
ನವದೆಹಲಿ, ಜೂನ್ 6: ವಿದೇಶೀ ವೃತ್ತಿಪರ ಸಲಹಾ ಸಂಸ್ಥೆಗಳ ಮೇಲಿನ ಅವಲಂಬನೆ ಕಡಿಮೆ ಮಾಡುವ ಉದ್ದೇಶದಿಂದ ಸರ್ಕಾರವು ಇಂದು ವಿವಿಧ ತಜ್ಞರೊಂದಿಗೆ ಸಭೆ ನಡೆಸಲಿದೆ. ವಿಶ್ವದ ಬಿಗ್ ಫೋರ್ ಎಂದು ಕರೆಯಲಾದ ಇವೈ, ಪಿಡಬ್ಲ್ಯುಸಿ ಇತ್ಯಾದಿ ವಿದೇಶೀ ಕನ್ಸಲ್ಟೆಂಗ್ ಸಂಸ್ಥೆಗಳಿಗೆ ಪರ್ಯಾಯವಾದ ಭಾರತೀಯ ಕಂಪನಿಗಳನ್ನು ಬೆಳೆಸುವ ಮಾರ್ಗಗಳನ್ನು ಈ ಸಭೆಯಲ್ಲಿ ಅವಲೋಕಿಸಲಾಗುತ್ತದೆ. ಪ್ರಧಾನಿ ಕಾರ್ಯಾಲಯವಾದ ಪಿಎಂಒ ಈ ಸಭೆಯನ್ನು ನಡೆಸುತ್ತಿದೆ.
ಪ್ರಧಾನಿಗಳ ಪ್ರಧಾನ ಕಾರ್ಯದರ್ಶಿಯಾಗಿರುವ ಹಾಗೂ ಮಾಜಿ ಆರ್ಬಿಐ ಗವರ್ನರ್ ಆದ ಶಕ್ತಿಕಾಂತ ದಾಸ್ ಅವರು ಈ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರಧಾನಿಗಳ ಆರ್ಥಿಕ ಸಲಹಾ ಮಂಡಳಿಯಲ್ಲಿರುವ ಸಂಜೀವ್ ಸಾನ್ಯಾಳ್ ಅವರು ಜಾಗತಿಕ ಮಟ್ಟದ ಭಾರತೀಯ ಕನ್ಸಲ್ಟಿಂಗ್ ಸಂಸ್ಥೆಗಳ ಸ್ಥಾಪನೆಯ ಸಾಧಕ ಬಾಧಕಗಳ ಬಗ್ಗೆ ವಿಚಾರ ಮಂಡನೆ ಮಾಡಲಿದ್ದಾರೆ.
ಅಜಯ್ ಸೇಠ್, ದೀಪ್ತಿ ಮುಖರ್ಜಿ, ಅರವಿಂದ್ ಶ್ರೀವಾಸ್ತವ, ಎಂ ನಾಗರಾಜು ಇತ್ಯಾದಿ ಹಿರಿಯ ಸರ್ಕಾರಿ ಇಲಾಖಾ ಅಧಿಕಾರಿಗಳು ಈ ಸಭೆಯಲ್ಲಿ ಪಾಲ್ಗೊಂಡು ತಮ್ಮ ವಿಚಾರಗಳನ್ನೂ ಚರ್ಚಿಸುವ ನಿರೀಕ್ಷೆ ಇದೆ.
ಇದನ್ನೂ ಓದಿ: ಸರ್ಕಾರಕ್ಕೆ ಅದಾನಿ ಗ್ರೂಪ್ನಿಂದ ಸಖತ್ ಟ್ಯಾಕ್ಸ್ ಕಲೆಕ್ಷನ್; ಇಡೀ ಬೆಂಗಳೂರು ಮೆಟ್ರೋ ನಿರ್ಮಾಣಕ್ಕಾಗುವಷ್ಟು ಹಣ ಅದು
ಡುಲೋಟ್, ಎರ್ನಸ್ಟ್ ಅಂಡ್ ಯಂಗ್ (ಇವೈ), ಪ್ರೈಸ್ ವಾಟರ್ಹೌಸ್ ಕೂಪರ್ಸ್ (ಪಿಡಬ್ಲ್ಯುಸಿ), ಕ್ಲಿನ್ವೆಲ್ಡ್ ಪೀಟ್ ಮಾರ್ವಿಕ್ ಗೇಡೆಲರ್ (ಕೆಪಿಎಂಜಿ) ಇವು ವಿಶ್ವದ ಬಿಗ್ ಫೋರ್ ಅಕೌಂಟಿಂಗ್ ಸಂಸ್ಥೆಗಳೆಂದು ಖ್ಯಾತವಾಗಿವೆ. ವಿಶ್ವದ ಹಲವು ಕಂಪನಿಗಳಿಗೆ ಆಡಿಟಿಂಗ್ ಸರ್ವಿಸ್, ಟ್ಯಾಕ್ಸ್, ಕನ್ಸಲ್ಟಿಂಗ್ ಸರ್ವಿಸ್, ವ್ಯಾಲ್ಯುಯೇಶನ್, ಮಾರ್ಕೆಟ್ ರಿಸರ್ಚ್, ಕಾನೂನು ಸಲಹೆ ಇತ್ಯಾದಿ ವಿವಿಧ ರೀತಿಯ ಸೇವೆಗಳನ್ನು ಇವು ನೀಡುತ್ತವೆ.
ಈ ಕಂಪನಿಗಳು ಭಾರತದಲ್ಲಿ ಅಂಗ-ಸಂಸ್ಥೆಗಳನ್ನು ಹುಟ್ಟುಹಾಕಿ ಇಲ್ಲಿ ಕನ್ಸಲ್ಟಿಂಗ್ ಸರ್ವಿಸ್ ನೀಡುತ್ತವೆ. ಈ ನಾಲ್ಕು ಕಂಪನಿಗಳ ಭಾರತ ವಿಭಾಗದ ಸಂಸ್ಥೆಗಳು 2023-24ರಲ್ಲಿ ಒಟ್ಟು 38,800 ಕೋಟಿ ರೂ ಆದಾಯ ಮಾಡಿವೆ. 2024-25ರಲ್ಲಿ ಈ ಆದಾಯವು 45,000 ಕೋಟಿ ರೂ ಮೀರುವ ನಿರೀಕ್ಷೆ ಇದೆ. ಕುತೂಹಲ ಎಂದರೆ, ಭಾರತದಲ್ಲಿರುವ ಅಂಗಸಂಸ್ಥೆಗಳು ತಮ್ಮ ಮಾತೃ ಸಂಸ್ಥೆಗಳಿಗಿಂತ ಹೆಚ್ಚು ಆದಾಯ ಗಳಿಸುತ್ತಿವೆ.
ಇದನ್ನೂ ಓದಿ: ವಿರಳ ಭೂಖನಿಜದೊಂದಿಗೆ ಚೀನಾ ಆಟ; ಇಡೀ ವಿಶ್ವಕ್ಕೆ ಸಂಕಟ; ಭಾರತದಿಂದ ಪರ್ಯಾಯ ಮಾರ್ಗ ಹುಡುಕಾಟ
ಮೇಲೆ ತಿಳಿಸಿದ ಬಿಗ್ ಫೋರ್ ಮಾತ್ರವಲ್ಲದೆ, ಗ್ರ್ಯಾಂಟ್ ಥಾರ್ನ್ಟನ್, ಬಿಡಿಒ ಮೊದಲಾದ ಕಂಪನಿಗಳು ಭಾರತದ ಅಕೌಂಟಿಂಗ್ ಜಗತ್ತನ್ನು ಆಳುತ್ತಿವೆ. ತಮ್ಮ ಅಂಗಸಂಸ್ಥೆಗಳ ಮೂಲಕ ಈ ವಿದೇಶೀ ಕಂಪನಿಗಳು ಭಾರತದ ಟಾಪ್-500 ಕಂಪನಿಗಳ ಪೈಕಿ 326 ಕಂಪನಿಗಳಿಗೆ ಆಡಿಟಿಂಗ್, ಅಕೌಂಟಿಂಗ್, ಕನ್ಸಲ್ಟಿಂಗ್ ಸರ್ವಿಸ್ ನೀಡುತ್ತಿವೆ ಎಂದು ಹೇಳಲಾಗುತ್ತಿದೆ.
ಈ ರೀತಿಯ ಕನ್ಸಲ್ಟಿಂಗ್ ಕಂಪನಿಗಳನ್ನು ಭಾರತ ಹೊಂದಬೇಕು ಎನ್ನುವ ಸರ್ಕಾರದ ಆಲೋಚನೆ ಹೊಸದಾಗಿ ಹುಟ್ಟಿಕೊಂಡಿದ್ದಲ್ಲ. 2017ರಲ್ಲಿ ಪ್ರಧಾನಿಗಳು ಈ ವಿಚಾರ ಹೇಳಿದ್ದರು. ವಿಶ್ವದ ಟಾಪ್ 8 ಕನ್ಸಲ್ಟಿಂಗ್ ಕಂಪನಿಗಳಲ್ಲಿ ನಾಲ್ಕು ಭಾರತೀಯ ಕಂಪನಿಗಳಿರಬೇಕು ಎನ್ನುವ ಕನಸನ್ನು ತೋರ್ಪಡಿಸಿದ್ದರು. ಈಗ ಅದನ್ನು ಸಾಕಾರಗೊಳಿಸುವ ಮಾರ್ಗೋಪಾಯಗಳನ್ನು ಹುಡುಕುವ ಕೆಲಸ ಆರಂಭವಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ