ನವದೆಹಲಿ, ಜನವರಿ 19: ಭಾರತಕ್ಕೆ ವಿದೇಶೀ ನೇರ ಹೂಡಿಕೆ ಎಷ್ಟು ಮುಖ್ಯವೋ, ಭಾರತೀಯರಿಂದ ವಿದೇಶಗಳಲ್ಲಿ ಆಗುವ ನೇರ ಹೂಡಿಕೆಯೂ ಅಷ್ಟೇ ಮುಖ್ಯ. 2024ರ ವರ್ಷದಲ್ಲಿ ಭಾರತೀಯ ಕಂಪನಿಗಳಿಂದ ಎಫ್ಡಿಐ ಹೊರಹರಿವು (ಒಎಫ್ಡಿಐ) ಶೇ. 17ರಷ್ಟು ಹೆಚ್ಚಳವಾಗಿ 37.68 ಬಿಲಿಯನ್ ಡಾಲರ್ ಮುಟ್ಟಿದೆ. 2023ರಲ್ಲಿ ಈ ರೀತಿಯ ಭಾರತೀಯರ ವಿದೇಶೀ ನೇರ ಹೂಡಿಕೆ ಪ್ರಮಾಣ 32.29 ಬಿಲಿಯನ್ ಡಾಲರ್ ಇತ್ತು.
‘ಭಾರತೀಯ ಕಂಪನಿಗಳು ಜಾಗತಿಕವಾಗಿ ಬೆಳೆಯುತ್ತಿರುವುದು ಸಕಾರಾತ್ಮಕ ಸಂಗತಿ ಎನಿಸಿದೆ. ಈ ಕಂಪನಿಗಳು ದೇಶೀಯವಾಗಿ ಹೂಡಿಕೆ ಮಾಡುತ್ತಿರುವುದು ಮಾತ್ರವಲ್ಲ, ಬೇರೆ ದೇಶಗಳ ಮಾರುಕಟ್ಟೆಗಳನ್ನೂ ಗಮನಿಸುತ್ತಿವೆ. ಒಂದು ರೀತಿಯಲ್ಲಿ ಈ ಕಂಪನಿಗಳು ತಮ್ಮ ಬೆಳವಣಿಗೆ ಮಾದರಿಗಳನ್ನು ವಿಸ್ತರಣೆ ಮಾಡುತ್ತಿವೆ’ ಎಂದು ಬ್ಯಾಂಕ್ ಆಫ್ ಬರೋಡಾದ ಮುಖ್ಯ ಆರ್ಥಿಕ ತಜ್ಞ ಮದನ್ ಸಬ್ನವಿಸ್ ಹೇಳುತ್ತಾರೆ.
ಇದನ್ನೂ ಓದಿ: ಭಾರತದ ಆಟೊಮೊಬೈಲ್ ಮಾರುಕಟ್ಟೆ ಗಾತ್ರ ಅಲ್ಪಸಮಯದಲ್ಲಿ ದ್ವಿಗುಣಗೊಳ್ಳುವ ನಿರೀಕ್ಷೆ
ಭಾರತೀಯ ಕಂಪನಿಗಳ ವಿದೇಶೀ ನೇರ ಹೂಡಿಕೆಯಲ್ಲಿ ಮೂರು ಭಾಗಗಳಿವೆ. ಈಕ್ವಿಟಿ, ಸಾಲ ಮತ್ತು ಗ್ರಾರಂಟೀಗಳಿವೆ. ಈಕ್ವಿಟಿ ಖರೀದಿ ಮೂಲಕ ಮಾಡಲಾದ ಹೂಡಿಕೆ 9.08 ಬಿಲಿಯನ್ ಡಾಲರ್ನಿಂದ 12.69 ಬಿಲಿಯನ್ ಡಾಲರ್ಗೆ ಏರಿಕೆ ಆಗಿದೆ. ಸಾಲ ವಿಭಾಗದಲ್ಲಿ ಭಾರತೀಯ ಕಂಪನಿಗಳ ಹೂಡಿಕೆಯು 4.76 ಬಿಲಿಯನ್ ಡಾಲರ್ ಇದ್ದದ್ದು 8.7 ಬಿಲಿಯನ್ ಡಾಲರ್ಗೆ ಏರಿದೆ.
ವಿದೇಶಗಳಲ್ಲಿ ಭಾರತೀಯ ಕಂಪನಿಗಳ ಹೂಡಿಕೆಗಳು ಹೆಚ್ಚಾಗಿ ಹೋಟೆಲ್, ಕಟ್ಟಡ ನಿರ್ಮಾಣ, ಉತ್ಪಾದನೆ, ಕೃಷಿ, ಗಣಿಗಾರಿಕೆ ಮತ್ತು ಸರ್ವಿಸ್ ಸೆಕ್ಟರ್ಗಳಲ್ಲಿ ಇದೆ. ಸಿಂಗಾಪುರ, ಅಮೆರಿಕ, ಬ್ರಿಟನ್, ಯುಎಇ, ಸೌದಿ, ಓಮನ್ ಮತ್ತು ಮಲೇಷ್ಯಾ ಮೊದಲಾದ ದೇಶಗಳಲ್ಲಿ ಭಾರತೀಯ ಕಂಪನಿಗಳ ಹೂಡಿಕೆಗಳಿವೆ.
ಇದನ್ನೂ ಓದಿ: ಆರ್ಮೇನಿಯಾಗೆ ಮೇಡ್ ಇನ್ ಇಂಡಿಯಾ ಗನ್ಗಳ ರಫ್ತು; MRSAM ಕ್ಷಿಪಣಿಗಳಿಗೆ ಆರ್ಡರ್ ಕೊಟ್ಟ ಭಾರತೀಯ ನೌಕಾಪಡೆ
ಕುತೂಹಲದ ಸಂಗತಿ ಎಂದರೆ, ಭಾರತೀಯ ಕಂಪನಿಗಳು ಯಾವುದೋ ವಿದೇಶೀ ಕಂಪನಿಗಳಲ್ಲಿ ಹೂಡಿಕೆ ಮಾಡುವುದಕ್ಕಿಂತ ಹೆಚ್ಚಾಗಿ ತಮ್ಮದೇ ವಿದೇಶೀ ಅಂಗ ಸಂಸ್ಥೆಗಳಲ್ಲಿ ಹಣ ಹಾಕುತ್ತಿವೆ. ಅಂದರೆ, ಭಾರತೀಯ ಕಂಪನಿಗಳು ವಿದೇಶಗಳಲ್ಲಿ ಬಿಸಿನೆಸ್ ಎಕ್ಸ್ಪ್ಯಾನ್ಷನ್ ಮಾಡುತ್ತಿರುವುದು ಸ್ಪಷ್ಟವಾಗಿದೆ. ಭಾರತೀಯ ಕಂಪನಿಗಳು ವಿದೇಶೀ ಕಂಪನಿಯೊಂದಿಗೆ ಜಂಟಿಯಾಗಿ ಬಿಸಿನೆಸ್ ನಡೆಸುತ್ತಿರುವುದೂ ಹೆಚ್ಚಿದೆ ಎಂಬುದನ್ನು ಬಿಒಬಿ ಮುಖ್ಯ ಆರ್ಥಿಕ ತಜ್ಞರು ಗುರುತಿಸಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 6:07 pm, Sun, 19 January 25