ ಅಪ್ಲೈ ಮಾಡಬೇಕು ಎನ್ನುವ ಕಾರಣಕ್ಕೇ ಸಾಕಷ್ಟು ಜನರು ಡಿಮ್ಯಾಟ್ ಖಾತೆ ತೆರೆದಿದ್ದಾರೆ. ಭಾರತದ ಆರ್ಥಿಕತೆ ಸದೃಢವಾಗಲು ಇದು ಪೂರಕವಾದ ಅಂಶ ಎನ್ನುವುದು ನಿಜವೇ ಆಗಿದ್ದರೂ ಎಲ್​ಐಸಿ ಐಪಿಒಗೆ ಅಪ್ಲೈ ಮಾಡುವುದರಿಂದ, ಎಲ್​ಐಸಿ ಷೇರುಗಳು ಅಲಾಟ್ ಆಗುವುದು ಅಥವಾ ಖರೀದಿ ಮಾಡುವುದರಿಂದ ಚಿಲ್ಲರೆ ಹೂಡಿಕೆದಾರರಿಗೆ ಇದರಿಂದ ಖಡಾಖಂಡಿತವಾಗಿ ಲಾಭವೇ ಆಗುತ್ತದೆ ಎನ್ನಲು ಸಾಧ್ಯವಿಲ್ಲ. ಲಿಸ್ಟಿಂಗ್​ಗೆ ನಿಗದಿಪಡಿಸಿರುವ ಬೆಲೆಯಷ್ಟು ಮೌಲ್ಯವನ್ನು ಎಲ್​ಐಸಿ ಷೇರುಗಳು ಉಳಿಸಿಕೊಳ್ಳದೆಯೂ ಇರಬಹುದು.

ಇದನ್ನೂ ಓದಿ: LIC IPO: ಎಲ್​ಐಸಿ ಐಪಿಒಗೆ ಅಪ್ಲೈ ಮಾಡೋಕೆ ಆಸೆಯಿದೆಯೇ? ಡಿಮ್ಯಾಟ್ ಅಕೌಂಟ್ ಬೇಕೇಬೇಕು: ಎಲ್ಲಿ ಓಪನ್ ಮಾಡಿದ್ರೆ ಒಳ್ಳೇದು?

ಇದನ್ನೂ ಓದಿ: LIC IPO: ಎಲ್​ಐಸಿ ಐಪಿಒ ಬಗ್ಗೆ ಪಾಲಿಸಿದಾರರು, ರೀಟೇಲ್ ಹೂಡಿಕೆದಾರರು, ಉದ್ಯೋಗಿಗಳು ತಿಳಿದಿರಬೇಕಾದ 10 ಸಂಗತಿ