KKR vs GT: ಫೀಲ್ಡರ್ಗಳು ಮನಸ್ಸು ಮಾಡ್ಬೇಕು: ಸೋಲಿನ ಹತಾಶೆಯಲ್ಲಿ ಅಜಿಂಕ್ಯ ರಹಾನೆ
IPL 2025 KKR vs GT: ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್ 2025) 39ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ 198 ರನ್ ಕಲೆಹಾಕಿದರೆ, ಈ ಗುರಿಯನ್ನು ಬೆನ್ನತ್ತಿದ ಕೊಲ್ಕತ್ತಾ ನೈಟ್ ರೈಡರ್ಸ್ ಕೇವಲ 159 ರನ್ಗಳಿಸಲಷ್ಟೇ ಶಕ್ತರಾಗಿದ್ದಾರೆ.

ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ನ (IPL 2025) 39ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ (GT) ವಿರುದ್ಧ ಕೊಲ್ಕತ್ತಾ ನೈಟ್ ರೈಡರ್ಸ್ (KKR) ತಂಡ ಸೋಲನುಭವಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಕೆಕೆಆರ್ ತಂಡದ ನಾಯಕ ಅಜಿಂಕ್ಯ ರಹಾನೆ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ ಪರ ನಾಯಕ ಶುಭ್ಮನ್ ಗಿಲ್ 90 ರನ್ ಬಾರಿಸಿ ಮಿಂಚಿದರು.
ಈ ಅರ್ಧಶತಕದ ನೆರವಿನೊಂದಿಗೆ ಗುಜರಾತ್ ಟೈಟಾನ್ಸ್ ತಂಡವು 20 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 198 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 159 ರನ್ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಕೆಕೆಆರ್ ಪಡೆ 39 ರನ್ಗಳಿಂದ ಸೋಲೊಪ್ಪಿಕೊಂಡಿದೆ.
ಈ ಸೋಲಿನ ಬಳಿಕ ಮಾತನಾಡಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ಅಜಿಂಕ್ಯ ರಹಾನೆ, ‘199 ರನ್‌ಗಳ ಗುರಿಯನ್ನು ನಾವು ಚೇಸ್ ಮಾಡಬಹುದಿತ್ತು. ಇದು ಕಠಿಣ ಗುರಿಯಾಗಿರಲಿಲ್ಲ. ಇದಾಗ್ಯೂ ನಾವು ಉತ್ತಮ ಬ್ಯಾಟಿಂಗ್ ಪ್ರದರ್ಶಿಸಲು ವಿಫಲರಾಗಿದ್ದೇವೆ ಎಂದಿದ್ದಾರೆ.
ನಾವು ಉತ್ತಮ ಆರಂಭಿಕ ಪಾಲುದಾರಿಕೆಯನ್ನು ನಿರೀಕ್ಷಿಸುತ್ತಿದ್ದೇವೆ. ಆದರೆ ಟೂರ್ನಿಯುದ್ದಕ್ಕೂ ಅದುವೇ ಈಗ ನಮ್ಮ ದೊಡ್ಡ ಸವಾಲಾಗಿ ಮಾರ್ಪಟ್ಟಿದೆ. ಸದ್ಯ ತಪ್ಪುಗಳಿಂದ ನಾವು ಸಾಧ್ಯವಾದಷ್ಟು ಬೇಗ ಕಲಿಯುವುದು ಅನಿವಾರ್ಯ. ಏಕೆಂದರೆ ಇನ್ನುಳಿದಿರುವುದು ಕೆಲವೇ ಕೆಲವು ಮ್ಯಾಚ್ಗಳು ಮಾತ್ರ. ಈ ಪಂದ್ಯದಲ್ಲಿ ಪಿಚ್ ನಿಧಾನವಾಗಿದ್ದ ಕಾರಣ 200, 210 ಕ್ಕಿಂತ ಕಡಿಮೆ ಸ್ಕೋರ್ ಇದ್ದರೆ ಉತ್ತಮವಾಗಿರುತ್ತದೆ ಎಂದು ಭಾವಿಸಿದ್ದೆ.
ಅದರಂತೆ ನಮ್ಮ ಬೌಲರ್ಗಳು ಉತ್ತಮ ಪ್ರದರ್ಶನವನ್ನು ನೀಡಿದ್ದರು. ನನಗೆ ನಮ್ಮ ಬೌಲರ್‌ಗಳ ಬಗ್ಗೆ ಯಾವುದೇ ದೂರುಗಳಿಲ್ಲ. ಅವರು ಪ್ರತಿ ಪಂದ್ಯದಲ್ಲೂ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಆದರೆ ನಮ್ಮ ಬ್ಯಾಟಿಂಗ್ಗೆ ಚಿಂತೆ. ನಾವು ಉತ್ತಮವಾಗಿ ಬ್ಯಾಟಿಂಗ್ ಮಾಡಬೇಕಾಗಿದೆ. ವಿಶೇಷವಾಗಿ ಮಧ್ಯಮ ಓವರ್‌ಗಳಲ್ಲಿ. ನಮಗೆ ಉತ್ತಮ ಆರಂಭಿಕ ಜೊತೆಯಾಟ ಬರಬೇಕು.
ಇದನ್ನೂ ಓದಿ: VIDEO: RCB ಅಭಿಮಾನಿಗಳ ಗಮನಕ್ಕೆ: ನೀವು ಸುಳ್ಳಿಗೆ ಮರುಳಾಗಿದ್ದೀರಿ
ಇನ್ನು ಫೀಲ್ಡಿಂಗ್ ಕೂಡ ಒಂದು ಪಂದ್ಯದ ಗೆಲುವನ್ನು ನಿರ್ಧರಿಸಬಲ್ಲದು. ಹೀಗಾಗಿ ಫೀಲ್ಡರ್ಗಳು 15-20 ರನ್‌ಗಳನ್ನು ಉಳಿಸಲು ಸಾಧ್ಯವಾದರೆ ಅದು ಯಾವಾಗಲೂ ಉತ್ತಮ. ಈ ಮೂಲಕ ಕೂಡ ರನ್ ನಿಯಂತ್ರಿಸಿ ಪಂದ್ಯ ಗೆಲ್ಲಬಹುದು. ಇದಕ್ಕಾಗಿ ನಮ್ಮ ಫೀಲ್ಡರ್ಗಳು ಕೂಡ ಮನಸ್ಸು ಮಾಡಬೇಕು. ಆ ಮೂಲಕ ಕೂಡ ಗೆಲ್ಲಲು ಪ್ರಯತ್ನಿಸಬೇಕಿದೆ ಎಂದು ಅಜಿಂಕ್ಯ ರಹಾನೆ ಹೇಳಿದ್ದಾರೆ.