ಭಾರತದಲ್ಲಿ ಹಣದುಬ್ಬರ ಭಾರೀ ಏರಿಕೆ; ಜುಲೈ ತಿಂಗಳ ಇನ್​ಫ್ಲೇಶನ್ ಶೇ. 7.44ಕ್ಕೆ ಜಿಗಿತ

Retail Inflation On 7.44%: ಭಾರತದಲ್ಲಿ ಜುಲೈ ತಿಂಗಳಲ್ಲಿ ಗ್ರಾಹಕ ಬೆಲೆ ಅನುಸೂಚಿ ಆಧಾರಿತ ಹಣದುಬ್ಬರ ಶೇ. 4.87ರಿಂದ ಶೇ. 7.44ಕ್ಕೆ ಜಿಗಿದಿದೆ. ಇದರೊಂದಿಗೆ ಐದು ತಿಂಗಳ ಬಳಿಕ ಹಣದುಬ್ಬರವು ಆರ್​ಬಿಐ ನಿಗದಿ ಮಾಡಿದ ತಾಳಿಕೆ ಮಿತಿಗಿಂತ ಹೊರಗೆ ಹೋಗಿದೆ. ಈಗ ಹಣದುಬ್ಬರವನ್ನು ಮತ್ತೆ ತಹಬದಿಗೆ ತರುವ ಸವಾಲು ಆರ್​ಬಿಐ ಎದುರಿಗಿದೆ.

ಭಾರತದಲ್ಲಿ ಹಣದುಬ್ಬರ ಭಾರೀ ಏರಿಕೆ; ಜುಲೈ ತಿಂಗಳ ಇನ್​ಫ್ಲೇಶನ್ ಶೇ. 7.44ಕ್ಕೆ ಜಿಗಿತ
ರೀಟೇಲ್ ಹಣದುಬ್ಬರ
Follow us
|

Updated on: Aug 14, 2023 | 6:45 PM

ನವದೆಹಲಿ, ಆಗಸ್ಟ್ 14: ಭಾರತದಲ್ಲಿ ಹಣದುಬ್ಬರ (Retail Inflation) ಹೈಜಂಪ್ ಮಾಡಿದೆ. ಜೂನ್ ತಿಂಗಳಲ್ಲಿ ಶೇ. 4.87ರಷ್ಟಿದ್ದ ರೀಟೇಲ್ ಹಣದುಬ್ಬರ ಜುಲೈನಲ್ಲಿ ಶೇ. 7.44ಕ್ಕೆ ಜಿಗಿದಿದೆ. ಇದರೊಂದಿಗೆ ಆರ್​ಬಿಐನ ಹಣದುಬ್ಬರ ತಾಳಿಕೆ (Inflation Tolerance Band) ಮಿತಿಯಾದ ಶೇ. 6ರ ಗಡಿ ದಾಟಿ ಬಹಳ ಎತ್ತರಕ್ಕೆ ಹೋಗಿದೆ. ಹಣದುಬ್ಬರ ಏರಿಕೆಯಾಗುವ ನಿರೀಕ್ಷೆ ಇತ್ತಾದರೂ ಈ ಪರಿ ಹೆಚ್ಚುತ್ತದೆಂದು ಅಂದಾಜಿಸಿದ್ದವರು ಕಡಿಮೆ. ಹಣದುಬ್ಬರ ಏರಿಕೆಯ ಹಿಂದೆ ಟೊಮೆಟೋ ಪ್ರಮುಖವಾಗಿ ಇದೆ. ಟೊಮೆಟೋ ಸೇರಿದಂತೆ ವಿವಿಧ ತರಕಾರಿ ಬೆಲೆಗಳು ತೀಕ್ಷ್ಣವಾಗಿ ಏರಿದ್ದು ಇನ್​ಫ್ಲೇಶನ್ ಏರಿಕೆಗೆ ಕಾರಣವಾಗಿದೆ.

ಕುತೂಹಲವೆಂದರೆ ರಾಯ್ಟರ್ಸ್ ಸಂಸ್ಥೆ (Reuters Poll) ಇತ್ತೀಚೆಗೆ ನಡೆಸಿದ್ದ ಸಮೀಕ್ಷೆಯಲ್ಲಿ 53 ಆರ್ಥಿಕ ತಜ್ಞರು ಮಾಡಿದ ಅಂದಾಜು ಪ್ರಕಾರ ರೀಟೇಲ್ ಹಣದುಬ್ಬರ ಅಥವಾ ಗ್ರಾಹಕ ಬೆಲೆ ಅನುಸೂಚಿ ಆಧಾರಿತ ಹಣದುಬ್ಬರ ಸರಾಸರಿ ಶೇ. 6.40ರಷ್ಟು ಇರಬಹುದು ಎಂದು ಹೇಳಲಾಗಿತ್ತು.

ಗ್ರಾಹಕ ಆಹಾರ ಬೆಲೆ ಅನುಸೂಚಿ (CFPI) ಶೇ. 11.51ಕ್ಕೆ ಹೆಚ್ಚಳವಾಗಿರುವುದು ರೀಟೇಲ್ ಹಣದುಬ್ಬರ ಅತಿಯಾಗಿ ಏರಿರುವುದಕ್ಕೆ ಕಾರಣವಾಗಿದೆ. ಜೂನ್​ನಲ್ಲಿ ಸಿಎಫ್​ಪಿಐ ಶೇ. 4.49 ಮಾತ್ರ ಇತ್ತು. ಇನ್ನು, ಗ್ರಾಮೀಣ ಭಾಗದ ಹಣದುಬ್ಬರ ಶೇ. 4.78ರಿಂದ ಶೇ. 7.63ಕ್ಕೆ ಏರಿದೆ. ನಗರದ ಹಣದುಬ್ಬರ ಶೇ. 4.96ರಿಂದ ಶೇ. 7.20ಗೆ ಏರಿದೆ.

ಇದನ್ನೂ ಓದಿ: ಮೈನಸ್ 1.36 ಪ್ರತಿಶತದಲ್ಲಿ ಜುಲೈ ತಿಂಗಳ ಸಗಟು ಹಣದುಬ್ಬರ; ಸತತ 4ನೇ ತಿಂಗಳು ಮೈನಸ್​ನಲ್ಲಿ ಡಬ್ಲ್ಯುಪಿಐ ಇನ್​ಫ್ಲೇಶನ್

ಆರ್​ಬಿಐ ಮುಂದಿನ ಬಾರಿ ರೆಪೋ ದರ ಏರಿಸುವ ಸಾಧ್ಯತೆ

ಈ ತಿಂಗಳು ನಡೆದ ಆರ್​ಬಿಐ ಎಂಪಿಸಿ ಸಭೆಯಲ್ಲಿ ಬಡ್ಡಿದರ ಏರಿಸದೇ ಇರಲು ನಿರ್ಧರಿಸಲಾಗಿತ್ತು. ಹಣದುಬ್ಬರ ಏರಿಕೆಯಾಗುವ ನಿರೀಕ್ಷೆ ಇದ್ದರೂ ಬಡ್ಡಿದರ ಏರಿಸಲಿಲ್ಲ. ಅದರ ಬದಲು ಹೆಚ್ಚುವರಿ ಕ್ಯಾಷ್ ರಿಸರ್ವ್ ರೇಷಿಯೋವನ್ನು ಶೇ. 10ಕ್ಕೆ ನಿಗದಿ ಮಾಡಿತ್ತು. ಈ ಮೂಲಕ ಹಣದುಬ್ಬರವನ್ನು ಹತೋಟಿಗೆ ತರುವುದು ಆರ್​ಬಿನ ಉದ್ದೇಶವಾಗಿದೆ.

ಹವಾಮಾನ ವೈಪರೀತ್ಯದ ಕಾರಣ ಆಹಾರ ಉತ್ಪನ್ನಗಳಲ್ಲಿ ವ್ಯತ್ಯಯವಾಗಲಿರುವುದರಿಂದ ಮುಂದಿನ ದಿನಗಳಲ್ಲಿ ವಿವಿಧ ತರಕಾರಿಗಳ ಬೆಲೆ ತುಟ್ಟಿಯಾಗಲಿವೆ. ಅಕ್ಟೋಬರ್​ನಲ್ಲಿ ನಡೆಯುವ ಮುಂದಿನ ಎಂಪಿಸಿ ಸಭೆಯಲ್ಲಿ ಆರ್​ಬಿಐ ಬಡ್ಡಿದರ ಹೆಚ್ಚಿಸುವ ಸಾಧ್ಯತೆ ದಟ್ಟವಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ