ನವದೆಹಲಿ, ಸೆಪ್ಟೆಂಬರ್ 8: ಚೀನಾದಲ್ಲಿ ಅತಿಹೆಚ್ಚು ನೆಲೆ ನಿಂತಿರುವ ಜಾಗತಿಕ ಉತ್ಪಾದನಾ ವಲಯದಲ್ಲಿ ಹಲವು ಕಂಪನಿಗಳು ಬೇರೆ ಕಡೆಯೂ ಹರಡಿಕೊಳ್ಳುತ್ತಿವೆ. ಇದರ ಫಲವಾಗಿ ಭಾರತದಲ್ಲೂ ಎಲೆಕ್ಟ್ರಾನಿಕ್ಸ್ ಇತ್ಯಾದಿ ಉತ್ಪಾದನೆ ಹೆಚ್ಚಾಗತೊಡಗಿದೆ. ಈ ಮಧ್ಯೆ ಬಾಂಗ್ಲಾದೇಶದಲ್ಲಿ ಇರುವ ಬಿಕ್ಕಟ್ಟೂ ಕೂಡ ಭಾರತಕ್ಕೆ ತುಸು ಲಾಭ ತಂದಿದೆ. ಬಾಂಗ್ಲಾದೇಶ ಜವಳಿ, ಉಡುಪು ಉತ್ಪಾದನೆಯಲ್ಲಿ ಬಲವಾಗಿದೆ. ಹಲವು ಐರೋಪ್ಯ ದೇಶಗಳಿಂದ ಸಾಕಷ್ಟು ಆರ್ಡರ್ಸ್ ಬರುತ್ತದೆ. ಈ ಕ್ಷೇತ್ರದಲ್ಲಿ ಭಾರತಕ್ಕಿಂತ ಬಾಂಗ್ಲಾದ ಒಂದು ಕೈ ಮೇಲಿದೆ. ಈಗ ಆ ದೇಶದಲ್ಲಿ ರಾಜಕೀಯ ಮತ್ತು ನಾಗರಿಕ ಬಿಕ್ಕಟ್ಟು ತಲೆದೋರಿರುವ ಹಿನ್ನೆಲೆಯಲ್ಲಿ ಹಲವು ದೇಶಗಳ ಉಡುಪು ಕಂಪನಿಗಳು ಭಾರತೀಯ ಕಂಪನಿಗಳತ್ತ ಮುಖ ಮಾಡುತ್ತಿವೆ.
ನೋಯ್ಡಾದ ಜವಳಿ ಕ್ಲಸ್ಟರ್ನ ಹಲವು ಸಂಸ್ಥೆಗಳು, ತಮಿಳುನಾಡಿನ ತಿರುಪ್ಪೂರ್ ಉದ್ಯಮಗಳಿಗೆ ವಿದೇಶಗಳಿಂದ ಆರ್ಡರ್ಸ್ ಬರುವ ಪ್ರಮಾಣ ಹೆಚ್ಚಾಗಿದೆ. ಕಳೆದ ಎರಡು ವಾರಗಳಿಂದ ತಿರುಪ್ಪೂರ್ನ ಜವಳಿ ಉದ್ಯಮಕ್ಕೆ ಜರ್ಮನಿ, ನೆದರ್ಲ್ಯಾಂಡ್ಸ್ ಮತ್ತು ಪೋಲ್ಯಾಂಡ್ ದೇಶಗಳ ಸುಪ್ರಸಿದ್ಧ ಉಡುಪು ಬ್ರ್ಯಾಂಡ್ಗಳು 450 ಕೋಟಿ ರೂ ಮೊತ್ತದ ಬಟ್ಟೆಗಳಿಗೆ ಆರ್ಡರ್ಸ್ ಕೊಟ್ಟಿರುವುದು ತಿಳಿದುಬಂದಿದೆ.
ಇದನ್ನೂ ಓದಿ: ಸೆಬಿ vs ಉದ್ಯೋಗಿಗಳ ‘ಟಾಕ್ಸಿಕ್’ ಫೈಟ್; ಆರಂಭಿಕ ಸಂಬಳವೇ 34 ಲಕ್ಷ ಕೊಡ್ತೀವಿ; ಇದೆಲ್ಲಾ ಹೊರಗಿನವರ ಚಿತಾವಣೆ ಎಂದ ಸೆಬಿ
ಕೆಐಕೆ, ಝೀಮ್ಯಾನ್, ಪೆಪ್ಕೋ ಮೊದಲಾದ ಅಂತಾರಾಷ್ಟ್ರೀಯ ಉಡುಪು ಮಾರಾಟಗಾರರು ತುರ್ತಾಗಿ ಡೆಲಿವರಿ ಬೇಕೆಂದು ತಿರುಪ್ಪೂರ್ನ ಗಾರ್ಮೆಂಟ್ ಉದ್ದಿಮೆಗಳಿಗೆ ಆರ್ಡರ್ಸ್ ಕೊಟ್ಟಿವೆ. ಒಂದೊಂದು ಉಡುಪಿನ ಬೆಲೆ 3 ಡಾಲರ್ ಇದೆ. ಅಂದರೆ ಸುಮಾರು 250 ರೂ ಮೌಲ್ಯದ ಬಟ್ಟೆಗಳನ್ನು ತಯಾರಿಸಿಕೊಡಬೇಕಿದೆ. ಕ್ರಿಸ್ಮಸ್ ಮತ್ತು ಹೊಸ ವರ್ಷದೊಳಗೆ ಇವುಗಳ ಡೆಲಿವರಿ ಆಗಬೇಕು. ತಿರುಪ್ಪೂರ್ನ ರಫ್ತು ಸಂಸ್ಥೆ (ಟಿಇಎ) ಅಧ್ಯಕ್ಷ ಕೆಎಂ ಸುಬ್ರಮಣಿಯನ್ ಈ ವಿಚಾರವನ್ನು ತಿಳಿಸಿದರೆಂದು ಬಿಸಿನೆಸ್ ಸ್ಟ್ಯಾಂಡರ್ಡ್ ಪತ್ರಿಕೆ ವರದಿ ಮಾಡಿ.
ಸಾಮಾನ್ಯವಾಗಿ ಖ್ಯಾತ ಉಡುಪು ಬ್ರ್ಯಾಂಡ್ಗಳು ಎರಡು ಸೀಸನ್ಗೆ ಆರ್ಡರ್ಸ್ ಕೊಡುತ್ತವೆ. ಸ್ಪ್ರಿಂಗ್ ಸೀಸನ್ಗೆಂದು ಡಿಸೆಂಬರ್ ಮತ್ತು ಜನವರಿಯಲ್ಲಿ ಆರ್ಡರ್ಸ್ ನೀಡುತ್ತವೆ. ಬೇಸಿಗೆ ಸೀಸನ್ಗೆಂದು ಜೂನ್ ಮತ್ತು ಜುಲೈನಲ್ಲಿ ಆರ್ಡರ್ಸ್ ಬರುತ್ತವೆ. ಕ್ರಿಸ್ಮಸ್ಗೆ ಮುನ್ನವೇ ತಿರುಪ್ಪೂರ್ ಗಾರ್ಮೆಂಟ್ಸ್ ಉದ್ಯಮಕ್ಕೆ ದಿಢೀರನೇ ಆರ್ಡರ್ಸ್ ಹೆಚ್ಚಾಗಿರುವುದು ಇದೇ ಮೊದಲು ಎನ್ನಲಾಗುತ್ತಿದೆ.
ಇದನ್ನೂ ಓದಿ: ರಫ್ತು ಕ್ಷೇತ್ರದಲ್ಲಿ ಭಾರತವನ್ನು ಹಿಂದಿಕ್ಕುತ್ತಿವೆ ವಿಯೆಟ್ನಾಂ, ಬಾಂಗ್ಲಾದಂಥ ಸಣ್ಣ ಪುಟ್ಟ ದೇಶಗಳು: ವಿಶ್ವಬ್ಯಾಂಕ್ ವರದಿ
ತಿರುಪ್ಪೂರ್ ಮಾತ್ರವಲ್ಲ ನೋಯ್ಡಾದಲ್ಲಿರುವ ಗಾರ್ಮೆಂಟ್ಸ್ ಉದ್ಯಮ ಕೂಡ ಈ ಬಾರಿ ಹೆಚ್ಚು ಆರ್ಡರ್ಸ್ ಪಡೆದಿದೆ. ಸ್ಪೇನ್ನ ವಿಶ್ವಖ್ಯಾತ ಉಡುಪು ಬ್ರ್ಯಾಂಡ್ ಆದ ಝಾರಾದಿಂದ ನೋಯ್ಡಾದ ಜವಳಿ ಕ್ಲಸ್ಟರ್ ಆದ ಎನ್ಎಇಸಿಯ ಉದ್ದಿಮೆಗಳಿಗೆ ಕೊಡಲಾದ ಆರ್ಡರ್ಸ್ನಲ್ಲಿ ಕಳೆದ ಒಂದು ತಿಂಗಳಲ್ಲಿ ಶೇ. 15ರಷ್ಟು ಹೆಚ್ಚಾಗಿದೆ. ಅಂದರೆ ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ. 15ರಷ್ಟು ಹೆಚ್ಚು ಬುಕಿಂಗ್ ಆಗಿದೆ. ಮಹಿಳೆಯರ ಟಾಪ್ಸ್ ಮತ್ತು ಡ್ರೆಸ್ಗಳಿಗೆ 5 ಮತ್ತು 9 ಡಾಲರ್ ಬೆಲೆಗೆ ಆರ್ಡರ್ಸ್ ಬಂದಿದೆ. ಡೆಲಿವರಿ ಅವಧಿ 60 ದಿನ ನೀಡಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ