ಭಾರತದ ಬೆಳವಣಿಗೆಯ ವೇಗ ನೋಡಿದರೆ ಈ ವರ್ಷವೇ ಟಾಪ್-3ಗೆ ಸೇರುವಂತಿದೆ: ಬೋರ್ಜೆ ಬ್ರೆಂಡೆ
WEF CEO Borge Brende says Indian economy doing well: ವರ್ಲ್ಡ್ ಎಕನಾಮಿಕ್ ಫೋರಂನ ಪ್ರೆಸಿಡೆಂಟ್ ಮತ್ತು ಸಿಇಒ ಬೋರ್ಜೆ ಬ್ರೆಂಡೆ ಭಾರತದ ಆರ್ಥಿಕತೆ ಬಗ್ಗೆ ಸಕಾರಾತ್ಮಕವಾಗಿ ಮಾತನಾಡಿದ್ದಾರೆ. ಕಳೆದ ಕ್ವಾರ್ಟರ್ನಲ್ಲಿ ಭಾರತದ ಜಿಡಿಪಿ ಶೇ. 7.5ರಷ್ಟು ಹೆಚ್ಚಾಗಿದ್ದನ್ನು ಉಲ್ಲೇಖಿಸಿದ ಅವರು ಇದೇ ವೇಗದಲ್ಲಿ ಮುಂದುವರಿದರೆ ಈ ವರ್ಷವೇ ಭಾರತ ವಿಶ್ವದ 3ನೇ ಅತಿದೊಡ್ಡ ಆರ್ಥಿಕತೆ ಎನಿಸಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ನವದೆಹಲಿ, ಜೂನ್ 6: ಜಾಗತಿಕ ಆರ್ಥಿಕ ಹಿನ್ನಡೆ ಮತ್ತು ಅನಿಶ್ಚಿತ ಪರಿಸ್ಥಿತಿ ಮಧ್ಯೆಯೂ ಭಾರತದ ಆರ್ಥಿಕತೆ ತಕ್ಕಮಟ್ಟಿಗೆ ಬೆಳವಣಿಗೆ ಸಾಧಿಸುತ್ತಿದೆ. ವಿಶ್ವದ ಬಹುತೇಕ ಏಜೆನ್ಸಿಗಳು ಭಾರತದ ಆರ್ಥಿಕತೆ ಬಗ್ಗೆ ಆಶಾಭಾವ ಹೊಂದಿದ್ದಾರೆ. ವರ್ಲ್ಡ್ ಎಕನಾಮಿಕ್ ಫೋರಂ ಅಧ್ಯಕ್ಷ ಮತ್ತು ಸಿಇಒ ಆದ ಬೋರ್ಜೆ ಬ್ರೆಂಡೆ (Borge Brende) ಕೂಡ ಈ ಅನಿಸಿಕೆಗೆ ಸಹಮತ ವ್ಯಕ್ತಪಡಿಸಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಭಾರತ ಈ ವರ್ಷವೇ ಟಾಪ್-3 ಆರ್ಥಿಕತೆಗಳ ಸಾಲಿಗೆ ಸೇರ್ಪಡೆಯಾದರೆ ಅಚ್ಚರಿ ಇಲ್ಲ ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ.
‘ವಿಶ್ವದ ದೊಡ್ಡ ಆರ್ಥಿಕತೆಗಳ ಪೈಕಿ ಭಾರತ ಹೆಚ್ಚು ಮಿನುಗುತ್ತಿದೆ. ಅದರ ಆರ್ಥಿಕತೆ ನಿಜಕ್ಕೂ ಉತ್ತಮವಾಗಿ ಸಾಗುತ್ತಿದೆ. ಕೊನೆಯ ಕ್ವಾರ್ಟರ್ನಲ್ಲಿ ಅದು ನಿರೀಕ್ಷೆ ಮೀರಿ ಶೇ. 7.5ರಷ್ಟು ಬೆಳವಣಿಗೆ ಹೊಂದಿದೆ. ಜಪಾನ್ ಅನ್ನು ಹಿಂದಿಕ್ಕಿ ನಾಲ್ಕನೇ ಸ್ಥಾನ ಪಡೆಯಲಿದೆ. ಇದೇ ವೇಗದಲ್ಲಿ ಸಾಗಿದರೆ ಈ ವರ್ಷವೇ 5 ಟ್ರಿಲಿಯನ್ ಡಾಲರ್ ಆಗಿ ಮೂರನೇ ಸ್ಥಾನವನ್ನೂ ಪಡೆಯಬಹುದು’ ಎಂದು ವರ್ಲ್ಡ್ ಎಕನಾಮಿಕ್ ಫೋರಂನ ಸಿಇಒ ಆದ ಅವರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ವಿಶ್ವದ ಟಾಪ್-4ಗೆ ಪೈಪೋಟಿ ನೀಡಬಲ್ಲ ಭಾರತದ್ದೇ ದೊಡ್ಡ ಕಂಪನಿಗಳ ನಿರ್ಮಾಣಕ್ಕೆ ಸರ್ಕಾರ ಯತ್ನ
ಬ್ಯುಸಿನೆಸ್ ಟುಡೇ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಅವರು, ಜಾಗತಿಕವಾಗಿ ಬೆಳವಣಿಗೆ ಕುಂಠಿತಗೊಳ್ಳುತ್ತಿದ್ದರೂ ಭಾರತ ಸರಿಯಾದ ದಿಕ್ಕಿನಲ್ಲಿ ಸಾಗಲು ಯಶಸ್ವಿಯಾಗುತ್ತಿದೆ ಎಂದು ಶ್ಲಾಘಿಸಿದ್ದಾರೆ. ಅದಕ್ಕೆ ಕಾರಣವನ್ನೂ ಬಿಚ್ಚಿಟ್ಟಿದ್ದಾರೆ.
‘ವ್ಯಾಪಾರ ರಂಗದಲ್ಲಿ ರಚನಾತ್ಮಕವಾಗಿ ಬದಲಾವಣೆ ಆಗುತ್ತಿದೆ. ಮ್ಯಾನುಫ್ಯಾಕ್ಚರಿಂಗ್ಗೆ ಹೋಲಿಸಿದರೆ ಸರ್ವಿಸ್ ಮತ್ತು ಡಿಜಿಟಲ್ ಕ್ಷೇತ್ರದಲ್ಲಿ ವ್ಯಾಪಾರ ಮೂರು ಪಟ್ಟು ಹೆಚ್ಚಾಗುತ್ತಿದೆ. ಭಾರತವು ಸರ್ವಿಸ್ ಮತ್ತು ಡಿಜಿಟಲ್ ಟ್ರೇಡ್ನಲ್ಲಿ ಗಟ್ಟಿಮುಟ್ಟಾಗಿರುವುದರಿಂದ ಬೇರೆ ದೇಶಗಳಿಗೆ ಹೋಲಿಸಿದಾಗ ಭಾರತದ ಆರ್ಥಿಕತೆ ಉತ್ತಮವಾಗಿ ಬೆಳವಣಿಗೆ ಹೊಂದುತ್ತಿರಬಹುದು’ ಎಂದು ಬೋರ್ಜೆ ಬ್ರೆಂಡೆ ಅಭಿಪ್ರಾಯಪಟ್ಟಿದ್ದಾರೆ.
ಭಾರತದ ಜಾಗತಿಕ ಪ್ರಭಾವ ಕೇವಲ ಆರ್ಥಿಕತೆಗೆ ಸಂಬಂಧಿಸಿದ್ದಲ್ಲ, ತಂತ್ರಾತ್ಮಕವಾಗಿಯೂ ಪ್ರಭಾವ ಹೆಚ್ಚುತ್ತಿದೆ. ಕೋವಿಡ್ ಸಾಂಕ್ರಾಮಿಕ ರೋಗದ ಬಳಿಕ ವಿವಿಧ ಜಾಗತಿಕ ಕಂಪನಿಗಳು ಮತ್ತು ದೇಶಗಳು ಸರಬರಾಜು ಸರಪಳಿಯಲ್ಲಿ ಬದಲಾವಣೆ ಮಾಡುತ್ತಿರುವುದು ಭಾರತಕ್ಕೆ ಅನುಕೂಲ ಸ್ಥಿತಿ ಕಲ್ಪಿಸಿದೆ ಎಂಬುದು ವರ್ಲ್ಡ್ ಎಕನಾಮಿಕ್ ಫೋರಂ ಅಧ್ಯಕ್ಷರ ಅನಿಸಿಕೆ.
ಇದನ್ನೂ ಓದಿ: 2025-26ರಲ್ಲಿ ಜಿಡಿಪಿ ಶೇ. 6.5, ಹಣದುಬ್ಬರ ಶೇ. 3.7: ಆರ್ಬಿಐ ಅಂದಾಜು
ಭಾರತ ಇದೇ ವೇಗ ಕಾಯ್ದುಕೊಳ್ಳಬೇಕೆಂದರೆ ಈ ಕ್ರಮ ಜರುಗಿಸಬೇಕು…
ಭಾರತ ಇದೇ ಬೆಳವಣಿಗೆ ಕಾಯ್ದುಕೊಳ್ಳಬೇಕೆಂದರೆ ಕಾನೂನು ಕಟ್ಟಳೆಗಳನ್ನು ಸಡಿಲಿಸಬೇಕು. ಆಡಳಿತಷಾಹಿ ವ್ಯವಸ್ಥೆಯಲ್ಲಿ ಸುಧಾರಣೆಯಾಗಬೇಕು. ಮೂಲಸೌಕರ್ಯ ಮತ್ತಷ್ಟು ಉತ್ತಮಗೊಳ್ಳಬೇಕು. ರಾಜ್ಯಗಳ ನಡುವೆ ಸಮನ್ವಯತೆ ಹೆಚ್ಚಬೇಕು. ಹೀಗಾದಾಗ ಜಾಗತಿಕ ರಾಜಕೀಯದಲ್ಲಿ ಮತ್ತು ಜಾಗತಿಕ ಆರ್ಥಿಕತೆಯಲ್ಲಿ ಭಾರತದ ಪಾತ್ರ ಮುಂದಿನ ದಿನಗಳಲ್ಲಿ ಮಹತ್ವದ್ದಿರುತ್ತದೆ ಎಂದು ಬೋರ್ಜೆ ಬ್ರೆಂಡೆ ಹೇಳಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




