IPL 2025: ಐಪಿಎಲ್ ನಡುವೆ ಸಿಎಸ್‌ಕೆ ತಂಡದ ಸ್ಟಾರ್ ಆಟಗಾರನ ತಂದೆ ನಿಧನ
Devon Conway's Father Passes Away: ಐಪಿಎಲ್ 2025ರ 38ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಆಟಗಾರರು ಕಪ್ಪು ಪಟ್ಟಿಗಳನ್ನು ಧರಿಸಿ ಕಣಕ್ಕಿಳಿದಿದ್ದರು. ಅದಕ್ಕೆ ಕಾರಣ ತಂಡದ ಆರಂಭಿಕ ಆಟಗಾರ ಡೆವೊನ್ ಕಾನ್ವೇ ಅವರ ತಂದೆ ಇಹಲೋಕ ತ್ಯಜಿಸಿದ್ದರು. ಹೀಗಾಗಿ ಕಾನ್ವೇ ತಮ್ಮ ದೇಶಕ್ಕೆ ವಾಪಸ್ಸಾಗಿದ್ದಾರೆ.

ಐಪಿಎಲ್ 2025 (IPL 2025) ರ 38 ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್, ಚೆನ್ನೈ ಸೂಪರ್ ಕಿಂಗ್ಸ್ (MI vs CSK) ತಂಡವನ್ನು 9 ವಿಕೆಟ್‌ಗಳಿಂದ ಸೋಲಿಸಿತು. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಎಲ್ಲಾ ಆಟಗಾರರು ಎರಡನೇ ಇನ್ನಿಂಗ್ಸ್‌ನಲ್ಲಿ ಕಪ್ಪು ಪಟ್ಟಿಗಳನ್ನು ಧರಿಸಿ ಮೈದಾನಕ್ಕಿಳಿದಿದ್ದರು. ಇದನ್ನು ಗಮನಿಸಿದ ಅಭಿಮಾನಿಗಳು ಸಿಎಸ್‌ಕೆ ಆಟಗಾರರು ಯಾವ ಕಾರಣಕ್ಕೆ ತಮ್ಮ ತೋಳುಗಳಿಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಆಡುತ್ತಿದ್ದಾರೆ ಎಂಬ ಗೊಂದಲಕ್ಕೆ ಸಿಲುಕಿಕೊಂಡಿದ್ದರು. ಈ ಬಗ್ಗೆ ಮೊದಲು ಯಾರಿಗೂ ಯಾವುದೇ ಮಾಹಿತಿ ಇರಲಿಲ್ಲ. ಆದರೆ ಎರಡನೇ ಇನ್ನಿಂಗ್ಸ್ ಆರಂಭವಾದ ಕೆಲವೇ ನಿಮಿಷಗಳ ನಂತರ ವೀಕ್ಷಕ ವಿವರಣೆಗಾರರು, ಸಿಎಸ್‌ಕೆ ಆಟಗಾರರು ಏತಕ್ಕೆ ಕಪ್ಪು ಪಟ್ಟಿ ಧರಿಸಿದ್ದಾರೆ ಎಂಬುದನ್ನು ಬಹಿರಂಗಪಡಿಸಿದರು.
ಡೆವೊನ್ ಕಾನ್ವೇ ಅವರ ತಂದೆ ನಿಧನ
ಪಂದ್ಯದ ಮಧ್ಯದಲ್ಲಿ ಕನ್ನಡ ವೀಕ್ಷಕ ವಿವರಣೆಗಾರರು ಸಿಎಸ್‌ಕೆ ತಂಡದ ಆರಂಭಿಕ ಆಟಗಾರ ನ್ಯೂಜಿಲೆಂಡ್ನ ಡೆವೊನ್ ಕಾನ್ವೇ ಅವರ ತಂದೆ ನಿಧನರಾಗಿದ್ದಾರೆ ಎಂಬ ಮಾಹಿತಿ ನೀಡಿದ್ದರು. ಆ ಬಳಿಕ ಪಂದ್ಯದ ನಂತರದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಹರ್ಷ ಭೋಗ್ಲೆ, ಡೆವೊನ್ ಕಾನ್ವೇ ಅವರ ತಂದೆ ನಿಧನರಾಗಿದ್ದಾರೆ. ಹೀಗಾಗಿ ಅವರು ಈ ಪಂದ್ಯದಲ್ಲಿ ಆಡಲಿಲ್ಲ ಎಂಬ ಮಾಹಿತಿ ನೀಡಿ ಪ್ರಶಸ್ತಿ ಪ್ರಸ್ತುತಿ ಸಮಾರಂಭವನ್ನು ಪ್ರಾರಂಭಿಸಿದರು.
Standing with Devon Conway and his family in this difficult time of his father’s passing.
Our sincerest condolences. pic.twitter.com/AZi3f5dV7i
— Chennai Super Kings (@ChennaiIPL) April 21, 2025
ಆದಾಗ್ಯೂ ಕಾನ್ವೇ ತಮ್ಮ ದೇಶಕ್ಕೆ ವಾಪಸ್ಸಾಗಿದ್ದಾರೆಯೇ? ಇಲ್ಲವೇ ಎಂಬುದನ್ನು ಯಾರು ಖಚಿತಪಡಿಸಿಲ್ಲ. ಆದರೆ ಡೆವೊನ್ ಕಾನ್ವೇ ನ್ಯೂಜಿಲೆಂಡ್‌ಗೆ ತೆರಳಿರುವ ಸಾಧ್ಯತೆಗಳಿವೆ ಹೆಚ್ಚಿವೆ. ಏಕೆಂದರೆ ಈ ದುಃಖದ ಸಮಯದಲ್ಲಿ ಕಾನ್ವೇ ತನ್ನ ಕುಟುಂಬದೊಂದಿಗೆ ಇರಬೇಕಾಗುತ್ತದೆ. ಚೆನ್ನೈ ಸೂಪರ್ ಕಿಂಗ್ಸ್ ಕೂಡ ತನ್ನ ಅಧಿಕೃತ ಸೋಶೀಯಲ್ ಮೀಡಿಯಾ ಖಾತೆಯಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದ್ದು, ಡೆವೊನ್ ಕಾನ್ವೇ ಅವರ ಕಷ್ಟದ ಸಮಯದಲ್ಲಿ ನಾವು ಅವರ ಕುಟುಂಬದೊಂದಿಗೆ ನಿಲ್ಲುತ್ತೇವೆ ಎಂದು ಬರೆದುಕೊಂಡಿದೆ.
ಕೆಕೆಆರ್ ವಿರುದ್ಧ ಆಡಿದ್ದ ಕಾನ್ವೇ
ಏಪ್ರಿಲ್ 11 ರಂದು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಕಾನ್ವೇ ತಂಡದ ಪರ ತಮ್ಮ ಕೊನೆಯ ಪಂದ್ಯವನ್ನು ಆಡಿದ್ದರು. ಚೆಪಾಕ್ ಮೈದಾನದಲ್ಲಿ ನಡೆದ ಆ ಪಂದ್ಯದ ನಂತರ ಕಾನ್ವೇ ತಂಡದ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಂಡಿಲ್ಲ. ಇದೀಗ ತಂದೆಯನ್ನು ಕಳೆದುಕೊಂಡಿರುವ ಕಾನ್ವೇ ಮತ್ತೆ ಐಪಿಎಲ್ ಅಖಾಡದಲ್ಲಿ ಕಾಣಿಸಿಕೊಳ್ಳುತ್ತಾರಾ, ಇಲ್ಲವಾ ಎಂಬುದು ಸ್ಪಷ್ಟವಾಗಿಲ್ಲ. ಏಕೆಂದರೆ ಈ ಸೀಸನ್ನಲ್ಲಿ ಕಾನ್ವೇ ಅವರ ಪ್ರದರ್ಶನ ಕೂಡ ಉತ್ತಮವಾಗಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಅವರ ಬದಲಿಯಾಗಿ ಡೆವಾಲ್ಡ್ ಬ್ರೆವಿಸ್ ಆಡುವ ಸಾಧ್ಯತೆಗಳು ಹೆಚ್ಚಿವೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:33 pm, Mon, 21 April 25