ನವದೆಹಲಿ, ಫೆಬ್ರುವರಿ 25: ಭಾರತದಲ್ಲಿ ಕಳೆದ ಎರಡು ದಶಕದಲ್ಲಿ ಗೃಹ ಬಳಕೆ ವೆಚ್ಚ (household consumption expenditure) ಗಣನೀಯವಾಗಿ ಏರಿಕೆ ಆಗಿದೆ. ಹಾಗೆಯೇ, ಈ ವೆಚ್ಚದಲ್ಲಿ ನಗರ ಮತ್ತು ಗ್ರಾಮೀಣ ಭಾಗಗಳ ಮಧ್ಯೆ ಇದ್ದ ಅಂತರವೂ ಕಡಿಮೆ ಆಗಿದೆ. ಅಂದರೆ ಗ್ರಾಮೀಣ ಭಾಗದಲ್ಲೂ ಕುಟುಂಬಗಳು ಹೆಚ್ಚು ವೆಚ್ಚ ಮಾಡುತ್ತಿವೆ. ಇದು ಸರ್ಕಾರದ ವರದಿಯೊಂದರಲ್ಲಿ ಕಂಡು ಬಂದಿರುವ ಕೆಲ ಪ್ರಮುಖ ಅಂಶಗಳು. ಸಾಂಖ್ಯಿಕ ಮತ್ತು ಯೋಜನಾ ಅನುಷ್ಠಾನ ಸಚಿವಾಲಯಕ್ಕೆ (National Statistics and Programme Implementation Ministry) ಸೇರಿದ ನ್ಯಾಷನಲ್ ಸ್ಯಾಂಪಲ್ ಸರ್ವೇ ಕಚೇರಿ ನಡೆಸಿದ ಗೃಹ ಬಳಕೆ ವೆಚ್ಚ ಸಮೀಕ್ಷೆಯ (ಎಚ್ಸಿಇಎಸ್) ಫ್ಯಾಕ್ಟ್ ಶೀಟ್ ವರದಿಯನ್ನು ನಿನ್ನೆ (ಫೆ. 24) ಬಿಡುಗಡೆ ಮಾಡಲಾಗಿದೆ. 2022ರ ಆಗಸ್ಟ್ನಿಂದ 2023ರ ಜುಲೈವರೆಗೆ, ಅಂದರೆ ಒಂದು ವರ್ಷದವರೆಗೆ ದೇಶದ ವಿವಿಧೆಡೆ ಸಮೀಕ್ಷೆ ಕೈಗೊಂಡು ದತ್ತಾಂಶಗಳನ್ನು ಕೈಗೊಳ್ಳಲಾಗಿದೆ.
ಈ ದತ್ತಾಂಶದ ಪ್ರಕಾರ 2011-12ರ ಸ್ಥಿತಿಗೆ ಹೋಲಿಸಿದರೆ 2022-23ರಲ್ಲಿ ಭಾರತದ ಮಾಸಿಕ ತಲಾ ವೆಚ್ಚ (Per capita monthly consumption expenditure) ಶೇ. 33ರಿಂದ 40ರಷ್ಟು ಹೆಚ್ಚಾಗಿದೆ. ಗ್ರಾಮೀಣ ಭಾಗದಲ್ಲಿ ಜನರು ಈಗ ಹೆಚ್ಚು ವ್ಯಯಿಸುತ್ತಿದ್ದಾರೆ. ಈ ವೆಚ್ಚದಲ್ಲಿ ನಗರ ಮತ್ತು ಗ್ರಾಮೀಣ ಭಾಗಗಳ ಮಧ್ಯೆ ಇದ್ದ ಅಂತರ ಕಳೆದ 20 ವರ್ಷದಲ್ಲಿ ಹೆಚ್ಚೂಕಡಿಮೆ 20 ಪ್ರತಿಶತದಷ್ಟು ಕಡಿಮೆ ಆಗಿದೆ.
ಇದನ್ನೂ ಓದಿ: 2100ರ ಕೌತುಕ; ಜಗತ್ತಿನ ಪ್ರಧಾನ ದೇಶಗಳಲ್ಲಿ ಬಾಂಗ್ಲಾದೇಶ, ಪಾಕಿಸ್ತಾನ; ವಿಶ್ವದೊಡ್ಡಣ್ಣನಾಗಲು ಚೀನಾಗೆ ಭಾರತ ಪೈಪೋಟಿ
2022-23ರಲ್ಲಿ ನಗರ ಭಾಗದಲ್ಲಿ ತಲಾ ಮಾಸಿಕ ಗೃಹಬಳಕೆ ವೆಚ್ಚ 6,659 ರೂ ಇದೆ. ಗ್ರಾಮೀಣ ಭಾಗದಲ್ಲಿ 3,773 ರೂ ಇದೆ. ಎರಡೂ ಭಾಗದ ನಡುವೆ ವ್ಯತ್ಯಾಸ ಶೇ. 71.2ಕ್ಕೆ ಇಳಿದಿದೆ. 2004-05ರಲ್ಲಿ ಶೇ. 90.8ರಷ್ಟು ಅಂತರ ಇತ್ತು. ಅಂದರೆ ನಗರ ಭಾಗದವರು ಮಾಡುವ ವೆಚ್ಚದಲ್ಲಿ ಅರ್ಧದಷ್ಟು ಮಾತ್ರವೇ ಗ್ರಾಮೀಣ ಭಾಗದವರು ಮಾಡುತ್ತಿದ್ದರು. ಈಗ ನಗರಕ್ಕೆ ಸರಿಸಮಾನವಾಗಿ ವೆಚ್ಚ ಮಾಡುವ ಮಟ್ಟಕ್ಕೆ ಗ್ರಾಮೀಣ ನಿವಾಸಿಗಳು ಬೆಳೆಯುತ್ತಿರುವ ಟ್ರೆಂಡ್ ಇದೆ.
ಕುತೂಹಲವೆಂದರೆ 1999-00ರಲ್ಲಿ ನಗರ ಮತ್ತು ಗ್ರಾಮದವರ ಸರಾಸರಿ ಗೃಹಬಳಕೆ ವೆಚ್ಚದ ನಡುವಿನ ಅಂತರ ಶೇ. 75.9ರಷ್ಟು ಇತ್ತು. 2004-05ರಲ್ಲಿ ಇದು ಶೇ. 90.8ಕ್ಕೆ ಹೆಚ್ಚಾಗಿ ಹೋಗಿದೆ. ಅದಾದ ಬಳಿಕ ನಿರಂತರವಾಗಿ ಈ ಅಂತರ ಕಡಿಮೆ ಆಗುತ್ತಿದೆ.
ಇದನ್ನೂ ಓದಿ: ಬೆಂಗಳೂರು ಸೇರಿದಂತೆ ನಾಲ್ಕು ರೈಲ್ವೆ ನಿಲ್ದಾಣಗಳಲ್ಲಿ ಸ್ವಿಗ್ಗಿಯಿಂದ ಪ್ರೀ ಆರ್ಡರ್ಡ್ ಫೂಡ್ ಡೆಲಿವರಿ
1999ರಲ್ಲಿ ಗ್ರಾಮೀಣ ಭಾಗದಲ್ಲಿ 486 ರೂ ಇದ್ದ ಸರಾಸರಿ ಗೃಹ ಬಳಕೆ ವೆಚ್ಚ 2022-23ರಲ್ಲಿ 3,773 ರೂಗೆ ಏರಿದೆ. ಇನ್ನು, ನಗರವಾಸಿಗಳ ವೆಚ್ಚ 855 ರೂನಿಂದ 6,459 ರೂಗೆ ಹೆಚ್ಚಾಗಿದೆ.
ಈ ಸಮೀಕ್ಷೆಯಲ್ಲಿ 2,61,746 ಮನೆಗಳಿಂದ ದತ್ತಾಂಶ ಸಂಗ್ರಹಿಸಲಾಗಿದೆ. ಗ್ರಾಮೀಣ ಭಾಗದ 1.55 ಲಕ್ಷ ಮನೆಗಳಲ್ಲಿ ಸಮೀಕ್ಷೆ ಕೈಗೊಳ್ಳಲಾಗಿದೆ. ಸರ್ಕಾರದ ವಿವಿಧ ಯೋಜನೆಗಳಿಂದ ಸಿಗುವ ಉಚಿತ ಆಹಾರ ಸಾಮಗ್ರಿ, ಆಹಾರೇತರ ವಸ್ತುಗಳ ಮೌಲ್ಯಗಳನ್ನೂ ಈ ಅಂಕಿ ಅಂಶದಲ್ಲಿ ಪರಿಗಣಿಸಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ