800 ಕಿಮೀ ಶ್ರೇಣಿಯ ಬ್ರಹ್ಮೋಸ್ ಕ್ಷಿಪಣಿಗಳ ಪರೀಕ್ಷೆ; ಮುಂದಿನ ವರ್ಷವೇ ಸೇನೆಯ ಬಲ ಹೆಚ್ಚಿಸಲಿವೆ ಈ ಪ್ರಬಲ ಮಿಸೈಲ್​ಗಳು

India tests 800 km BrahMos: ಈಗಿರುವ ಬ್ರಹ್ಮೋಸ್ ಕ್ಷಿಪಣಿಯನ್ನು ಮತ್ತಷ್ಟು ಅಭಿವೃದ್ಧಿಪಡಿಸಲಾಗಿದ್ದು, 450 ಕಿಮೀ ಶ್ರೇಣಿಯನ್ನು 800 ಕಿಮೀಗೆ ಹೆಚ್ಚಿಸಲಾಗಿದೆ. ಇದರ ಪರೀಕ್ಷೆಗಳು ನಡೆಯುತ್ತಿದ್ದು, ಅವು ಯಶಸ್ವಿಯಾದಲ್ಲಿ ಮುಂದಿನ ವರ್ಷಾಂತ್ಯದೊಳಗೆ ಸೇನೆಗೆ ನಿಯೋಜನೆಗೊಳ್ಳಲಿವೆ. ಅಸ್ತ್ರ ಮಾರ್ಕ್-2 ಕ್ಷಿಪಣಿಗಳನ್ನೂ ತಯಾರಿಸಲಾಗುತ್ತಿದ್ದು ಇವೂ ಕೂಡ 2027ರೊಳಗೆ ಸಿದ್ಧವಿರಲಿವೆ.

800 ಕಿಮೀ ಶ್ರೇಣಿಯ ಬ್ರಹ್ಮೋಸ್ ಕ್ಷಿಪಣಿಗಳ ಪರೀಕ್ಷೆ; ಮುಂದಿನ ವರ್ಷವೇ ಸೇನೆಯ ಬಲ ಹೆಚ್ಚಿಸಲಿವೆ ಈ ಪ್ರಬಲ ಮಿಸೈಲ್​ಗಳು
ಬ್ರಹ್ಮೋಸ್ ಕ್ಷಿಪಣಿ

Updated on: Oct 20, 2025 | 10:12 PM

ನವದೆಹಲಿ, ಅಕ್ಟೋಬರ್ 20: ಪಾಕಿಸ್ತಾನ ವಿರುದ್ಧದ ಆಪರೇಷನ್ ಸಿಂದೂರ್​ನಲ್ಲಿ ತನ್ನ ಸಾಮರ್ಥ್ಯ ಸಾಬೀತು ಮಾಡಿದ್ದ ಬ್ರಹ್ಮೋಸ್ ಕ್ಷಿಪಣಿಯ (BrahMos missile) ಮುಂದುವರಿದ ದರ್ಜೆಯ ಕ್ಷಿಪಣಿ ಸದ್ಯದಲ್ಲೇ ಭಾರತೀಯ ಸೇನೆಯ (Indian army) ಬತ್ತಳಿಕೆ ಸೇರಲಿದೆ. 800 ಕಿಮೀ ದೂರ ಕ್ರಮಿಸಬಲ್ಲ ಬ್ರಹ್ಮೋಸ್ ಸೂಪರ್​ಸೋನಿಕ್ ಕ್ರೂಸ್ ಮಿಸೈಲ್​ಗಳ ಪರೀಕ್ಷೆಗಳನ್ನು ಸದ್ಯಕ್ಕೆ ನಡೆಸಲಾಗುತ್ತಿದೆ. 2027ರೊಳಗೆ ಈ ಪ್ರಬಲ ಕ್ಷಿಪಣಿಗಳು ಸೇನೆಗೆ ನಿಯೋಜಿತವಾಗಲಿವೆ. ಇವುಗಳ ಜೊತೆಗೆ, 200 ಕಿಮೀ ದೂರ ಕ್ರಮಿಸಿ ಟಾರ್ಗೆಟ್ ಹೊಡೆಯಬಲ್ಲ ಏರ್ ಟು ಏರ್ ಅಸ್ತ್ರ ಕ್ಷಿಪಣಿಗಳೂ (ASTRA missiles) ಕೂಡ ಇನ್ನೊಂದು ವರ್ಷದಲ್ಲಿ ನಿಯೋಜನೆಗೆ ಸಿದ್ಧ ಇರಲಿವೆ.

ಈಗಿರುವ ಬ್ರಹ್ಮೋಸ್ ಮಿಸೈಲ್ 450 ಕಿಮೀ ಶ್ರೇಣಿ ಹೊಂದಿದೆ. ಇದರ ವೇಗ ಸುಮಾರು 2.8 ಮ್ಯಾಚ್​ನಷ್ಟಿದೆ. ಅಂದರೆ ಸುಮಾರು 4,000 ಕಿಮೀ ವೇಗದಲ್ಲಿ ಇವು ಸಾಗಿ ವೈರಿಗಳನ್ನು ಚಿಂದಿ ಉಡಾಯಿಸಬಲ್ಲುದು. ಇದೀಗ ಈ ಕ್ಷಿಪಣಿಯನ್ನು ಮತ್ತಷ್ಟು ಅಭಿವೃದ್ಧಿಪಡಿಸಲಾಗಿದೆ.

ಇದನ್ನೂ ಓದಿ: ಭಾರತದ ಬ್ರಹ್ಮೋಸ್ ಕ್ಷಿಪಣಿಗೆ ಹೆಚ್ಚಿದ ಬೇಡಿಕೆ; ರಹಸ್ಯವಾಗಿ 4,000 ಕೋಟಿ ರೂ ಮೊತ್ತಕ್ಕೆ ಒಪ್ಪಂದ ಮಾಡಿಕೊಂಡ ಎರಡು ದೇಶಗಳು

ಹೊಸ ಬ್ರಹ್ಮೋಸ್ ಕ್ಷಿಪಣಿ ದೂರ ಕ್ರಮಿಸುವ ಸಾಮರ್ಥ್ಯ 800 ಕಿಮೀಗೆ ಹೆಚ್ಚಿದೆ. ಅದರ ರಾಮ್ಜೆಟ್ ಎಂಜಿನ್​ನಲ್ಲಿ ಮಾರ್ಪಾಡುಗಳನ್ನು ಮಾಡಲಾಗಿದೆ. ಅದಕ್ಕೆ ಅಳವಡಿಸಲಾಗಿರುವ ನ್ಯಾವಿಗೇಶನ್ ಸಿಸ್ಟಂಗಳ ಸಂಯೋಜನೆ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಪರೀಕ್ಷಿಸಲಾಗುತ್ತಿದೆ. ಇದು ಯಶಸ್ವಿಯಾದಲ್ಲಿ ಹೊಸ ಬ್ರಹ್ಮೋಸ್ ಕ್ಷಿಪಣಿ ಇನ್ನೂ ಹೆಚ್ಚಿನ ಭೀಕರ ಅಸ್ತ್ರವಾಗಿ ಪರಿಣಮಿಸಲಿದೆ.

ಭಾರತೀಯ ನೌಕಾಪಡೆಯ ಅಗತ್ಯಕ್ಕೂ ಬೇಕಾದಂತೆ ಬ್ರಹ್ಮೋಸ್ ಕ್ಷಿಪಣಿಯನ್ನು ಅಪ್​ಗ್ರೇಡ್ ಮಾಡುವ ಸಂಭವವೂ ಇದೆ. ಈಗಾಗಲೇ ಅಭಿವೃದ್ಧಿಯಾಗಿರುವ 800 ಕಿಮೀ ಶ್ರೇಣಿಯ ಬ್ರಹ್ಮೋಸ್ ಕ್ಷಿಪಣಿಯ ತಂತ್ರಾಂಶದಲ್ಲಿ ಬದಲಾವಣೆ ತಂದು ನೌಕಾಪಡೆಗೆ ಬೇಕಾದ ರೀತಿಯಲ್ಲಿ ನಿರ್ಮಿಸಲು ಸಾಧ್ಯ.

ಇದನ್ನೂ ಓದಿ: ಶಕ್ತಿಶಾಲಿ ಏರ್ ಫೋರ್ಸ್; ಚೀನಾವನ್ನು ಹಿಂದಿಕ್ಕಿದ ಭಾರತ ವಿಶ್ವದ ನಂ. 3

ಅಸ್ತ್ರ ಕ್ಷಿಪಣಿಗಳೂ ಕೂಡ ಸಜ್ಜು

ಭಾರತದ ದೇಶೀಯ ನಿರ್ಮಿತ ಅಸ್ತ್ರ ಕ್ಷಿಪಣಿಗಳನ್ನೂ ಮತ್ತಷ್ಟು ಅಪ್​ಗ್ರೇಡ್ ಮಾಡಲಾಗುತ್ತಿದೆ. 160 ಕಿಮೀ ಇರುವ ಈ ಕ್ಷಿಪಣಿಯ ಶ್ರೇಣಿಯನ್ನು 200 ಕಿಮೀಗೆ ಹೆಚ್ಚಿಸಲು ಡಿಆರ್​ಡಿಒ ಪ್ರಯತ್ನಿಸುತ್ತಿದೆ. ಅಸ್ತ್ರ ಮಾರ್ಕ್-2 ದರ್ಜೆಯ 700 ಕ್ಷಿಪಣಿಗಳನ್ನು ಭಾರತೀಯ ವಾಯುಪಡೆ ಹೊಂದಲಿದೆ. ಇದೇ ವೇಳೆ, 350 ಕಿಮೀ ಶ್ರೇಣಿಯ ಅಸ್ತ್ರ ಮಾರ್ಕ್-3 ಕ್ಷಿಪಣಿಯ ಅಭಿವೃದ್ಧಿ ಆಗುತ್ತಿದ್ದು, ಇನ್ನು ಮೂರು ವರ್ಷದಲ್ಲಿ ಇವು ನಿಯೋಜನೆಯಾಗಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 10:03 pm, Mon, 20 October 25