NPAs: ಭಾರತದಲ್ಲಿ ಕೆಟ್ಟ ಸಾಲ ಕಡಿಮೆ; ಹಣಕಾಸು ವಲಯ ಪ್ರಬಲ: ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್
RBI Governor Shaktikanta Das Speech: ಕೆಲ ಮುಂದುವರಿದ ಆರ್ಥಿಕತೆಯ ದೇಶಗಳಲ್ಲಿ ಹಣಕಾಸು ಅಸ್ಥಿರತೆ ತರುವ ವಿದ್ಯಮಾನಗಳು ಭಾರತದ ಬ್ಯಾಂಕಿಂಗ್ ವ್ಯವಸ್ಥೆ ಮೇಲೆ ಪ್ರಭಾವಿಸಿಲ್ಲ. ನಮ್ಮ ಬ್ಯಾಂಕುಗಳ ಸ್ಥಿತಿ ಉತ್ತಮವಾಗಿದೆ ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಸ್ಪಷ್ಟಪಡಿಸಿದ್ದಾರೆ.
ಮುಂಬೈ: ಜಾಗತಿಕ ಹಣಕಾಸು ವಲಯ ವ್ಯವಸ್ಥೆಯಲ್ಲಿ (Global Financial System) ಇತ್ತೀಚೆಗೆ ಆಗಿರುವ ನಕಾರಾತ್ಮಕ ಬೆಳವಣಿಗೆಗಳಿಂದ ಭಾರತಕ್ಕೆ ಪರಿಣಾಮವೇನಿಲ್ಲ. ಭಾರತದ ಬ್ಯಾಂಕಿಂಗ್ ವಲಯ ಪ್ರಬಲವಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ (RBI Governor Shaktikanta Das) ಏಪ್ರಿಲ್ 27, ಗುರುವಾರದಂದು ಅಭಿಪ್ರಾಯಪಟ್ಟಿದ್ದಾರೆ. ಮುಂಬೈನಲ್ಲಿ ಕಾಲೇಜ್ ಆಫ್ ಸೂಪರ್ವೈಸರ್ಸ್ನಿಂದ (College of Supervisors) ಆಯೋಜಿಸಲಾದ ಜಾಗತಿಕ ಸಮಾವೇಶವೊಂದರಲ್ಲಿ ಮಾತನಾಡುತ್ತಿದ್ದ ಆರ್ಬಿಐ ಗವರ್ನರ್, ಕೆಲ ಮುಂದುವರಿದ ಆರ್ಥಿಕತೆಯ ದೇಶಗಳಲ್ಲಿ ಹಣಕಾಸು ಅಸ್ಥಿರತೆ ತರುವ ವಿದ್ಯಮಾನಗಳು ಭಾರತದ ಬ್ಯಾಂಕಿಂಗ್ ವ್ಯವಸ್ಥೆ ಮೇಲೆ ಪ್ರಭಾವಿಸಿಲ್ಲ. ನಮ್ಮ ಬ್ಯಾಂಕುಗಳ ಸ್ಥಿತಿ ಉತ್ತಮವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಭಾರತೀಯ ಹಣಕಾಸು ವ್ಯವಸ್ಥೆಗೆ ಭವಿಷ್ಯದಲ್ಲೂ ಭದ್ರತೆ ಒದಗಿಸಲು ಮತ್ತು ಸ್ವಾವಲಂಬಿ ಪ್ರಗತಿಗೆ ನೆರವು ಒದಗಿಸಲು ಆರ್ಬಿಐ ಕಟಿಬದ್ಧವಾಗಿದೆ ಎಂದೂ ಶಕ್ತಿಕಾಂತ ದಾಸ್ ಭರವಸೆ ನೀಡಿದ್ದಾರೆ.
ಭಾರತದ ಬ್ಯಾಂಕಿಂಗ್ ವಲಯದಲ್ಲಿ ಕೆಟ್ಟ ಸಾಲಗಳು ಕಡಿಮೆ ಆಗಿವೆ ಎಂದ ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್
ಜಾಗತಿಕ ಬ್ಯಾಂಕುಗಳ ಹಿನ್ನಡೆಯಿಂದ ಭಾರತದ ಬ್ಯಾಂಕುಗಳಿಗೆ ಋಣಾತ್ಮಕ ಪರಿಣಾಮವಾಗಿಲ್ಲ ಎಂಬುದಕ್ಕೆ ಸಾಕ್ಷಿಯಾಗಿ ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಕೆಟ್ಟ ಸಾಲಗಳ ಪ್ರಮಾಣ ಇಳಿಕೆ ಆಗಿರುವ ಸಂಗತಿಯನ್ನು ಉಲ್ಲೇಖಿಸಿದ್ದಾರೆ. ಮುಂಬೈನಲ್ಲ ಕಾಲೇಜ್ ಆಫ್ ಸೂಪರ್ವೈಸರ್ಸ್ನಿಂದ ಆಯೋಜಿಸಲಾಗಿದ್ದ ಜಾಗತಿಕ ಸಮಾವೇಶದಲ್ಲಿ ಮಾತನಾಡಿದ ಅವರು, ಭಾರತದಲ್ಲಿ 2022ರ ಅಂತ್ಯದಲ್ಲಿ ಕೆಟ್ಟ ಸಾಲಗಳ (ಎನ್ಪಿಎ) ಸಂಖ್ಯೆ ಶೇ. 4.41ಕ್ಕೆ ಇಳಿಕೆ ಆಗಿದೆ ಎಂದಿದ್ದಾರೆ. 2015ರ ಬಳಿಕ ಇದು ಅತಿ ಕಡಿಮೆ ಪ್ರಮಾಣದ ಎನ್ಪಿಎ ಆಗಿದೆ.
ಇದನ್ನೂ ಓದಿ: Comet EV: ಚೀನೀ ಕಂಪನಿಯಿಂದ ಭಾರತದಲ್ಲಿ ಅತಿಕಡಿಮೆ ಬೆಲೆಯ ಎಲೆಕ್ಟ್ರಿಕ್ ಕಾರು ಬಿಡುಗಡೆ; ಟಾಟಾ ಟಿಯಾಗೋಕ್ಕಿಂತ ಉತ್ತಮವಾಗಿದೆಯಾ?
2021ರ ಮಾರ್ಚ್ ತಿಂಗಳಲ್ಲಿ ಭಾರತೀಯ ಬ್ಯಾಂಕುಗಳು ಶೇ. 7.3ರಷ್ಟು ಎನ್ಪಿಎ ಹೊಂದಿದ್ದವು. 2022ರ ಮಾರ್ಚ್ನಲ್ಲಿ ಇದು ಶೇ. 5.8ಕ್ಕೆ ಕಡಿಮೆ ಆಯಿತು. 2022ರ ವರ್ಷಾಂತ್ಯದಲ್ಲಿ ಇದು ಇನ್ನೂ ಕಡಿಮೆ ಆಗಿರುವುದು ಅಂಕಿ ಅಂಶಗಳಿಗೆ ಗೊತ್ತಾಗುತ್ತದೆ.
ಇನ್ನು, ಬ್ಯಾಂಕುಗಳ ಕ್ಯಾಪಿಟಲ್ ಅಡಿಕ್ವಸಿ ರೇಶಿಯೋ 2022ರ ಡಿಸೆಂಬರ್ ಅಂತ್ಯಕ್ಕೆ ಶೇ. 16.1ರಷ್ಟಿತ್ತು. ಆರ್ಬಿಐ ನಿಗದಿ ಮಾಡಿದ್ದಕ್ಕಿಂತ ಉತ್ತಮ ಸ್ಥಿತಿಯಲ್ಲಿ ಸಿಎಆರ್ ಇದೆ. ಇಲ್ಲಿ ಸಿಎಆರ್ ಅಥವಾ ಕ್ಯಾಪಿಟಲ್ ಅಡಿಕ್ವಸಿ ರೇಷಿಯೋ ಎಂದರೆ ಬ್ಯಾಂಕ್ನ ಕೆಟ್ಟ ಸಾಲ ಇತ್ಯಾದಿ ಋಣಾತ್ಮಕ ಆಸ್ತಿ ಹಾಗೂ ಬ್ಯಾಂಕ್ನ ಒಟ್ಟು ಬಂಡವಾಳ ಮಧ್ಯೆ ಇರುವ ಅನುಪಾತ ದರವಾಗಿದೆ.
ಏನಿದು ಜಾಗತಿಕ ಬ್ಯಾಂಕಿಂಗ್ ಬಿಕ್ಕಟ್ಟು?
ವಿಶ್ವದ ದೊಡ್ಡಣ್ಣ ಎನಿಸಿದ ಅಮೆರಿಕ ಹಾಗೂ ಯೂರೋಪ್ನಲ್ಲಿ ಬ್ಯಾಂಕಿಂಗ್ ವ್ಯವಸ್ಥೆ ಕುಸಿದುಬೀಳುವ ಅಪಾಯದಲ್ಲಿದೆ. ಎಸ್ವಿಬಿ ಮೊದಲಾದ ಕೆಲವು ಬ್ಯಾಂಕುಗಳು ದಿವಾಳಿಯಾಗಿವೆ. ಇನ್ನೂ ಹಲವು ಬ್ಯಾಂಕುಗಳು ದಿವಾಳಿಯಾಗುವ ದಾರಿಯಲ್ಲಿವೆ. ಈ ಬ್ಯಾಂಕುಗಳಿಗೆ ಹಣದ ಕೊರತೆ ಸೃಷ್ಟಿಯಾಗಿದೆ. ಠೇವಣಿದಾರರು ಮುಗಿಬಿದ್ದು ಹಣ ಹಿಂಪಡೆಯುತ್ತಿದ್ದಾರೆ. 2008ರಲ್ಲಿ ಉಂಟಾಗಿದ್ದ ಬ್ಯಾಂಕಿಂಗ್ ಬಿಕ್ಕಟ್ಟು ಮತೆ ತಲೆದೋರುವ ಅಪಾಯ ಇದೆ.
ಈ ಪ್ರಮುಖ ಆರ್ಥಿಕತೆಯ ದೇಶಗಳಲ್ಲಿನ ಬ್ಯಾಂಕುಗಳು ಎದುರಿಸುತ್ತಿರುವ ಬಿಕ್ಕಟ್ಟು ಭಾರತೀಯ ಬ್ಯಾಂಕುಗಳ ಮೇಲೆ ಆಗಬಹುದು ಎಂಬ ನಿರೀಕ್ಷೆಗಳಿದ್ದವು. ಅದರೆ, ಇನ್ನೂವರೆಗೂ ಅಂಥ ಸ್ಥಿತಿ ಉದ್ಭವಿಸಿಲ್ಲ. ಕೆಲ ವರ್ಷಗಳ ಹಿಂದಿನವರೆಗೂ ಭಾರತೀಯ ಬ್ಯಾಂಕುಗಳಿಗೆ ಬೇನೆಯಾಗಿದ್ದ ಕೆಟ್ಟ ಆಸ್ತಿಗಳ ಪ್ರಮಾಣ ಕ್ರಮೇಣ ಇಳಿಮುಖ ಆಗುತ್ತಿರುವುದು ಆರ್ಬಿಐ ಬಿಡುಗಡೆ ಮಾಡಿದ ಅಂಕಿ ಅಂಶಗಳಿಂದ ವೇದ್ಯವಾಗುತ್ತಿದೆ. ಇದಕ್ಕೆ ಕೇಂದ್ರ ಸರ್ಕಾರದ ಎನ್ಪಿಎ ನೀತಿಯೂ ಕಾರಣವಾಗಿದ್ದಿರಬಹುದು.
ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 2:09 pm, Thu, 27 April 23