ನವದೆಹಲಿ, ಡಿಸೆಂಬರ್ 2: ಕ್ಯೂಐಪಿ ಅಥವಾ ಕ್ವಾಲಿಫೈಡ್ ಇನ್ಸ್ಟಿಟ್ಯೂಶನಲ್ ಪ್ಲೇಸ್ಮೆಂಟ್ ಮಾರ್ಗದಲ್ಲಿ ಈ ಕ್ಯಾಲಂಡರ್ ವರ್ಷದಲ್ಲಿ ಭಾರತೀಯ ಕಂಪನಿಗಳು ಪಡೆದ ಹಣದ ನೆರವು ಒಂದು ಲಕ್ಷ ಕೋಟಿ ರೂ ಗಡಿದಾಟಿದೆ. ಯಾವುದೇ ವರ್ಷದಲ್ಲಿ ಕಂಪನಿಗಳು ಒಂದು ವರ್ಷದಲ್ಲಿ ಇಷ್ಟೊಂದು ಮತ್ತದ ಫಂಡಿಂಗ್ ಪಡೆದದ್ದಿಲ್ಲ. ಆ ಮಟ್ಟಿಗೆ ಕ್ಯುಐಪಿ ಹೊಸ ಇತಿಹಾಸ ಸೃಷ್ಟಿಸಿದೆ.
ಮೊನ್ನೆ ಬಿಡುಗಡೆಯಾದ ದತ್ತಾಂಶದ ಪ್ರಕಾರ 80 ಕಂಪನಿಗಳು ಈ ವರ್ಷ (ಜನವರಿಯಿಂದ ಈಚೆಗೆ) ಕ್ಯುಐಪಿ ಮೂಲಕ ದಾಖಲೆಯ 1.13 ಲಕ್ಷ ಕೋಟಿ ರೂ ಫಂಡಿಂಗ್ ಪಡೆದಿವೆ. ಕಳೆದ ವರ್ಷದ ಇದೇ ಅವಧಿಯಲ್ಲಿ 35 ಕಂಪನಿಗಳು 38,220 ಕೋಟಿ ರೂ ಫಂಡ್ಗಳನ್ನು ಪಡೆದಿದ್ದವು. ಅದಕ್ಕೆ ಹೋಲಿಸಿದರೆ ಫಂಡಿಂಗ್ ಮೊತ್ತ ಮೂರು ಪಟ್ಟು ಹೆಚ್ಚಾಗಿದೆ. ಕಂಪನಿಗಳ ಸಂಖ್ಯೆಯೂ ಹೆಚ್ಚಾಗಿದೆ.
ಇದನ್ನೂ ಓದಿ: ನವೆಂಬರ್ನಲ್ಲಿ ಜಿಎಸ್ಟಿ ಸಂಗ್ರಹ 1.82 ಲಕ್ಷ ಕೋಟಿ ರೂ; ಶೇ. 8.5ರಷ್ಟು ಹೆಚ್ಚಳ
2020ರ ಕ್ಯಾಲಂಡರ್ ವರ್ಷದಲ್ಲಿ 25 ಕಂಪನಿಗಳು 80,816 ಕೋಟಿ ರೂ ಫಂಡಿಂಗ್ ಅನ್ನು ಕ್ಯೂಐಪಿ ಮೂಲಕ ಪಡೆದಿದ್ದವು. ಅದು ಹೊಸ ದಾಖಲೆ ಎನಿಸಿತ್ತು. ಈ ವರ್ಷ ಆ ದಾಖಲೆಯನ್ನು ಮುರಿದುಹಾಕಲಾಗಿದೆ. ಈ ಕ್ಯಾಲಂಡರ್ ವರ್ಷ ಮುಗಿಯಲು ಇನ್ನೂ ಒಂದು ತಿಂಗಳು ಬಾಕಿ ಇದೆ.
ರಿಯಲ್ ಎಸ್ಟೇಟ್ ಕಂಪನಿಯಾದ ಗೋದ್ರೇಜ್ ಪ್ರಾಪರ್ಟೀಸ್, ಮತ್ತು ಕೇಬಲ್ ವೈರ್ ಸಂಸ್ಥೆಯಾದ ಕೆಇಐ ಇಂಡಸ್ಟ್ರೀಸ್ ಈಗಾಗಲೇ ಕ್ಯುಐಪಿಯಲ್ಲಿ ಬಂಡವಾಳ ಸಂಗ್ರಹಿಸುವ ಕಾರ್ಯದಲ್ಲಿವೆ. 8,000 ಕೋಟಿ ರೂ ಮೊತ್ತದಷ್ಟು ಬಂಡವಾಳಕ್ಕೆ ಇವು ಯತ್ನಿಸುತ್ತಿವೆ. ಇದು ಸಾಧ್ಯವಾದಲ್ಲಿ ಈ ಕ್ಯಾಲಂಡರ್ ವರ್ಷದಲ್ಲಿ, ಅಂದರೆ ಜನವರಿಯಿಂದ ಡಿಸೆಂಬರ್ವರೆಗೆ ಕ್ಯೂಐಪಿಯಿಂದ ಪಡೆಯಲಾದ ಒಟ್ಟು ಬಂಡವಾಳ 1.21 ಲಕ್ಷ ಕೋಟಿ ರೂ ಆಗಬಹುದು.
ಇದನ್ನೂ ಓದಿ: ಅಭಿವೃದ್ಧಿ ಯೋಜನೆಗಳಿಗೆ ಕೇಂದ್ರದ ಗಮನ; ಶೇ. 25ರಷ್ಟು ಬಂಡವಾಳ ವೆಚ್ಚ ಹೆಚ್ಚುವ ನಿರೀಕ್ಷೆ: ಜೆಫರೀಸ್
ಏನಿದು ಕ್ಯೂಐಪಿ?
ಕ್ಯೂಐಪಿ ಅಥವಾ ಕ್ವಾಲಿಫೈಡ್ ಇನ್ಸ್ಟಿಟ್ಯೂಶನಲ್ ಪ್ಲೇಸ್ಮೆಂಟ್ ಎಂಬುದು ಕಾರ್ಪೊರೇಟ್ ಕಂಪನಿಗಳಿಗೆ ಬಂಡವಾಳ ಸಂಗ್ರಹಿಸಲು ಇರುವ ಒಂದು ಮಾರ್ಗ. ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗಿರುವ ಕಂಪನಿಗಳು ಷೇರು ಅಥವಾ ಕನ್ವರ್ಟಬಲ್ ಸೆಕ್ಯೂರಿಟಿಗಳನ್ನು ಸಾಂಸ್ಥಿಕ ಖರೀದಿದಾರರಿಗೆ (ಕ್ಯೂಐಬಿ) ವಿತರಿಸಿ, ಆ ಮೂಲಕ ಸಾಲ ಪಡೆಯುತ್ತವೆ. ಇಲ್ಲಿ ಸಾಂಸ್ಥಿಕ ಖರೀದಿದಾರರೆಂದರೆ, ಮ್ಯೂಚುವಲ್ ಫಂಡ್ಗಳು, ಇನ್ಷೂರೆನ್ಸ್ ಕಂಪನಿಗಳು ಮತ್ತು ಬ್ಯಾಂಕುಗಳು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 2:08 pm, Mon, 2 December 24