ಈ ಬಾರಿ ನೊಬೆಲ್ ಪ್ರಶಸ್ತಿ ಪಡೆದ ಇಬ್ಬರು ಆರ್ಥಿಕತಜ್ಞರು ರೂಪಿಸಿದ ಎಕನಾಮಿಕ್ ಮಾಡಲ್ಗಳು ಎಷ್ಟು ಉಪಯುಕ್ತ ನೋಡಿ…
ಅಮೆರಿಕದ ಅರ್ಥಶಾಸ್ತ್ರಜ್ಞರಾದ ರಾಬರ್ಟ್ ಹಾಲ್ ಮತ್ತು ಮೈಕೇಲ್ ವುಡ್ಫೋರ್ಡ್ ಅವರಿಗೆ 2026ರ ನೊಬೆಲ್ ಪ್ರಶಸ್ತಿ ದೊರಕಿದೆ. ಜನರು ಮತ್ತು ಉದ್ಯಮಿಗಳು ತೆಗೆದುಕೊಳ್ಳುವ ನಿರ್ಧಾರಗಳು ಸ್ಥೂಲ ಆರ್ಥಿಕತೆಯ ಮೇಲೆ ಏನು ಪರಿಣಾಮ ಬೀರುತ್ತವೆ ಎಂಬುದನ್ನು ಇವರು ಅಧ್ಯಯನ ಮಾಡಿದ್ದಾರೆ. ಇವರ ಆರ್ಥಿಕ ಮಾದರಿಗಳು ವಿವಿಧ ಸರ್ಕಾರಗಳು ಹಾಗೂ ಸೆಂಟ್ರಲ್ ಬ್ಯಾಂಕುಗಳಿಗೆ ಸಹಾಯವಾಗಿವೆ.

ನವದೆಹಲಿ, ಅಕ್ಟೋಬರ್ 12: ಈ ವರ್ಷದ ಅರ್ಥಶಾಸ್ತ್ರದ ನೊಬೆಲ್ (Nobel Prize for Economics) ಅನ್ನು ಇಬ್ಬರಿಗೆ ನೀಡಲಾಗಿದೆ. ಅಮೆರಿಕ ಮೂಲದ ರಾಬರ್ಟ್ ಇ. ಹಾಲ್ ಮತ್ತು ಮೈಕೇಲ್ ವುಡ್ಫೋರ್ಡ್ ಅವರು ನೊಬೆಲ್ ಪ್ರಶಸ್ತಿ ಗಿಟ್ಟಿಸಿದ್ದಾರೆ. ಆರ್ಥಿಕ ಕ್ಷೇತ್ರದಲ್ಲಿ ಅವರು ನಡೆಸಿದ ಸಂಶೋಧನೆಗಳು ಬಹಳ ಉಪಯುಕ್ತ ಎನಿಸಿವೆ. ಆರ್ಥಿಕ ಏರುಪೇರುಗಳ ಸ್ಥಿತಿ ನಿಭಾಯಿಸಲು ಅವರ ಮ್ಯಾಕ್ರೋ ಎಕನಾಮಿಕ್ ಮಾಡಲ್ಗಳು ಪರಿಣಾಮಕಾರಿ ಎನಿಸಿವೆ. ಹೀಗಾಗಿ, ಅವರಿಗೆ ಸ್ವೀಡಿಷ್ ರಾಯಲ್ ಅಕಾಡೆಮಿಯಿಂದ 2026ರ ಸಾಲಿನ ಆರ್ಥಿಕ ವಿಜ್ಞಾನಗಳ ನೊಬೆಲ್ ಪ್ರಶಸ್ತಿ ಕೊಡಲಾಗಿದೆ.
ಸಾಮಾನ್ಯ ಮನೆಗಳು ಮತ್ತು ಉದ್ಯಮಗಳು ತೆಗೆದುಕೊಳ್ಳುವ ನಿರ್ಧಾರಗಳು ಆರ್ಥಿಕತೆಯ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದು ಅವರ ಸಂಶೋಧನೆಗಳು ವಿವರಿಸುತ್ತವೆ. ಜಗತ್ತಿನಾದ್ಯಂತ ವಿವಿಧ ಸರ್ಕಾರಗಳು ಮತ್ತು ಸೆಂಟ್ರಲ್ ಬ್ಯಾಂಕುಗಳಿಗೆ ಆರ್ಥಿಕ ನೀತಿ ರೂಪಿಸಲು ಈ ಸಂಶೋಧನೆಗಳು ಸಹಕಾರಿ ಎನಿಸಿವೆ.
ಉದಾಹರಣೆಗೆ, ಕುಟುಂಬವೊಂದು ಮನೆ ಖರೀದಿಸಲು ಯೋಜಿಸುತ್ತಿರುತ್ತದೆ ಎಂದಿಟ್ಟುಕೊಳ್ಳಿ. ಬಡ್ಡಿದರ ಇಳಿಯಬಹುದು ಎಂದಿದ್ದಾಗ ಅವರು ಮನೆ ಖರೀದಿ ವಿಳಂಬ ಮಾಡಬಹುದು. ಹಾಗೆಯೇ, ಉದ್ಯಮವೊಂದು ತನ್ನ ಉತ್ಪನ್ನಕ್ಕೆ ಹೆಚ್ಚಿನ ಬೆಲೆ ಸಿಗಬಹುದು ಎನ್ನುವ ನಿರೀಕ್ಷೆಯಲ್ಲಿ ಮುಂಚಿತವಾಗಿ ಬೆಲೆ ಏರಿಸಬಹುದು. ಈ ರೀತಿ ದೇಶಾದ್ಯಂತ ಕೋಟ್ಯಂತರ ಜನರು ಮತ್ತು ಉದ್ಯಮಿಗಳು ತೆಗೆದುಕೊಳ್ಳುವ ನಿರ್ಧಾರಗಳು ಆರ್ಥಿಕತೆಯ ಮೇಲೆ ಏನು ಪರಿಣಾಮ ಬೀರುತ್ತವೆ ಎಂಬುದನ್ನು ರಾಬರ್ಟ್ ಹಾಲ್ ಮತ್ತು ಮೈಕೇಲ್ ವುಡ್ಫೋರ್ಡ್ ಅವರು ಅಧ್ಯಯನ ಮಾಡಿದ್ದಾರೆ. ಆರ್ಥಿಕ ಏರುಪೇರುಗಳನ್ನು ಸಂಭಾಳಿಸಲು ಸಾಧ್ಯವಾಗುವಂತಹ ಆರ್ಥಿಕ ಮಾದರಿಗಳನ್ನು ಇವರು ರೂಪಿಸಿದ್ದಾರೆ.
ಯಾವ ಸಂದರ್ಭಗಳಲ್ಲಿ ಬಡ್ಡಿದರ ಹೆಚ್ಚಿಸಬೇಕು, ಅಥವಾ ಇಳಿಸಬೇಕು ಎಂಬುದನ್ನು ನಿರ್ಧರಿಸಲು ಸೆಂಟ್ರಲ್ ಬ್ಯಾಂಕುಗಳಿಗೆ ಇವರ ಸಂಶೋಧನೆ ನೆರವಾಗಿದೆ.
ಇದನ್ನೂ ಓದಿ: ಸೆಪ್ಟೆಂಬರ್ನಲ್ಲಿ ಹಣದುಬ್ಬರ ದರ ಶೇ. 5.54ಕ್ಕೆ ಏರಿಕೆ; ಆಹಾರ ಬೆಲೆ ಏರಿಕೆಯ ಪಾತ್ರವೇ ಹೆಚ್ಚು
ಸಾಂಪ್ರದಾಯಿಕವಾಗಿ ಆರ್ಬಿಐನಂತಹ ಸೆಂಟ್ರಲ್ ಬ್ಯಾಂಕುಗಳು ಮತ್ತು ಸರ್ಕಾರಗಳು ಹಣದುಬ್ಬರ ಅಧಿಕ ಇದ್ದಾಗ ಬಡ್ಡಿದರ ಹೆಚ್ಚಿಸುತ್ತವೆ. ಬಡ್ಡಿ ಹೆಚ್ಚಿಸಿದರೆ ಜನರು ಸಾಲ ತೆಗೆದುಕೊಳ್ಳುವುದು ಕಡಿಮೆ ಆಗುತ್ತದೆ. ಇದರಿಂದ ವೆಚ್ಚ ಕಡಿಮೆಗೊಂಡು ಬೆಲೆ ನಿಯಂತ್ರಣಕ್ಕೆ ಬರುತ್ತದೆ. ಹಾಗೆಯೇ, ಆರ್ಥಿಕತೆ ಮಂದಗೊಂಡಾಗ ಸರ್ಕಾರ ತನ್ನ ಖರ್ಚು ಹೆಚ್ಚಿಸುತ್ತದೆ. ಸೆಂಟ್ರಲ್ ಬ್ಯಾಂಕ್ ಬಡ್ಡಿದರ ಇಳಿಸಿ, ಜನರು ಸುಲಭವಾಗಿ ಸಾಲ ಪಡೆಯಲು ಉತ್ತೇಜಿಸುತ್ತದೆ. ಇದರಿಂದ ಜನರಿಂದಲೂ ಖರ್ಚು ಹೆಚ್ಚಿ, ಆರ್ಥಿಕತೆಗೆ ಪುಷ್ಟಿ ಸಿಗುತ್ತದೆ. ಇವು ಸರ್ಕಾರಗಳು ಸಾಂಪ್ರದಾಯಿಕವಾಗಿ ಅನುಸರಿಸುವ ಕ್ರಮಗಳು.
ರಾಬರ್ಟ್ ಹಾಲ್ ಮತ್ತು ಮೈಕೇಲ್ ವುಡ್ಫೋರ್ಡ್ ಅಭಿವೃದ್ಧಿಪಡಿಸಿದ ಮಾದರಿಗಳು ಇನ್ನೂ ಸೂಕ್ಷ್ಮವಾಗಿ ಪರಿಸ್ಥಿತಿ ಅವಲೋಕಿಸಲು ನೆರವಾಗುತ್ತವೆ. ಹಲವು ಸರ್ಕಾರಗಳಿಗೆ ಇವು ಉಪಯುಕ್ತವೂ ಎನಿಸಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




