ನವೆಂಬರ್ನಲ್ಲಿ ಜಿಎಸ್ಟಿ ಸಂಗ್ರಹ 1.82 ಲಕ್ಷ ಕೋಟಿ ರೂ; ಶೇ. 8.5ರಷ್ಟು ಹೆಚ್ಚಳ
2024 November GST collections: 2024ರ ನವೆಂಬರ್ ತಿಂಗಳಲ್ಲಿ 1.82 ಲಕ್ಷ ಕೋಟಿ ರೂನಷ್ಟು ಜಿಎಸ್ಟಿ ಸಂಗ್ರಹವಾಗಿದೆ. ಕಳೆದ ವರ್ಷದ ನವೆಂಬರ್ಗೆ ಹೋಲಿಸಿದರೆ ಜಿಎಸ್ಟಿ ಸಂಗ್ರಹ ಶೇ. 8.5ರಷ್ಟು ಏರಿಕೆ ಆಗಿದೆ. ಹಿಂದಿನ ತಿಂಗಳಿಗೆ ಹೋಲಿಸಿದರೆ ತುಸು ಇಳಿಕೆ ಆಗಿದೆ. ಅಕ್ಟೋಬರ್ನಲ್ಲಿ 1.87 ಲಕ್ಷ ಕೋಟಿ ರೂ ಜಿಎಸ್ಟಿ ಸಿಕ್ಕಿತ್ತು.
ನವದೆಹಲಿ, ಡಿಸೆಂಬರ್ 2: ಒಟ್ಟಾರೆ ಜಿಎಸ್ಟಿ ಆದಾಯ ನವೆಂಬರ್ ತಿಂಗಳಲ್ಲಿ 1.82 ಲಕ್ಷ ಕೋಟಿ ರೂನಷ್ಟು ದಾಖಲಾಗಿದೆ. ಕಳೆದ ವರ್ಷದ ನವೆಂಬರ್ ತಿಂಗಳಲ್ಲಿ ಸಂಗ್ರಹವಾದ ಜಿಎಸ್ಟಿ 1.68 ಲಕ್ಷ ಕೋಟಿ ರು. ಅದಕ್ಕೆ ಹೋಲಿಸಿದರೆ ಜಿಎಸ್ಟಿ ಸಂಗ್ರಹ ಶೇ. 8.5 ಹೆಚ್ಚಳವಾಗಿದೆ. ಆದರೆ, ಹಿಂದಿನ ತಿಂಗಳಾದ 2024ರ ಅಕ್ಟೋಬರ್ ತಿಂಗಳಿಗೆ ಹೋಲಿಸಿದರೆ ಸರಕು ಮತ್ತು ಸೇವಾ ತೆರಿಗೆ ಸಂಗ್ರಹ ತುಸು ಇಳಿಕೆ ಆಗಿದೆ. ಅಕ್ಟೋಬರ್ನಲ್ಲಿ 1.87 ಲಕ್ಷ ಕೋಟಿ ರೂ ಜಿಎಸ್ಟಿ ಆದಾಯ ಹರಿದುಬಂದಿತ್ತು.
ನವೆಂಬರ್ನಲ್ಲಿ ಪಡೆಯಲಾಗಿರುವ ಒಟ್ಟು 1.82 ಲಕ್ಷ ಕೋಟಿ ರೂ ಜಿಎಸ್ಟಿಯಲ್ಲಿ ಕೇಂದ್ರದ ಜಿಎಸ್ಟಿ 34,141 ಕೋಟಿ ರೂ ಇದೆ. ರಾಜ್ಯಗಳ ಜಿಎಸ್ಟಿ 43,047 ಕೋಟಿ ರೂ ಇದೆ. ಐಜಿಎಸ್ಟಿ 91,828 ಕೋಟಿ ರೂ, ಮತ್ತು ಸೆಸ್ 13,253 ಕೋಟಿ ರೂನಷ್ಟು ಸಿಕ್ಕಿದೆ.
ಇದನ್ನೂ ಓದಿ: ಆದಾಯ ತೆರಿಗೆ ಪಾವತಿ: ಮಹಿಳೆಯರ ಸಂಖ್ಯೆಯಲ್ಲಿ ಶೇ. 25ರಷ್ಟು ಏರಿಕೆ; ಎರಡು ಕೋಟಿಗೂ ಅಧಿಕ ಮಹಿಳೆಯರಿಂದ ಐಟಿಆರ್ ಸಲ್ಲಿಕೆ
ಸರ್ಕಾರ ನಿನ್ನೆ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ ಆಂತರಿಕವಾಗಿ ನಡೆದ ವಹಿವಾಟುಗಳಿಂದ ಬಂದ ಜಿಎಸ್ಟಿಯೇ ಅಧಿಕ. ಸುಮಾರು 1.40 ಲಕ್ಷ ಕೋಟಿ ರೂನಷ್ಟು ತೆರಿಗೆಯು ಆಂತರಿಕ ವಹಿವಾಟುಗಳಿಂದ ಸಿಕ್ಕಿದೆ. ಕಳೆದ ವರ್ಷದ ನವೆಂಬರ್ಗೆ ಹೋಲಿಸಿದರೆ ಈ ತೆರಿಗೆ ಸಂಗ್ರಹದಲ್ಲಿ ಶೇ. 9.4ರಷ್ಟು ಏರಿಕೆ ಆಗಿದೆ. ಇನ್ನು, ಆಮದು ಸುಂಕಗಳ ಮೂಲಕ ಬಂದಿರುವ ಜಿಎಸ್ಟಿ 42,591 ಕೋಟಿ ರೂ. ಇದು ಸುಮಾರು ಆರು ಪ್ರತಿಶತದಷ್ಟು ಏರಿಕೆ ಆಗಿದೆ.
ನಿವ್ವಳ ಜಿಎಸ್ಟಿ ಸಂಗ್ರಹದಲ್ಲಿ ಶೇ. 11ರಷ್ಟು ಹೆಚ್ಚಳ
ಒಟ್ಟು ಜಿಎಸ್ಟಿ ಸಂಗ್ರಹದಲ್ಲಿ 19,259 ಕೋಟಿ ರೂನಷ್ಟು ರೀಫಂಡ್ಗಳನ್ನು ತೆರಿಗೆ ಪಾವತಿದಾರರಿಗೆ ಮರಳಿಸಲಾಗಿದೆ. ಇದನ್ನು ಕಳೆದು ಸಿಗುವ ನಿವ್ವಳ ಜಿಎಸ್ಟಿ 1.63 ಲಕ್ಷ ಕೋಟಿ ರೂ ಆಗಿದೆ. ಕಳೆದ ವರ್ಷದಕ್ಕೆ ಹೋಲಿಸಿದರೆ ಈ ಬಾರಿಯ ನವೆಂಬರ್ನಲ್ಲಿ ಜಿಎಸ್ಟಿ ರೀಫಂಡ್ಗಳು ಶೇ. 8.9ರಷ್ಟು ಕಡಿಮೆ ಆಗಿವೆ. ಹೀಗಾಗಿ, ನಿವ್ವಳ ಜಿಎಸ್ಟಿ ಸಂಗ್ರಹ ಶೇ. 11ರಷ್ಟು ಹೆಚ್ಚಾಗಿದೆ.
ಇದನ್ನೂ ಓದಿ: ಅಭಿವೃದ್ಧಿ ಯೋಜನೆಗಳಿಗೆ ಕೇಂದ್ರದ ಗಮನ; ಶೇ. 25ರಷ್ಟು ಬಂಡವಾಳ ವೆಚ್ಚ ಹೆಚ್ಚುವ ನಿರೀಕ್ಷೆ: ಜೆಫರೀಸ್
ಈ ಹಣಕಾಸು ವರ್ಷದಲ್ಲಿ ಇಲ್ಲಿಯವರೆಗೆ, ಅಂದರೆ, 2024ರ ಏಪ್ರಿಲ್ನಿಂದ ನವೆಂಬರ್ ತಿಂಗಳವರೆಗೆ ಸಂಗ್ರಹವಾದ ಜಿಎಸ್ಟಿ 14.57 ಲಕ್ಷ ಕೋಟಿ ರೂ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ