
ನವದೆಹಲಿ, ಆಗಸ್ಟ್ 19: ಭಾರತದ ಈಕ್ವಿಟಿ ಮಾರುಕಟ್ಟೆ (stock market) ಕಳೆದ ಒಂದು ಒಂದೂವರೆ ವರ್ಷದಿಂದ ಆಮೆಯಂತೆ ಸಾಗುತ್ತಿದೆಯಾದರೂ ದಶಕಗಳಿಂದ ಇದು ಹೂಡಿಕೆದಾರರ ಪಾಲಿಗೆ ಸೂಪರ್ ಫಾಸ್ಟ್ ಕುದುರೆಯಾಗಿದೆ. ಮುಂದಿನ ದಿನಗಳಲ್ಲೂ ಭಾರತದ ಮಾರುಕಟ್ಟೆ ಅದ್ವಿತೀಯವಾಗಿ ಹೆಚ್ಚಬಹುದು ಎಂದು ಅನೇಕ ತಜ್ಞರು ಹೇಳುತ್ತಾ ಬಂದಿದ್ದಾರೆ. ಮೋತಿಲಾಲ್ ಓಸ್ವಾಲ್ ಫೈನಾನ್ಷಿಯಲ್ ಸರ್ವಿಸಸ್‌ನ ಸಹ-ಸ್ಥಾಪಕ ರಾಮ್‌ದೇವ್ ಅಗರ್‌ವಾಲ್ (Ramdeo Agrawal) ಅವರು ಈಕ್ವಿಟಿ ಮಾರುಕಟ್ಟೆಯ ಭವಿಷ್ಯದ ಬಗ್ಗೆ ಬಹಳ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮುಂಬರುವ 5 ವರ್ಷಗಳಲ್ಲಿ ಈಕ್ವಿಟಿ ಹೂಡಿಕೆಗಳು ಸುಮಾರು 15% ರಷ್ಟು ವಾರ್ಷಿಕ ಆದಾಯವನ್ನು (CAGR) ನೀಡಬಹುದು ಎಂದು ರಾಮದೇವ್ ಅಗರ್ವಾಲ್ ಅವರು ಅಭಿಪ್ರಾಯಪಟ್ಟಿದ್ದಾರೆ.
ಭಾರತೀಯ ಆರ್ಥಿಕತೆಯ ಬೆಳವಣಿಗೆ: ಭಾರತದ ಆರ್ಥಿಕತೆಯು ದೃಢವಾಗಿ ಬೆಳೆಯುತ್ತಿದೆ. ಮುಂದಿನ ಐದು ವರ್ಷದಲ್ಲಿ ಜಿಡಿಪಿ ಶೇ. 7.50-8.50 ರ ವಾರ್ಷಿಕ ದರದಲ್ಲಿ ಬೆಳೆಯಲಿದೆ. ಮತ್ತು ಇದು ಮಾರುಕಟ್ಟೆಯ ಬೆಳವಣಿಗೆಗೆ ಬಲವಾದ ಬೆಂಬಲವನ್ನು ನೀಡುತ್ತದೆ ಎಂಬುದು ಅವರ ವಿಶ್ಲೇಷಣೆ.
ಕಾರ್ಪೊರೇಟ್ ಗಳಿಕೆ (Earnings): ಭಾರತದ ಕಾರ್ಪೊರೇಟ್ ಕಂಪನಿಗಳ ಆದಾಯ ಮತ್ತು ಲಾಭದ ಬೆಳವಣಿಗೆಯು ಮಾರುಕಟ್ಟೆಯ ಏರಿಕೆಗೆ ಮುಖ್ಯ ಚಾಲಕವಾಗಲಿದೆ ಎಂದು ಅವರು ನಂಬಿದ್ದಾರೆ. ಅವರ ಪ್ರಕಾರ, ಕಾರ್ಪೊರೇಟ್ ಕಂಪನಿಗಳ ಸರಾಸರಿ ವಾರ್ಷಿಕ ಆದಾಯ ಬೆಳವಣಿಗೆ ಶೇ. 13-14ರಷ್ಟಿರಬಹುದು.
ಇದನ್ನೂ ಓದಿ: ಪರಿಸರಸ್ನೇಹಿ ಇಂಧನದ ಕಮರ್ಷಿಯಲ್ ವಾಹನಗಳಿಗೆ ವಯೋಮಿತಿ 5 ವರ್ಷ ಹೆಚ್ಚಿಸಲು ಸರ್ಕಾರ ಪ್ರಸ್ತಾಪ
ಭಾರತದ ಈಕ್ವಿಟಿ ಮಾರುಕಟ್ಟೆಯು ಹೂಡಿಕೆದಾರರಿಗೆ ವಾರ್ಷಿಕವಾಗಿ ಶೇ 15ರಷ್ಟು ಲಾಭ ತರಬಹುದು. ಇಂಡೆಕ್ಸ್ ಫಂಡ್ಗಳೇ ಕಡಿಮೆ ಎಂದರೂ ಶೇ. 12-14ರಷ್ಟು ರಿಟರ್ನ್ ತರಬಹುದು ಎನ್ನುವುದು ರಾಮದೇವ್ ಅಗರ್ವಾಲ್ ಅವರ ಅನಿಸಿಕೆ.
ರಾಮದೇವ್ ಅಗರ್ವಾಲ್ ಮತ್ತೊಂದು ಪ್ರಮುಖ ಅಂದಾಜು ಮಾಡಿದ್ದಾರೆ. 24,000 ಅಂಕಗಳ ಆಸುಪಾಸಿನಲ್ಲಿ ಹೊಯ್ದಾಡುತ್ತಿರುವ ನಿಫ್ಟಿ ಇಂಡೆಕ್ಸ್ ಮುಂದಿನ 9 ವರ್ಷದಲ್ಲಿ ಕನಿಷ್ಠವೆಂದರೂ ಎರಡು ಪಟ್ಟು ಹೆಚ್ಚಾಗಲಿದೆಯಂತೆ. ಅವರ ಪ್ರಕಾರ, 2035ರೊಳಗೆಯೇ ನಿಫ್ಟಿ 50,000 ಅಂಕಗಳ ಗಡಿ ಮುಟ್ಟಲಿದೆ.
ಈಕ್ವಿಟಿಗಳಲ್ಲಿ ಹೂಡಿಕೆ ಮಾಡಲು ಬಹಳ ಸುರಕ್ಷಿತ ಮಾರ್ಗವೆಂದರೆ ಇಂಡೆಕ್ಸ್ ಫಂಡ್ಗಳು. ರಾಮದೇವ್ ಅಗರ್ವಾಲ್ ಹೇಳಿದಂತೆ ಈ ಇಂಡೆಕ್ಸ್ ಫಂಡ್ ಶೇ. 14ರಷ್ಟು ವಾರ್ಷಿಕ ರಿಟರ್ನ್ಸ್ ತರಬಲ್ಲುದು ಎಂದು ಭಾವಿಸೋಣ. ಇದರಲ್ಲಿ 10 ಲಕ್ಷ ರೂ ಹಣವನ್ನು 5 ವರ್ಷಗಳವರೆಗೆ ಹೂಡಿಕೆ ಮಾಡಿದರೆ ಅದರ ಲಾಭದ ಲೆಕ್ಕಾಚಾರ ಹೀಗಿದೆ:
ಐದು ವರ್ಷದ ನಂತರ ಈ ಹತ್ತು ಲಕ್ಷ ರೂ ಹೂಡಿಕೆಯು 19-20 ಲಕ್ಷ ರೂ ಆಗಿರುತ್ತದೆ. ಐದು ವರ್ಷದಲ್ಲಿ ಹಣ ಡಬಲ್ ಆಗುತ್ತದೆ.
ಇದನ್ನೂ ಓದಿ: ಆರ್ಬಿಐ ಹೊಸ ನಿಯಮಗಳ ಪ್ರಸ್ತಾಪ; ಸಾಲಗಳ ಇಎಂಐ ಮೇಲಾಗುವ ಪರಿಣಾಮಗಳೇನು?
ಗಮನಿಸಿ: ಈಕ್ವಿಟಿ ಮಾರುಕಟ್ಟೆಯು ಯಾವಾಗಲೂ ಅಪಾಯಗಳಿಗೆ ಒಳಪಟ್ಟಿರುತ್ತದೆ. ಮಾರುಕಟ್ಟೆಯ ತಜ್ಞರು ನೀಡುವ ಇಂತಹ ಅಂದಾಜುಗಳು ಕೇವಲ ಭವಿಷ್ಯದ ನಿರೀಕ್ಷೆಗಳಾಗಿರುತ್ತವೆ, ಖಚಿತವಾದ ಆದಾಯದ ಭರವಸೆಯಲ್ಲ. ಹೂಡಿಕೆ ಮಾಡುವ ಮುನ್ನ ನಿಮ್ಮ ಸ್ವಂತ ಆರ್ಥಿಕ ಗುರಿಗಳು ಮತ್ತು ಅಪಾಯವನ್ನು ತೆಗೆದುಕೊಳ್ಳುವ ಸಾಮರ್ಥ್ಯವನ್ನು (Risk Appetite) ಪರಿಗಣಿಸಿ, ಅಗತ್ಯವಿದ್ದರೆ ಆರ್ಥಿಕ ಸಲಹೆಗಾರರೊಂದಿಗೆ ಸಮಾಲೋಚಿಸಿ ನಿರ್ಧಾರ ಕೈಗೊಳ್ಳುವುದು ಸೂಕ್ತ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ