- Kannada News Photo gallery Cricket photos BCCI Central Contracts: Shreyas Iyer and Ishan Kishan's Comeback
BCCI Central Contracts: ನಿಯಮ ಉಲ್ಲಂಘಿಸಿದ್ದ ಇಬ್ಬರು ಆಟಗಾರರಿಗೆ ಕ್ಷಮಾದಾನ ನೀಡಿದ ಬಿಸಿಸಿಐ
BCCI Central Contracts: ಬಿಸಿಸಿಐ ಭಾರತದ ಪುರುಷರ ಕ್ರಿಕೆಟ್ ತಂಡದ 2024- 25 ರ ಕೇಂದ್ರ ಒಪ್ಪಂದ ಪಟ್ಟಿಯನ್ನು ಬಿಡುಗಡೆ ಮಾಡಿದೆ. 34 ಆಟಗಾರರು ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಶ್ರೇಯಸ್ ಅಯ್ಯರ್ ಮತ್ತು ಇಶಾನ್ ಕಿಶನ್ ಅವರು ಕಳೆದ ವರ್ಷ ಹೊರಗುಳಿದಿದ್ದರೂ, ಈ ಬಾರಿ ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಕ್ಕಾಗಿ ಮತ್ತೆ ಆಯ್ಕೆಯಾಗಿದ್ದಾರೆ. ಬಿಸಿಸಿಐ ಹೊಸ ಒಪ್ಪಂದದಲ್ಲಿ ಹೆಚ್ಚು ಯುವ ಆಟಗಾರರಿಗೆ ಆದ್ಯತೆ ನೀಡಿದೆ.
Updated on: Apr 21, 2025 | 6:25 PM

ಭಾರತ ಪುರುಷರ ತಂಡದ ಕೇಂದ್ರ ಒಪ್ಪಂದ ಪಟ್ಟಿಯನ್ನು ಬಿಸಿಸಿಐ ಬಿಡುಗಡೆ ಮಾಡಿದೆ. ಈ ಬಾರಿ 34 ಆಟಗಾರರು ಒಪ್ಪಂದ ಪಟ್ಟಿಯಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ವರ್ಷ ಫೆಬ್ರವರಿ 28 ರಂದು ಕೇಂದ್ರ ಗುತ್ತಿಗೆ ಪಟ್ಟಿಯನ್ನು ಬಿಡುಗಡೆ ಮಾಡಲಾಯಿತ್ತಾದರೂ ಈ ಬಾರಿ ವಿಳಂಬವಾಯಿತು. ಭಾರತೀಯ ಕ್ರಿಕೆಟ್‌ನ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಬಿಸಿಸಿಐ ಹೊಸ ಕೇಂದ್ರ ಒಪ್ಪಂದದಲ್ಲಿ ಅನೇಕ ಯುವ ಆಟಗಾರರಿಗೆ ಸ್ಥಾನ ನೀಡಿದೆ.

ಇದರಲ್ಲಿ ಇಬ್ಬರು ಸ್ಟಾರ್ ಕ್ರಿಕೆಟಿಗರಿಗೆ ಬಿಸಿಸಿಐನಿಂದ ಕ್ಷಮಾದಾನ ಸಿಕ್ಕಿರುವುದು ಅವರಿಗೆ ಪುನರ್ಜ್ಮನ ಸಿಕ್ಕಂತಾಗಿದೆ. ವಾಸ್ತವವಾಗಿ ಶ್ರೇಯಸ್ ಅಯ್ಯರ್ ಮತ್ತು ಇಶಾನ್ ಕಿಶನ್ ಅವರಿಗೆ ಕೇಂದ್ರ ಒಪ್ಪಂದ ಸಿಕ್ಕಿದೆ. ಕಳೆದ ವರ್ಷ ಇವರಿಬ್ಬರನ್ನೂ ಬಿಸಿಸಿಐನ 2023-24ರ ಕೇಂದ್ರ ಒಪ್ಪಂದದಿಂದ ಹೊರಗಿಡಲಾಗಿತ್ತು. ಇದಕ್ಕೆ ದೊಡ್ಡ ಕಾರಣ ದೇಶೀಯ ಕ್ರಿಕೆಟ್ ಆಡದಿರುವುದು.

ವಾಸ್ತವವಾಗಿ, ಬಿಸಿಸಿಐ ಆದೇಶದ ಪ್ರಕಾರ, ರಾಷ್ಟ್ರೀಯ ತಂಡದಿಂದ ಹೊರಗಿರುವ ಆಟಗಾರರು ದೇಶೀಯ ಕ್ರಿಕೆಟ್ ಆಡಬೇಕಾಗುತ್ತದೆ. ಆದರೆ ಕಳೆದ ವರ್ಷ ಈ ಇಬ್ಬರೂ ಆಟಗಾರರು ಬಿಸಿಸಿಐನ ಈ ನಿಯಮವನ್ನು ಉಲ್ಲಂಘಿಸಿದ್ದರು. ಕಳೆದ ವರ್ಷ ಭಾರತ ದಕ್ಷಿಣ ಆಫ್ರಿಕಾ ಪ್ರವಾಸ ಮಾಡಿತ್ತು. ಆದರೆ ಮಧ್ಯದಲ್ಲೇ ತಂಡ ತೊರೆದಿದ್ದ ಇಶಾನ್ ಕಿಶನ್ ವೈಯಕ್ತಿಕ ಕಾರಣಗಳಿಂದಾಗಿ ದೀರ್ಘ ವಿರಾಮ ತೆಗೆದುಕೊಂಡಿದ್ದರು. ಮಂಡಳಿಯ ಆದೇಶದ ಹೊರತಾಗಿಯೂ, ಇಶಾನ್ ಕಿಶನ್ ಉಳಿದ ರಣಜಿ ಟ್ರೋಫಿ ಪಂದ್ಯಗಳಲ್ಲಿ ಆಡಲಿಲ್ಲ.

ಮತ್ತೊಂದೆಡೆ, ಶ್ರೇಯಸ್ ಅಯ್ಯರ್ ಬೆನ್ನು ನೋವು ಕಾರಣ ನೀಡಿ ರಣಜಿ ಪಂದ್ಯಗಳಿಂದ ದೂರ ಉಳಿದಿದ್ದರು. ಆದರೆ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಕ್ರೀಡಾ ವಿಜ್ಞಾನ ಮತ್ತು ವೈದ್ಯಕೀಯ ವಿಭಾಗದ ಮುಖ್ಯಸ್ಥ ನಿತಿನ್ ಪಟೇಲ್, ಅಯ್ಯರ್ 'ಫಿಟ್' ಆಗಿದ್ದಾರೆ ಎಂದು ಬಿಸಿಸಿಐಗೆ ಇಮೇಲ್ ಮೂಲಕ ತಿಳಿಸಿದ್ದರು. ಇದರ ನಂತರ ಈ ಇಬ್ಬರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದ ಬಿಸಿಸಿಐ ಈ ಇಬ್ಬರನ್ನು ಕೇಂದ್ರ ಒಪ್ಪಂದದಿಂದ ಹೊರಗಿಟ್ಟಿತ್ತು.

ಕೇಂದ್ರ ಒಪ್ಪಂದದಿಂದ ಹೊರಬಿದ್ದ ಬಳಿಕ ಬುದ್ದಿ ಕಲಿತಿದ್ದ ಇಬ್ಬರೂ ಆಟಗಾರರು ದೇಶೀಯ ಕ್ರಿಕೆಟ್‌ನಲ್ಲಿ ಭಾಗವಹಿಸುವುದನ್ನು ಮುಂದುವರೆಸಿದರು. ರಣಜಿ ಟ್ರೋಫಿಯಲ್ಲಿ ಮುಂಬೈ ಪರ ಐದು ಪಂದ್ಯಗಳನ್ನಾಡಿದ್ದ ಅಯ್ಯರ್ 480 ರನ್ ಗಳಿಸಿದ್ದರು. ನಂತರ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಆಡಿದ್ದ ಅಯ್ಯರ್, ವಿಜಯ್ ಹಜಾರೆ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಟೀಂ ಇಂಡಿಯಾದಲ್ಲೂ ಸ್ಥಾನ ಪಡೆದಿದ್ದರು.

ಮತ್ತೊಂದೆಡೆ, ಜಾರ್ಖಂಡ್ ಪರ ದೇಶೀಯ ಕ್ರಿಕೆಟ್ ಆಡಿದ್ದ ಇಶಾನ್ ಕಿಶನ್ ಕೆಲವು ಅದ್ಭುತ ಇನ್ನಿಂಗ್ಸ್‌ಗಳನ್ನು ಆಡಿದದರು. ಇದಾದ ನಂತರ, ಅವರು ಐಪಿಎಲ್ 2025 ರ ತಮ್ಮ ಮೊದಲ ಪಂದ್ಯದಲ್ಲೇ ಶತಕ ಸಿಡಿಸಿದ್ದರು. ಆದರೆ ಆ ಪಂದ್ಯದ ಬಳಿಕ ಕಿಶನ್ ಯಾವ ಪಂದ್ಯದಲ್ಲೂ ಗಮನಾರ್ಹ ಪ್ರದರ್ಶನ ನೀಡಿಲ್ಲ. ಅಲ್ಲದೆ ಒಂದಂಕಿ ದಾಟುವುದಕ್ಕೂ ಸಾಧ್ಯವಾಗಿಲ್ಲ. ಆದಾಗ್ಯೂ ಅವರಿಗೆ ಕೇಂದ್ರ ಒಪ್ಪಂದದಲ್ಲಿ ಅವಕಾಶ ಸಿಕ್ಕಿದೆ.



















