
ನವದೆಹಲಿ, ಮಾರ್ಚ್ 10: ನಾಲ್ಕು ದೇಶಗಳ ಯೂರೋಪಿಯನ್ ಮುಕ್ತ ವ್ಯಾಪಾರ ಸಂಘಟನೆಯೊಂದಿಗೆ (EFTA- European Free Trade Association) ಭಾರತ ಫ್ರೀ ಟ್ರೇಡ್ ಒಪ್ಪಂದಕ್ಕೆ (FTA) ಸಹಿ ಹಾಕಿದ ಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಐತಿಹಾಸಿಕ ಎಂದು ಬಣ್ಣಿಸಿದ್ದಾರೆ. ಈ ಒಪ್ಪಂದವು ಎಲ್ಲರಿಗೂ ಒಳಿತು ತರುವಂಥದ್ದು ಎಂದು ಅವರು ಹೇಳಿದ್ದಾರೆ. ಹಲವು ಅಂಶಗಳಲ್ಲಿ ರಚನಾತ್ಮಕ ಭಿನ್ನತೆ ಇದ್ದರೂ ಎಲ್ಲಾ ದೇಶಗಳಿಗೂ ಒಳಿತಾಗಬಲ್ಲ ವಾತಾವರಣವನ್ನು ನಮ್ಮ ಆರ್ಥಿಕತೆಗಳು ಹೊಂದಿವೆ. ನಮ್ಮ ಮುಕ್ತ, ನ್ಯಾಯಯುತ ಮತ್ತು ಸಮಾನ ವ್ಯಾಪಾರಕ್ಕೆ ನಮಗಿರುವ ಬದ್ಧತೆಯನ್ನು ಈ ವ್ಯಾಪಾರ ಒಪ್ಪಂದವು ದ್ಯೋತಕವಾಗಿದೆ ಎಂದೂ ಪ್ರಧಾನಿಗಳು ವರ್ಣಿಸಿದ್ದಾರೆ.
ಯೂರೋಪಿಯನ್ ಫ್ರೀ ಟ್ರೇಡ್ ಅಸೋಸಿಯೇಶನ್ನಲ್ಲಿ ಸ್ವಿಟ್ಜರ್ಲ್ಯಾಂಡ್, ನಾರ್ವೇ, ಐಸ್ಲ್ಯಾಂಡ್ ಮತ್ತು ಲೇಶ್ಟೆನ್ಸ್ಟೀನ್ ಈ ನಾಲ್ಕು ದೇಶಗಳಿವೆ. ಭಾರತವಲ್ಲದೇ ವಿಶ್ವದ ಇತರ 40 ದೇಶಗಳೊಂದಿಗೆ ಈ ಐರೋಪ್ಯ ಗುಂಪು ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಂಡಿದೆ. 2008ರಿಂದಲೂ ಭಾರತದ ಜೊತೆ ಎಫ್ಟಿಎ ಮಾಡಿಕೊಳ್ಳುವ ಅದರ ಪ್ರಯತ್ನ ಈಗ ಫಲಪ್ರದವಾಗಿದೆ. ಭಾರತ ಕಳೆದ 10 ವರ್ಷದಲ್ಲಿ ಫ್ರೀ ಟ್ರೇಡ್ ಒಪ್ಪಂದ ಮಾಡಿಕೊಂಡಿರುವುದು ಇದು ನಾಲ್ಕನೇ ಬಾರಿ. ಈ ಹಿಂದೆ ಮಾರಿಷಸ್, ಯುಎಇ ಮತ್ತು ಆಸ್ಟ್ರೇಲಿಯಾದ ಜೊತೆ ಎಫ್ಟಿಎ ಮಾಡಿಕೊಂಡಿತ್ತು. ಇದರೊಂದಿಗೆ ಒಟ್ಟಾರೆ 14 ಮುಕ್ತ ವ್ಯಾಪಾರ ಒಪ್ಪಂದಗಳಿಗೆ ಭಾರತ ಈವರೆಗೆ ಸಹಿಹಾಕಿದೆ. ಇದಲ್ಲದೇ ಆರು ಆದ್ಯತಾ ಒಪ್ಪಂದಗಳಿಗೂ ಭಾರತ ಸಹಿ ಹಾಕಿದೆ. ಭಾರತ ಒಟ್ಟಾರೆ 94 ದೇಶಗಳೊಂದಿಗೆ ಆದ್ಯತಾ ವ್ಯಾಪಾರ ಸಂಬಂಧಗಳನ್ನು ಹೊಂದಿದಂತಾಗಿದೆ. ಮುಂದಿನ ದಿನಗಳಲ್ಲಿ ಈ ರೀತಿ ಆದ್ಯತಾ ಸಂಬಂಧ ಇರುವ ದೇಶಗಳ ಸಂಖ್ಯೆ 120ಕ್ಕೂ ಹೆಚ್ಚಾಗಬಹುದು.
ಇವತ್ತು ಭಾರತ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಂಡಿರುವ ಯೂರೋಪಿಯನ್ ಫ್ರೀ ಟ್ರೇಡ್ ಅಸೋಸಿಯೇಶನ್ನ ದೇಶಗಳು ಡಿಜಿಟಲ್ ಟ್ರೇಡ್, ಬ್ಯಾಂಕಿಂಗ್, ಹಣಕಾಸು ಸೇವೆ, ಸಾರಿಗೆ, ಕೈಗಾರಿಕ ಯಂತ್ರೋಪಕರಣ, ಬಯೋಟೆಕ್ನಾಲಜಿ, ಔಷಧ, ರಾಸಾಯನಿಕ, ಆಹಾರ ಸಂಸ್ಕರಣೆ, ಸ್ವಚ್ಛ ಇಂಧನ ಇತ್ಯಾದಿ ವಿವಿಧ ಕ್ಷೇತ್ರಗಳಲ್ಲಿ ಸಂಶೋಧನೆ ಮತ್ತು ನಾವೀನ್ಯತೆಗೆ ಜಾಗತಿಕ ಮನ್ನಣೆ ಪಡೆದಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಈ ಗುಂಪಿನ ಜೊತೆಗಿನ ಎಫ್ಟಿಎಯ ಮಹತ್ವವನ್ನು ಜಾಹೀರುಗೊಳಿಸಿದ್ದಾರೆ.
ನರೇಂದ್ರ ಮೋದಿ ಹೇಳಿಕೆ
ಕಳೆದ 10 ವರ್ಷದಲ್ಲಿ ಭಾರತದ ಆರ್ಥಿಕತೆ ಸಾಕಷ್ಟು ಜಿಗಿತ ಕಂಡಿದೆ. ವಿಶ್ವದ 11ನೇ ಅತಿದೊಡ್ಡ ಆರ್ಥಿಕತೆಯಿಂದ ಈಗ 5ನೇ ಸ್ಥಾನಕ್ಕೆ ಹೋಗಿದೆ. ತಮ್ಮ ಮುಂದಿನ ಗುರಿ ಮೂರನೇ ಸ್ಥಾನಕ್ಕೆ ಹೋಗುವುದು ಎಂದ ಅವರು, ಇಎಫ್ಟಿಎ ದೇಶಗಳೊಂದಿಗಿನ ಈ ಒಪ್ಪಂದವು ಎಲ್ಲರಿಗೂ ಸಂಪದ್ಭರಿತ ಭವಿಷ್ಯದತ್ತ ಪ್ರಯಾಣದಲ್ಲಿ ಹೊಸ ಅಧ್ಯಾಯದ ಮುನ್ನುಡಿಯಾಗಿದೆ ಎಂದಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ