IPL 2025: ಕೆಕೆಆರ್ ವಿರುದ್ಧ 39 ರನ್‌ಗಳಿಂದ ಗೆದ್ದ ಗುಜರಾತ್
Gujarat Titans Dominate KKR: ಗುಜರಾತ್ ಟೈಟಾನ್ಸ್ ತಂಡವು ಕೆಕೆಆರ್ ತಂಡವನ್ನು 39 ರನ್‌ಗಳಿಂದ ಸೋಲಿಸಿ ಟೂರ್ನಮೆಂಟ್‌ನಲ್ಲಿ ತನ್ನ ಅಗ್ರಸ್ಥಾನವನ್ನು ಉಳಿಸಿಕೊಂಡಿದೆ. ಶುಭ್ಮನ್ ಗಿಲ್ ಮತ್ತು ಸಾಯಿ ಸುದರ್ಶನ್ ಅವರ ಅರ್ಧಶತಕಗಳಿಂದ ಗುಜರಾತ್ 198 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಕೆಕೆಆರ್ ತಂಡ 159 ರನ್‌ಗಳಿಗೆ ಸೀಮಿತವಾಯಿತು. ಗುಜರಾತ್ ಬೌಲರ್‌ಗಳು ಅತ್ಯುತ್ತಮ ಪ್ರದರ್ಶನ ನೀಡಿದರು.

ಗುಜರಾತ್ ಟೈಟಾನ್ಸ್ (GT) ತಂಡವು ಕೆಕೆಆರ್ (KKR) ತಂಡವನ್ನು 39 ರನ್‌ಗಳಿಂದ ಸೋಲಿಸಿ ಅಗ್ರಸ್ಥಾನದಲ್ಲಿ ತನ್ನ ಪ್ರಾಬಲ್ಯವನ್ನು ಮುಂದುವರೆಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ಶುಭಮನ್ ಗಿಲ್ ಮತ್ತು ಸಾಯಿ ಸುದರ್ಶನ್ ಅವರ ಅರ್ಧಶತಕಗಳ ನೆರವಿನಿಂದ 20 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 198 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಕೆಕೆಆರ್ 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 159 ರನ್ ಗಳಿಸಲಷ್ಟೇ ಶಕ್ತವಾಯಿತು. ಕೆಕೆಆರ್ ಪರ ನಾಯಕ ಅಜಿಂಕ್ಯ ರಹಾನೆ 36 ಎಸೆತಗಳಲ್ಲಿ ಐದು ಬೌಂಡರಿ ಮತ್ತು ಒಂದು ಸಿಕ್ಸರ್ ನೆರವಿನಿಂದ 50 ರನ್ ಗಳಿಸಿ ಅಗ್ರ ಸ್ಕೋರರ್ ಎನಿಸಿಕೊಂಡರು. ಗುಜರಾತ್ ಪರ ಪ್ರಸಿದ್ಧ್ ಕೃಷ್ಣ ಮತ್ತು ರಶೀದ್ ಖಾನ್ ತಲಾ ಎರಡು ವಿಕೆಟ್ ಪಡೆದರೆ, ಮೊಹಮ್ಮದ್ ಸಿರಾಜ್, ಇಶಾಂತ್ ಶರ್ಮಾ, ವಾಷಿಂಗ್ಟನ್ ಸುಂದರ್ ಮತ್ತು ಆರ್ ಸಾಯಿ ಕಿಶೋರ್ ತಲಾ ಒಂದು ವಿಕೆಟ್ ಪಡೆದರು.
ಗಿಲ್- ಸುದರ್ಶನ್ ಶತಕ
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಪರ ನಾಯಕ ಶುಭ್ಮನ್ ಗಿಲ್ ಮತ್ತು ಸಾಯಿ ಸುದರ್ಶನ್ ಗುಜರಾತ್ ತಂಡಕ್ಕೆ ಉತ್ತಮ ಆರಂಭ ನೀಡಿ ಮೊದಲ ವಿಕೆಟ್‌ಗೆ 114 ರನ್ ಜೊತೆಯಾಟವನ್ನಾಡಿದರು. ಈ ವೇಳೆ ಗಿಲ್ 34 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರೆ, ಸುದರ್ಶನ್ 33 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಇದು ಈ ಸೀಸನ್ನಲ್ಲಿ ಸುದರ್ಶನ್ ಅವರ ಐದನೇ ಅರ್ಧಶತಕ ಮತ್ತು ಗಿಲ್ ಅವರ ಮೂರನೇ ಅರ್ಧಶತಕವಾಗಿತ್ತು. ಗಿಲ್ ಮತ್ತು ಸುದರ್ಶನ್ ನಡುವಿನ ಈ ಪಾಲುದಾರಿಕೆಯನ್ನು ಆಂಡ್ರೆ ರಸೆಲ್ ಮುರಿದರು.
ಸುದರ್ಶನ್ ಔಟಾದ ನಂತರ, ಕ್ರೀಸ್‌ಗೆ ಬಂದ ಜೋಸ್ ಬಟ್ಲರ್, ಗಿಲ್ ಅವರೊಂದಿಗೆ ಸೇರಿ ಗುಜರಾತ್ ಇನ್ನಿಂಗ್ಸ್‌ಗೆ ವೇಗ ನೀಡಿದರು. ಗಿಲ್ ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮುಂದುವರಿಸಿದರು ಆದರೆ ಶತಕದಂಚಿನಲ್ಲಿ ಎಡವಿದರು. ಈ ಸಮಯದಲ್ಲಿ, ಗಿಲ್ ಮತ್ತು ಬಟ್ಲರ್ ನಡುವೆ ಎರಡನೇ ವಿಕೆಟ್‌ಗೆ 58 ರನ್‌ಗಳ ಪಾಲುದಾರಿಕೆ ಇತ್ತು, ಅದನ್ನು ವೈಭವ್ ಅರೋರಾ ಮುರಿದರು.
ಬಟ್ಲರ್ ಅಮೋಘ ಬ್ಯಾಟಿಂಗ್
ಇದಾದ ನಂತರ, ಖಾತೆ ತೆರೆಯದೆಯೇ ರಾಹುಲ್ ತೆವಾಟಿಯಾ ಅವರನ್ನು ಔಟ್ ಮಾಡುವ ಮೂಲಕ ಹರ್ಷಿತ್ ರಾಣಾ ಗುಜರಾತ್‌ಗೆ ಮೂರನೇ ಹೊಡೆತ ನೀಡಿದರು. ಕೊನೆಯಲ್ಲಿ ಬಟ್ಲರ್ ಮತ್ತು ಶಾರುಖ್ ಖಾನ್ ವೇಗವಾಗಿ ಆಡಲು ಪ್ರಯತ್ನಿಸಿದರಾದರೂ ಕೆಕೆಆರ್, ಗುಜರಾತ್ ತಂಡವನ್ನು 200 ರನ್ ಗಳಿಸದಂತೆ ತಡೆಯುವಲ್ಲಿ ಯಶಸ್ವಿಯಾಯಿತು. ಗುಜರಾತ್ ಪರ ಬಟ್ಲರ್ 23 ಎಸೆತಗಳಲ್ಲಿ ಎಂಟು ಬೌಂಡರಿಗಳ ನೆರವಿನಿಂದ 41 ರನ್ ಗಳಿಸಿ ಅಜೇಯರಾಗುಳಿದರೆ, ಶಾರುಖ್ ಐದು ಎಸೆತಗಳಲ್ಲಿ ಒಂದು ಸಿಕ್ಸರ್ ನೆರವಿನಿಂದ 11 ರನ್ ಗಳಿಸಿ ಅಜೇಯರಾಗುಳಿದರು. ಕೆಕೆಆರ್ ಪರ ವೈಭವ್ ಅರೋರಾ, ಹರ್ಷಿತ್ ರಾಣಾ ಮತ್ತು ಆಂಡ್ರೆ ರಸೆಲ್ ತಲಾ ಒಂದು ವಿಕೆಟ್ ಪಡೆದರು.
ರಹಾನೆ ಏಕಾಂಗಿ ಹೋರಾಟ
ಈ ಗುರಿ ಬೆನ್ನಟ್ಟಿದ ಕೆಕೆಆರ್ ತಂಡ ಉತ್ತಮ ಆರಂಭ ಪಡೆಯಲಿಲ್ಲ. ಗುರ್ಬಾಜ್ ಅವರ ವಿಕೆಟ್ ಅನ್ನು ಬೇಗನೆ ಕಳೆದುಕೊಂಡಿತು. ಇದಾದ ನಂತರ ರಹಾನೆ, ಸುನಿಲ್ ನರೈನ್ ಜೊತೆಗೆ ತಂಡದ ಜವಾಬ್ದಾರಿಯನ್ನು ವಹಿಸಿಕೊಂಡರು. ಆದರೆ ನರೈನ್ 17 ರನ್ ಗಳಿಸಿ ಔಟಾದರು. ನಂತರ ರಹಾನೆ ಉತ್ತಮ ಇನ್ನಿಂಗ್ಸ್ ಆಡುವುದನ್ನು ಮುಂದುವರಿಸಿದರೆ, ಇನ್ನೊಂದು ತುದಿಯಿಂದ ಯಾವುದೇ ಬ್ಯಾಟ್ಸ್ಮನ್ಗೆ ಅವರಿಗೆ ಬೆಂಬಲ ನೀಡಲು ಸಾಧ್ಯವಾಗಲಿಲ್ಲ.
IPL 2025: ರಿಂಕ್ ಹಿಡಿದ ಅದ್ಭುತ ಕ್ಯಾಚ್ಗೆ ಶತಕ ವಂಚಿತರಾದ ಗಿಲ್; ವಿಡಿಯೋ
7ನೇ ಸ್ಥಾನದಲ್ಲಿ ಕೆಕೆಆರ್
ಕೆಕೆಆರ್ ಪರ, ರಹಾನೆ ಹೊರತುಪಡಿಸಿ, ಆಂಡ್ರೆ ರಸೆಲ್ 21, ರಿಂಕು ಸಿಂಗ್ 17, ವೆಂಕಟೇಶ್ ಅಯ್ಯರ್ 14 ಮತ್ತು ರಮಣದೀಪ್ ಸಿಂಗ್ ಒಂದು ರನ್ ಗಳಿಸಿದರೆ, ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಂದ ಅಂಗ್ಕ್ರಿಶ್ ರಘುವಂಶಿ 27 ರನ್ ಮತ್ತು ಹರ್ಷಿತ್ ರಾಣಾ ಒಂದು ರನ್ ಗಳಿಸಿ ಅಜೇಯರಾಗಿ ಮರಳಿದರು. ಎಂಟು ಪಂದ್ಯಗಳಲ್ಲಿ ಗುಜರಾತ್ ತಂಡಕ್ಕೆ ಇದು ಆರನೇ ಗೆಲುವು ಆಗಿದ್ದು, 12 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಮತ್ತೊಂದೆಡೆ, ಇದು ಎಂಟು ಪಂದ್ಯಗಳಲ್ಲಿ ಕೆಕೆಆರ್‌ನ ಐದನೇ ಸೋಲು ಮತ್ತು ಮೂರು ಗೆಲುವುಗಳೊಂದಿಗೆ ಆರು ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:28 pm, Mon, 21 April 25