Indian Economy: ಕಳೆದ 10 ವರ್ಷಗಳಲ್ಲಿ ಭಾರತದಲ್ಲಿ ಆದ ಸುಧಾರಣೆಗಳು; ಮುಂದಿನ ಆರ್ಥಿಕ ವೇಗಕ್ಕೆ ಕಾರಣವಾಗುವ ಸಂಗತಿಗಳು: ಕ್ಯಾಪಿಟಲ್ ಗ್ರೂಪ್ ವಿಶ್ಲೇಷಣೆ

|

Updated on: Jul 16, 2023 | 11:56 AM

Capital Group Report: ನಕಾರವಾದಿಗಳ ಲೆಕ್ಕಾಚಾರ ತಲೆಕೆಳಗು ಮಾಡುವ ರೀತಿಯಲ್ಲಿ ಭಾರತದ ಆರ್ಥಿಕತೆ ಬೆಳೆಯುತ್ತಿದೆ. 2075ರಷ್ಟರಲ್ಲಿ ಅಮೆರಿಕದ ಆರ್ಥಿಕತೆಯನ್ನು ಭಾರತ ಮೀರಿ ಬೆಳೆಯುತ್ತದೆ ಎಂದು ಅಧ್ಯಯನ ವರದಿಗಳು ಹೇಳಿದ್ದುಂಟು. ಈ ಹಿನ್ನೆಲೆಯಲ್ಲಿ ಕ್ಯಾಪಿಟಲ್ ಗ್ರೂಪ್ ಸಂಸ್ಥೆಯ ತಜ್ಞರು ಬರೆದ ವಿಶ್ಲೇಷಣಾ ವರದಿ ಇಲ್ಲಿದೆ...

Indian Economy: ಕಳೆದ 10 ವರ್ಷಗಳಲ್ಲಿ ಭಾರತದಲ್ಲಿ ಆದ ಸುಧಾರಣೆಗಳು; ಮುಂದಿನ ಆರ್ಥಿಕ ವೇಗಕ್ಕೆ ಕಾರಣವಾಗುವ ಸಂಗತಿಗಳು: ಕ್ಯಾಪಿಟಲ್ ಗ್ರೂಪ್ ವಿಶ್ಲೇಷಣೆ
ಭಾರತದ ಆರ್ಥಿಕತೆ
Follow us on

ಭಾರತ ಇದೀಗ ವಿಶ್ವದ ಗಮನ ಹೆಚ್ಚೆಚ್ಚು ಸೆಳೆಯುತ್ತಿರುವುದನ್ನು ನೀವು ಗಮನಿಸಿರಬಹುದು. ನೋಟ್ ಬ್ಯಾನ್ ಬಳಿಕ ಭಾರತದ ಆರ್ಥಿಕತೆ ಅಧೋಗತಿಗೆ ಇಳಿಯುತ್ತದೆ ಎಂದು ಬಹಳ ಮಂದಿ ಭಾವಿಸಿದ್ದರು. ಅದರಲ್ಲೂ ಕೋವಿಡ್ ಸಾಂಕ್ರಾಮಿಕ ರೋಗ (Covid Pandemic) ಬಂದ ವರ್ಷದಲ್ಲಿ ಜಿಡಿಪಿ ಮೈನಸ್ 6ಕ್ಕಿಂತಲೂ ಕಡಿಮೆಗೆ ಕುಸಿದುಹೋದ ಬಳಿಕ ಭಾರತ ತೀವ್ರವಾದ ಆರ್ಥಿಕ ಹಿಂಜರಿತಕ್ಕೆ (Economic Recession) ಒಳಗಾಗಬಹುದು ಎಂದು ವ್ಯಾಕುಲಗೊಂಡಿದ್ದರು. ಶ್ರೀಲಂಕಾ, ಪಾಕಿಸ್ತಾನ ಆರ್ಥಿಕ ಬಿಕ್ಕಟ್ಟಿಗೆ ಒಳಗಾದಂತೆ ಭಾರತಕ್ಕೂ ಕಾದಿದೆ ಗಂಡಾಂತರ ಎಂದು ಹೇಳುವವರು ಇದ್ದಾರೆ. ಭಾರತೀಯ ಉಪಖಂಡದಲ್ಲಿ ಭಾರತವನ್ನು ಬಾಂಗ್ಲಾದೇಶ ಹಿಂದಿಕ್ಕುತ್ತದೆ ಎಂದೂ ಹೇಳಿದವರಿದ್ದಾರೆ. ಆದರೆ, ನಕಾರವಾದಿಗಳ ಲೆಕ್ಕಾಚಾರ ತಲೆಕೆಳಗು ಮಾಡುವ ರೀತಿಯಲ್ಲಿ ಭಾರತ ಚೇತರಿಸಿಕೊಂಡಿದೆ. ಭಾರತದ ಜಿಡಿಪಿ 3 ಟ್ರಿಲಿಯನ್ ಡಾಲರ್ ದಾಟಿದೆ; ಭಾರತ ವಿಶ್ವದ ಅತ್ಯಂತ ವೇಗದ ಆರ್ಥಿಕತೆಯ ದೇಶಗಳಲ್ಲಿ ಒಂದಾಗಿದೆ; ಷೇರುಮಾರುಕಟ್ಟೆ ಉಚ್ಛ್ರಾಯ ಸ್ಥಿತಿ ತಲುಪಿದೆ; ಹೊಸ ಹೊಸ ಉದ್ಯಮಗಳ ಸ್ಥಾಪನೆಯಾಗುತ್ತಿದೆ; ಇನ್​ಫ್ರಾಸ್ಟ್ರಕ್ಚರ್ ಅಥವಾ ಸೌಕರ್ಯಗಳು ಉತ್ತಮಗೊಂಡಿವೆ; ವಿಮಾನ, ರೈಲು, ರಸ್ತೆ ಸಂಪರ್ಕ ಉತ್ತಮಗೊಳ್ಳುತ್ತಾ ಹೋಗಿವೆ; ಡಿಜಿಟಲ್ ಕ್ರಾಂತಿ ಹೊಸ ಸಾಧ್ಯತೆಗಳನ್ನು ತೆರೆಸಿದೆ.

ಭಾರತದ ಇಷ್ಟೆಲ್ಲಾ ಸಾಧನೆಗಳು ಹೇಗೆ ಸಾಧ್ಯವಾಯಿತು? ಮುಂದಿನ ವರ್ಷಗಳಲ್ಲೂ ಭಾರತ ಇದೇ ಬೆಳವಣಿಗೆ ಉಳಿಸಿಕೊಂಡು ಹೋಗಲು ಸಾಧ್ಯವಾಗುತ್ತಾ? ವಿಶ್ವದ ಪ್ರಮುಖ ಫಂಡ್ ಮ್ಯಾನೇಜಿಂಗ್ ಸಂಸ್ಥೆ ಎನಿಸಿದ ಕ್ಯಾಪಿಟಲ್ ಗ್ರೂಪ್​ನ (Capital Group) ವರದಿಯಲ್ಲಿ ಭಾರತದ ಬಗ್ಗೆ ಕುತೂಹಲ ಮೂಡಿಸುವ ವರದಿಯೊಂದನ್ನು ಪ್ರಕಟಿಸಿದೆ. ಬ್ರಾಡ್ ಫ್ರೀಯರ್, ಶ್ಲೋಕ್ ಮೆಲ್ವಾನಿ ಮತ್ತು ರಾಹುಲ್ ಸದಿವಾಲ ಈ ಮೂವರು ಸೇರಿ ಭಾರತದ ಆರ್ಥಿಕತೆಯ ಬಗ್ಗೆ ಬರೆದ ವಿಶ್ಲೇಷಣೆಗಳನ್ನು ಆಧರಿಸಿ ಕೆಲ ಪ್ರಮುಖ ಅಂಶಗಳನ್ನು ಇಲ್ಲಿ ಪ್ರಸ್ತುತಪಡಿಸಿದ್ದೇವೆ.

2014ರಿಂದ ಭಾರತದಲ್ಲಿ ಆದ ಸುಧಾರಣೆಗಳು

ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ 2014ರಲ್ಲಿ ಅಧಿಕಾರಕ್ಕೆ ಬಂದ ಬಳಿಕ ಬಹಳಷ್ಟು ಸುಧಾರಣಾ ಕ್ರಮಗಳನ್ನು ಜಾರಿಗೆ ತರಲಾಗಿದೆ. ಅಂಥ ಪ್ರಮುಖ ಸುಧಾರಣೆಗಳಿವು:

  • ಆಧಾರ್ ಬಳಕೆ
  • ಜಿಎಸ್​ಟಿ
  • ಯುಪಿಐ
  • ಮೇಕ್ ಇನ್ ಇಂಡಿಯಾ
  • ಡಿಜಿಟಲ್ ಇಂಡಿಯಾ
  • ರಿಯಲ್ ಎಸ್ಟೇಟ್ ಕಾಯ್ದೆ
  • ಇನ್ಸಾಲ್ವೆನ್ಸಿ ಮತ್ತು ಬ್ಯಾಂಕ್ರಪ್ಸಿ ಕಾಯ್ದೆ
  • ಪಿಎಲ್​ಐ ಸ್ಕೀಮ್
  • ಕಾರ್ಮಿಕ ಕಾನೂನು ತಿದ್ದುಪಡಿ

ಇದನ್ನೂ ಓದಿFoxconn: ದೊಡ್ಡಬಳ್ಳಾಪುರದಲ್ಲಿ ಐಫೋನ್ ಫ್ಯಾಕ್ಟರಿಗೆ 300 ಎಕರೆ ಜಾಗ: ಕಾನೂನು ತೊಡಕು ನಿವಾರಣೆ- ಸಚಿವ ಎಂಬಿ ಪಾಟೀಲ್ ಸ್ಪಷ್ಟನೆ

ಇನ್​ಫ್ರಾಸ್ಟ್ರಕ್ಚರ್ ಬೆಳವಣಿಗೆ

ಸಾರಿಗೆ, ವಿದ್ಯುತ್, ನೀರು, ವಸತಿ ಇತ್ಯಾದಿ ಮೂಲಸೌಕರ್ಯಗಳು ಸಮರ್ಪಕವಾಗಿದ್ದರೆ ಆರ್ಥಿಕತೆಯ ಗಾಲಿಗೆ ಎಣ್ಣೆಹಾಕಿದಂತೆ. ಅಂದರೆ ಆರ್ಥಿಕ ಓಟ ಸರಾಗವಾಗಿ ಸಾಗುತ್ತದೆ. ಕಳೆದ ಕೆಲ ವರ್ಷಗಳಿಂದ ಭಾರತದಲ್ಲಿ ರಸ್ತೆ, ರೈಲು, ವಿಮಾನನಿಲ್ದಾಣ, ಬಂದರುಗಳಿಗೆ ಸಾಕಷ್ಟು ಬಂಡವಾಳ ಹಾಕಿ ಅಭಿವೃದ್ಧಿಪಡಿಸಲಾಗುತ್ತಿದೆ. ಇವತ್ತು ಬೆಂಗಳೂರಿನಿಂದ ಚೆನ್ನೈಗೆ ರಸ್ತೆ ಮೂಲಕವೇ ನಾಲ್ಕೈದು ಗಂಟೆಯಲ್ಲಿ ಹೋಗಬಹುದು. ಬೆಂಗಳೂರು ಮೈಸೂರು ಹೊಸ ರಸ್ತೆಯಲ್ಲಿ ಒಂದೂವರೆ, ಎರಡು ತಾಸುಗಳಲ್ಲಿ ತಲುಪಬಹುದು. ಇದರಿಂದ ಸರಕು ಸಾಗಣೆ, ಜನ ಸಂಚಾರ ಎಲ್ಲವೂ ಸುಗಮಗೊಳ್ಳುತ್ತದೆ. ಅದರಿಂದ ಆರ್ಥಿಕತೆಗೆ ಸಹಜ ಪುಷ್ಟಿ ಸಿಗುತ್ತದೆ.

ಗರಿಗೆದರಿದ ಮ್ಯಾನುಫ್ಯಾಕ್ಚರಿಂಗ್ ವಲಯ

10 ವರ್ಷಗಳ ಹಿಂದಿನವರೆಗೂ ಭಾರತದ ಆರ್ಥಿಕತೆಯ ಕೈಹಿಡಿದದ್ದು ಸೇವಾ ವಲಯ. ಭಾರತದ ಬಹುತೇಕ ರಫ್ತು ಆದಾಯ ಸರ್ವಿಸ್ ಸೆಕ್ಟರ್​ನಿಂದಲೇ ಬರುತ್ತಿತ್ತು. ಈಗ ಚೀನಾದ್ದೇ ಪ್ರಾಬಲ್ಯ ಇರುವ ತಯಾರಿಕಾ ವಲಯ ಅಥವಾ ಮ್ಯಾನುಫ್ಯಾಕ್ಚರಿಂಗ್ ಸೆಕ್ಟರ್​​ನತ್ತ

ಭಾರತ ಗಮನ ಹರಿಸುತ್ತಿದೆ. ಉತ್ಪಾದನೆ ಆಧಾರಿತ ಉತ್ತೇಜಕ ಅಥವಾ ಪಿಎಲ್​ಐ ಸ್ಕೀಮ್ ಮೂಲಕ ತಯಾರಿಕಾ ವಲಯಕ್ಕೆ ಪುಷ್ಟಿ ಕೊಡಲಾಗುತ್ತಿದೆ. ಚೀನಾದಿಂದ ಹೊರಗೆ ಉತ್ಪಾದನೆ ವಿಸ್ತರಿಸಬೇಕೆನ್ನುವ ಕಂಪನಿಗಳಿಗೆ ಭಾರತ ಮಣೆಹಾಕುತ್ತಿದೆ. ಆ್ಯಪಲ್, ಶಿಯೋಮಿ ಇತ್ಯಾದಿ ಕಂಪನಿಗಳು ಭಾರತದಲ್ಲಿ ಉತ್ಪನ್ನ ತಯಾರಿಸುತ್ತಿವೆ. ಅಮೆರಿಕ ಜಪಾನ್, ತೈವಾನ್​ನ ಹಲವು ಕಂಪನಿಗಳು ಭಾರತದಲ್ಲಿ ಉತ್ಪಾದನೆ ನಡೆಸಲು ಆರಂಭಿಸಿವೆ.

ಷೇರುಮಾರುಕಟ್ಟೆಗೆ ಇನ್ನೂ ದೊಡ್ಡ ಸಾಧ್ಯತೆ

ಭಾರತದ ಷೇರುಮಾರುಕಟ್ಟೆ ಸಾರ್ವಕಾಲಿಕ ಗರಿಷ್ಠ ಎತ್ತರ ತಲುಪಿದೆ. ಇದೇ ಗರಿಷ್ಠ ಎತ್ತರವಾಗಿ ಉಳಿಯುವುದಿಲ್ಲ. ಭಾರತದ ಆರ್ಥಿಕತೆ ಬೆಳೆದಂತೆ ಷೇರುಮಾರುಕಟ್ಟೆ ವಿಸ್ತಾರ ಮತ್ತು ಎತ್ತರ ಇನ್ನೂ ಹೆಚ್ಚುತ್ತಾ ಹೋಗುತ್ತದೆ. ಇದರಿಂದ ಭಾರತದ ಕಂಪನಿಗಳಿಗೆ ಬಂಡವಾಳ ಸಂಗ್ರಹ ಹೆಚ್ಚುತ್ತದೆ. ಆರ್ಥಿಕತೆ ಬೆಳವಣಿಗೆಗೆ ಅನುಕೂಲವಾಗುತ್ತದೆ. ಆದರೆ, ಕ್ಯಾಪಿಟಲ್ ಗ್ರೂಪ್​ನ ವಿಶ್ಲೇಷಣೆ ಪ್ರಕಾರ ಭಾರತದ ಆರ್ಥಿಕ ವಿಸ್ತಾರಕ್ಕೆ ಹೋಲಿಸಿದರೆ ಈಕ್ವಿಟಿ ಮಾರುಕಟ್ಟೆ ಹೆಚ್ಚಿನ ಮಟ್ಟದಲ್ಲಿ ಇಲ್ಲ. ಅಂದರೆ ಷೇರುಮಾರುಕಟ್ಟೆಯಲ್ಲಿ ಜನಸಾಮಾನ್ಯರು ಮತ್ತು ಸಂಸ್ಥೆಗಳು ಮಾಡಿರುವ ಹೂಡಿಕೆ ಅಮೆರಿಕ, ಚೀನಾ ಮತ್ತಿತರ ದೇಶಗಳಿಗೆ ಹೋಲಿಸಿದರೆ ಕಡಿಮೆಯೇ ಇದೆ. ಹೀಗಾಗಿ, ಭಾರತದ ಷೇರುಮಾರುಕಟ್ಟೆಗೆ ಮುಂದಿನ ವರ್ಷಗಳಲ್ಲಿ ಅಗಾಧವಾಗಿ ಬೆಳೆಯುವ ಅವಕಾಶಗಳಿವೆ.

ರಿಯಲ್ ಎಸ್ಟೇಟ್ ಭರ್ಜರಿ ಬೆಳೆಯುವ ನಿರೀಕ್ಷೆ

ಭಾರತದ ಜನಸಂಖ್ಯೆ ಚೀನಾವನ್ನೂ ಮೀರಿಸಿದೆ. ಜನಸಂಖ್ಯೆ ಹೆಚ್ಚಳ ಭಾರತಕ್ಕೆ ಕಠಿಣ ಸಮಸ್ಯೆಗಳನ್ನು ತರುವುದರ ಜೊತೆಗೆ ಪ್ರಯೋಜನಗಳನ್ನೂ ಹೊಂದಿದೆ. ಎಲ್ಲಾ ಜನರಿಗೂ ವಸತಿ ಬೇಕಾಗುತ್ತದೆ. ಇದರಿಂದ ರಿಯಲ್ ಎಸ್ಟೇಟ್ ಸೆಕ್ಟರ್ ಅಗಾಧವಾಗಿ ಬೆಳೆಯುತ್ತದೆ. ಈ ವಲಯವು ಭಾರತದ ಜಿಡಿಪಿಯ ಶೇ. 7ರಷ್ಟಿದೆ. 2031ರಷ್ಟರಲ್ಲಿ ಇದು ಜಿಡಿಪಿಯ ಶೇ. 15ರಷ್ಟು ಮಟ್ಟಕ್ಕೆ ಬೆಳೆಯುವ ನಿರೀಕ್ಷೆ ಇದೆ.

ಕಟ್ಟಡ ನಿರ್ಮಾಣ ಸಾಮಗ್ರಿಗಳು, ಕೇಬಲ್, ಎಸಿ, ರೆಫ್ರಿಜರೇಟರ್ ಇತ್ಯಾದಿಗಳಿಗೆ ಬೇಡಿಕೆ ಹೆಚ್ಚುತ್ತದೆ. ರಿಯಲ್ ಎಸ್ಟೇಟ್ ವಲಯದಲ್ಲಿ ಆಗಿರುವ ಸುಧಾರಣೆಗಳಿಂದಾಗಿ ಈ ಕ್ಷೇತ್ರವು ಹೆಚ್ಚು ಸಂಘಟಿತವಾಗಲಿದೆ. ಸರ್ಕಾರಕ್ಕೂ ಆದಾಯ ಹೆಚ್ಚಲಿದೆ.

ಇದನ್ನೂ ಓದಿFinancial Life Tips: ಖರ್ಚು, ಉಳಿತಾಯ, ಸಾಲಕ್ಕೆ ಹಣಕಾಸು ಸೂತ್ರ ತಿಳಿದಿರಿ; ಜೀವನಪೂರ್ತಿ ನಿಶ್ಚಿಂತೆಯಿಂದಿರಿ

ಡಿಜಿಟಲ್ ಪರಿವರ್ತನೆ ಹೇಗಿದೆ ನೋಡಿ

  • ಆಧಾರ್ ಹೊಂದಿರುವವರ ಸಂಖ್ಯೆ: 136 ಕೋಟಿ ಮಂದಿ
  • ಟೆಲಿಕಾಂ ಬಳಕೆದಾರರು: 125 ಕೋಟಿ
  • ಇಂಟರ್ನೆಟ್ ಬಳಸುವವರು: 69.2 ಕೋಟಿ ಮಂದಿ
  • ಇಕಾಮರ್ಸ್ ಬಳಸುವವರು: 64.4 ಕೋಟಿ
  • ಸೋಷಿಯಲ್ ಮೀಡಿಯಾ ಬಳಕೆದಾರರು: 49.7 ಕೋಟಿ ಮಂದಿ
  • ಸ್ಮಾರ್ಟ್​ಫೋನ್ ಬಳಕೆದಾರರು: 49.3 ಕೋಟಿ ಮಂದಿ
  • ಯುಪಿಐ ಬಳಕೆದಾರರು: 30 ಕೋಟಿ
  • ಫೂಡ್ ಡೆಲಿವರಿ ಸೇವೆ ಪಡೆಯುವವರು: 26.8 ಕೋಟಿ ಮಂದಿ

ಇವು 2023ರ ಫೆಬ್ರುವರಿಯಲ್ಲಿ ಐಸಿಆರ್ (Indian Center for Research) ಪ್ರಸ್ತುತಪಡಿಸಿದ ವರದಿಯೊಂದರಿಂದ ಆಧರಿಸಿದ ಅಂಕಿ ಅಂಶಗಳು.

ರಾಸಾಯನಿಕ ಉದ್ಯಮ ಡಾರ್ಕ್ ಹಾರ್ಸ್

ಮ್ಯಾನುಫ್ಯಾಕ್ಚರಿಂಗ್ ವಲಯಕ್ಕೆ ಬಹಳ ಅಗತ್ಯವಾಗಿರುವ ಸಂಗತಿಗಳಲ್ಲಿ ರಾಸಾಯನಿಕ ಉದ್ಯಮ ಒಂದು. ಸೆಮಿಕಂಡಕ್ಟರ್, ಇವಿ ಬ್ಯಾಟರಿ, ಸೋಲಾರ ಪ್ಯಾನೆಲ್ ಇತ್ಯಾದಿ ತಯಾರಿಕೆಗೆ ರಾಸಾಯನಿಕಗಳ ಬಳಕೆ ಅವಶ್ಯಕವಾಗಿರುತ್ತದೆ. ಹೀಗಾಗಿ, ಈ ಉದ್ಯಮಕ್ಕೆ ಪುಷ್ಟಿ ಕೊಡಲು ಸರ್ಕಾರ ಪ್ರಯತ್ನಿಸುತ್ತಾ ಬಂದಿದೆ.

ವಿಶ್ವದಲ್ಲಿ ಅತ್ಯಂತ ಬಲಿಷ್ಠ ರಾಸಾಯನಿಕ ಉದ್ಯಮ ಇರುವುದು ಚೀನಾದಲ್ಲಿ. ಆದರೂ ಕಳೆದ 10 ವರ್ಷಗಳಿಂದ ಬಹಳಷ್ಟು ರಾಸಾಯನಿಕ ಕಂಪನಿಗಳನ್ನು ಸೆಳೆಯುವಲ್ಲಿ ಭಾರತ ಯಶಸ್ವಿಯಾಗಿದೆ. ವಿಶ್ವದ ರಾಸಾಯನಿಕ ಮಾರುಕಟ್ಟೆಯಲ್ಲಿ ಚೀನಾ ಹೊಂದಿರುವ ಪಾಲಿನಲ್ಲಿ ಶೇ. 10ರಷ್ಟನ್ನಾದರೂ ಭಾರತ ಕಸಿದುಕೊಂಡರೆ ಅದು ಭಾರತದ ತಯಾರಿಕಾ ವಲಯ ಮತ್ತು ಒಟ್ಟಾರೆ ಆರ್ಥಿಕತೆಗೆ ಪುಷ್ಟಿ ಸಿಕ್ಕಂತಾಗುತ್ತದೆ.

ಪರ್ಯಾಯ ಇಂಧನ ಭಾರತಕ್ಕೆ ಶಕ್ತಿ

ಕ್ಲೀನ್ ಎನರ್ಜಿ ಅಥವಾ ಮಾಲಿನ್ಯರಹಿತ ಇಂಧನಕ್ಕೆ ಮುಂದಿನ ದಿನಗಳಲ್ಲಿ ಬೇಡಿಕೆ ಹೆಚ್ಚಲಿದೆ. ಪೆಟ್ರೋಲಿಯಂ ಉತ್ಪನ್ನಗಳಿಂದ ಜಗತ್ತು ವಿಮುಖವಾಗಲು ನೋಡುತ್ತಿದೆ. ಭಾರತವೂ ಈ ನಿಟ್ಟಿನಲ್ಲಿ ಹೆಜ್ಜೆಗಳನ್ನು ಹಾಕುತ್ತಿದೆ. ಜಲವಿದ್ಯುತ್, ವಾಯುವಿದ್ಯುತ್, ಸೌರವಿದ್ಯುತ್ ಇತ್ಯಾದಿ ಪರ್ಯಾಯ ಶಕ್ತಿಗಳ ಉತ್ಪಾದನೆಗೆ ಭಾರತ ಒತ್ತುಕೊಡುತ್ತಿದೆ. ಇದರಿಂದ ಅಗಾಧ ಪ್ರಮಾಣದ ಪೆಟ್ರೋಲಿಯಂ ಆಮದು ತಪ್ಪಲಿದೆ.

ಇದನ್ನೂ ಓದಿWholesale Inflation: ಸಗಟು ಹಣದುಬ್ಬರ ಮೈನಸ್ 4.12ಪ್ರತಿಶತ; 2015ರ ಬಳಿಕ ಅತಿಕಡಿಮೆ ಮಟ್ಟ

ಭಾರತದ ಬೆಳವಣಿಗೆಯಲ್ಲಿ ಇತರ ಪ್ರಮುಖ ಅಂಶಗಳು

ಭಾರತದ ಆರ್ಥಿಕ ಭವಿಷ್ಯವು ಅದರ ಯುವಶಕ್ತಿಯ ಮೇಲೆ ನಿಂತಿದೆ. ಭಾರತದ ಮಾನವ ಸಂಪನ್ಮೂಲದ ಸರಾಸರಿ ವಯಸ್ಸು 29 ವರ್ಷ ಮಾತ್ರ ಇದೆ. ಇದು ಭಾರತದ ಬೆಳವಣಿಗೆಗೆ ವರದಾನವಾಗಲಿದೆ.

ಭಾರತದ ಯೂನಿಕಾರ್ನ್ ಕಂಪನಿಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಯೂನಿಕಾರ್ನ್ ಎಂದರೆ 1 ಬಿಲಿಯನ್ ಡಾಲರ್​ಗೂ ಹೆಚ್ಚು ಮೌಲ್ಯ ಇರುವ ಖಾಸಗಿ ಒಡೆತನದ ಕಂಪನಿ. ಭಾರತದಲ್ಲಿ 108 ಯೂನಿಕಾರ್ನ್ ಕಂಪನಿಗಳಿವೆ. ಅಮೆರಿಕ, ಚೀನಾ ಬಿಟ್ಟರೆ ಭಾರತವೇ ಅತಿಹೆಚ್ಚು ಯೂನಿಕಾರ್ನ್ ಹೊಂದಿರುವುದು.

ಮಾಹಿತಿಕೃಪೆ: ಕ್ಯಾಪಿಟಲ್ ಗ್ರೂಪ್

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ