ಈ ವರ್ಷ ಶೇ. 7 ಬೆಳವಣಿಗೆ ಸಾಧ್ಯತೆ; ಭಾರತದ ಆರ್ಥಿಕ ದರದ ಬಗ್ಗೆ ನಿರೀಕ್ಷೆ ಹೆಚ್ಚಿಸಿದ ಐಎಂಎಫ್

ಭಾರತದ ಆರ್ಥಿಕತೆ ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ. 7ರಷ್ಟು ಹೆಚ್ಚಬಹುದು ಎಂದು ಐಎಂಎಫ್ ಅಭಿಪ್ರಾಯಪಟ್ಟಿದೆ. 2026 ಮತ್ತು 2027ರ ವರ್ಷಗಳಲ್ಲೂ ಭಾರತ ಶೇ. 7ರಷ್ಟು ಜಿಡಿಪಿ ವೃದ್ಧಿ ಸಾಧಿಸಬಹುದು ಎಂದು ಈ ಏಜೆನ್ಸಿ ಅಂದಾಜು ಮಾಡಿದೆ. ತನ್ನ ಹಿಂದಿನ ವರದಿಯಲ್ಲಿ ಭಾರತದ ಜಿಡಿಪಿ ಶೇ 6.4ರಷ್ಟು ಹೆಚ್ಚಬಹುದು ಎಂದು ಐಎಂಎಫ್ ಹೇಳಿತ್ತು.

ಈ ವರ್ಷ ಶೇ. 7 ಬೆಳವಣಿಗೆ ಸಾಧ್ಯತೆ; ಭಾರತದ ಆರ್ಥಿಕ ದರದ ಬಗ್ಗೆ ನಿರೀಕ್ಷೆ ಹೆಚ್ಚಿಸಿದ ಐಎಂಎಫ್
ಭಾರತ
Image Credit source: Getty Images

Updated on: Oct 13, 2026 | 12:55 PM

ನವದೆಹಲಿ, ಅಕ್ಟೋಬರ್ 13: ಜಾಗತಿಕ ಆರ್ಥಿಕ ತುಮುಲಗಳು ಮತ್ತು ಭಾರತದ ಬಗ್ಗೆ ಅಮೆರಿಕದ ಅನಿಶ್ಚಿತ ಧೋರಣೆಗಳು ಮುಂದುವರಿಯುತ್ತಿರುವ ಮಧ್ಯೆ ಭಾರತದ ಆರ್ಥಿಕ ಪ್ರಗತಿ ಅವ್ಯಾಹತವಾಗಿ ಮುಂದುವರಿದಿದೆ. ಪ್ರತೀ ತ್ರೈಮಾಸಿಕದಲ್ಲೂ ಜಿಡಿಪಿ ದರ ನಿರೀಕ್ಷೆಮೀರಿ ಹೆಚ್ಚುತ್ತಿದೆ. ಜಗತ್ತಿನ ಆರ್ಥಿಕತೆ ಮಂದಗೊಳ್ಳಬಹುದು ಎಂದು ಹೇಳಲಾಗುತ್ತಿರುವ ಹೊತ್ತಲ್ಲೇ ಭಾರತದ ಆರ್ಥಿಕತೆ ಈ ವರ್ಷವೂ ಉತ್ತಮವಾಗಿರುವ ಕುರುಹನ್ನು ಹಲವು ಏಜೆನ್ಸಿಗಳು ಕಂಡುಕೊಂಡಿವೆ. ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ತನ್ನ ಹೊಚ್ಚಹೊಸ ವರದಿಯಲ್ಲಿ ಭಾರತದ ಆರ್ಥಿಕ ಪ್ರಗತಿ ಬಗ್ಗೆ ಹೆಚ್ಚು ಪಾಸಿಟಿವ್ ಆಗಿದೆ. 2026-27ರ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ಶೇ 7ರಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ಐಎಂಎಫ್ ಅಂದಾಜು ಮಾಡಿದೆ. ತನ್ನ ಹಿಂದಿನ ವರದಿಯಲ್ಲಿ ಅದು ಜಿಡಿಪಿ ಶೇ 6.4ರಷ್ಟು ಮಾತ್ರ ಹೆಚ್ಚಬಹುದು ಎಂದು ಅಂದಾಜಿಸಿತ್ತು. ಈಗ ತನ್ನ ನಿರೀಕ್ಷೆ ಹೆಚ್ಚಿಸಿದೆ.

ಎಂಟು ಏಜೆನ್ಸಿಗಳ ಪೈಕಿ ಏಳು ಸಂಸ್ಥೆಗಳು ಭಾರತದ ಜಿಡಿಪಿ ಶೇ 7 ಹಾಗು ಹೆಚ್ಚಿನದಷ್ಟು ಏರಿಕೆಯಾಗಲಿದೆ ಎಂದು ಮುನ್ಸೂಚನೆ ನೀಡಿವೆ. ಫಿಚ್ ರೇಟಿಂಗ್ಸ್ ಶೇ. 6.9 ಸಂಖ್ಯೆ ನೀಡಿದ್ದು ಬಿಟ್ಟರೆ ಉಳಿದವು ಶೇ 7ಕ್ಕಿಂತ ಹೆಚ್ಚಿನ ದರ ಸೂಚಿಸಿವೆ. ಆರ್​ಬಿಐ, ವರ್ಲ್ಡ್ ಬ್ಯಾಂಕ್, ಐಎಂಎಫ್, ಎಡಿಬಿ ಹಾಗೂ ಪ್ರಮುಖ ರೇಟಿಂಗ್ ಏಜೆನ್ಸಿಗಳು ಉತ್ತಮ ಬೆಳವಣಿಗೆ ಸಾಧ್ಯತೆಯನ್ನು ಕಂಡಿವೆ.

ಇದನ್ನೂ ಓದಿ: ಬ್ಯಾಂಕ್​ ಖಾತೆದಾರ, ನಾಮಿನಿ ಇಬ್ಬರೂ ಮೃತಪಟ್ಟರೆ ದುಡ್ಡು ಯಾರಿಗೆ ಸೇರುತ್ತದೆ?

ಈ ವರ್ಷದ ಮೊದಲಾರ್ಧ ಶೇ. 7.8 ಜಿಡಿಪಿ ಬೆಳವಣಿಗೆ

2026ರ ಜನವರಿಯಿಂದ ಮಾರ್ಚ್​ವರೆಗಿನ ಅವಧಿಯಲ್ಲಿ ಜಿಡಿಪಿ ಶೇ. 7.8ರಷ್ಟು ಹೆಚ್ಚಿದೆ. ಪ್ರಸಕ್ತ ಹಣಕಾಸು ವರ್ಷದ ಮೊದಲ ಕ್ವಾರ್ಟರ್ ಆದ ಏಪ್ರಿಲ್​ನಿಂದ ಜೂನ್ ಅವಧಿಯಲ್ಲೂ ಅಷ್ಟೇ ಬೆಳವಣಿಗೆ ಆಗಿದೆ. ಈ ವರ್ಷ ಭಾರತದ ಆರ್ಥಿಕತೆ ಕಂಡ ಬೆಳವಣಿಗೆ ನಿರೀಕ್ಷೆಮೀರಿದ್ದಾಗಿದೆ. ಮ್ಯಾನುಫ್ಯಾಕ್ಚರಿಂಗ್, ಸರ್ವಿಸ್ ಸೆಕ್ಟರ್​ಗಳು ಉತ್ತಮ ಬೆಳವಣಿಗೆ ಕಂಡಿದ್ದು, ಮತ್ತು ಹೂಡಿಕೆ ಹೆಚ್ಚಿದ್ದು ಜಿಡಿಪಿ ನಿರೀಕ್ಷೆಮೀರಿ ಏರಲು ಕಾರಣ ಎಂದು ಹೇಳಲಾಗಿದೆ.

ಐಎಂಎಫ್ ಅಂದಾಜು

ಐಎಂಎಫ್ ಅಂದಾಜು ಪ್ರಕಾರ ಜಾಗತಿಕವಾಗಿ ಎಷ್ಟಿರಬಹುದು ಆರ್ಥಿಕ ಬೆಳವಣಿಗೆ?

2026ರಲ್ಲಿ ವಿಶ್ವದ ಆರ್ಥಿಕತೆ ಶೇ. 3.1ರಷ್ಟು ಹೆಚ್ಚಬಹುದು ಎಂದು ಐಎಂಎಫ್ ಅಂದಾಜಿಸಿದೆ. ಅಮೆರಿಕ, ಯೂರೋಪ್, ಜಪಾನ್, ಕೆನಡಾ ಇತ್ಯಾದಿ ಮುಂದುವರಿದ ಆರ್ಥಿಕತೆಗಳು ಶೇ. 2.1ರಷ್ಟು ಬೆಳವಣಿಗೆ ಹೊಂದಬಹುದು. ಭಾರತ ಸೇರಿ ಉದಯೋನ್ಮುಖ ಮಾರುಕಟ್ಟೆಗಳ ಆರ್ಥಿಕತೆಗಳು ಸರಾಸರಿಯಾಗಿ ಶೇ. 3.7ರಷ್ಟು ಹೆಚ್ಚಬಹುದು ಎಂದು ಐಎಂಎಫ್ ಹೇಳಿದೆ.

ಇದನ್ನೂ ಓದಿ: ಈ ಬಾರಿ ನೊಬೆಲ್ ಪ್ರಶಸ್ತಿ ಪಡೆದ ಇಬ್ಬರು ಆರ್ಥಿಕತಜ್ಞರು ರೂಪಿಸಿದ ಎಕನಾಮಿಕ್ ಮಾಡಲ್​ಗಳು ಎಷ್ಟು ಉಪಯುಕ್ತ ನೋಡಿ…

ಭಾರತದ ಆರ್ಥಿಕತೆ 2026 ಮತ್ತು 2027ರಲ್ಲಿ ಶೇ 7ರಷ್ಟು ವೃದ್ಧಿಸುವುದೆಂದು ಐಎಂಎಫ್ ನಿರೀಕ್ಷಿಸಿದೆ. ಪ್ರಮುಖ ಆರ್ಥಿಕತೆಗಳ ಪೈಕಿ ಭಾರತವೇ ಅತಿವೇಗದ ಜಿಡಿಪಿ ಬೆಳವಣಿಗೆ ಹೊಂದುವುದು. ಐಎಂಎಫ್ ಪ್ರಕಾರ, 2026ರಲ್ಲಿ ಚೀನಾ ಶೇ. 4.5ರಷ್ಟು ಬೆಳವಣಿಗೆ ಹೊಂದುವ ಸಾಧ್ಯತೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:48 pm, Tue, 13 October 26

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us