IPL 2025: 4+2… ಹೀಗಿದೆ RCB ತಂಡದ ಪ್ಲೇಆಫ್ ಲೆಕ್ಕಾಚಾರ
IPL 2025 RCB Playoffs Scenarios: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈವರೆಗೆ 8 ಪಂದ್ಯಗಳನ್ನಾಡಿದೆ. ಈ ಎಂಟು ಮ್ಯಾಚ್ಗಳಲ್ಲಿ 5 ಗೆಲುವು ದಾಖಲಿಸಿದೆ. ಇನ್ನುಳಿದಿರುವುದು ಕೇವಲ 6 ಪಂದ್ಯಗಳು ಮಾತ್ರ. ಈ ಆರು ಮ್ಯಾಚ್ಗಳಲ್ಲಿ 4 ಪಂದ್ಯಗಳನ್ನು ತವರಿನಲ್ಲಿ ಆಡಿದರೆ, ಇನ್ನೆರಡು ಪಂದ್ಯಗಳನ್ನು ದೆಹಲಿ ಮತ್ತು ಲಕ್ನೋದಲ್ಲಿ ಆಡಲಿದೆ.
Updated on:Apr 22, 2025 | 11:54 AM

IPL 2025: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 18ರ ಮೊದಲಾರ್ಧ ಮುಗಿದು ದ್ವಿತೀಯಾರ್ಧದ ಪಂದ್ಯಗಳು ಶುರುವಾಗಿದೆ. ದ್ವಿತೀಯಾರ್ಧದ ಮೊದಲ ಪಂದ್ಯದಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಬಲಿಷ್ಠ ಪಂಜಾಬ್ ಕಿಂಗ್ಸ್ ತಂಡವನ್ನು ಬಗ್ಗು ಬಡಿದಿದೆ. ಈ ಗೆಲುವಿನೊಂದಿಗೆ ಆರ್ಸಿಬಿ ತಂಡವು ಅಂಕ ಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದೆ.

ಸದ್ಯ ಮೂರನೇ ಸ್ಥಾನದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮುಂದಿನ 6 ಪಂದ್ಯಗಳು ಬಹಳ ಮುಖ್ಯ. ಏಕೆಂದರೆ ಈ ಆರು ಮ್ಯಾಚ್ಗಳಲ್ಲಿ ಭರ್ಜರಿ ಜಯ ಸಾಧಿಸಿದರೆ ಆರ್ಸಿಬಿ ನೇರವಾಗಿ ಪ್ಲೇಆಫ್ಗೆ ಎಂಟ್ರಿ ಕೊಡಬಹುದು. ಸಾಮಾನ್ಯವಾಗಿ ಪ್ಲೇಆಫ್ ಪ್ರವೇಶಿಸಲು 16 ಅಂಕಗಳನ್ನು ಪಡೆದರೆ ಸಾಕು.

ಇದೀಗ ಆರ್ಸಿಬಿ ತಂಡವು ಒಟ್ಟು 10 ಅಂಕಗಳನ್ನು ಹೊಂದಿದೆ. ಇನ್ನುಳಿದ 6 ಮ್ಯಾಚ್ಗಳಲ್ಲಿ 3 ರಲ್ಲಿ ಗೆದ್ದರೆ 16 ಅಂಕಗಳು ಆಗಲಿದೆ. ಆದರೆ ಆರ್ಸಿಬಿ ತಂಡವು ಮುಂದಿನ 6 ಪಂದ್ಯಗಳಲ್ಲಿ 4 ಮ್ಯಾಚ್ಗಳನ್ನು ತವರಿನಲ್ಲಿ ಆಡಬೇಕಿದೆ. ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತವರಿನಲ್ಲಿ ಈವರೆಗೆ ಒಂದೇ ಒಂದು ಪಂದ್ಯ ಗೆದ್ದಿಲ್ಲ ಎಂಬುದು.

ಈ ಬಾರಿ ತವರಿನಲ್ಲಿ ಆಡಿದ 3 ಪಂದ್ಯಗಳಲ್ಲಿ ಆರ್ಸಿಬಿ ತಂಡ ಸೋಲನುಭವಿಸಿದೆ. ಇದಾಗ್ಯೂ ಎದುರಾಳಿಗಳ ತವರು ಮೈದಾನದಲ್ಲಿ 5 ಗೆಲುವು ದಾಖಲಿಸಿ 10 ಪಾಯಿಂಟ್ಸ್ಗಳನ್ನು ಕೆಲೆಹಾಕಿರುವುದು ವಿಶೇಷ. ಇದೀಗ 4+2 ಪಂದ್ಯಗಳನ್ನು ಆಡಬೇಕಿರುವ ಆರ್ಸಿಬಿಗೆ ತವರಿನಲ್ಲಿ ನಡೆಯಲಿರುವ ಪಂದ್ಯಗಳೇ ನಿರ್ಣಾಯಕ.

ಅಂದರೆ ತವರು ಮೈದಾನದಲ್ಲಿ ಆರ್ಸಿಬಿ ಆಡಲಿರುವ 4 ಮ್ಯಾಚ್ಗಳಲ್ಲಿ ಕನಿಷ್ಠ 2 ಗೆಲುವು ಅತ್ಯವಶ್ಯಕ. ಇನ್ನುಳಿದ 2 ಪಂದ್ಯಗಳಲ್ಲಿ 1 ಗೆಲುವು ದಾಖಲಿಸಿದರೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 16 ಅಂಕಗಳನ್ನು ಪಡೆಯಲಿದೆ. ಈ ಮೂಲಕ ಆರ್ಸಿಬಿ ಪ್ಲೇಆಫ್ ಹಂತಕ್ಕೇರಬಹುದು.

ಇನ್ನು ಆರ್ಸಿಬಿ ತಂಡದ ಮುಂದಿನ ಎದುರಾಳಿಗಳು ಯಾರೆಂದು ನೋಡುವುದಾದರೆ.... ರಾಜಸ್ಥಾನ್ ರಾಯಲ್ಸ್ (ಬೆಂಗಳೂರಿನಲ್ಲಿ ಪಂದ್ಯ), ಡೆಲ್ಲಿ ಕ್ಯಾಪಿಟಲ್ಸ್ (ದೆಹಲಿಯಲ್ಲಿ ಪಂದ್ಯ), ಚೆನ್ನೈ ಸೂಪರ್ ಕಿಂಗ್ಸ್ (ಬೆಂಗಳೂರಿನಲ್ಲಿ ಪಂದ್ಯ), ಲಕ್ನೋ ಸೂಪರ್ ಜೈಂಟ್ಸ್ (ಲಕ್ನೋನಲ್ಲಿ ಪಂದ್ಯ), ಸನ್ರೈಸರ್ಸ್ ಹೈದರಾಬಾದ್ (ಬೆಂಗಳೂರಿನಲ್ಲಿ ಪಂದ್ಯ), ಕೊಲ್ಕತ್ತಾ ನೈಟ್ ರೈಡರ್ಸ್ (ಬೆಂಗಳೂರಿನಲ್ಲಿ ಪಂದ್ಯ). ಈ ಮ್ಯಾಚ್ಗಳ ಮೂಲಕ ಆರ್ಸಿಬಿ ತಂಡದ ಪ್ಲೇಆಫ್ ಭವಿಷ್ಯ ನಿರ್ಧಾರವಾಗಲಿದೆ.
Published On - 11:54 am, Tue, 22 April 25



















