- Kannada News Photo gallery Cricket photos Rohit Sharma's A+ Grade in BCCI Contracts: Retirement Speculation Ends, England Tour Ahead
Rohit Sharma: ರೋಹಿತ್ ಶರ್ಮಾಗೆ ಎ+ ಗ್ರೇಡ್ ನೀಡಿ ನಿವೃತ್ತಿ ವದಂತಿಗೆ ತೆರೆ ಎಳೆದ ಬಿಸಿಸಿಐ
Rohit Sharma Retirement: ಬಿಸಿಸಿಐ ತನ್ನ ಕೇಂದ್ರ ಒಪ್ಪಂದಗಳನ್ನು ಘೋಷಿಸಿದ್ದು, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಗೆ A+ ದರ್ಜೆ ದೊರೆತಿದೆ. ರೋಹಿತ್ ಕೇವಲ ಎರಡು ಮಾದರಿಗಳಲ್ಲಿ ಆಡುತ್ತಿದ್ದರೂ A+ ದರ್ಜೆ ಪಡೆದಿರುವುದು ಅಚ್ಚರಿ ಮೂಡಿಸಿದೆ. ಇದು ಅವರ ನಿವೃತ್ತಿ ಊಹಾಪೋಹಗಳಿಗೆ ತೆರೆ ಎಳೆದಿದೆ ಮತ್ತು ಇಂಗ್ಲೆಂಡ್ ಪ್ರವಾಸದಲ್ಲಿ ಅವರು ಭಾಗವಹಿಸುವ ಸಾಧ್ಯತೆ ಹೆಚ್ಚಿದೆ.
Updated on: Apr 21, 2025 | 9:20 PM

ಕೊನೆಗೂ ಬಿಸಿಸಿಐ ತನ್ನ ಕೇಂದ್ರ ಒಪ್ಪಂದ ಪಟ್ಟಿಯನ್ನು ಘೋಷಿಸಿದೆ.ಈ ಬಾರಿಯೂ ಬಿಸಿಸಿಐ ನಾಲ್ವರು ಆಟಗಾರರಿಗೆ ಎ+ ಗ್ರೇಡ್‌ನಲ್ಲಿ ಅವಕಾಶ ನೀಡಿದ್ದು, ಆ ನಾಲ್ವರಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ ಮತ್ತು ರವೀಂದ್ರ ಜಡೇಜಾ ಸೇರಿದ್ದಾರೆ. ಆದಾಗ್ಯೂ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಈ ಗ್ರೇಡ್‌ನಲ್ಲಿ ಸ್ಥಾನ ಪಡೆದಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿದೆ.

ಏಕೆಂದರೆ ಈ ಇಬ್ಬರು ಆಟಗಾರರು ಈಗ ಕೇವಲ 2 ಮಾದರಿಗಳಲ್ಲಿ ಮಾತ್ರ ಆಡುತ್ತಿದ್ದಾರೆ. ಆದಾಗ್ಯೂ ಈ ಇಬ್ಬರಿಗೆ ಎ+ ಗ್ರೇಡ್ ಸಿಕ್ಕಿದೆ. ಅದರಲ್ಲೂ ರೋಹಿತ್ ಶರ್ಮಾಗೆ ಈ ಗ್ರೇಡ್‌ನಲ್ಲಿ ಸ್ಥಾನ ಸಿಕ್ಕಿರುವುದು ಹಲವಾರು ಅನುಮಾನಗಳಿಗೆ ತೆರೆ ಎಳೆದಿದೆ. ಇದೀಗ ರೋಹಿತ್ ಶರ್ಮಾಗೆ ಎ+ ಗ್ರೇಡ್ ನೀಡುವುದರೊಂದಿಗೆ ಅವರ ನಿವೃತ್ತಿಯ ಊಹಾಪೋಹಗಳಿಗೂ ಅಂತ್ಯ ಸಿಕ್ಕಿದೆ.

ವಾಸ್ತವವಾಗಿ ಕಳೆದ ವರ್ಷ ಟೆಸ್ಟ್ ಮಾದರಿಯಲ್ಲಿ ರೋಹಿತ್ ಶರ್ಮಾ ಅವರ ಪ್ರದರ್ಶನ ವಿಶೇಷವಾಗಿರಲಿಲ್ಲ. ಕಳಪೆ ಫಾರ್ಮ್ನಿಂದ ಬಳಲುತ್ತಿದ್ದ ರೋಹಿತ್, ಇತ್ತ ತಮ್ಮ ನಾಯಕತ್ವವದಲ್ಲಿ ತಂಡವನ್ನು ಗೆಲುವಿನತ್ತ ಮುನ್ನಡೆಸಿರಲಿಲ್ಲ. ಪರಿಸ್ಥಿತಿ ಹೇಗಿತ್ತೆಂದರೆ ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಟೆಸ್ಟ್‌ನ ಆಡುವ ಹನ್ನೊಂದರ ಬಳಗದಿಂದಲೂ ರೋಹಿತ್ ಹೊರಗುಳಿದ್ದಿದ್ದರು. ಇದಾದ ನಂತರ, ರೋಹಿತ್ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತರಾಗಬಹುದು ಎಂಬ ಊಹಾಪೋಹಗಳು ಹುಟ್ಟಿಕೊಂಡಿದ್ದವು.

ರೋಹಿತ್ ಈಗಾಗಲೇ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಆದರೆ ಈಗ ಬಿಸಿಸಿಐ ಬಿಡುಗಡೆ ಮಾಡಿದ ಕೇಂದ್ರ ಒಪ್ಪಂದದಿಂದ, ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುತ್ತಿಲ್ಲ ಎಂಬುದು ಸಾಭೀತಾದಂತ್ತಾಗಿದೆ. ಜೂನ್‌ನಲ್ಲಿ ಟೀಂ ಇಂಡಿಯಾ ಐದು ಪಂದ್ಯಗಳ ಟೆಸ್ಟ್ ಸರಣಿಗಾಗಿ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದ್ದು ರೋಹಿತ್ ತಂಡದ ನಾಯಕತ್ವ ವಹಿಸಿಕೊಳ್ಳುವ ನಿರೀಕ್ಷೆಯಿದೆ.

ಕೇಂದ್ರ ಒಪ್ಪಂದವನ್ನು ನೀಡುವ ಮೊದಲು, ಬಿಸಿಸಿಐನ ಉನ್ನತ ಅಧಿಕಾರಿಗಳು ರೋಹಿತ್ ಶರ್ಮಾ ಅವರೊಂದಿಗೆ ಮಾತನಾಡಿ ಅವರ ಭವಿಷ್ಯದ ಯೋಜನೆಗಳ ಬಗ್ಗೆ ಕೇಳಿರುವ ಸಾಧ್ಯತೆಗಳಿವೆ. ಇಬ್ಬರ ನಡುವಿನ ಮಾತುಕತೆಯ ನಂತರವೇ ರೋಹಿತ್ಗೆ ಎ ಪ್ಲಸ್ ಗ್ರೇಡ್ ನೀಡಿರಬಹುದು ಎಂದು ಹೇಳಲಾಗುತ್ತಿದೆ.

ಏಕೆಂದರೆ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುವ ಬಗ್ಗೆ ಯೋಚಿಸುತ್ತಿದ್ದರೆ ಬಹುಶಃ ಅವರಿಗೆ ಎ+ ಗ್ರೇಡ್ ನೀಡುತ್ತಿರಲಿಲ್ಲ. ಏಕೆಂದರೆ ಕೇವಲ ಏಕದಿನ ಪಂದ್ಯಗಳನ್ನು ಆಡುವ ಆಟಗಾರರಿಗೆ ಸಾಮಾನ್ಯವಾಗಿ ಈ ದರ್ಜೆಯಲ್ಲಿ ಸ್ಥಾನ ಸಿಗುವುದಿಲ್ಲ. ಅಂತಹದರಲ್ಲಿ ರೋಹಿತ್ಗೆ ಎ+ ಗ್ರೇಡ್ ಸಿಕ್ಕಿರುವುದು ಅವರ ನಿವೃತ್ತಿಯನ್ನು ಇನ್ನಷ್ಟು ಮುಂದಕ್ಕೆ ಕೊಂಡೊಯ್ದಿದೆ.
























