UPI In Gulf: ಬಹರೇನ್, ಸೌದಿ ಮೊದಲಾದ ಗಲ್ಫ್ ದೇಶಗಳಲ್ಲೂ ಸದ್ಯದಲ್ಲೇ ಭಾರತದ ಯುಪಿಐ ಪಾವತಿ ವ್ಯವಸ್ಥೆ?

|

Updated on: Jun 13, 2023 | 11:32 AM

NPCI In Talks With Gulf Countries: ಬಹಳ ಮಂದಿ ಭಾರತೀಯರು ಗಲ್ಫ್ ದೇಶಗಳಲ್ಲಿ ನೆಲಸಿದ್ದಾರೆ, ಅಥವಾ ಕೆಲಸ ಮಾಡುತ್ತಿದ್ದಾರೆ. ತಮ್ಮ ತಾಯ್ನಾಡಿನಲ್ಲಿರುವ ಮನೆಗಳಿಗೆ ಹಣ ಕಳುಹಿಸಲು ಬಹಳಷ್ಟು ವೆಚ್ಚವಾಗುತ್ತದೆ. ಈ ಹಿನ್ನೆಲೆಯಲ್ಲಿ ಯುಪಿಐ ಪಾವತಿ ವ್ಯವಸ್ಥೆ ಬಂದರೆ ಅವರಿಗೆ ಅನುಕೂಲವಾಗುತ್ತದೆ.

UPI In Gulf: ಬಹರೇನ್, ಸೌದಿ ಮೊದಲಾದ ಗಲ್ಫ್ ದೇಶಗಳಲ್ಲೂ ಸದ್ಯದಲ್ಲೇ ಭಾರತದ ಯುಪಿಐ ಪಾವತಿ ವ್ಯವಸ್ಥೆ?
ಗಲ್ಫ್ ರಾಷ್ಟ್ರ
Follow us on

ನವದೆಹಲಿ: ಭಾರತದ ಯುಪಿಐ ಪಾವತಿ ವ್ಯವಸ್ಥೆ (UPI Payments System) ಇಡೀ ವಿಶ್ವದ ಗಮನ ಸೆಳೆದಿದೆ. ಇದಕ್ಕೆ ಸಾಕ್ಷಿಯಾಗಿ, ಭೂತಾನ್, ನೇಪಾಳ ದೇಶಗಳು ಯುಪಿಐ ವ್ಯವಸ್ಥೆ ಅಳವಡಿಸಿಕೊಂಡಿವೆ. ಸಿಂಗಾಪುರದ ಮತ್ತು ಭಾರತದ ಮಧ್ಯೆ ಡಿಜಿಟಲ್ ಪಾವತಿಯ ಹೊಂದಾಣಿಕೆ ವ್ಯವಸ್ಥೆಯಾಗಿದೆ. ಹೀಗೆ ಒಂದೊಂದೇ ದೇಶಗಳು ಯುಪಿಐನತ್ತ ಕಣ್ಣು ಹೊರಳಿಸುತ್ತಿವೆ. ಈಗ ಗಲ್ಫ್ ದೇಶಗಳು ಯುಪಿಐ ಬಗ್ಗೆ ಆಸಕ್ತಿ ತೋರಿರುವ ಸಂಗತಿ ಮಾಧ್ಯಮಗಳಲ್ಲಿ ವರದಿ ಆಗಿದೆ. ಬಹರೇನ್, ಸೌದಿ ಅರೇಬಿಯಾ ಸೇರಿದಂತೆ ಮಧ್ಯಪ್ರಾಚ್ಯ ಮತ್ತು ಗಲ್ಫ್ ದೇಶಗಳ ಜೊತೆ ಭಾರತ ಸರ್ಕಾರ ಈ ಸಂಬಂಧ ಮಾತುಕತೆ ನಡೆಸುತ್ತಿದೆ. ಹಲವು ದೇಶಗಳು ಈ ಮಾತುಕತೆಯನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಲು ಆಸಕ್ತಿ ತೋರಿವೆಯಂತೆ. ಅಂದರೆ, ಕೆಲವೊಂದಿಷ್ಟು ಗಲ್ಫ್ ದೇಶಗಳಲ್ಲಾದರೂ ಯುಪಿಐ ಪಾವತಿ ವ್ಯವಸ್ಥೆ ಬರುವ ಸಾಧ್ಯತೆ ದಟ್ಟವಾಗಿದೆ.

ಬಹಳ ಮಂದಿ ಭಾರತೀಯರು ಗಲ್ಫ್ ದೇಶಗಳಲ್ಲಿ ನೆಲಸಿದ್ದಾರೆ, ಅಥವಾ ಕೆಲಸ ಮಾಡುತ್ತಿದ್ದಾರೆ. ತಮ್ಮ ತಾಯ್ನಾಡಿನಲ್ಲಿರುವ ಮನೆಗಳಿಗೆ ಹಣ ಕಳುಹಿಸಲು ಬಹಳಷ್ಟು ವೆಚ್ಚವಾಗುತ್ತದೆ. ಈ ಹಿನ್ನೆಲೆಯಲ್ಲಿ ಯುಪಿಐ ಪಾವತಿ ವ್ಯವಸ್ಥೆ ಬಂದರೆ ಅವರಿಗೆ ಅನುಕೂಲವಾಗುತ್ತದೆ. ಇದೇ ಕಾರಣಕ್ಕೆ ಭಾರತ ಸರ್ಕಾರ ಮಧ್ಯಪ್ರಾಚ್ಯ ದೇಶಗಳಲ್ಲಿ ಯುಪಿಐ ಪಾವತಿ ವ್ಯವಸ್ಥೆ ಬಗ್ಗೆ ಹೆಚ್ಚು ಆಸಕ್ತಿ ತೋರುತ್ತಿದೆ. ಗಲ್ಫ್ ದೇಶದಿಂದ ಭಾರತಕ್ಕೆ ಮತ್ತು ಭಾರತದಿಂದ ಗಲ್ಫ್ ದೇಶಕ್ಕೆ ಹಣ ಕಳುಹಿಸಲು ಸಾಧ್ಯವಾಗುವಂತೆ ಬ್ಯಾಂಕ್​ನಿಂದ ಬ್ಯಾಂಕ್​ಗೆ ಹಣ ವರ್ಗಾವಣೆ ವ್ಯವಸ್ಥೆ ಜಾರಿಗೆ ತರುವುದು ಭಾರತದ ಉದ್ದೇಶ. ಇದರಿಂದ ರೆಮಿಟೆನ್ಸ್ ಸುಲಭವಾಗುತ್ತದೆ.

ಇದನ್ನೂ ಓದಿCrorepati Calculation: 10 ವರ್ಷದಲ್ಲಿ 1 ಕೋಟಿ ಹಣ ಗಳಿಸಲು ತಿಂಗಳಿಗೆ ಎಷ್ಟು ಹೂಡಿಕೆ ಮಾಡಬೇಕು? ಇಲ್ಲಿದೆ ಎಸ್​ಐಪಿ ಲೆಕ್ಕಾಚಾರ

ಯುಪಿಐ ರೂಪಿಸಿರುವ ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ (ಎನ್​ಪಿಸಿಐ) ಕೊಲ್ಲಿ ದೇಶಗಳೊಂದಿಗೆ ನಡೆಸುತ್ತಿರುವ ಮಾತುಕತೆಗೆ ಭಾರತದ ಆರ್​ಬಿಐ, ಗಲ್ಫ್ ದೇಶವೊಂದರ ಸೆಂಟ್ರಲ್ ಬ್ಯಾಂಕ್ ಹಾಗೂ ಭಾರತೀಯ ರಾಯಭಾರ ಕಚೇರಿ ವ್ಯವಸ್ಥೆ ಮಾಡುತ್ತಿವೆ. ಈ ಮಾತುಕತೆಗಳು ಇನ್ನೂ ಆರಂಭಿಕ ಹಂತದಲ್ಲಿವೆಯಾದರೂ ಕೆಲ ದೇಶಗಳು ಮಾತುಕತೆ ಮುಂದುವರಿಸಲು ಹೆಚ್ಚು ಆಸಕ್ತಿ ತೋರುತ್ತಿರುವುದು ಕಂಡುಬಂದಿದೆ.

ಮಧ್ಯಪ್ರಾಚ್ಯ ಪ್ರದೇಶದಲ್ಲಿರುವ ಯುಎಇ, ಬಹರೇನ್, ಸೌದಿ ಅರೇಬಿಯಾ, ಓಮನ್, ಕತಾರ್ ಮತ್ತು ಕುವೇತ್ ದೇಶಗಳು ಗಲ್ಫ್ ರಾಷ್ಟ್ರಗಳಾಗಿವೆ. ದುಬೈ, ಶಾರ್ಜಾ ಮತ್ತು ಅಬುಧಾಬಿ ನಗರಗಳು ಯುಎಇ ದೇಶದಲ್ಲಿವೆ. ಈ ಎಲ್ಲಾ ದೇಶಗಳಲ್ಲೂ ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇಲ್ಲಿ ಯುಪಿಐ ಮಾದರಿ ಪಾವತಿ ವ್ಯವಸ್ಥೆ ಬಂದರೆ ಇಲ್ಲಿನ ಭಾರತೀಯರಿಗೆ ತಮ್ಮ ಕುಟುಂಬಗಳಿಗೆ ಹಣ ರವಾನೆ ಮಾಡುವ ಕೆಲಸ ಸುಗಮಗೊಳ್ಳುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ