ಬ್ರಿಟಿಷರಿಂದ ಭಾರತಕ್ಕೆ ಸ್ವಾತಂತ್ರ್ಯ ಬಂದು 76 ವರ್ಷ ಆಗಿದೆ. ಒಂದಷ್ಟು ಸಾಮಾಜಿಕ ಸುಧಾರಣೆ ಬಿಟ್ಟರೆ ಬ್ರಿಟಿಷರಿಂದ ಭಾರತಕ್ಕೆ ಹಾನಿಯಾಗಿದ್ದೇ ಹೆಚ್ಚು. ಬ್ರಿಟಿಷರು ಬರುವ ಮುನ್ನ ಭಾರತ ಬಹುತೇಕ ಶ್ರೀಮಂತವಾಗಿತ್ತು. ವಿಶ್ವದ ಆರ್ಥಿಕತೆಯಲ್ಲಿ (World Economy) ಭಾರತದ ಪಾಲು ಶೇ. 25ಕ್ಕಿಂತಲೂ ಹೆಚ್ಚಿತ್ತು ಎಂದು ಹೇಳಲಾಗುತ್ತದೆ. ಬ್ರಿಟಿಷರು ಬಂದ ಬಳಿಕ ಭಾರತದ ಆರ್ಥಿಕ ಅವನತಿ (Economic Decline) ಆರಂಭವಾಯಿತು. ಅವರು 1947ರಲ್ಲಿ ಅವರು ಸ್ವಾತಂತ್ರ್ಯ ಒಪ್ಪಿಸಿ ಹೋದಾಗ ಭಾರತದ ಜಿಡಿಪಿ ಕೇವಲ 2.7 ಲಕ್ಷಕೋಟಿ ರೂ ಇತ್ತಂತೆ. ಅಂದರೆ ಈಗಿನ ಕರ್ನಾಟಕ ಬಜೆಟ್ ಗಾತ್ರಕ್ಕಿಂತಲೂ ಕಡಿಮೆ ಇತ್ತು ಭಾರತದ ಜಿಡಿಪಿ. ಒಂದು ಹಂತದಲ್ಲಿ ವಿಶ್ವ ಆರ್ಥಿಕತೆಯಲ್ಲಿ ಶೇ. 25ರಷ್ಟಿದ್ದ ಭಾರತದ ಪಾಲು ಕೇವಲ ಶೇ. 3ಕ್ಕೆ ಇಳಿದುಹೋಗಿತ್ತು. ಬ್ರಿಟಿಷರು ಭಾರತದ ಅರ್ಥವ್ಯವಸ್ಥೆಯನ್ನೇ ಛಿದ್ರ ಮಾಡಿದ್ದರು. ಬ್ರಿಟಿಷರು ಬರುವ ಮುನ್ನ ಭಾರತದ ಅರ್ಥ ವ್ಯವಸ್ಥೆ ಯಾವ ರೀತಿ ಇತ್ತು, ಅವರ ಬಂದ ಬಳಿಕ ಹೇಗೆ ಹಾಳಾಯಿತು ಎಂಬ ವಿವರ ಈ ಕೆಳಗಿದೆ.
ಭಾರತದ್ದು ಸ್ವತಂತ್ರ ಅರ್ಥವ್ಯವಸ್ಥೆಯಾಗಿತ್ತು. ಕೃಷಿ ಪ್ರಮುಖ ಆದಾಯ ಮೂಲವಾಗಿತ್ತು. ಇದರ ಜೊತೆಗೆ ಕುಲಕಸುಬುಗಳು ಅರ್ಥ ವ್ಯವಸ್ಥೆಗೆ ಚೈತನ್ಯ ನೀಡಿದ್ದವು. ಬಹಳಷ್ಟು ಕುಲಕಸುಬುಗಳು ಭಾರತದಾದ್ಯಂತ ಹುಲುಸಾಗಿ ಬೆಳೆದಿದ್ದವು. ಭಾರತದ ಕರಕುಶಲ ವಸ್ತುಗಳಿಗೆ ವಿಶ್ವಾದ್ಯಂತ ಅನೇಕ ಕಡೆ ಮಾರುಕಟ್ಟೆಗಳಿದ್ದವು. ಕೈಮಗ್ಗ ಉದ್ಯಮ ಪ್ರಬಲವಾಗಿತ್ತು. ದೂರದ ಪರ್ಷಿಯಾ, ಇಟಲಿ ಮೊದಲಾದ ಕಡೆ ಭಾರತದ ಉತ್ಪನ್ನಗಳು ರಫ್ತಾಗುತ್ತಿದ್ದವು.
ಬ್ರಿಟಿಷರು ಭಾರತವನ್ನು ಆಕ್ರಮಿಸಿದ್ದು ಆಗ ಕೈಗಾರಿಕಾ ಕ್ರಾಂತಿಯ ಕಾಲಘಟ್ಟದಲ್ಲಿ. ಪ್ಯಾರಸೈಟ್ ಅಥವಾ ಪರಾವಲಂಬಿ ಜಂತುವಿನಿಂತೆ ಬ್ರಿಟಿಷರು ಭಾರತದಲ್ಲಿ ಬಂದು ಕೂತರು. ಇಲ್ಲಿಂದ ಹೇರಳವಾಗಿ ಸಿಗುತ್ತಿದ್ದ ಕಚ್ಛಾವಸ್ತುಗಳನ್ನು ಬಳಸಿ ತಾಯ್ನಾಡಿನಲ್ಲಿ ಬ್ರಿಟಿಷರು ಕೈಗಾರಿಕೆಗಳಿಗೆ ಬಳಸಿಕೊಂಡರು. ಬ್ರಿಟನ್ ಕೈಗಾರಿಕೆಗಳಿಗೆ ಭಾರತ ಕಚ್ಛಾವಸ್ತು ಪೂರೈಕೆದಾರ ದೇಶ ಮಾತ್ರವಾಯಿತು. ಭಾರತದಿಂದ ಬ್ರಿಟನ್ಗೆ ಹೋದ ಕಚ್ಛಾ ವಸ್ತುಗಳು ಅಂತಿಮ ಉತ್ಪನ್ನವಾಗಿ ಮತ್ತೆ ಭಾರತಕ್ಕೆ ಆಮದಾಗುತ್ತಿದ್ದವು. ಈ ಮೂಲಕ ಬ್ರಿಟನ್ ಕೈಗಾರಿಕೆಗಳು ಭಾರೀ ಲಾಭ ಮಾಡಿಕೊಂಡವು.
ಇದನ್ನೂ ಓದಿ: ಭಾರತದಲ್ಲಿ ಹಣದುಬ್ಬರ ಭಾರೀ ಏರಿಕೆ; ಜುಲೈ ತಿಂಗಳ ಇನ್ಫ್ಲೇಶನ್ ಶೇ. 7.44ಕ್ಕೆ ಜಿಗಿತ
ಬ್ರಿಟಿಷರಿಗೆ ಭಾರತದ ಆರ್ಥಿಕತೆ ವ್ಯವಸ್ಥೆಯನ್ನು ಉತ್ತಮಗೊಳಿಸಬೇಕೆನ್ನುವ ಯಾವ ಇರಾದೆಯೂ ಇರಲಿಲ್ಲ. ಅವರಿಗೆ ವಾಸಿಸಲು ಅನುಕೂಲವಾಗುವ ಪ್ರದೇಶಗಳನ್ನು ಅಭಿವೃದ್ಧಿಪಡಿಸಿದ್ದು, ಕಚ್ಛಾ ವಸ್ತುಗಳನ್ನು ಸಾಗಿಸಲು ಒಂದಷ್ಟು ಸೌಕರ್ಯ ವ್ಯವಸ್ಥೆ ರೂಪಿಸಿದ್ದು ಬಿಟ್ಟರೆ ಬೇರೇನೂ ಮಾಡಲಿಲ್ಲ.
ಕೈಗಾರಿಕಾ ಕ್ರಾಂತಿಯಿಂದಾಗಿ ಭಾರತದ ಕರಕುಶಲ ಮಾರುಕಟ್ಟೆ ಬಹುತೇಕ ನೆಲಕಚ್ಚಿತ್ತು. ಬ್ರಿಟನ್ನರು ಮನಸು ಮಾಡಿದ್ದರೆ ಭಾರತದಲ್ಲೇ ಕೈಗಾರಿಕೆಗಳನ್ನು ಸ್ಥಾಪಿಸಬಹುದಾಗಿತ್ತು. ಆದರೆ, ಅವರಿಗೆ ಭಾರತಕ್ಕೆ ಒಳಿತು ಮಾಡುವ ಲವಶೇಷ ಉದ್ದೇಶವೂ ಇರಲಿಲ್ಲ. ಅಷ್ಟೇ ಅಲ್ಲ, ಭಾರತದ ಆರ್ಥಿಕ ಪರಿಸ್ಥಿತಿ ಹೇಗಿದೆ ಎಂದು ಅಳೆಯುವ ಕನಿಷ್ಠ ಆಸಕ್ತಿಯನ್ನೂ ಬ್ರಿಟಿಷರು ತೋರಲಿಲ್ಲ. ದಾದಾಭಾಯ್ ನವರೋಜಿ, ವಿ.ಕೆ.ಆರ್.ವಿ. ರಾವ್, ಆರ್.ಸಿ. ದೇಸಾಯಿ, ವಿಲಿಯಮ್ ಡಿಗ್ಬಿ ಮೊದಲಾದ ಕೆಲವರು ಮಾತ್ರ ಅಂದಿನ ಭಾರತದ ಜಿಡಿಪಿ ಇತ್ಯಾದಿಯನ್ನು ಅಂದಾಜು ಮಾಡುವ ಪ್ರಯತ್ನ ತೋರಿದ್ದರು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ