AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೇನಾ ಡ್ರೋನ್ ಟೆಂಡರ್‌ಗಳಲ್ಲಿ ಚೀನಾ ಮೂಲದ ಬಿಡಿಭಾಗಗಳ ಉಲ್ಲೇಖ: ಭದ್ರತಾ ಅಪಾಯದ ಕುರಿತು ದೇಶೀಯ ಉದ್ಯಮದ ಎಚ್ಚರಿಕೆ

Indian industry cites security risk in military drone procurements: ಸರ್ಕಾರಿ ಇ-ಮಾರ್ಕೆಟ್‌ಪ್ಲೇಸ್ (GeM) ಮೂಲಕ ಹೊರಡಿಸಲಾದ 689 ಸೇನಾ ಮತ್ತು ಸರ್ಕಾರಿ ಡ್ರೋನ್ ಟೆಂಡರ್‌ಗಳಲ್ಲಿ ಚೀನಾ ಮೂಲದ ಡ್ರೋನ್‌ಗಳು ಅಥವಾ ಬಿಡಿಭಾಗಗಳನ್ನು ನಿಗದಿಪಡಿಸಲಾಗಿದೆ ಎಂದು ಡ್ರೋನ್ ಫೆಡರೇಷನ್ ಇಂಡಿಯಾ (DFI) ರಕ್ಷಣಾ ಅಧಿಕಾರಿಗಳ ಗಮನಕ್ಕೆ ತಂದಿದ್ದು, ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಕಳವಳ ವ್ಯಕ್ತಪಡಿಸಿದೆ.

ಸೇನಾ ಡ್ರೋನ್ ಟೆಂಡರ್‌ಗಳಲ್ಲಿ ಚೀನಾ ಮೂಲದ ಬಿಡಿಭಾಗಗಳ ಉಲ್ಲೇಖ: ಭದ್ರತಾ ಅಪಾಯದ ಕುರಿತು ದೇಶೀಯ ಉದ್ಯಮದ ಎಚ್ಚರಿಕೆ
ಡ್ರೋನ್Image Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 22, 2026 | 12:43 PM

Share

ನವದೆಹಲಿ, ನವೆಂಬರ್ 22: ಭಾರತೀಯ ಸೇನೆ ಮತ್ತು ಸರ್ಕಾರಿ ಸಂಸ್ಥೆಗಳು ಹೊರಡಿಸಿದ ಡ್ರೋನ್ ಖರೀದಿ ಟೆಂಡರ್‌ಗಳಲ್ಲಿ ಚೀನಾ ಮೂಲದ ಬಿಡಿಭಾಗಗಳ ಬಳಕೆಯು ಭದ್ರತಾ ಅಪಾಯವನ್ನು ತಂದೊಡ್ಡಬಹುದು ಎಂದು ದೇಶದ ಡ್ರೋನ್ ಉದ್ಯಮ ಸಂಘಟನೆಯಾದ ‘ಡ್ರೋನ್ ಫೆಡರೇಷನ್ ಇಂಡಿಯಾ’ (DFI) ಎಚ್ಚರಿಸಿದೆ. 1,000ಕ್ಕೂ ಹೆಚ್ಚು ಸಂಸ್ಥೆಗಳನ್ನು ಪ್ರತಿನಿಧಿಸುವ ಡಿಎಫ್‌ಐ, ಶುಕ್ರವಾರ ರಕ್ಷಣಾ ಕಾರ್ಯದರ್ಶಿ ರಾಜೇಶ್ ಕುಮಾರ್ ಸಿಂಗ್ ಮತ್ತು ಚೀಫ್ ಆಫ್ ಡಿಫೆನ್ಸ್ ಸ್ಟಾಫ್ (CDS) ಜನರಲ್ ಎನ್.ಎಸ್. ಸುಬ್ರಮಣಿ ಅವರಿಗೆ ಈ ಕುರಿತು ಮನವಿ ಸಲ್ಲಿಸಿದೆ.

2021ರ ಮಾರ್ಚ್ 10ರಿಂದ 2026ರ ನವೆಂಬರ್ 19ರವರೆಗೆ ಸರ್ಕಾರಿ ಇ-ಮಾರ್ಕೆಟ್‌ಪ್ಲೇಸ್ (GeM)ನಲ್ಲಿ ಪ್ರಕಟವಾದ ಟೆಂಡರ್‌ಗಳನ್ನು ಪರಿಶೀಲಿಸಿದಾಗ, ಒಟ್ಟು 689 ಟೆಂಡರ್‌ಗಳಲ್ಲಿ ಚೀನಾ ಮೂಲದ ಡ್ರೋನ್‌ಗಳು ಅಥವಾ ಬಿಡಿಭಾಗಗಳನ್ನು ಉಲ್ಲೇಖಿಸಲಾಗಿದೆ ಎಂಬುದು ಕಂಡುಬಂದಿದೆ. ಇವುಗಳಲ್ಲಿ ಶೇಕಡಾ 84ರಷ್ಟು ಟೆಂಡರ್​ಗಳು (580) ಭಾರತೀಯ ಸೇನಾ ಘಟಕಗಳಿಂದಲೇ ಬಂದಿವೆ. 2025ರ ಇಡೀ ವರ್ಷದಲ್ಲಿ 190 ಟೆಂಡರ್‌ಗಳಿದ್ದರೆ, 2026ರ ಜನವರಿಯಿಂದ ನವೆಂಬರ್ 19ರವರೆಗೆ 355 ಟೆಂಡರ್‌ಗಳು ದಾಖಲಾಗಿದ್ದು, ಹಿಂದಿನ ವರ್ಷದ ಸುಮಾರು ದುಪ್ಪಟ್ಟು ಪ್ರಮಾಣಕ್ಕೇರಿವೆ ಎಂದು ಡಿಎಫ್‌ಐ ತನ್ನ ‘ಎಕ್ಸ್’ (X) ಪೋಸ್ಟ್ ಮೂಲಕ ಮಾಹಿತಿ ನೀಡಿದೆ.

ಪ್ರತೀ ಬಿಡ್​ನಲ್ಲೂ ಮೂಲ ದೇಶ ಘೋಷಣೆ ಕಡ್ಡಾಯವಾಗಬೇಕು

ಡಿಜೆಐ (DJI), ರೇಡಿಯೋಮಾಸ್ಟರ್ (RadioMaster), ಸ್ಪೀಡಿಬೀ, ಎಚ್‌ಜಿಎಲ್‌ಆರ್‌ಸಿ, ಜಿಇಪಿಆರ್‌ಸಿ, ಸ್ಕೈಡ್ರಾಯಿಡ್, ಟಿ-ಮೋಟಾರ್, ಇಮ್ಯಾಕ್ಸ್, ರಮ್‌ಕ್ಯಾಮ್, ಕ್ಯಾಡ್‌ಎಕ್ಸ್, ಹಾಬಿವಿಂಗ್, ಹೋಲಿಬ್ರೋ, ಫಾಕ್ಸಿಯರ್, ಐಫ್ಲೈಟ್, ಫ್ಲೈಸ್ಕೈ ಮತ್ತು ಎಸ್‌ಐವೈಐ ಸೇರಿದಂತೆ ಪ್ರಮುಖವಾಗಿ ಉಲ್ಲೇಖಿಸಲ್ಪಟ್ಟ 16 ಬ್ರ್ಯಾಂಡ್‌ಗಳು ಚೀನಾದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿವೆ. 689 ಟೆಂಡರ್‌ಗಳ ಪೈಕಿ 450 ಟೆಂಡರ್‌ಗಳಲ್ಲಿ ಡಿಜೆಐ ಅಥವಾ ರೇಡಿಯೋಮಾಸ್ಟರ್ ಹೆಸರುಗಳಿವೆ. ಟೆಂಡರ್‌ನಲ್ಲಿ ಚೀನಾ ಬಿಡಿಭಾಗದ ಹೆಸರು ಬಂದಾಗಲೇ ಭದ್ರತಾ ಅಪಾಯವು ವ್ಯವಸ್ಥೆಯೊಳಗೆ ಪ್ರವೇಶಿಸಿದಂತಾಗುತ್ತದೆ ಎಂದು ಡಿಎಫ್‌ಐ ಅಭಿಪ್ರಾಯಪಟ್ಟಿದೆ. ಸೇನಾ ಡ್ರೋನ್‌ಗಳಲ್ಲಿ ಚೀನಾ ಬಿಡಿಭಾಗಗಳನ್ನು ನಿಷೇಧಿಸಬೇಕು, ದೇಶೀಯ ಬಿಡಿಭಾಗಗಳಿಗೆ ಆದ್ಯತೆ ನೀಡಬೇಕು ಮತ್ತು ಪ್ರತಿಯೊಂದು ಬಿಡ್‌ನಲ್ಲೂ ‘ಮೂಲ ದೇಶ’ವನ್ನು (Country of Origin) ಕಡ್ಡಾಯವಾಗಿ ಘೋಷಿಸಬೇಕು ಎಂದು ಉದ್ಯಮ ಸಂಘಟನೆ ಒತ್ತಾಯಿಸಿದೆ.

ಇದನ್ನೂ ಓದಿ: ಅಮೆರಿಕದ ನಾಸ್ಡಾಕ್ ಅನ್ನು ಹಿಂದಿಕ್ಕಿ ವಿಶ್ವದ 5ನೇ ಅತಿದೊಡ್ಡ ಲಿಸ್ಟೆಡ್ ಎಕ್ಸ್​ಚೇಂಜ್ ಆಪರೇಟರ್ ಆದ ಎನ್​ಎಸ್​ಇ

ಮಾರಾಟಗಾರರನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ ಇರೋದಿಲ್ಲ

ಈ ಆರೋಪಕ್ಕೆ ಪ್ರತಿಕ್ರಿಯಿಸಿರುವ ರಕ್ಷಣಾ ಅಧಿಕಾರಿಗಳು, ಜಿಇಎಂ (GeM) ಖರೀದಿದಾರ ಮತ್ತು ಮಾರಾಟಗಾರರನ್ನು ಸಂಪರ್ಕಿಸುವ ತಟಸ್ಥ ವೇದಿಕೆಯಾಗಿದ್ದು, ಖರೀದಿದಾರರಿಗೆ ಮಾರಾಟಗಾರರನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಗತ್ಯದ ತಾಂತ್ರಿಕ ವಿವರಗಳನ್ನು (Specifications) ಮಾತ್ರ ಖರೀದಿದಾರರು ನೀಡುತ್ತಾರೆ; ಅದರ ಆಧಾರದಲ್ಲಿ ಕಡಿಮೆ ದರಕ್ಕೆ ಮಾರಾಟಗಾರರು ಬಿಡ್ ಸಲ್ಲಿಸುತ್ತಾರೆ ಮತ್ತು ದೊಡ್ಡ ಮೌಲ್ಯದ ಉತ್ಪನ್ನಗಳಿಗೆ ರಿವರ್ಸ್ ಹರಾಜು ಪ್ರಕ್ರಿಯೆ ನಡೆಯುತ್ತದೆ. ಯಾವುದೇ ನಿರ್ದಿಷ್ಟ ಬ್ರ್ಯಾಂಡ್ ಆಯ್ಕೆಗೆ ಜಿಇಎಂ ಅವಕಾಶ ನೀಡುವುದಿಲ್ಲ. ನಿಬಂಧನೆಗಳನ್ನು ಪೂರೈಸುವ ಉತ್ಪನ್ನಗಳನ್ನೇ ಖರೀದಿಸಲು ಸೇನಾ ಹಂತದಲ್ಲಿ ತಪಾಸಣೆ ವ್ಯವಸ್ಥೆಗಳಿದ್ದು, ಚೀನಾ ಬಿಡಿಭಾಗಗಳ ಬಳಕೆ ಬಗ್ಗೆ ಸುಳ್ಳು ಮಾಹಿತಿ ನೀಡಿದರೆ ಮಾರಾಟಗಾರರನ್ನು ಕಪ್ಪುಪಟ್ಟಿಗೆ ಸೇರಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More