2028, ಅಕ್ಟೋಬರ್ 23ಕ್ಕೆ ಬರಲಿದೆ ಅಪ್ಪಟ ಭಾರತೀಯ ಸ್ಮಾರ್ಟ್ಫೋನ್; ಸಚಿವ ಎ ವೈಷ್ಣವ್ ಡೆಡ್ಲೈನ್
ಭಾರತದಲ್ಲೇ ವಿನ್ಯಾಸಗೊಳಿಸಿ, ತಯಾರಿಸಿ ಬ್ರ್ಯಾಂಡ್ ಮಾಡಲಾದ ಸ್ವದೇಶಿ ಸ್ಮಾರ್ಟ್ಫೋನ್ಗಳು 2028ರ ಅಕ್ಟೋಬರ್ ವೇಳೆಗೆ ಮಾರುಕಟ್ಟೆಗೆ ಪ್ರವೇಶಿಸಲಿವೆ ಎಂದು ಕೇಂದ್ರ ಐಟಿ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ. ಇದು ಆಪಲ್ ಮತ್ತು ಸ್ಯಾಮ್ಸಂಗ್ಗೆ ಭಾರತದ ಪ್ರತ್ಯುತ್ತರವಾಗಲಿದೆ ಎಂದಿದ್ದಾರೆ. ಮೂರು ವರ್ಷಗಳ ಹಿಂದೆಯೇ ಭಾರತದಲ್ಲಿ ಫೋನ್ ಡಿಸೈನ್ ಕಾರ್ಯ ಶುರುವಾಗಿದೆ. ಅಮೆರಿಕದ ಟೆಲಿಕಾಂ ಕಂಪನಿಯೊಂದು ಅದನ್ನು ಬಳಸಿ ಅಮೆರಿಕದಲ್ಲಿ ಫೋನ್ ತಯಾರಿಸಿರುವುದು ತಿಳಿದುಬಂದಿದೆ.

ನವದೆಹಲಿ, ಅಕ್ಟೋಬರ್ 26: ಭಾರತದಲ್ಲಿಯೇ ವಿನ್ಯಾಸಗೊಂಡು, ತಯಾರಿಸಲ್ಪಟ್ಟು ಮತ್ತು ಸ್ಥಳೀಯವಾಗಿ ಬ್ರ್ಯಾಂಡ್ ಮಾಡಲಾದ ಸ್ವದೇಶಿ ಸ್ಮಾರ್ಟ್ಫೋನ್ಗಳು 2028ರ ಅಕ್ಟೋಬರ್ 23ರೊಳಗೆ ಮಾರುಕಟ್ಟೆಯನ್ನು ಪ್ರವೇಶಿಸಲಿವೆ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಘೋಷಿಸಿದ್ದಾರೆ.
ದೆಹಲಿಯಲ್ಲಿ ನಡೆದ ಎನ್ಡಿಟಿವಿ ವರ್ಲ್ಡ್ ಸಮ್ಮಿಟ್ನಲ್ಲಿ ಮಾತನಾಡುತ್ತ ಅವರು ಈ ಮಹತ್ವದ ಗಡುವನ್ನು ಸ್ಪಷ್ಟಪಡಿಸಿದ್ದಾರೆ. 2028ರ ಅಕ್ಟೋಬರ್ 23ರ ದಿನವನ್ನು ನೆನಪಿಟ್ಟುಕೊಳ್ಳುವಂತೆ ಅವರು ಒತ್ತಿ ಹೇಳಿದ್ದಾರೆ. ಈ ಮೂಲಕ ಅಪ್ಪಟ ಭಾರತೀಯ ಸ್ಮಾರ್ಟ್ಫೋನ್ ಬ್ರ್ಯಾಂಡ್ ಇನ್ನೆರಡು ವರ್ಷದಲ್ಲಿ ಮಾರುಕಟ್ಟೆಗೆ ಬರಲಿರುವುದು ಬಹುತೇಕ ಖಚಿತಗೊಂಡಂತಾಗಿದೆ.
ಭಾರತದ ‘ಆಪಲ್ ಮತ್ತು ಸ್ಯಾಮ್ಸಂಗ್’ ಕ್ಷಣ
ಜಾಗತಿಕ ಮಟ್ಟದಲ್ಲಿ ಆಪಲ್ (Apple) ಮತ್ತು ಸ್ಯಾಮ್ಸಂಗ್ (Samsung) ಕಂಪನಿಗಳಂತೆ ಭಾರತದಲ್ಲೂ ಸ್ವಂತ ವಿನ್ಯಾಸ, ಬ್ರ್ಯಾಂಡ್ ಮತ್ತು ಐಪಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಇದು ದೇಶದ ಹೆಮ್ಮೆಯ ಮೈಲಿಗಲ್ಲಾಗಲಿದೆ ಎಂದು ಸಚಿವರು ಬಣ್ಣಿಸಿದ್ದಾರೆ. ಮೊಬೈಲ್ ಫೋನ್ ವಿನ್ಯಾಸಗೊಳಿಸುವುದು (ಫ್ರಿಂಟ್ ಸರ್ಕ್ಯೂಟ್ ಬೋರ್ಡ್, ಆಂಟೆನಾ, ಕ್ಯಾಮೆರಾ ಮಾಡ್ಯೂಲ್ ಇತ್ಯಾದಿ) ಅತ್ಯಂತ ಸಂಕೀರ್ಣವಾದರೂ, ಭಾರತೀಯ ಇಂಜಿನಿಯರ್ಗಳು ಈಗಾಗಲೇ ಯಶಸ್ಸು ಸಾಧಿಸಿದ್ದಾರೆ ಎಂದಿದ್ದಾರೆ.
ಇದನ್ನೂ ಓದಿ: ‘ಸೈಬರ್ ಭಯೋತ್ಪಾದನೆಯಿಂದ ಬ್ಯಾಂಕಿಂಗ್ ವ್ಯವಸ್ಥೆಯನ್ನು ರಕ್ಷಿಸುವುದು ಇಂದಿನ ತುರ್ತು ಅಗತ್ಯ’; ಪ್ರಧಾನಿ ಮೋದಿ ಕಳವಳ
ಅಮೆರಿಕದ ಮಾರುಕಟ್ಟೆಗೆ ಭಾರತೀಯ ವಿನ್ಯಾಸದ 5ಜಿ ಫೋನ್ ಪೂರೈಕೆ
ಮೂರು ವರ್ಷಗಳ ಹಿಂದೆ ಭಾರತೀಯ ವಿನ್ಯಾಸಕರಿಗೆ ನೀಡಲಾದ ಸವಾಲಿನಂತೆ, ಭಾರತೀಯ ಕಂಪನಿಯೊಂದು ಮದರ್ಬೋರ್ಡ್ ವಿನ್ಯಾಸಗೊಳಿಸಿ ಯಶಸ್ವಿಯಾಗಿದೆ. ಈ ವಿನ್ಯಾಸವನ್ನು ಒಪ್ಪಿಕೊಂಡ ಪ್ರಮುಖ ಅಮೆರಿಕದ ಟೆಲಿಕಾಂ ಸೇವಾ ಸಂಸ್ಥೆಯೊಂದು, 5ಜಿ ಪ್ಲಸ್ ಫೋನ್ಗಳನ್ನು ಭಾರತದಲ್ಲಿ ತಯಾರಿಸಿ ಅಮೆರಿಕದ ಗ್ರಾಹಕರಿಗೆ ತಲುಪಿಸಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಸ್ಥಳೀಯವಾಗಿ ಐಪಿ (IP) ಮತ್ತು ಬ್ರ್ಯಾಂಡ್ ಉಳಿಸಿಕೊಳ್ಳುವ ಗುರಿ
ಈಗಾಗಲೇ ಅಭಿವೃದ್ಧಿಪಡಿಸಲಾಗಿರುವ ಸಾಮರ್ಥ್ಯವನ್ನು ಮುಂದಿನ ಹಂತಕ್ಕೆ ಕೊಂಡೊಯ್ದು, ಭಾರತೀಯ ಬ್ರ್ಯಾಂಡ್ ಹೆಸರಿನಲ್ಲೇ ಅತಿ ಹೆಚ್ಚು ಮಾರಾಟವಾಗುವ ಸ್ಮಾರ್ಟ್ಫೋನ್ಗಳನ್ನು ಮಾರುಕಟ್ಟೆಗೆ ತರಲು ಸರ್ಕಾರ ಮತ್ತು ಉದ್ಯಮ ರಂಗ ಕಾರ್ಯಪ್ರವೃತ್ತವಾಗಿವೆ.
ಮೈಕ್ರೋಮ್ಯಾಕ್ಸ್, ಲಾವಾ ಮೊದಲಾದ ಭಾರತೀಯ ಮೊಬೈಲ್ ಬ್ರ್ಯಾಂಡ್ಗಳೇನು?
ಭಾರತದ ಮೊಬೈಲ್ ಮಾರುಕಟ್ಟೆಗೆ ಈ ಹಿಂದೆ ಕೆಲ ಭಾರತೀಯ ಬ್ರ್ಯಾಂಡ್ಗಳಿದ್ದವು. ಮೈಕ್ರೋಮ್ಯಾಕ್ಸ್, ಲಾವಾ, ಇಂಟೆಕ್ಸ್, ಕಾರ್ಬನ್, ಕ್ಸೋಲೋ ಇತ್ಯಾದಿ ಬ್ರ್ಯಾಂಡ್ನ ಮೊಬೈಲ್ಗಳು ಸೀಮಿತ ಮಟ್ಟದಲ್ಲಿ ಯಶಸ್ವಿಯಾಗಿವೆ. ಆದರೆ, ಚೀನೀ ಸೆಟ್ಗಳ ಅಬ್ಬರಕ್ಕೆ ಈ ಎಲ್ಲಾ ಕಂಪನಿಗಳು ಬಹುತೇಕ ಕೊಚ್ಚಿಹೋಗಿವೆ.
ಇದನ್ನೂ ಓದಿ: ಜಾಗತಿಕ ಆರ್ಥಿಕ ಬಿಕ್ಕಟ್ಟುಗಳ ನಡುವೆಯೂ ಭಾರತದಿಂದ ಉತ್ತಮ ಆರ್ಥಿಕ ಬೆಳವಣಿಗೆ; ಬಲತುಂಬಿರುವ ಮೂಲಾಂಶಗಳು: ಆರ್ಬಿಐ ಬುಲೆಟಿನ್
ಆದರೆ, ಈ ಹೆಚ್ಚಿನ ಭಾರತೀಯ ಕಂಪನಿಗಳು ಹೆಸರಿಗೆ ಭಾರತೀಯ ಅಷ್ಟೇ. ಅದರ ವಿನ್ಯಾಸ, ಹಾರ್ಡ್ವೇರ್ ಇವೆಲ್ಲವೂ ಕೂಡ ಹೊರದೇಶಗಳಿಂದ ಪಡೆಯಲಾಗುತ್ತಿತ್ತು. ಚೀನಾ ಮತ್ತು ತೈವಾನ್ನಲ್ಲಿರುವ ಒಇಎಂ ಕಂಪನಿಗಳಿಂದ ಡಿಸೈನ್ ಮತ್ತು ಹಾರ್ಡ್ವೇರ್ ಭಾಗಗಳನ್ನು ತರಿಸಿ ಭಾರತದಲ್ಲಿ ಅಸೆಂಬಲ್ ಮಾಡಲಾಗುತ್ತಿತ್ತು. ಈಗ ಆ್ಯಪಲ್, ಸ್ಯಾಮ್ಸುಂಗ್ ಮೊದಲಾದ ಫೋನ್ಗಳು ಇದೇ ರೀತಿ ಭಾರತದಲ್ಲಿ ಅಸೆಂಬಲ್ ಆಗುತ್ತಿವೆ. ಲಾವಾ ಸಂಸ್ಥೆ ಮಾತ್ರ ಹತ್ತಿರಹತ್ತಿರ ಪೂರ್ಣವಾಗಿ ಮೇಡ್ ಇನ್ ಇಂಡಿಯಾ ಫೋನ್ ಎನಿಸಿದೆ. ಅದೂ ಕೂಡ ಬೇರೆ ದೇಶದ ಸಂಸ್ಥೆಗಳ ಜೊತೆ ಸಹಯೋಗದಲ್ಲಿ ಡಿಸೈನ್ ಇತ್ಯಾದಿ ಮಾಡುತ್ತದೆ.
ಆದರೆ, 2028ರ ಅಕ್ಟೋಬರ್ 23ಕ್ಕೆ ಅಶ್ವಿನಿ ವೈಷ್ಣವ್ ಕೊಟ್ಟಿರುವ ಡೆಡ್ಲೈನ್ನಲ್ಲಿ ಹೊರಬರುವ ಸ್ಮಾರ್ಟ್ಫೋನ್ ಎಲ್ಲಾ ರೀತಿಯಲ್ಲಿ ಭಾರತೀಯ ಬ್ರ್ಯಾಂಡ್ ಆಗಿರಲಿದೆ. ಭಾರತದಲ್ಲೇ ಡಿಸೈನ್ ಆಗಿರುತ್ತದೆ. ಇಲ್ಲಿಯೇ ಹಾರ್ಡ್ವೇರ್ ಭಾಗಗಳನ್ನು ತಯಾರಿಸಲಾಗುತ್ತದೆ. ಇಲ್ಲಿಯೇ ಅಸೆಂಬಲ್ ಮಾಡಲಾಗುತ್ತದೆ. ಅದಕ್ಕೆ ಬೇಕಾದ ಇಕೋಸಿಸ್ಟಂ ಭಾರತದಲ್ಲಿ ಗಟ್ಟಿಗೊಳ್ಳುತ್ತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




