ನವದೆಹಲಿ: ಭಾರತದಲ್ಲಿ ಈಗ ಜಿ20 ಶೃಂಗಸಭೆ (G20 Summit) ನಿಮಿತ್ತ ಬೆಂಗಳೂರು ಸೇರಿದಂತೆ ವಿವಿಧೆಡೆ ಜಿ20 ಸಭೆಗಳು ನಡೆಯುತ್ತಿವೆ. ಸಾವಿರಾರು ಪ್ರತಿನಿಧಿಗಳು ಈ ಸಭೆಗಳಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಬಂದಿದ್ದಾರೆ, ಬರುತ್ತಿದ್ದಾರೆ. ಇವರಿಗೆ ಹಣಕಾಸು ವಹಿವಾಟು ಸುಲಭವಾಗುಂತೆ ಮಾಡಲು ಆರ್ಬಿಐ (RBI) ಯುಪಿಐ ಸೇವೆಯ ಅವಕಾಶ ನೀಡಿದೆ. ಇದು ಅತಿಥಿಗಳಿಗೆ ಅನುಕೂಲ ಮಾಡಿಕೊಡುವುದರ ಜೊತೆಗೆ ಭಾರತದ ಪೇಮೆಂಟ್ ವ್ಯವಸ್ಥೆ ಎಷ್ಟು ಸಮರ್ಪಕವಾಗಿದೆ ಎಂಬುದನ್ನು ವಿದೇಶಿಗರಿಗೆ ಪರಿಚಯಿಸುವ ಪ್ರಯತ್ನವೂ ಹೌದು.
ಫೆಬ್ರುವರಿ 8ರಂದು ಆರ್ಬಿಐ ವಿದೇಶೀ ಪ್ರವಾಸಿಗರಿಗೆ ಯುಪಿಐ ಸೌಲಭ್ಯ ಕೊಡುವ ಬಗ್ಗೆ ಮಾಹಿತಿ ನೀಡಿತ್ತು. ನಿನ್ನೆ ಕೂಡ ಆರ್ಬಿಐ ಜಿ20 ದೇಶಗಳಿಂದ ಬರುವ ಮಂದಿಗೆ ಯುಪಿಐ ಸೇವೆ ವಿಸ್ತರಿಸುವುದಾಗಿ ಘೋಷಣೆ ಮಾಡಿತು. ಮೊದಲಿಗೆ ಕೆಲ ಆಯ್ದ ಬ್ಯಾಂಕ್ ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಯುಪಿಐ ಜೋಡಿತ ವ್ಯಾಲಟ್ಗಳನ್ನು ಪ್ರವಾಸಿಗರಿಗೆ ಕೊಡಲಿವೆ.
ಬೆಂಗಳೂರು, ಮುಂಬೈ ಮತ್ತು ನವದೆಹಲಿಯ ಇಂಟರ್ನ್ಯಾಷನಲ್ ಏರ್ಪೋರ್ಟ್ಗಳಲ್ಲಿ ಈ ವ್ಯವಸ್ಥೆ ಮಾಡಲಾಗಿರುತ್ತದೆ. ಸಭೆಗಳಿಗೆ ಪಾಲ್ಗೊಳ್ಳಲು ಬರುವ ಜಿ20 ದೇಶಗಳ ಪ್ರತಿನಿಧಿಗಳಿಗೆ ಪ್ರೀಪೇಯ್ಡ್ ಪೇಮೆಂಟ್ ಇನ್ಸ್ಟ್ರೂಮೆಂಟ್ಸ್ (ಪಿಪಿಐ) ವ್ಯಾಲಟ್ಗಳನ್ನು ಕೊಡಲಾಗುತ್ತದೆ. ಈ ವ್ಯಾಲಟ್ಗಳು ಯುನಿಫೈಡ್ ಪೇಮೆಂಟ್ ಸಿಸ್ಟಂ (ಯುಪಿಐ) ಜೊತೆ ಜೋಡಿತವಾಗಿರುತ್ತದೆ. ಈ ವ್ಯಾಲಟ್ಗಳ ಮೂಲಕ ಪ್ರವಾಸಿಗರು ಹಣಕಾಸು ವಹಿವಾಟು ಮಾಡಬಹುದು ಎಂದು ಆರ್ಬಿಐ ಹೇಳಿದೆ.
ಪಿಪಿಐ ವ್ಯಾಲಟ್ಗಳಲ್ಲಿ ನಿರ್ದಿಷ್ಟ ಮೊತ್ತದ ಹಣವನ್ನು ಮೊದಲೇ ತುಂಬಲಾಗುತ್ತದೆ. ವಿದೇಶಿ ವಿನಿಯಮ ದರ ಆಧರಿಸಿ ಭಾರತೀಯ ಕರೆನ್ಸಿಗೆ ಪರಿವರ್ತಿಸಿ ವ್ಯಾಲಟ್ಗೆ ಸೇರಿಸಲಾಗುತ್ತದೆ. ಇನ್ನೊಂದು ಸಂಗತಿ ಎಂದರೆ, ಈ ಪಿಪಿಐ ವ್ಯಾಲಟ್ನಿಂದ ವ್ಯಕ್ತಿಗಳ ಮೊಬೈಲ್ಗೆ ಹಣ ಕಳುಹಿಸಲಾಗುವುದಿಲ್ಲ. ವರ್ತಕರಿಗೆ ಮಾತ್ರ ಪಾವತಿ ಮಾಡಲು ಸಾಧ್ಯ.
ಮೊದಲಿಗೆ ಐಸಿಸಿಐ ಬ್ಯಾಂಕ್, ಐಡಿಎಫ್ಸಿ ಫಸ್ಟ್ ಬ್ಯಾಂಕ್ ಹಾಗೂ ಪೈನ್ ಲ್ಯಾಬ್ಸ್ ಪ್ರೈ ಲಿ ಮತ್ತು ಟ್ರಾನ್ಸ್ಕಾರ್ಪ್ ಇಂಟರ್ನ್ಯಾಷನಲ್ ಲಿ ಸಂಸ್ಥೆಗಳಿಂದ ಮಾತ್ರ ಪ್ರವಾಸಿಗರು ವ್ಯಾಲಟ್ ಪಡೆಯಬಹುದು. ಪೈನ್ ಲ್ಯಾಬ್ಸ್ ಮತ್ತು ಟ್ರಾನ್ಸ್ಕಾರ್ಪ್ ಸಂಸ್ಥೆಗಳು ಬ್ಯಾಂಕೇತರ ಸಂಸ್ಥೆಗಳಾಗಿವೆ.
ನಿನ್ನೆಯಷ್ಟೇ ಭಾರತ ಮತ್ತು ಸಿಂಗಾಪುರ ಜನರ ಮಧ್ಯೆ ಕ್ರಾಸ್ಬಾರ್ಡರ್ ಪೇಮೆಂಟ್ ವ್ಯವಸ್ಥೆಗೆ ಚಾಲನೆ ಕೊಡಲಾಗಿತ್ತು. ಭಾರತದ ಯುಪಿಐ ಮತ್ತು ಸಿಂಗಾಪುರದ ಪೇನೌ ಪಾವತಿ ವ್ಯವಸ್ಥೆಯನ್ನು ಜೋಡಿಸಿ ವಿನೂತನವಾದ ವ್ಯವಸ್ಥೆ ಮಾಡಲಾಗಿದೆ. ಸಿಂಗಾಪುರದಲ್ಲಿರುವ ಹಲವು ಅನಿವಾಸಿ ಭಾರತೀಯರಿಗೆ ತಮ್ಮ ಊರಿನ ಜನರಿಗೆ ಹಣ ಕಳುಹಿಸುವುದು ಸುಲಭವಾಗಲಿದೆ. ವೆಚ್ಚವೂ ಕಡಿಮೆ ಆಗಲಿದೆ. ಭಾರತದ ಯುಪಿಐ ವ್ಯವಸ್ಥೆ ಸಿಂಗಾಪುರಕ್ಕೂ ಪರಿಚಯ ಆಗಲಿದೆ.
Published On - 10:56 am, Wed, 22 February 23